'ಜಗತ್ತಿನ ಔಷಧಾಲಯ'ಕ್ಕೆ ತಗಲಿದ ರೋಗ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊರೋನ ಕಾಲದಲ್ಲಿ ಲಸಿಕೆಯ ಹೆಸರಿನಲ್ಲಿ ಔಷಧ ಕಂಪೆನಿಗಳ ಲೂಟಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿವೆ. ಬಡವರ ಅನ್ನ, ಆರೋಗ್ಯ, ಶಿಕ್ಷಣಗಳಿಗಾಗಿ ಮೀಸಲಿಟ್ಟ ಹಣವನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಲ್ಲ ಈ ಲಸಿಕೆಗಾಗಿ ಸುರಿದವು. ಇಷ್ಟಕ್ಕೂ ಲಸಿಕೆಯ ವಿಶ್ವಾಸಾರ್ಹತೆ ಇನ್ನೂ ಸ್ಪಷ್ಟವಾಗಿಲ್ಲ. ಲಸಿಕೆಗಳನ್ನು ಆರಂಭದಲ್ಲಿ ಬಡ ದೇಶಗಳ ಮೇಲೆ, ಕಾರ್ಮಿಕರ ಮೇಲೆ ಪ್ರಯೋಗಿಸಲಾಯಿತು ಎನ್ನುವ ಆರೋಪಗಳೂ ಕೇಳಿ ಬಂದವು. ಲಸಿಕೆಯ ಮೂಲಕ ಕೊರೋನವನ್ನು ತಡೆಯಲಾಯಿತು ಎಂದು ಸರಕಾರ ಹೇಳುತ್ತಿದೆಯಾದರೂ, ಇದು ಪೂರ್ಣ ಸತ್ಯವಲ್ಲ ಎನ್ನುವುದನ್ನು ಹಲವು ತಜ್ಞರೇ ಸ್ಪಷ್ಟ ಪಡಿಸಿದ್ದಾರೆ. ಹಾಗೆಯೇ ಲಸಿಕೆಯ ಅಡ್ಡ ಪರಿಣಾಮಗಳು ಆಗಾಗ ಮಾಧ್ಯಮಗಳಲ್ಲಿ ಮುಖಪುಟ ಸುದ್ದಿಯಾಗುತ್ತಿವೆೆ. ಲಸಿಕೆಯ ಕಾರಣದಿಂದಲೇ ನೂರಾರು ಜನರು ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ, ಹಲವರು ಹಲವು ಅನಾರೋಗ್ಯಗಳಿಂದ ನರಳುತ್ತಿದ್ದಾರೆ ಎನ್ನುವ ಆರೋಪ ಪದೇ ಪದೇ ಕೇಳಿ ಬರುತ್ತಿದೆಯಾದರೂ, ಈ ಬಗ್ಗೆ ಯಾವುದೇ ಗಂಭೀರ ತನಿಖೆ ನಡೆದಿಲ್ಲ. ಇದೇ ಸಂದರ್ಭದಲ್ಲಿ, ಇತರ ಔಷಧ ಕಂಪೆನಿಗಳು ಕೂಡ ವಿವಾದಾಸ್ಪದವಾಗುತ್ತಿರುವುದು ಭಾರತದ ಮಟ್ಟಿಗಂತೂ ಆತಂಕಕಾರಿ ಸಂಗತಿಯಾಗಿದೆ. ಅಭಿವೃದ್ಧಿಶೀಲ ದೇಶಗಳು ಅಥವಾ ಅಭಿವೃದ್ಧಿ ಕಾಣದ ದೇಶಗಳಿಗೆ ಔಷಧಗಳನ್ನು ಪೂರೈಸುವ ವಿಷಯದಲ್ಲಿ ಭಾರತದ ದಾಖಲೆಯು ಅತ್ಯುತ್ತಮವಾಗಿದೆ. ಅದು ಈ ದೇಶಗಳಿಗೆ ದಶಕಗಳಿಂದ ಮಿತ ದರದಲ್ಲಿ ಜನರಿಕ್ ಔಷಧಗಳನ್ನು ಪೂರೈಸುತ್ತಾ ಬಂದಿದೆ. ಅಮೆರಿಕ ಅಥವಾ ಯುರೋಪ್ ದೇಶಗಳು ಕಳುಹಿಸುವ ಔಷಧಗಳಿಗೆ ಹೋಲಿಸಿದರೆ, ಭಾರತದ ಔಷಧಗಳು ಆಫ್ರಿಕದ ದೇಶಗಳಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿದ್ದವು. ಇದರಿಂದಾಗಿಯೇ ಭಾರತವು 'ಜಗತ್ತಿನ ಔಷಧಾಲಯ' ಎಂಬ ಹೆಸರನ್ನು ಪಡೆದುಕೊಂಡಿದೆ ಹಾಗೂ ತನ್ನ ಔಷಧ ತಯಾರಿಕಾ ಉದ್ಯಮಕ್ಕೆ ನೆಗೆತ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ, ಕಷ್ಟಪಟ್ಟು ಸಂಪಾದಿಸಿರುವ ಹೆಗ್ಗಳಿಕೆಯನ್ನು ಈಗ ಜಗತ್ತು ತೀವ್ರ ಸಂಶಯದಿಂದ ನೋಡುತ್ತಿದೆ.
