ಸಮವಸ್ತ್ರವೋ? ಶಿಕ್ಷಣದ ಜೊತೆಗೆ ಸಮವಸ್ತ್ರವೋ?

Update: 2022-10-15 03:38 GMT
PHOTO: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ಹೆಚ್ಚುತ್ತಿರುವ ಅಭಿಪ್ರಾಯ ಧ್ರುವೀಕರಣದಂತೆ ಹಿಜಾಬ್ ವಿಷಯದ ಬಗ್ಗೆ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವೂ ತದ್ವಿರುದ್ಧವಾದ ಅಭಿಪ್ರಾಯಗಳ ತೀರ್ಪು ನೀಡಿದೆ. ಜಸ್ಟಿಸ್ ಸುಧಾಂಶು ಧುಲಿಯಾ ಅವರು ಅರ್ಜಿದಾರ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗೆ ಚ್ಯುತಿಯುಂಟುಮಾಡುವ ಕರ್ನಾಟಕ ಸರಕಾರದ ಹಿಜಾಬ್ ನಿಷೇಧ ಆದೇಶವನ್ನು ರದ್ದು ಮಾಡಿದ್ದರೆ, ಜಸ್ಟಿಸ್ ಹೇಮಂತ್ ಗುಪ್ತಾ ಅವರು ಶಾಲೆಯೊಳಗೆ ಸಮವಸ್ತ್ರದ ಶಿಸ್ತು ಎಲ್ಲಕ್ಕಿಂತ ಮುಖ್ಯವೆಂದು ಮುಸ್ಲಿಮ್ ವಿದ್ಯಾರ್ಥಿನಿಯರ ಅಹವಾಲನ್ನು ವಜಾ ಮಾಡಿದ್ದಾರೆ. ಹೀಗಾಗಿ ಹಿಜಾಬ್ ವಿಷಯದಲ್ಲಿ ಯಾವುದೇ ಅಂತಿಮ ತೀರ್ಪು ಈ ಪೀಠದಿಂದ ಕೊಡಲಾಗಿಲ್ಲ. ಆದ್ದರಿಂದ ದ್ವಿಸದಸ್ಯ ಪೀಠವು ಮುಂದಿನ ನಡೆಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳು ಉದ್ಭವಿಸಿದಾಗ ಮುಖ್ಯ ನ್ಯಾಯಮೂರ್ತಿಗಳು ಬೆಸ ಸಂಖ್ಯೆಯ ನ್ಯಾಯಾಧೀಶರಿರುವ ಉನ್ನತ ಪೀಠಕ್ಕೆ ವರ್ಗಾಯಿಸುತ್ತಾರೆ ಹಾಗೂ ಅದರಲ್ಲಿ ಈ ಹಿಂದಿನ ಪೀಠದ ನ್ಯಾಯಾಧೀಶರ ಜೊತೆಗೆ ಹೊಸ ನ್ಯಾಯಾಧೀಶರನ್ನು ನೇಮಿಸುತ್ತಾರೆೆ. ಆದರೆ ಜಸ್ಟಿಸ್ ಹೇಮಂತ್ ಗುಪ್ತಾ ಅವರು ಈ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ ಹಾಗೂ ಹಾಲಿ ಮುಖ್ಯ ನ್ಯಾಯಾಧೀಶರು ಕೂಡ ನವೆಂಬರ್ ಮೊದಲನೇ ವಾರ ನಿವೃತ್ತರಾಗಲಿದ್ದಾರೆ.

