ಜ್ಞಾನವಾಪಿ ಮಸೀದಿ ಪ್ರಕರಣ: ‘ಶಿವಲಿಂಗ’ದ ವೈಜ್ಞಾನಿಕ ತನಿಖೆ ನಡೆಸದಂತೆ ನ್ಯಾಯಾಲಯ ಆದೇಶ

Update: 2022-10-14 17:13 GMT
Photo:PTI

ಲಕ್ನೋ, ಅ. ೧೪: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ‘ಶಿವಲಿಂಗ’ದ ಪ್ರಾಯವನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ ಮುಂತಾದ ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕು ಎಂಬ ಹಿಂದೂ ಅರ್ಜಿದಾರರ ಬೇಡಿಕೆಯನ್ನು ನ್ಯಾಯಾಲಯವೊಂದು ಶುಕ್ರವಾರ ತಿರಸ್ಕರಿಸಿದೆ.
ಕೆಳ ನ್ಯಾಯಾಲಯವೊಂದರ ಆದೇಶದಂತೆ ಈ ವರ್ಷದ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೀಡಿಯೊ ಸಮೀಕ್ಷೆ ನಡೆಸಿದಾಗ ‘ಶಿವಲಿಂಗ’ವು ಪತ್ತೆಯಾಗಿತ್ತು. ಮಸೀದಿ ಆವರಣದೊಳಗಿರುವ ಪ್ರಾರ್ಥನಾ ಸ್ಥಳವೊಂದರಲ್ಲಿ ವರ್ಷವಿಡೀ ಪೂಜೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಆ ನ್ಯಾಯಾಲಯವು ವೀಡಿಯೊ ಸಮೀಕ್ಷೆಗೆ ಆದೇಶ ನೀಡಿತ್ತು. ಆ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ.
ಮಸೀದಿ ಆವರಣದ ಒಳಗೆ ‘ಶಿವಲಿಂಗ’ ಇದೆ ಎನ್ನಲಾದ ಸ್ಥಳವನ್ನು ಭದ್ರಪಡಿಸಲು (ಸೀಲ್ ಮಾಡಲು) ಸುಪ್ರೀಂ ಕೋರ್ಟ್ ಆದೇಶಿಸಿದೆ. ಹಾಗಾಗಿ, ಈಗ ತಥಾಕಥಿತ ‘ಶಿವಲಿಂಗ’ವನ್ನು ಕಾರ್ಬನ್ ಡೇಟಿಂಗ್ ಮುಂತಾದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವುದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ವಾರಾಣಸಿಯ ನ್ಯಾಯಾಲಯವು ಹೇಳಿತು.
‘ಶಿವಲಿಂಗ’ವನ್ನು ‘ವೈಜ್ಞಾನಿಕ ಪರೀಕ್ಷೆ’ಗೆ ಒಳಪಡಿಸಬೇಕು ಎಂದು ಕೋರಿ ಐವರು ಹಿಂದೂ ಅರ್ಜಿದಾರರ ಪೈಕಿ ನಾಲ್ವರು ಕಳೆದ ತಿಂಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದರ ಪ್ರಾಯವನ್ನು ನಿರ್ಧರಿಸುವುದು ಅಗತ್ಯ ಎಂಬುದಾಗಿ ಅವರು ವಾದಿಸಿದ್ದರು. ಹಿಂದೂ ದೇವರು ಮತ್ತು ದೇವತೆಯರ ಪ್ರಾಚೀನ ವಿಗ್ರಹಗಳು ಮಸೀದಿಯ ಆವರಣದಲ್ಲಿವೆ ಎಂಬುದಾಗಿ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News