ಭಾರತದಲ್ಲಿ ತಯಾರಾದ ಕೆಮ್ಮು ಸಿರಪ್ ಸೇವಿಸಿ ಇತ್ತೀಚೆಗೆ ಗಾಂಬಿಯಾ ದೇಶದಲ್ಲಿ 66 ಮಕ್ಕಳು ಮೃತಪಟ್ಟಿರುವುದು ಭಾರತದ ಔಷಧ ಉದ್ಯಮದಲ್ಲಿರುವ ದೋಷಗಳತ್ತ ಬೆಟ್ಟು ಮಾಡಿದೆ.
ಹರ್ಯಾಣದ ಕಂಪೆನಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಕೆಮ್ಮು ಸಿರಪ್‌ಗಳನ್ನು ಉತ್ಪಾದಿಸಿ ಆಫ್ರಿಕದ ದೇಶ ಗಾಂಬಿಯಾಕ್ಕೆ ರಫ್ತು ಮಾಡುತ್ತಿತ್ತು. ಆ ಕಂಪೆನಿ ಉತ್ಪಾದಿಸಿದ ನಾಲ್ಕು ಕೆಮ್ಮು ಸಿರಪ್‌ಗಳಲ್ಲಿ ಕಳಪೆ ರಾಸಾಯನಿಕ ಅಂಶಗಳಿದ್ದವು. ಈ ಕಳಪೆ ರಾಸಾಯನಿಕಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸಿದರೆ ಮೂತ್ರಪಿಂಡಗಳಿಗೆ ಶಾಶ್ವತ ಹಾನಿ ಮಾಡುತ್ತವೆ. ಅಕ್ಟೋಬರ್ 5ರಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲುಎಚ್‌ಒ)ಯು ಈ ಸಿರಪ್‌ಗಳ ಬಗ್ಗೆ ವಿಚಾರಣೆ ನಡೆಸಿತು ಹಾಗೂ ಈ ಔಷಧಗಳ ಇತರ ರೂಪಗಳು ಅನೌಪಚಾರಿಕ ಮಾರುಕಟ್ಟೆಗಳ ಮೂಲಕ ಇತರ ಕಡಿಮೆ ಆದಾಯದ ದೇಶಗಳಲ್ಲೂ ಚಲಾವಣೆಯಲ್ಲಿರಬಹುದು ಎಂಬ ನಿರ್ಧಾರಕ್ಕೆ ಬಂದಿತು.
ತನ್ನ ಔಷಧಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯು ಪ್ರಮಾಣಪತ್ರಗಳನ್ನು ನೀಡಿದೆ ಹಾಗೂ ತಾನು 'ಉತ್ತಮ ಉತ್ಪಾದನಾ ಪದ್ಧತಿ'ಯನ್ನು ಅನುಸರಿಸಿಕೊಂಡು ಬರುತ್ತಿರುವುದಾಗಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಹೇಳಿಕೊಂಡಿದೆ. ಆದರೆ, ಡಬ್ಲುಎಚ್‌ಒ ಈ ಹೇಳಿಕೆಗಳನ್ನು ತಿರಸ್ಕರಿಸಿದೆ. ಅದೂ ಅಲ್ಲದೆ, ಮೇಡನ್ ಫಾರ್ಮಾಸ್ಯೂಟಿಕಲ್ಸ್ ವರ್ಷಗಳಿಂದ ಹಲವಾರು ಕಳಪೆ ಔಷಧಗಳನ್ನು ಉತ್ಪಾದಿಸುತ್ತಾ ಬಂದಿದೆ ಎನ್ನುವುದನ್ನು ಅಧ್ಯಯನಗಳು ತೋರಿಸುತ್ತವೆ. ಆದರೆ, ಈ ವಿಷಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಮಾಡಿದಂಥ ಇಂಥ ವಿದ್ಯಮಾನಕ್ಕೆ ಭಾರತದ ಔಷಧ ನಿಯಂತ್ರಣದ ಹೊಣೆಯನ್ನು ಹೊತ್ತಿರುವ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ. ಗಾಂಬಿಯಾದಲ್ಲಿ ಭಾರತದ ಕೆಮ್ಮು ಸಿರಪ್‌ಗಳಿಗೆ 66 ಮಕ್ಕಳು ಬಲಿಯಾಗಿರುವುದು ಭಾರತೀಯ ಪರೀಕ್ಷಾ ಪ್ರಕ್ರಿಯೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟು ಹಾಕಿದೆ. ಈ ನಾಲ್ಕು ಸಿರಪ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ ಎಂದು ಕಂಪೆನಿ ಹೇಳಿರುವುದು ಅದರ ಬೇಜವಾಬ್ದಾರಿಯ ಪರಮಾವಧಿ. ಭಾರತದಲ್ಲಿ ಮಾರಾಟ ಮಾಡುವುದಿಲ್ಲ ಎನ್ನುವುದಕ್ಕಾಗಿ ಆ ಔಷಧಗಳಿಂದ ಸಂಭವಿಸಿದ ಸಾವುಗಳನ್ನು ಸಮರ್ಥಿಸಲಾಗುತ್ತದೆಯೆ?