ಹೊಸ ಮುಖ್ಯ ನ್ಯಾಯಾಧೀಶರಾಗಲಿರುವ ಜಸ್ಟಿಸ್ ಚಂದ್ರ ಚೂಡ್ ಅವರು ಹೊಸ ಪೀಠವನ್ನು ನವೆಂಬರ್ ನಂತರ ರಚಿಸುವ ಸಾಧ್ಯತೆ ಹೆಚ್ಚು. ಅದೇನೇ ಇರಲಿ. ಹಿಜಾಬ್ ವಿಷಯದಲ್ಲಿ ಕರ್ನಾಟಕದ ಹೈಕೋರ್ಟಿನ ತ್ರಿಸದಸ್ಯ ಪೀಠವು ಮಾಡಿದ ಒಂದು ಪ್ರಮುಖ ತಪ್ಪಿನ ಬಗ್ಗೆ ಭಿನ್ನ್ನಾಭಿಪ್ರಾಯಗಳ ನಡುವೆಯೂ ಜಸ್ಟಿಸ್ ಧುಲಿಯಾ ಮತ್ತು ಜಸ್ಟಿಸ್ ಹೇಮಂತ್ ಏಕಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದು ‘ಹಿಜಾಬ್ ಹಾಕಿಕೊಳ್ಳುವುದು ಇಸ್ಲಾಮಿನ ಅತ್ಯವಶ್ಯಕ ಧಾರ್ಮಿಕ ರಿವಾಜಿನ ಭಾಗವೇ’ ಎಂಬ ಪ್ರಶ್ನೆ ಈ ಪ್ರಕರಣದಲ್ಲಿ ಅಪ್ರಸ್ತುತವಾಗಿತ್ತು ಎಂಬುದು. ಅದನ್ನು ತೀರ್ಮಾನ ಮಾಡಬೇಕಿರುವುದು ಹಿಜಾಬನ್ನು ಧರಿಸುವ ವ್ಯಕ್ತಿಯೇ ವಿನಾ ಕೋರ್ಟುಗಳಲ್ಲ. ಅದು ಆಕೆಯ ಧಾರ್ಮಿಕ ಹಕ್ಕಿನ ಭಾಗವೇ ಆಗುತ್ತದೆ ಎಂಬುದನ್ನು ಇಬ್ಬರೂ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ. ಆದರೆ ಜಸ್ಟಿಸ್ ಹೇಮಂತ್ ಅವರು ಶಾಲೆಯ ಒಳಗೆ ಆ ಸ್ವಾತಂತ್ರ್ಯವನ್ನು ಕೊಡಲು ನಿರಾಕರಿಸಿದರೆ, ಜಸ್ಟಿಸ್ ಧುಲಿಯಾ ಅವರು ಆಕೆಯ ಧಾರ್ಮಿಕ ಹಕ್ಕನ್ನು ಶಾಲೆಯ ಗೇಟಿನ ಒಳಗೆ ನಿಷೇಧಿಸಲು ಬರುವುದಿಲ್ಲ; ಏಕೆಂದರೆ ಅದು ಶಿಕ್ಷಣದ ನಿರಾಕರಣೆಗೆ ಸಮನಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಾಲೆಯ ಶಿಸ್ತು ಮತ್ತು ಸಮವಸ್ತ್ರಗಳ ಅಧಿಕಾರವನ್ನು ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿನ ಜೊತೆಗೆ ಸಮನ್ವಯಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕೇ ವಿನಾ ಸಮವಸ್ತ್ರ ಶಿಸ್ತನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಮಹಿಳೆಯರ ಶಿಕ್ಷಣವನ್ನೇ ನಿರಾಕರಿಸುವಂತಾಗಬಾರದು ಎಂದು ಜಸ್ಟಿಸ್ ಧುಲಿಯಾ ಸ್ಪಷ್ಟವಾದ ಮಾತುಗಳಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಎಷ್ಟೋ ಕೌಟುಂಬಿಕ ಹಾಗೂ ಧಾರ್ಮಿಕ ಅಡೆ ತಡೆಗಳನ್ನು ದಾಟಿಕೊಂಡು ಶಾಲೆಗಳಿಗೆ ಬರುತ್ತಿರುವ ಮುಸ್ಲಿಮ್ ಹೆಣ್ಣುಮಕ್ಕಳನ್ನು ನ್ಯಾಯಾಲಯಗಳ ತೀರ್ಪುಗಳು ಇನ್ನಷ್ಟು ಸಬಲೀಕರಿಸುತ್ತದೋ ಅಥವಾ ಹಿಮ್ಮೆಟಿಸುತ್ತದೋ ಎಂಬುದೇ ನಿರ್ಣಯಾತ್ಮಕವಾದ ವಿಷಯ ಎಂಬ ಜಸ್ಟಿಸ್ ಧುಲಿಯಾ ಅವರ ಅಭಿಪ್ರಾಯವು ಇದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿರುವ ಉನ್ನತ ಪೀಠದ ನ್ಯಾಯ ತೀರ್ಮಾನಗಳಿಗೂ ಮಾರ್ಗದರ್ಶಿಯಾಗಬೇಕು. ಆದರೆ ಹಾಗಾಗುವುದೇ? ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಿರುವ ಆಡಳಿತಾರೂಢ ಪಕ್ಷದ ವಕ್ತಾರರು ಅಂತಿಮ ತೀರ್ಪಿಗೆ ಕಾಯುವುದಾಗಿ ಹೇಳಿದರೂ ಸಮವಸ್ತ್ರದ ಜೊತೆಜೊತೆಗೆ ಹಿಜಾಬ್ ಹಾಕುವುದನ್ನು ಕೂಡಾ ಸಮರೂಪತೆಗೆ ವಿರುದ್ಧವಾದ ಪ್ರತ್ಯೇಕತಾವಾದ ಎಂದು ಬಣ್ಣಿಸಿದ್ದಾರೆ. ಶಿಕ್ಷಣ ಮಂತ್ರಿಗಳು ಶಾಲೆಗಳ ಒಳಗೆ ಯಾವುದೇ ಧಾರ್ಮಿಕ ಸಂಕೇತಗಳಿಗೆ ಸರಕಾರದ ಕಾಯ್ದೆಗಳು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ಸರಕಾರವೇ ಶಾಲೆಗಳ ಒಳಗೆ ಭಗವದ್ಗೀತೆಯನ್ನು ಪರಿಚಯಿಸುತ್ತಿದೆ. ಸರಸ್ವತಿ ಪೂಜೆಯನ್ನು ಧರ್ಮಾತೀತ ಎಂದು ಬಣ್ಣಿಸುತ್ತದೆ ಹಾಗೂ ತಾಳಿ, ವಿಭೂತಿ, ನಾಮಗಳನ್ನು ಧರ್ಮ ಸೂಚಕವಲ್ಲ, ಭಾರತೀಯ ಸಂಸ್ಕೃತಿ ಸೂಚಕ ಎಂದು ಸಮರ್ಥಿಸಿಕೊಂಡಿದೆ.

ದುರದೃಷ್ಟವಶಾತ್ ಜಸ್ಟಿಸ್ ಹೇಮಂತ್ ಗುಪ್ತಾ ಅವರು ಕೂಡ ಆಡಳಿತಾರೂಢ ಪಕ್ಷದ ಇಂತಹ ಕೋಮುವಾದಿ ತಿಳುವಳಿಕೆಯನ್ನು ಮಾನ್ಯಗೊಳಿಸುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಉನ್ನತ ಪೀಠದಲ್ಲಿ ಹಿಜಾಬ್ ಬಗ್ಗೆ ಯಾವುದೇ ಬಗೆಯ ತೀರ್ಪು ಬಂದರೂ ಸಂಘಪರಿವಾರ ಮತ್ತು ಬಿಜೆಪಿ ಪಕ್ಷ ಮತ್ತದರ ಅಂಗಸಂಸ್ಥೆಗಳು ಅದರ ದುರುಪಯೋಗ ಮಾಡಿಕೊಳ್ಳುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಧಾರ್ಮಿಕ ಸಂಕೇತಗಳ ಅಟ್ಟಹಾಸ ನಡೆಸುವ ಸಾಧ್ಯತೆಯೇ ಹೆಚ್ಚು. ಅಂತಿಮವಾಗಿ ಸಮಾಜದಲ್ಲಿ ಪ್ರಜಾತಾಂತ್ರಿಕ ಪ್ರಜ್ಞೆ ಹಾಗೂ ಭಿನ್ನ ಸಂಸ್ಕೃತಿಗಳ ಬಗ್ಗೆ, ವೈಯಕ್ತಿಕ ಘನತೆಯ ಬಗ್ಗೆ ಗೌರವಗಳನ್ನು ತೋರುವಂಥ ನಾಗರಿಕ ಪ್ರಜಾತಾಂತ್ರಿಕ ನಡೆಗಳು ಸಮಾಜದಲ್ಲಿ ಬೇರೂರದೆ ದ್ವೇಷ, ಅಸಹನೆಗಳ ವಾತಾವರಣದಲ್ಲಿ ಅಂತಿಮ ತೀರ್ಪು ಬಂದರೂ ವಿವಾದವು ಅಂತಿಮಗೊಳ್ಳುವುದೇ ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ. ಅದೇ ರೀತಿ, ಮುಸ್ಲಿಮ್ ವಿದ್ಯಾರ್ಥಿನಿಯರ ಆಯ್ಕೆಯ ಹಕ್ಕನ್ನು ಚಲಾಯಿಸುವಷ್ಟು ಸ್ವಾತಂತ್ರ್ಯವನ್ನು ಅವರ ಕುಟುಂಬವೂ ಹಾಗೂ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳೂ ಕೊಡುವಂತಾದರೆ ಮಾತ್ರ ಆ ಅಯ್ಕೆಯ ಸ್ವಾತಂತ್ರ್ಯಕ್ಕೆ ಸಂಪೂರ್ಣ ಅರ್ಥವು ದಕ್ಕುತ್ತದೆ. ಈ ಹಿನ್ನೆಲೆಯಲ್ಲಿ ಇರಾನಿನ ಮುಸ್ಲಿಮ್ ಮಹಿಳೆಯರ ಹಿಜಾಬ್ ಅನ್ನು ಕಡ್ಡಾಯ ಮಾಡಿರುವ ಇರಾನ್ ಸರಕಾರದ ವಿರುದ್ಧ ನಡೆಸಿರುವ ಹೋರಾಟವು ಆಯ್ಕೆಯ ಸ್ವಾತಂತ್ರ್ಯಕ್ಕೆ ಮತ್ತೊಂದು ಆಯಾಮವನ್ನು ಕೊಟ್ಟಿದೆ.

