ಬಹುತ್ವ ಭಾರತದ ಮೇಲೆ ಮತ್ತೊಂದು ಪ್ರಹಾರ

Update: 2022-10-18 07:34 GMT
PHOTO: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿಯನ್ನು ಬಹುತ್ವ ಭಾರತದ ಮೇಲೆ ಹೇರಿ ಇದರ ವೈವಿಧ್ಯತೆಯನ್ನೇ ನಾಶ ಮಾಡಲು ಹೊರಟವರು ಇದೀಗ ಉತ್ತರ ಭಾರತದ 3-4 ರಾಜ್ಯಗಳ ಕೆಲವೇ ಜನರು ಮಾತಾಡುವ ಭಾಷೆಯನ್ನು ದಕ್ಷಿಣ, ಈಶಾನ್ಯ ಸೇರಿದಂತೆ ಇಡೀ ಭಾರತದ ಮೇಲೆ ಹೇರಲು ಹೊರಟಿದ್ದಾರೆ. ಒಕ್ಕೂಟ ಸರಕಾರದ ಗೃಹ ಮಂತ್ರಿ ಅಮಿತ್‌ಶಾ ಅವರ ನೇತೃತ್ವದ ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಇತ್ತೀಚಿನ ಕೆಲವು ಶಿಫಾರಸುಗಳನ್ನು ಗಮನಿಸಿದರೆ ಹಿಂದಿ ಭಾಷೆಯನ್ನು ಎಲ್ಲ ರಾಜ್ಯಗಳ ಮೇಲೆ ಹೇರುವ ಇವರ ಸಾಂಸ್ಕೃತಿಕ ಯಜಮಾನಿಕೆಯ ನೀತಿ ಬರಲಿರುವ ದಿನಗಳಲ್ಲಿ ಬಹುಮುಖಿ ಭಾರತಕ್ಕೆ ಮುಳುವಾಗುವ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಅಮಿತ್‌ಶಾ ನೇತೃತ್ವದ ಸಮಿತಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆಯ ಮಾಧ್ಯಮದ ಕುರಿತು ಮಾಡಿರುವ ಶಿಫಾರಸುಗಳು ಭಾರತದ ಶೈಕ್ಷಣಿಕ ವಾತಾವರಣವನ್ನೇ ಹದಗೆಡಿಸುತ್ತವೆ. ಬೋಧನಾ ಮಾಧ್ಯಮವಾಗಿ ಈಗ ಬಳಕೆಯಲ್ಲಿರುವ ಇಂಗ್ಲಿಷ್ ಭಾಷೆಯ ಬದಲಾಗಿ ಹಂತ ಹಂತವಾಗಿ ಹಿಂದಿ ಇಲ್ಲವೇ ಸ್ಥಳೀಯ ಭಾಷೆಯನ್ನು ಬಳಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಹಿಂದಿ ಭಾಷಿಕ ಪ್ರದೇಶದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಹಾಗೂ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಕೇಂದ್ರೀಯ ವಿದ್ಯಾನಿಲಯ ಗಳಲ್ಲಿ ಬೋಧನಾ ಮಾಧ್ಯಮವನ್ನಾಗಿ ಹಿಂದಿಯನ್ನು ಬಳಸಬೇಕು. ಇತರ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಯನ್ನು ಈ ಸಂಸ್ಥೆಗಳಲ್ಲಿ ಅಳವಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ)ಕೂಡ ಹಿಂದಿಯನ್ನೇ ಬಳಸಬೇಕು ಎಂದು ಈ ಸಮಿತಿ ಶಿಫಾರಸು ಮಾಡಿದೆ.

ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಅಥವಾ ಸ್ಥಳೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಕೆ ಮಾಡಲು ಹೊರಟಿರುವುದು ದುಡುಕಿನ ದೋಷಪೂರಿತ ವಿಚಾರ. ಉನ್ನತ ಶಿಕ್ಷಣಕ್ಕೆ ಇದು ನಾಳೆ ಮಾರಕವಾಗಿ ಪರಿಣಮಿಸಬಹುದು. ಇಂತಹ ಸಂಸ್ಥೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಪ್ರವೇಶ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆಗಳನ್ನು ಹಿಂದಿ ಅಥವಾ ಇತರ ಸ್ಥಳೀಯ ಭಾಷೆಯಲ್ಲಿ ಬರೆದು ಪಾಸಾದವರು ಇನ್ನೊಂದು ರಾಜ್ಯದಲ್ಲಿನ ಸಂಸ್ಥೆಗೆ ಪರೀಕ್ಷೆ ಬರೆಯುವಾಗ ಅಲ್ಲಿನ ಭಾಷೆಯನ್ನು ಅನಿವಾರ್ಯವಾಗಿ ಕಲಿಯಲೇ ಬೇಕು. ಇದರಿಂದ ಅವರ ಕಲಿಕೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.

ಒಂದು ರಾಜ್ಯದಲ್ಲಿ ಪದವಿ ಪಡೆದವರು ಇನ್ನೊಂದು ರಾಜ್ಯದಲ್ಲಿ ಕೆಲಸ ಮಾಡುವುದು ಕಷ್ಟಕರವಾಗಬಹುದು. ಅಲ್ಲದೆ ಯಾವುದೇ ರಾಜ್ಯದಲ್ಲಿ ಪದವಿ ಪಡೆದವರಿಗೆ ದೇಶದಲ್ಲಿ ಇಲ್ಲವೇ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದು ಹಾಗೂ ಕೆಲಸಕ್ಕೆ ಸೇರುವುದು ಸುಲಭವಲ್ಲ.

ಮಾತೃಭಾಷೆ ಅಂದರೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ. ಅದನ್ನು ಒಮ್ಮಿಂದೊಮ್ಮೆಲೆ ಜಾರಿಗೆ ತರುವುದು ದುಡುಕಿನ ಕ್ರಮವಾಗುತ್ತದೆ. ಚೀನಾ ಇಲ್ಲವೇ ಜಪಾನ್‌ಗಳನ್ನು ಮಾದರಿಯಾಗಿಟ್ಟುಕೊಂಡು ಅದೇ ಭಾಷಾ ಧೋರಣೆಯನ್ನು ಇಲ್ಲಿ ಅನ್ವಯಿಸಲಾಗುವುದಿಲ್ಲ. ಭಾರತದಲ್ಲಿ ಇರುವ ಭಾಷಾ ವೈವಿಧ್ಯತೆ ಉಳಿದ ದೇಶಗಳಲ್ಲಿ ಇಲ್ಲ. ಸ್ಥಳೀಯ ಭಾಷೆಯ ವ್ಯಾಖ್ಯಾನ ಮಾಡುವುದೂ ಸುಲಭವಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ ಪ್ರಾದೇಶಿಕ ಭಾಷೆಯಾಗಿದ್ದರೂ ಇಲ್ಲಿ ತುಳು, ಬ್ಯಾರಿ, ಕೊಡವ, ಕೊಂಕಣಿ, ಉರ್ದು, ಮರಾಠಿ ಮಾತೃಭಾಷೆಯನ್ನಾಗಿ ಹೊಂದಿರುವ ಜನರಿದ್ದಾರೆ. ಅವರನ್ನೆಲ್ಲ ಗಮನದಲ್ಲಿಟ್ಟುಕೊಂಡು ಭಾಷಾ ನೀತಿಯನ್ನು ರೂಪಿಸಬೇಕಾಗುತ್ತದೆ.

