ಮತಾಂತರಕ್ಕೆ ಹೀಗೊಂದು ಬಲಿ!

Update: 2022-10-12 03:39 GMT
Photo:Facebook

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾದ ದಿನವನ್ನು ಐತಿಹಾಸಿಕ ದಿನವಾಗಿ ವಿಶ್ವ ಗುರುತಿಸುತ್ತದೆ. ಮತಾಂತರದ ಸಂದರ್ಭದಲ್ಲಿ ಅವರು ಮಾಡಿರುವ ಪ್ರತಿಜ್ಞೆ ಅತ್ಯಂತ ಕ್ರಾಂತಿಕಾರಿಯಾದುದು. ಭಾರತದ ಅಸ್ಪಶ್ಯತೆ, ಜಾತೀಯತೆಗೆ ತೀವ್ರ ಆಘಾತವನ್ನು ನೀಡಿದ ದಿನ ಅದು. ‘ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’ ಎಂದ ತಮ್ಮ ಮಾತನ್ನು ಅಂದು ಅವರು ನಿಜ ಮಾಡಿದರು. ಈ ಮತಾಂತರಕ್ಕೆ ‘ಬೌದ್ಧ ಧರ್ಮ’ದ ಮೇಲೆ ಅವರಿಗಿದ್ದ ಒಲವು ಮಾತ್ರವಲ್ಲ, ಹಿಂದೂ ಧರ್ಮದ ಜಾತಿ, ಅಸ್ಪಶ್ಯತೆಯ ಕುರಿತಂತೆ ಅವರಿಗಿದ್ದ ಅತೀವ ನೋವು ಕೂಡ ಕಾರಣವಾಗಿತ್ತು. ಅಸ್ಪಶ್ಯತೆ, ಜಾತೀಯತೆಯ ವಿರುದ್ಧ ಅವರು ನಡೆಸಿದ ಹೋರಾಟಕ್ಕೆ ಗೆಲುವು ಸಿಕ್ಕಿದ್ದಿದ್ದರೆ, ಅವರ ಹೋರಾಟಕ್ಕೆ ಹಿಂದೂ ಧರ್ಮದ ಸಕಲ ಸ್ವಾಮೀಜಿಗಳು, ಪ್ರಮುಖರು ಒಂದಾಗಿ ಕೈ ಜೋಡಿಸಿದ್ದರೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸುವ ಸನ್ನಿವೇಶ ಬರುತ್ತಿರಲಿಲ್ಲವೇನೋ. ಆದರೆ, ಅವರನ್ನು ಸಮಾಜದ ನಾಯಕರೇ ವಿರೋಧಿಸಿದರು. ಅವರ ವಿರುದ್ಧ ಕತ್ತಿ ಮಸೆದರು. ಜಾತೀಯತೆ, ಅಸ್ಪಶ್ಯತೆಯ ಬೆನ್ನಿಗೆ ನಿಂತರು. ಪರಿಣಾಮವಾಗಿ, ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸುವುದು ಅವರಿಗೆ ಅನಿವಾರ್ಯವಾಯಿತು.

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ದಿನವನ್ನು ದೇಶಾದ್ಯಂತ ಶೋಷಿತ ಸಮುದಾಯ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದೆ. ಆ ದಿನ ದೇಶದ ಸಾವಿರಾರು ಶೋಷಿತರು ‘ಅಂಬೇಡ್ಕರ್ ಮಾಡಿದ ಪ್ರತಿಜ್ಞೆ’ಯನ್ನು ಮರು ಉಚ್ಚರಿಸಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಈ ಬಾರಿಯೂ ದೇಶಾದ್ಯಂತ ದಲಿತರು, ಶೋಷಿತರು ಬೌದ್ಧ ಧರ್ಮವನ್ನು ಸಾಮೂಹಿಕವಾಗಿ ಸ್ವೀಕರಿಸಿದ್ದಾರೆ. ಆದರೆ ದಿಲ್ಲಿಯಲ್ಲಿ ಮಾತ್ರ ಈ ಸಮಾರಂಭ ವಿವಾದಕ್ಕೀಡಾಗಿದೆ. ಬೌದ್ಧ ಧರ್ಮಕ್ಕೆ ದಲಿತರು ಮತಾಂತರಗೊಂಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ರಾಜೇಂದ್ರ ಪಾಲ್ ಗೌತಮ್ ಅವರ ವಿರುದ್ಧ ಬಿಜೆಪಿಯ ಕಾರ್ಯಕರ್ತರು ಭಾರೀ ಟೀಕೆಗಳನ್ನು ಮಾಡಿದ್ದಾರೆ. ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಪ್ ಮತ್ತು ರಾಜೇಂದ್ರ ಪಾಲ್ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಯಿತು. ಈ ಸಂದರ್ಭದಲ್ಲಿ ರಾಜೇಂದ್ರ ಪಾಲ್ ಗೌತಮ್ ಜೊತೆಗೆ ನಿಂತು ನೈತಿಕ ಬೆಂಬಲ ನೀಡುವುದು ಆಮ್ ಆದ್ಮಿ ಪಕ್ಷದ ಕರ್ತವ್ಯವಾಗಿತ್ತು. ವಿಪರ್ಯಾಸವೆಂದರೆ, ಆಮ್ ಆದ್ಮಿ ಪಕ್ಷ ರಾಜೇಂದ್ರ ಪಾಲ್ ಗೌತಮ್ ಅವರ ರಾಜೀನಾಮೆಯನ್ನು ಕೇಳಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಅವರ ಪ್ರತಿಜ್ಞೆಯನ್ನು ಸ್ವೀಕರಿಸಿದ ಕಾರಣಕ್ಕಾಗಿ ಅವರು ತನ್ನ ಸಚಿವ ಸ್ಥಾನವನ್ನು ತೊರೆದಿದ್ದಾರೆ.  ಇಷ್ಟಕ್ಕೇ ಪ್ರಕರಣ ಮುಗಿದಿಲ್ಲ. ‘ಇದೀಗ ದ್ವೇಷ ಹರಡಿದ್ದಾರೆ, ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ’ ಎಂದು ಬಿಜೆಪಿ ಅವರ ವಿರುದ್ಧ ದೂರು ಸಲ್ಲಿಸಿದ್ದು, ಪೊಲೀಸರು ಮಾಜಿ ಸಚಿವರನ್ನು ಠಾಣೆಗೆ ಕರೆಸಿಕೊಂಡಿದ್ದಾರೆ.

ಬೌದ್ಧ ಧರ್ಮ ಸ್ವೀಕರಿಸುವ ಸಂದರ್ಭದಲ್ಲಿ ಮಾಡಿದ ಪ್ರತಿಜ್ಞೆ ಅಪರಾಧವೇ ಆಗಿದ್ದರೆ ಮೊದಲ ಅಪರಾಧಿ ಈ ದೇಶದ ಸಂವಿಧಾನ ಬರೆದ ಅಂಬೇಡ್ಕರ್ ಅವರೇ ಆಗಿರುತ್ತಾರೆ. ಕೇಸು ದಾಖಲಿಸುವುದಿದ್ದರೆ ಅವರ ಮೇಲೆಯೇ ಕೇಸು ದಾಖಲಿಸಬೇಕು. ಅಂಬೇಡ್ಕರ್ ಭಾರತಕ್ಕೆ ಮಾದರಿ ಆಗಿದ್ದಾರೆ ಎನ್ನುವುದನ್ನು ಅಂಬೇಡ್ಕರ್ ಜಯಂತಿಯ ದಿನ ಪ್ರಧಾನಿ ಮೋದಿಯವರೂ ತಮ್ಮ ಶುಭಾಶಯದಲ್ಲಿ ಒಪ್ಪಿಕೊಳ್ಳುತ್ತಾರೆ. ಹೀಗಿರುವಾಗ, ಅಂಬೇಡ್ಕರ್ ಮಾಡಿದ ಪ್ರತಿಜ್ಞೆಯನ್ನು ಸಾರ್ವಜನಿಕ ಸಮಾರಂಭದಲ್ಲಿ ಪುನರುಚ್ಚರಿಸಿದ ಕಾರಣಕ್ಕೆ ಸಚಿವನೊಬ್ಬ ರಾಜೀನಾಮೆ ನೀಡಬೇಕಾದ ಸನ್ನಿವೇಶ ಯಾಕೆ ಸೃಷ್ಟಿಯಾಯಿತು? ಅವರ ಮೇಲೆ ದೂರನ್ನು ಸಲ್ಲಿಸಿದವರ ವಿರುದ್ಧ ದೂರು ಸಲ್ಲಿಕೆಯಾಗಬೇಡವೆ? ಎನ್ನುವ ಪ್ರಶ್ನೆಯನ್ನು ಅಂಬೇಡ್ಕರ್‌ನ್ನು