ಪಾಕಿಸ್ತಾನ 2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ: ವರದಿ

Update: 2022-10-18 16:17 GMT
Photo: AP

ದುಬೈ, ಅ.18: ಏಶ್ಯಕಪ್‌ನ್ನು ತಟಸ್ಥ ಸ್ಥಳದಲ್ಲಿ ಆಡಲು ಆದ್ಯತೆ ನೀಡುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿರುವ ಹೇಳಿಕೆಗೆ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್ ವಿಶ್ವಕಪ್‌ನಿಂದ ಹೊರಗುಳಿಯುವುದಾಗಿ ಬೆದರಿಕೆ ಹಾಕಿದೆ.

ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಕಾರ್ಯಕಾರಿ ಮಂಡಳಿಯ ನಿರ್ಧಾರದ ಪ್ರಕಾರ ಪಾಕಿಸ್ತಾನ ಮುಂದಿನ ಆವೃತ್ತಿಯ ಏಶ್ಯಕಪ್‌ನ ಆತಿಥ್ಯವಹಿಸಲಿದೆ.

ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಶಾ ಮಂಗಳವಾರ ಮುಂಬೈನಲ್ಲಿ ಬಿಸಿಸಿಐ ಎಜಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತವು ತಟಸ್ಥ ಸ್ಥಳದಲ್ಲಿ ಮುಂದಿನ ವರ್ಷದ ಏಶ್ಯಕಪ್‌ನ್ನು ಆಡಲಿದೆ. ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದರು.

ಪಿಸಿಬಿ ಇದೀಗ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಬಹು ತಂಡಗಳ ಟೂರ್ನಿಗಳಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಆಡದೇ ಇದ್ದರೆ ಐಸಿಸಿ ಹಾಗೂ ಎಸಿಸಿ ಸ್ಪರ್ಧೆಗಳು ಸಾಲ ಹಾಗೂ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂಬ ಅರಿವು ಹೊಂದಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಭಾರತವು ಜಾಗತಿಕ ಹಾಗೂ ಕಾಂಟಿನೆಂಟಲ್ ಈವೆಂಟ್‌ಗಳಲ್ಲಿ ಪಾಕಿಸ್ತಾನದೊಂದಿಗೆ ಆಡುತ್ತಿದೆ. ಆದರೆ 2008ರ ಏಶ್ಯಕಪ್ ನಂತರ ನೆರೆಯ ದೇಶಕ್ಕೆ ಅದು ಪ್ರಯಾಣಿಸಿಲ್ಲ. ಪಾಕ್ ತಂಡ 2012ರಲ್ಲಿ 6 ಪಂದ್ಯಗಳ ಸೀಮಿತ ಓವರ್ ಸರಣಿಯನ್ನಾಡಲು ಭಾರತಕ್ಕೆ ಕೊನೆಯ ಬಾರಿ ಆಗಮಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News