ಕರ್ನಾಟಕದ ಹಿರಿಮೆಗಳ ಬಗ್ಗೆ ಬಿಜೆಪಿ ನಾಯಕರ ಕೀಳರಿಮೆ!

Update: 2022-10-14 04:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಮ್ಮ ಇತಿಹಾಸ, ನಮ್ಮ ಪರಂಪರೆಯ ವ್ಯಕ್ತಿಗಳನ್ನು ಜಗತ್ತು ಮಾದರಿಯಾಗಿಟ್ಟು ಸ್ಮರಿಸಿದರೆ, ಅದು ನಮಗೆ ರೋಮಾಂಚನವನ್ನು ತರಬೇಕು. ಅವರ ನೆನಪುಗಳನ್ನು ಉಳಿಸಿ, ಬೆಳೆಸಿ ಮುಂದಿಟ್ಟುಕೊಂಡು ನಮ್ಮ ನಾಡು, ನುಡಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಕೆಲಸ ನಡೆಯಬೇಕು. ವಿಪರ್ಯಾಸವೆಂದರೆ, ಕರ್ನಾಟಕದ ಕೆಲವು ಸಂಸದರು, ಜನಪ್ರತಿನಿಧಿಗಳು ಕರ್ನಾಟಕದ ಇತಿಹಾಸ, ಪರಂಪರೆಗಳ ಬಗ್ಗೆ ಮುಜುಗರ, ಕೀಳರಿಮೆ ಪಟ್ಟುಕೊಳ್ಳುತ್ತಿದ್ದಾರೆ. ನಮ್ಮ ಇತಿಹಾಸವನ್ನು ಕಸದ ಬುಟ್ಟಿಗೆ ಹಾಕಿ ದೂರದ ಗುಜರಾತ್, ಉತ್ತರ ಪ್ರದೇಶಗಳನ್ನು ಕರ್ನಾಟಕಕ್ಕೆ ಮಾದರಿಯಾಗಿಸಲು ಹೊರಟಿದ್ದಾರೆ. ಜಗತ್ತು ಈಗಲೂ ನೆನಪಿಸುವ ಕರ್ನಾಟಕದ ಐತಿಹಾಸಿಕ ಘಟನೆಗಳನ್ನು ವಿರೂಪಗೊಳಿಸಿ, ಇಲ್ಲವಾಗಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಟಿಪ್ಪು ಸುಲ್ತಾನ್ ಕುರಿತಂತೆ ಸಂಸದನೊಬ್ಬ ಆಡಿರುವ ನಿಂದನೀಯ ಮಾತುಗಳು ಅದರ ಭಾಗವೇ ಆಗಿದೆ. ಕರ್ನಾಟಕದ ಎಲ್ಲ ಹಿರಿಮೆಗಳನ್ನು ಇಲ್ಲವಾಗಿಸಿ, ಕನ್ನಡತನದ ಮೇಲೆ ಹಿಂದಿ ಭಾಷೆಯನ್ನು, ಉತ್ತರ ಭಾರತೀಯ ಇತಿಹಾಸಗಳನ್ನು ಹೇರುವ ಪ್ರಯತ್ನಕ್ಕೆ ಇವರು ಈ ಮೂಲಕ ಕೈಜೋಡಿಸಿದ್ದಾರೆ. ಕನ್ನಡದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಶ್ರೇಷ್ಠ ನಾಯಕರ ಜಾಗದಲ್ಲಿ ಮರಾಠಿ, ರಾಜಸ್ಥಾನಿ, ಪಂಜಾಬಿನ ಐತಿಹಾಸಿಕ ನಾಯಕರನ್ನು ತಂದು ಕೂರಿಸುವ ಪ್ರಯತ್ನದಲ್ಲಿದ್ದಾರೆ. ಇವರಿಗೆ ಮರಾಠಿ ರಾಜ ಶಿವಾಜಿ ಮುಖ್ಯವಾಗುತ್ತಾರೆ. ಆದರೆ ಶಿವಾಜಿಯನ್ನು ಎದುರಿಸಿ ಗೆದ್ದ ಕನ್ನಡದ ವೀರವನಿತೆ ಬೆಳವಡಿ ಮಲ್ಲಮ್ಮ ಬೇಡವಾಗುತ್ತಾಳೆ. ಕರ್ನಾಟಕಕ್ಕೆ ಹತ್ತು ಹಲವು ಕೊಡುಗೆಗಳನ್ನು ಕೊಟ್ಟ, ವಿಶ್ವ ಇಂದಿಗೂ ನೆನಪಿಸುತ್ತಿರುವ ಟಿಪ್ಪು ಸುಲ್ತಾನ್ ಹೆಸರೆತ್ತಿದರೆ ಇವರಿಗೆ ಮುಜುಗರ, ಕೀಳರಿಮೆ. ಅದರ ಬದಲಿಗೆ ಬ್ರಿಟಿಷರ ಪಿಂಚಣಿ ಪಡೆದು, ಸ್ವಾತಂತ್ರ ಹೋರಾಟಗಾರರ ವಿರುದ್ಧ ಕೆಲಸ ಮಾಡಿದ ವೀರಸಾವರ್ಕರ್‌ರನ್ನು ತಂದು ಕನ್ನಡಿಗರ ಮೇಲೆ ಹೇರುವ ಪ್ರಯತ್ನ ನಡೆಸುತ್ತಾರೆ. ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್, ಹೈದರಲಿ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ ಮೊದಲಾದವರು ಕನ್ನಡ ನೆಲ, ಜಲ ಪರಕೀಯರ ಸೊತ್ತಾಗದಂತೆ ಬಲಿದಾನಗಳನ್ನು ಮಾಡಿದರೆ, ಪ್ರತಾಪ ಸಿಂಹನಂತಹ ಬಿಜೆಪಿ ನಾಯಕರು ಇದೀಗ ಕನ್ನಡ ನಾಡು, ನುಡಿ, ಇತಿಹಾಸ, ಪರಂಪರೆಗಳನ್ನು ಉತ್ತರ ಭಾರತೀಯರಿಗೆ ಒತ್ತೆಯಿಡಲು ಮುಂದಾಗಿರುವುದು ವಿಪರ್ಯಾಸವಾಗಿದೆ.

ವಿಶ್ವಮಟ್ಟದಲ್ಲಿ ಕರ್ನಾಟಕದ ಇತಿಹಾಸ ಗುರುತಿಸಲ್ಪಡುತ್ತಿರುವುದು ಇಬ್ಬರು ನಾಯಕರ ಕಾರಣಕ್ಕಾಗಿ. ಒಬ್ಬರು ಬಸವಣ್ಣ. ಅವರು ಕನ್ನಡ ಭಾಷೆಯ ಮೂಲಕ, ಚಿಂತನೆಯ ಮೂಲಕ ವಿಶ್ವಕ್ಕೊಂದು ಧರ್ಮವನ್ನು ಕೊಟ್ಟರು. ಭಾರತದ ಜಾತಿ ವ್ಯವಸ್ಥೆಯ ವಿರುದ್ಧ 12ನೇ ಶತಮಾನದಲ್ಲಿ ದಂಗೆಯೆದ್ದು ಸಾಮಾಜಿಕ ಕ್ರಾಂತಿಯನ್ನು ನಡೆಸಿ ಲಿಂಗಾಯತ ಧರ್ಮವನ್ನು ಬಸವಣ್ಣ ಕರ್ನಾಟಕದಲ್ಲಿ ಸ್ಥಾಪಿಸಿದರು. ಇಂದು ಬಸವ ಧರ್ಮ ವಿಶ್ವಾದ್ಯಂತ ಹರಡಿದೆ. ಭಾರತದಲ್ಲಿ ಹುಟ್ಟಿದ ಬಹುತೇಕ ಧರ್ಮಗಳು ಭಾರತದೊಳಗೇ ಜೀವಿಸುತ್ತಿದ್ದರೆ, ಬಸವಣ್ಣ ಕರ್ನಾಟಕದಲ್ಲಿ ಸ್ಥಾಪಿಸಿದ ಲಿಂಗಾಯತ ಧರ್ಮ, ತನ್ನ ಕ್ರಾಂತಿಕಾರಿ ಸಂದೇಶಗಳ ಮೂಲಕ ವಿದೇಶಿಯರನ್ನೂ ಸೆಳೆದಿದೆ. ಬಸವಣ್ಣನ ಬಗ್ಗೆ ವಿದೇಶಿ ಸಂಶೋಧಕರೂ ಅಧ್ಯಯನ ಮಾಡಿದ್ದಾರೆ. ಬಸವಣ್ಣನವರನ್ನು ಬಿಟ್ಟರೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಇನ್ನೊಬ್ಬ ಐತಿಹಾಸಿಕ ವ್ಯಕ್ತಿ ಟಿಪ್ಪು ಸುಲ್ತಾನ್. ಜೊತೆಗೆ ಆತನ ತಂದೆ ಹೈದರಲಿ. ಇದು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯವಾಗಿದೆ. ಅಮೆರಿಕದ ನಾಸಾದಲ್ಲಿ ಈಗಲೂ ಜತನದಿಂದ ಕಾಪಾಡಿಕೊಂಡು ಬಂದಿರುವ ಟಿಪ್ಪು ಸುಲ್ತಾನನ ಮೊತ್ತ ಮೊದಲ ಕ್ಷಿಪಣಿ, ಕನ್ನಡದ ಹಿರಿಮೆಯನ್ನು ಸಾರುತ್ತಾ ಬಂದಿದೆ. ಈ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬುಲ್ ಕಲಾಂ ಅದರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಆದರೆ ಪ್ರತಾಪ ಸಿಂಹನಂತಹ ಅಪ್ರಬುದ್ಧ ಜನಪ್ರತಿನಿಧಿಗಳು ಕರ್ನಾಟಕದ ಕುರಿತಂತೆ ಕೀಳರಿಮೆಯಿಂದ ನರಳುತ್ತಿದ್ದಾರೆ. ಹೈದರಲಿ ಮತ್ತು ಟಿಪ್ಪು ಸುಲ್ತಾನ್ ಕೇವಲ ಕರ್ನಾಟಕಕ್ಕೆ ಅಥವಾ ಭಾರತಕ್ಕೆ ಸೀಮಿತರಾದ ವ್ಯಕ್ತಿಗಳಲ್ಲ. ತಮ್ಮ ಆಡಳಿತ ಕಾಲದಲ್ಲೇ ಅವರು ವಿಶ್ವ ಮಾನ್ಯರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ ಕಾಲದಲ್ಲಿ ಫ್ರಾನ್ಸ್, ಸ್ಪೇನ್‌ನಂತಹ ದೇಶಗಳ ಜೊತೆಗೆ ಸಂಬಂಧವಿಟ್ಟುಕೊಂಡ ಏಕೈಕ ರಾಜ ಟಿಪ್ಪು ಸುಲ್ತಾನ್. ಆತ ಕನ್ನಡಿಗ ಎನ್ನುವುದು ನಮಗೆ ಹೆಮ್ಮೆಯ ವಿಷಯವಾಗಬೇಕು. ಅಮೆರಿಕದ ಕ್ರಾಂತಿಕಾರಿಗಳಿಗೆ ಹೈದರಲಿ ಮತ್ತು ಟಿಪ್ಪು ಮಾದರಿಯಾಗಿದ್ದರು. 