ಮಾದರಿಯಾಗಿರಿಸಿಕೊಂಡ ಜಾಗೃತ ಜನರು ಕೇಳುತ್ತಿದ್ದಾರೆ. ಸಭೆಯಲ್ಲಿ ಭಾಗವಹಿಸುವುದು ಅಪರಾಧವಾಗಿದ್ದರೆ, ಅಂತಹದೊಂದು ಸಭೆಯನ್ನು ನಡೆಸುವುದಕ್ಕೆ ಅನುಮತಿ ನೀಡಿದವರು ಯಾರು? ಅನುಮತಿ ನೀಡಿದವರ ಮೇಲೂ ಕ್ರಮ ತೆಗೆದುಕೊಳ್ಳಬೇಡವೆ? ಎಲ್ಲಕ್ಕಿಂತ ಮುಖ್ಯವಾಗಿ ಆ ಸಭೆ ಯಾವುದೋ ಭೂಗತ ಸ್ಥಳದಲ್ಲಿ, ಗುಟ್ಟಾಗಿ ನಡೆದಿರುವುದಲ್ಲ. ಅದರಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೊಲ್ಲು, ಹೊಡಿ, ಬಡಿ ಎಂದು ಯಾರೂ ಕರೆ ನೀಡಿಲ್ಲ. ಇಷ್ಟಾದರೂ ಆ ಸಭೆಗೆ ಸಮಾಜವನ್ನು ಒಡೆಯುವ ಉದ್ದೇಶವಿದೆ ಎಂದು ದಿಲ್ಲಿ ಪೊಲೀಸರು ಹೇಗೆ ಭಾವಿಸುತ್ತಾರೆ?

ಇದೊಂದು ಆರಂಭ. ಶೋಷಿತ ಸಮುದಾಯದ ಜನರು ಇತರ ಧರ್ಮಗಳನ್ನು ಸ್ವೀಕರಿಸದಂತೆ ತಡೆಯೊಡ್ಡಲು ಈಗಾಗಲೇ ಮತಾಂತರ ನಿಷೇಧ ಕಾಯ್ದೆಯನ್ನು ಹಲವು ರಾಜ್ಯಗಳು ಜಾರಿಗೊಳಿಸಿವೆ. ಈಗಾಗಲೇ ಇಸ್ಲಾಮ್ ಅಥವಾ ಕ್ರೈಸ್ತ ಧರ್ಮ ಸ್ವೀಕರಿಸಿದವರಿಗೆ ಈ ಕಾಯ್ದೆಯನ್ನು ಬಳಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುವುದರಲ್ಲೂ ವ್ಯವಸ್ಥೆ ಯಶಸ್ವಿಯಾಗಿದೆ. ಆದರೆ ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕರಿಸುತ್ತಿರುವ ದಲಿತರ ಮೇಲೆ ಈ ಕಾಯ್ದೆಯನ್ನು ಅನ್ವಯ ಗೊಳಿಸುವ ಧೈರ್ಯವನ್ನು ಅದು ಇನ್ನೂ ಪ್ರದರ್ಶಿಸಿಲ್ಲ. ದಿಲ್ಲಿಯಲ್ಲಿ ಬೌದ್ಧ ಧರ್ಮ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರೊಬ್ಬರ ಮೇಲೆ ನಡೆದಿರುವ ದಾಳಿ ನೇರವಾಗಿ ದಲಿತರ ಬೌದ್ಧ ಧರ್ಮ ಮತಾಂತರದ ವಿರುದ್ಧ ನಡೆದಿರುವ ದಾಳಿಯಾಗಿದೆ. ಮತಾಂತರಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಸಂಘಪರಿವಾರದ ಗುರಿ ಬೌದ್ಧ ಧರ್ಮಕ್ಕೆ ಸೇರುತ್ತಿರುವ ದಲಿತರಾಗಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಯಾವುದೇ ಧರ್ಮವನ್ನು ಸ್ವೀಕರಿಸುವಾಗ, ಇತರ ದೇವರುಗಳನ್ನು ಪೂಜಿಸುವುದಿಲ್ಲ ಎಂದು ಹೇಳುವುದು ಸಹಜವಾಗಿದೆ. ಬ್ರಾಹ್ಮಣರೊಳಗೆ ದ್ವೈತ ಮತ್ತು ಅದ್ವೈತಿಗಳ ನಡುವೆ ಅದೆಷ್ಟು ತೀವ್ರವಾದ ಟೀಕೆ ಪ್ರತಿಟೀಕೆಗಳು