ಭಾರತದಲ್ಲಿರುವ ಹೆಚ್ಚಿನ ಸರಕಾರಿ ಪ್ರಯೋಗಾಲಯಗಳು ಗುಣಮಟ್ಟದ ಪರೀಕ್ಷೆಯನ್ನು ನಡೆಸುವುದಿಲ್ಲ ಎನ್ನುವ ಆರೋಪಗಳಿವೆ. ಭಾರತದಂಥ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ ಕಳಪೆ ಔಷಧಗಳನ್ನು ಪತ್ತೆಹಚ್ಚುವ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಇಂಥ ಪರೀಕ್ಷೆಗಳಿಗೆ ಅಧಿಕ ವೆಚ್ಚ ತಗಲುತ್ತದೆ. ಇದರ ಪ್ರಯೋಜನವನ್ನು ಸರಿಯಾಗಿ ಬಳಸಿಕೊಳ್ಳುವ ಔಷಧ ಕಂಪೆನಿಗಳು ಕಳಪೆ ಔಷಧಗಳನ್ನು ಗಾಂಬಿಯಾದಂಥ ಬಡ ದೇಶಗಳಿಗೆ ಕಳುಹಿಸುತ್ತವೆ.ಹಿಂದೆಯೂ ಭಾರತದ ಹಲವು ರಾಜ್ಯಗಳಲ್ಲಿ ಕಳಪೆ ಔಷಧಗಳು ಹಲವು ಸಂದರ್ಭಗಳಲ್ಲಿ ಪತ್ತೆಯಾಗಿವೆ. ಇದಕ್ಕೆ ಒಂದು ಉದಾಹರಣೆ 2019ರಲ್ಲಿ ಜಮ್ಮುವಿನಲ್ಲಿ ನಡೆದ ಘಟನೆ. ಆ ಘಟನೆಯಲ್ಲಿ ಕಳಪೆ ಔಷಧವನ್ನು ಸೇವಿಸಿದ 11 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕದ ವೇಳೆ, ಭಾರತವು ಹಲವು ದೇಶಗಳಿಗೆ ಲಸಿಕೆಗಳು ಮತ್ತು ಜನರಿಕ್ ಔಷಧಗಳನ್ನು ಪೂರೈಸಿ ಜಗತ್ತಿನ ಗಮನ ಸೆಳೆಯಿತು. ಜಾಗತಿಕ ರಂಗದಲ್ಲಿ ಆರೋಗ್ಯ ರಾಜತಾಂತ್ರಿಕತೆಯ ಮಹತ್ವವನ್ನು ಸಾಂಕ್ರಾಮಿಕವು ಮನದಟ್ಟು ಮಾಡಿಸಿತು. ವೈದ್ಯಕೀಯ ಅವಶ್ಯಕತೆಗಳು ಕಡಿಮೆ ಮಹತ್ವದ್ದೆಂದು ಪರಿಗಣಿಸುವ ಪ್ರವೃತ್ತಿಯನ್ನು ದೇಶಗಳು ಬಿಟ್ಟವು. ಭಾರತವು ಮೆದು, ಆದರೂ ಪರಿಣಾಮಕಾರಿ ಶಕ್ತಿಯ ಪಾತ್ರವನ್ನು ಪಡೆಯಿತು. ಆದರೆ ಭಾರತವು ನೆರೆಯ ದೇಶಗಳಿಗೆ ಔಷಧಗಳನ್ನು ಪೂರೈಸಿದರೂ, ದೇಶದ ಒಳಗಿನ ಬೇಡಿಕೆಯನ್ನು ಪೂರೈಸಲು ಅದಕ್ಕೆ ಸಾಧ್ಯವಾಗಲಿಲ್ಲ. ಅದು ಕೊರೋನ ವೈರಸ್ ಎರಡನೇ ಅಲೆಯಲ್ಲಿ ಭಯಾನಕ ರೀತಿಯಲ್ಲಿ ಬೆಳಕಿಗೆ ಬಂತು. ದೇಶದ ಒಳಗೆಯೇ ಅಗತ್ಯವಿರುವ ಲಸಿಕೆಗಳು ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಪೂರೈಸಲು ಭಾರತ ಪರದಾಡಿತು.
ಗಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕಳಪೆ ಕೆಮ್ಮು ಸಿರಪ್‌ಗಳು ಭಾರತದ ಆರ್ಥಿಕ ಮತ್ತು ವಿದೇಶ ನೀತಿಗೆ ದೊಡ್ಡ ಹೊಡೆತವನ್ನು ನೀಡಿವೆ. ಪರೀಕ್ಷೆ ನಡೆಸದೆಯೇ ಔಷಧಗಳನ್ನು ರಫ್ತು ಮಾಡಿರುವುದು ಜಾಗತಿಕ ಔಷಧ ತಯಾರಿಕಾ ಉದ್ಯಮದಲ್ಲಿ ಭಾರತದ ಸ್ಥಾನಕ್ಕೆ ಸಂಚಕಾರ ತಂದಿದೆೆ. ಈ ಘಟನೆಯು ಭಾರತವನ್ನು ಆರ್ಥಿಕವಾಗಿ ಅಸುರಕ್ಷಿತ ಸ್ಥಾನದಲ್ಲಿ ಇರಿಸಿದೆೆ. ಔಷಧ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಮುನ್ನಡೆ ಸಾಧಿಸಲು ಭಾರತದ ಎದುರಾಳಿ ದೇಶಗಳಿಗೆ ಅವಕಾಶಗಳನ್ನು ಒದಗಿಸಿದೆ. ಭಾರತದಲ್ಲಿ ಅಡ್ಡ ದಾರಿಯನ್ನು ಹಿಡಿದಿರುವ ಹಲವಾರು ಔಷಧ ತಯಾರಿಕಾ ಕಂಪೆನಿಗಳಿವೆ. ಭಾರತೀಯ ಔಷಧ ಮಹಾ ನಿಯಂತ್ರಕರ (ಡಿಸಿಜಿಐ) ವೌನವು ಔಷಧ ಉದ್ದಿಮೆಯಲ್ಲಿರುವ ಲೋಪಗಳತ್ತ ಬೆಟ್ಟು ಮಾಡುತ್ತಿವೆ. ಇಂಥ ಕಂಪೆನಿಗಳು ತಮ್ಮ ಲಾಭವನ್ನು ಮಾತ್ರ ನೋಡುತ್ತವೆ. ಆದರೆ ಔಷಧಗಳನ್ನು ತಯಾರಿಸುವುದು ರೋಗಿಗಳನ್ನು ಗುಣಪಡಿಸುವುದಕ್ಕಾಗಿ ಎಂಬ ಮಹಾನ್ ಧ್ಯೇಯವನ್ನು ಅವುಗಳು ಮರೆತಿವೆ. ಇಂಥ ಕಂಪೆನಿಗಳ ವಿರುದ್ಧ ಸರಕಾರವು ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಬಳಿಕ, ಆರೋಗ್ಯವು ಜನರ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ, ಕಳಪೆ ಔಷಧಗಳನ್ನು ರಫ್ತು ಮಾಡುವುದು ಅವುಗಳನ್ನು ಬಳಸುವ ರೋಗಿಗಳನ್ನು ಮಾತ್ರ ಬಾಧಿಸುವುದಲ್ಲ, ಭಾರತದ ವಿದೇಶ ಮತ್ತು ಆರ್ಥಿಕ ನೀತಿಯಲ್ಲಿರುವ ಹಾಗೂ ಈಗಾಗಲೇ ದುರ್ಬಲವಾಗಿರುವ ಮೂಲ ತತ್ವಗಳ ಮೇಲೆಯೂ ದುಷ್ಪರಿಣಾಮಗಳನ್ನು ಬೀರುತ್ತವೆ ಎಂಬ ಎಚ್ಚರಿಕೆ ಭಾರತ ಸರಕಾರಕ್ಕಿರಬೇಕಾಗಿದೆ.