1781ರಲ್ಲಿ ಲಾರ್ಡ್ ಕಾರ್ನ್‌ವಾಲೀಸ್‌ನ ಬ್ರಿಟಿಷ್ ಸೇನೆ ಅಮೆರಿಕದ ಕ್ರಾಂತಿಕಾರಿಗಳಿಗೆ ಶರಣಾಯಿತು. ಒಂಭತ್ತು ದಿನಗಳನಂತರ ಈ ವಿಜಯವನ್ನು ಅಮೆರಿಕದ ಕ್ರಾಂತಿಕಾರಿಗಳು ನ್ಯೂಜೆರ್ಸಿ ಪ್ರಾಂತದ ಟ್ರೆನ್ಟನ್‌ನಲ್ಲಿ ಆಚರಿಸಿದರು. ಈ ವಿಜಯೋತ್ಸವದಲ್ಲಿ 13 ನಾಯಕರನ್ನು ನೆನೆದುಕೊಂಡು 13 ತೋಪುಗಳನ್ನು ಗೌರವಾರ್ಥ ಹಾರಿಸಲಾಯಿತು. ಆ 13 ನಾಯಕರಲ್ಲಿ ಭಾರತದ ಏಕೈಕ ಯೋಧ ಹೈದರಲಿ ಎನ್ನುವುದು ಕರ್ನಾಟದ ಪಾಲಿಗೆ ವಿಶ್ವಮಟ್ಟದಲ್ಲಿ ದೊರಕಿದ ಗೌರವವಲ್ಲವೆ? 'ಡೈರಿ ಆಫ್ ದ ಅಮೆರಿಕನ್ ರೆವೆಲ್ಯೂಶನ್' ಕೃತಿಯಲ್ಲಿ ಖ್ಯಾತ ಇತಿಹಾಸ ಕಾರ ಫ್ರಾಂಕ್‌ಮೂರ್ ಹೈದರಲಿಯ ಬಗ್ಗೆ ಸುದೀರ್ಘವಾಗಿ ಬರೆಯುತ್ತಾನೆ.

1781ರಲ್ಲಿ ಪೆನ್ಸಿಲ್ವೇನಿಯಾ ಶಾಸನ ಸಭೆಯು ತಮ್ಮ ಒಂದು ಯುದ್ಧ ನೌಕೆಗೆ 'ಹೈದರ್-ಅ್ಝ್ಝ (ಮಿತ್ರ)' ಎಂದು ಹೆಸರಿಟ್ಟು ಗೌರವಿಸಿತ್ತು. ಬ್ರಿಟಿಷರ ವಿರುದ್ಧ ಹೋರಾಡಿದ ಅಮೆರಿಕದ ಯುದ್ಧ ಕುದುರೆಗಳಿಗೂ ಟಿಪ್ಪು ಸುಲ್ತಾನ್ ಹೆಸರುಗಳನ್ನು ಇಟ್ಟಿರುವ ದಾಖಲೆ ಇತಿಹಾಸ ಪುಸ್ತಕಗಳಲ್ಲಿ ನಮಗೆ ಸಿಗುತ್ತದೆ. 2010ರಲ್ಲಿ ಅಮೆರಿಕದ 'ನ್ಯಾಶನಲ್ ಆರ್ಕೇವ್ಸ್' ಮತ್ತು 'ಯುನಿವರ್ಸಿಟಿ ಆಫ್ ವರ್ಜೀನಿಯಾ' ಗಳು ಅಮೆರಿಕ ಸಂಸ್ಥಾನದ ಪಿತಾಮಹರಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಒಂದು ವೆಬ್‌ಸೈಟನ್ನು ರೂಪಿಸಿವೆ. ಇದರಲ್ಲಿ ಅಮೆರಿಕದ ಕ್ರಾಂತಿಯ ನೇತೃತ್ವವನ್ನು ವಹಿಸಿದ ನಾಯಕರು ಹೈದರ್ ಮತ್ತು ಟಿಪ್ಪುವಿನ ಜೊತೆಗೆ ನಡೆಸಿದ ಪತ್ರವ್ಯವಹಾರಗಳ ವಿವರಗಳಿವೆ. 18ನೇ ಶತಮಾನದಲ್ಲಿ ಅಮೆರಿಕದ ಕ್ರಾಂತಿಯಲ್ಲಿ ಕರ್ನಾಟಕವನ್ನು ಭಾಗೀದಾರರನ್ನಾಗಿ ಮಾಡಿದ ಟಿಪ್ಪು, ಹೈದರ್ ಕುರಿತಂತೆ ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಹೆಮ್ಮೆ ಪಡಬೇಕಾಗಿದೆ. ಇವೆಲ್ಲವೂ ಹೈದರಲಿ ಮತ್ತು ಟಿಪ್ಪುಸುಲ್ತಾನ್ ಹೇಗೆ ಇಡೀ ಕರ್ನಾಟಕವನ್ನು ಆ ಕಾಲದಲ್ಲೇ ವಿಶ್ವಮಾನ್ಯಗೊಳಿಸಿದರು ಎನ್ನುವುದನ್ನು ಹೇಳುತ್ತವೆ.