ನಡೆದಿವೆ ಎನ್ನುವುದು ನಮಗೆ ಗೊತ್ತಿದೆ. ಮಧ್ವಾಚಾರ್ಯರ ಮೇಲೆ ಶಂಕರಾಚಾರ್ಯರ ಅನುಯಾಯಿಗಳು ಅತ್ಯಂತ ನಿಂದನಾತ್ಮಕವಾದ ಗದ್ಯಗಳನ್ನು, ಕಾವ್ಯಗಳನ್ನು ಬರೆದಿದ್ದಾರೆ. ಸತ್ಯಾರ್ಥ ಪ್ರಕಾಶದಲ್ಲಿ ದಯಾನಂದ ಸರಸ್ವತಿಯವರು ಸಿಖ್ ಧರ್ಮದ ವಿರುದ್ಧವೂ ಇದೇ ದಾಳಿಯನ್ನು ಮಾಡುತ್ತಾರೆ. ಇನ್ನೊಂದು ಧರ್ಮದ ನಂಬಿಕೆಯನ್ನು ಸಂಪೂರ್ಣ ನಿರಾಕರಿಸದೆ ಹೊಸ ಧರ್ಮವನ್ನು ಸ್ವೀಕರಿಸಲು ಸಾಧ್ಯವಿಲ್ಲ. ತಮ್ಮ ಮೇಲಿನ ಅಸ್ಪಶ್ಯತೆ, ದೌರ್ಜನ್ಯಗಳಿಗೆ ಕಾರಣವಾಗಿರುವ ಧರ್ಮವನ್ನು ಬಿಟ್ಟು ಹೊರ ಬರುವಾಗ, ಆ ಧರ್ಮದ ದೇವರುಗಳನ್ನು ಇನ್ನು ಮುಂದೆ ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ ಅದರಿಂದ ಸಮಾಜ ಒಡೆಯುವುದು ಹೇಗೆ? ಮುಂದಿನ ದಿನಗಳಲ್ಲಿ ದಲಿತರು ಅಂಬೇಡ್ಕರ್ ಅವರು ಮಾಡಿದ ಈ ಪ್ರತಿಜ್ಞೆ ಸ್ವೀಕರಿಸಿದರೆ ಅವರೆಲ್ಲರ ಮೇಲೆ ಕೇಸು ದಾಖಲಿಸಲಾಗುತ್ತದೆಯೆ? ಈ ಪ್ರಶ್ನೆಗೆ ಪೊಲೀಸರು ಮತ್ತು ಸರಕಾರ ಉತ್ತರಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಕುರಿತಂತೆ, ದಲಿತರ ಕುರಿತಂತೆ ಆಮ್ ಆದ್ಮಿ ಪಕ್ಷದ ನಿಲುವುಗಳೂ ಬೆಳಕಿಗೆ ಬಂದಿದೆ. ಹಿಂಸಾಚಾರಕ್ಕೆ ಬಹಿರಂಗವಾಗಿ ಕರೆ ನೀಡಿ ದಿಲ್ಲಿ ಗಲಭೆ ಆಯೋಜಿಸಿದ ಸಂಸದ ಸಾರ್ವಜನಿಕ ನಾಯಕನಾಗಿ ಇನ್ನೂ ಓಡಾಡುತ್ತಿದ್ದಾನೆ. ಆತನ ವಿರುದ್ಧ ಆಮ್ ಆದ್ಮಿಯಾಗಲಿ, ಅದರ ನಾಯಕ ಕೇಜ್ರಿವಾಲರಾಗಲಿ ತುಟಿ ಬಿಚ್ಚುವುದಿಲ್ಲ. ಗುಜರಾತ್‌ನಲ್ಲಿ  ಸಾಮೂಹಿಕ ಅತ್ಯಾಚಾರದಲ್ಲಿ ಭಾಗವಹಿಸಿದ ಮೇಲ್‌ಜಾತಿಯ ಅಪರಾಧಿಗಳನ್ನು ಸರಕಾರ ಬಿಡುಗಡೆ ಮಾಡಿದಾಗಲೂ ಅದನ್ನು ಟೀಕಿಸುವುದಿಲ್ಲ. ಆದರೆ ಅಂಬೇಡ್ಕರ್ ಪ್ರತಿಪಾದಿಸಿದ  ಸಮಾನತೆಯನ್ನು ಎತ್ತಿ ಹಿಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂಬೇಡ್ಕರ್ ಅವರು ತೆಗೆದುಕೊಂಡ ಪ್ರತಿಜ್ಞೆಯನ್ನು ಸ್ವೀಕರಿಸಿದರೆ ಅವರನ್ನು ಸ್ಥಾನದಿಂದ ಕೆಳಗಿಳಿಸುತ್ತದೆ. ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ ಟೀಮ್ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News