ಸದ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹಾಗೂ ಅಲ್ಲಿ ಪದವಿ ಪಡೆದು ಹೊರ ಬರುವವರಲ್ಲಿ ಮೇಲು, ಕೀಳು ಭಾವನೆಯಿಲ್ಲ. ಒಂದು ವಿಧದ ಸಮಾನತೆಯ ಭಾವನೆ ಇದೆ. ಕಾರಣ ಅವರೆಲ್ಲರೂ ಇಂಗ್ಲಿಷ್ ಭಾಷೆಯನ್ನು ಕಲಿತವರು. ಆದರೆ ಅಮಿತ್‌ಶಾ ನೇತೃತ್ವದ ಸಮಿತಿಯ ಶಿಫಾರಸಿನ ಪ್ರಕಾರ ಜಾರಿಗೆ ಬರುವ ಹೊಸ ವ್ಯವಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಕಲಿಯುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರ ಪ್ರಾಬಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಇದರಿಂದ ಹಿಂದಿ ಭಾಷಿಕರು ಹಾಗೂ ಇತರ ಪ್ರಾದೇಶಿಕ ಭಾಷೆಗಳನ್ನಾಡುವವರ ನಡುವೆ ತಾರತಮ್ಯ ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ. ಬಲವಂತದ ಹಿಂದಿ ಹೇರಿಕೆಯನ್ನು ದಕ್ಷಿಣ ಭಾರತದ ರಾಜ್ಯಗಳು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಈಗಾಗಲೇ ರೈಲ್ವೆ, ಅಂಚೆ ಇಲಾಖೆ ಮುಂತಾದ ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಬಲವಂತವಾಗಿ ಹಿಂದಿಯನ್ನು ಹೇರಲಾಗಿದೆ ಎಂಬ ಅಸಮಾಧಾನ ದಕ್ಷಿಣ ಭಾರತದ ಜನರಲ್ಲಿ ಉಂಟಾಗಿದೆ. ಇನ್ನು ಡಿಆರ್‌ಡಿಒ ಮತ್ತು ಇಸ್ರೊದಂತಹ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂಬ ಶಿಫಾರಸು ಹಿಂದಿಯೇತರ ಜನರಲ್ಲಿ ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗುತ್ತದೆ.

ಅಮಿತ್ ಶಾ ನೇತೃತ್ವದ ಸಮಿತಿಯ ಶಿಫಾರಸುಗಳಲ್ಲಿ ಸ್ಥಳೀಯ ಭಾಷೆಯ ಬಳಕೆಯ ಉಲ್ಲೇಖ ಇದ್ದರೂ ವಾಸ್ತವವಾಗಿ ಶಿಫಾರಸುಗಳ ಹಿಂದಿನ ಉದ್ದೇಶ ಹಿಂದಿಯನ್ನು ಬಲವಂತವಾಗಿ ಬಹುತ್ವ ಭಾರತದ ಮೇಲೆ ಹೇರುವುದಾಗಿದೆ ಎಂದರೆ ತಪ್ಪಿಲ್ಲ. ಇದು ಭಾರತದ ಮೇಲೆ ಏಕಭಾಷೆಯನ್ನು ಹೇರುವ ಹುನ್ನಾರವಲ್ಲದೆ ಬೇರೇನೂ ಅಲ್ಲ. ಇದರಿಂದ ಭಾರತದ ಒಕ್ಕೂಟ ವ್ಯವಸ್ಥೆಗೆ ಅಪಚಾರ ಮಾಡಿದಂತಾಗುತ್ತದೆ.

ಹಲವಾರು ಭಾಷೆಗಳು, ಧರ್ಮಗಳು, ಜನಾಂಗಗಳು, ಪ್ರದೇಶಗಳು ಸೇರಿ ಭಾರತವಾಗಿದೆ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ನಮ್ಮ ನಾಯಕರು ಬಹುತ್ವ ಭಾರತದ ಕನಸನ್ನು ಕಂಡಿದ್ದರು. ಡಾ. ಬಾಬಾಸಾಹೇಬಾ ಅಂಬೇಡ್ಕರ್ ಈ ಭಾರತಕ್ಕೆ ಸೂಕ್ತವಾದ ಸಂವಿಧಾನ ನೀಡಿದರು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ ನಿರಪೇಕ್ಷ ಭಾರತದ ಅಡಿಪಾಯ ಹಾಕಿದರು. ಆದರೆ ಎಂಟು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದವರು ಈ ಬಹುತ್ವ ಭಾರತದ ಪರಿಕಲ್ಪನೆಯನ್ನು ನಾಶ ಮಾಡಲು ಹೊರಟಿದ್ದಾರೆ. ಅದನ್ನು ತಡೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News