ಇನ್ನುಳಿದಂತೆ ಬರೇ ಮೈಸೂರಿಗೆ ಸೀಮಿತವಾಗಿದ್ದ ನೆಲವನ್ನು ವಿಸ್ತಾರಗೊಳಿಸಿ ಕರ್ನಾಟಕದ ವ್ಯಾಪ್ತಿಯನ್ನು ಹಿಗ್ಗಿಸಿದ, ಎಲ್ಲ ಸಣ್ಣ ಸಣ್ಣ ಪಾಳೆಯಗಳನ್ನು ಒಂದುಗೂಡಿಸಿ ವಿಶಾಲ ಕರ್ನಾಟಕವೊಂದರ ಕಲ್ಪನೆಯನ್ನು ಬಿತ್ತಿರುವುದರಲ್ಲಿ ಟಿಪ್ಪು, ಹೈದರರ ಪಾತ್ರವಿದೆ. ಜಮೀನ್ದಾರರಿಂದ ಭೂಮಿಯನ್ನು ಕಿತ್ತು ಟಿಪ್ಪುಸುಲ್ತಾನ್ ರೈತರಿಗೆ, ದಲಿತರಿಗೆ ಹಂಚಿದ. ಮೊಲೆ ತೆರಿಗೆಯಂತಹ ಅನಿಷ್ಟ ಪದ್ಧತಿಗಳನ್ನು ಕಿತ್ತೊಗೆದ. ಕೃಷಿಯನ್ನು ಅಭಿವೃದ್ಧಿ ಮಾಡಿಸಿದ. ಗೋ ಸಾಕಣೆ, ರೇಷ್ಮೆಬೆಳೆಗಳಿಗೆ ಹೊಸ ರೂಪು ಕೊಟ್ಟ. ಸರ್ವಧರ್ಮ ಸಮನ್ವಯಕ್ಕೆ ಆತ ಕೊಟ್ಟ ಕೊಡುಗೆ ಇಂದಿಗೂ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಘಂಟಾಧ್ವನಿಯ ರೂಪದಲ್ಲಿ ಅನುರಣಿಸುತ್ತಿದೆ. ಇವೆಲ್ಲದರ ಕುರಿತಂತೆ ಕೀಳರಿಮೆ ಪಡುತ್ತಾ, ಕರ್ನಾಟಕದ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುವ ಪ್ರತಾಪ ಸಿಂಹಾದಿಗಳು ಕರ್ನಾಟಕದ ವಿರೋಧಿಗಳಾಗಿದ್ದಾರೆ. ಬ್ರಿಟಿಷರು ಬಿತ್ತಿ ಹೋಗಿರುವ ಗುಲಾಮಿ ಮನಸ್ಥಿತಿಯ ವಾರಸುದಾರರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದು ಟಿಪ್ಪು ಸುಲ್ತಾನ್‌ನನ್ನು ಇಡೀ ಭಾರತದ ಅಸ್ಮಿತೆಯಾಗಿ ಬೆಳೆಸುವುದು ಸಕಲ ಕನ್ನಡಿಗರ ಅಗತ್ಯವಾಗಿದೆ. ವಿಶ್ವಮಾನ್ಯವಾದ ಈ ಕನ್ನಡದ ಹಿರಿಮೆಯನ್ನು ದಿಲ್ಲಿಯಲ್ಲಿರುವ ನಾಯಕರಿಗೆ ಮನವರಿಕೆ ಮಾಡಿಸುವ ಕೆಲಸ ಮೊದಲು ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News