ಹಿಜಾಬನ್ನು ಧರಿಸುವ ಅಥವಾ ಅದನ್ನು ಧರಿಸದೇ ಇರುವ ಎರಡೂ ಹಕ್ಕುಗಳು ಮುಸ್ಲಿಮ್ ಮಹಿಳೆಯರ ಆಯ್ಕೆಯ ಹಕ್ಕುಗಳೇ ಆಗಿವೆ. ಭಾರತದಲ್ಲಿ ಹಿಜಾಬ್ ನಮ್ಮ ಆಯ್ಕೆ ಎಂದಿರುವ ವಿದ್ಯಾರ್ಥಿನಿಯರ ಪ್ರಕರಣ ತುಂಬಾ ಸಂಕೀರ್ಣವಾದುದು. ಇಲ್ಲಿ ಹಿಜಾಬ್ ಜೊತೆ ಜೊತೆಗೇ ಆಕೆಯ ಶಿಕ್ಷಣದ ಹಕ್ಕು ಕೂಡ ತಳಕು ಹಾಕಿಕೊಂಡಿದೆ. ಭಾರತದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಎದುರಾಗಿರುವ ಹತ್ತು ಹಲವು ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿಯೇ ಸರಕಾರ ಕೋಟ್ಯಂತರ ರೂಪಾಯಿಯನ್ನು ಸುರಿಯುತ್ತಿದೆ. ಬಡತನ, ಅಜ್ಞಾನ ಮೊದಲಾದ ಕಾರಣಗಳಿಂದ ಸಮಾಜವೇ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸುತ್ತಿರುವ ಸಂದರ್ಭದಲ್ಲಿ, ಶಾಲೆಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಸಮವಸ್ತ್ರದ ಹೆಸರಿನಲ್ಲಿ ಶಾಲೆಯಿಂದ ಹೊರ ಹಾಕುವುದು ಸರಕಾರದ ‘ಬೇಟಿ ಬಚಾವೋ-ಬೇಟಿ ಪಢಾವೋ’ ಘೋಷಣೆಯನ್ನೇ ಸ್ವಯಂ ಅಣಕ ಮಾಡಿಕೊಂಡಂತಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರಾದ ಧುಲಿಯಾ ಅವರು ತಮ್ಮ ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಭಾರತದ ಮಟ್ಟಿಗೆ ಮಹತ್ವದ್ದಾಗಿದೆ. ಅದು ಈ ದೇಶದ ಮಹಿಳೆಯರ ಶಿಕ್ಷಣಕ್ಕಾಗಿ ತುಡಿಯುವ ಪ್ರತಿಯೊಬ್ಬರ ಮನದಾಳದ ಮಾತುಗಳಾಗಿವೆ. ಸಂವಿಧಾನದ ಆಶಯಗಳೆಲ್ಲವೂ ಧುಲಿಯಾ ತೀರ್ಪಿನಲ್ಲಿ ಕೆನೆಗಟ್ಟಿವೆ. ಕರ್ನಾಟಕ ಸರಕಾರ, ಸಮವಸ್ತ್ರದ ಹೆಸರಿನಲ್ಲಿ ಇಂತಹದೊಂದು ವಿವಾದವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News