ಹೆಚ್ಚುತ್ತಿರುವ ಹಸಿವು: ಯಾರು ಕಾರಣ?

Update: 2022-10-19 04:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಭಾರತ 101ನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಹಸಿವು, ಬಡತನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಆತಂಕಕಾರಿ ಅಂಶ ಈ ಮೂಲಕ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ, ಹಸಿವಿನ ವಿಷಯದಲ್ಲಿ ಭಾರತವು ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕೆಳಕ್ಕೆ ಜಾರಿದೆ. ಈ ಸೂಚ್ಯಂಕವನ್ನು ಮುಖ್ಯವಾಗಿ ಭಾರತದಲ್ಲಿರುವ ದೈಹಿಕ ಬೆಳವಣಿಗೆಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಅಪೌಷ್ಟಿಕತೆ, ಮಕ್ಕಳ ದೈಹಿಕ ಕ್ಷೀಣತೆ, ಕಡಿಮೆ ತೂಕ, ಕುಬ್ಜತೆ ಈ ನಾಲ್ಕು ಸೂಚಕಗಳನ್ನು ಮಾನದಂಡವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ನೀಡಲಾಗುತ್ತದೆ. ದೇಶದಲ್ಲಿ ಹುಟ್ಟುವ ಒಂದು ಸಾವಿರ ಮಕ್ಕಳಲ್ಲಿ, ಸುಮಾರು 42 ಮಕ್ಕಳು ಅಪೌಷ್ಟಿಕತೆಯ ಕಾರಣದಿಂದ ಪ್ರಾಣ ಕಳೆದುಕೊಳ್ಳುತ್ತಿವೆ. ವಯಸ್ಸಿಗೆ ತಕ್ಕ ಹಾಗೆ ಎತ್ತರಕ್ಕೆ ಬೆಳೆಯದ ಮಕ್ಕಳ ಸಮಸ್ಯೆಗಳೂ ಭಾರತದಲ್ಲಿ ವ್ಯಾಪಕವಾಗಿವೆ. ಐದು ವರ್ಷದೊಳಗಿನ ಶೇ.35ರಷ್ಟು ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಹಾಗೆಯೇ ಎತ್ತರಕ್ಕೆ ತಕ್ಕ ತೂಕದ ಕೊರತೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ. ರಕ್ತಹೀನತೆಯಲ್ಲೂ ಭಾರೀ ಏರಿಕೆಯಾಗಿದೆ. ಪುರುಷರಿಗಿಂತ ಮಹಿಳೆಯರಲ್ಲೇ ಇದು ಹೆಚ್ಚು ಕಾಣಿಸುತ್ತದೆ. ಗರ್ಭಿಣಿಯರಲ್ಲಿ ಕಾಣಿಸಿ ಕೊಳ್ಳುವ ರಕ್ತಹೀನತೆ ಹುಟ್ಟುವ ಮಗುವಿನ ಮೇಲೂ ತನ್ನ ದುಷ್ಪರಿಣಾಮವನ್ನು ಬೀರುತ್ತದೆ. 6 ತಿಂಗಳಿಂದ 59 ತಿಂಗಳ ವಯಸ್ಸಿನ ಮಕ್ಕಳಲ್ಲೂ ರಕ್ತಹೀನತೆ ತೀವ್ರವಾಗಿ ಕಾಣಿಸಿಕೊಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುತ್ತದೆ. ಇವೆಲ್ಲವೂ ಭಾರತವನ್ನು ಹಸಿವು ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ತಳ್ಳುವುದಕ್ಕೆ ಕಾರಣವಾಗಿದೆ. ವಿಶ್ವಗುರುವಾಗಬೇಕು ಎಂದು ಕನಸು ಕಾಣುತ್ತಿರುವ ಭಾರತದಲ್ಲಿ ಹಸಿವು ಪಾಕಿಸ್ತಾನ ಮತ್ತು ನೇಪಾಳಕ್ಕಿಂತಲೂ ಕೆಳಮಟ್ಟದಲ್ಲಿರುವುದು ನಿಜಕ್ಕೂ ಅವಮಾನಕಾರಿ ಸಂಗತಿಯಾಗಿದೆ.

ಭಾರತದ ಮಟ್ಟಿಗೆ ಹಸಿವು ಒಂದು ರೋಗವೂ ಹೌದು. ಯಾಕೆಂದರೆ ಇಲ್ಲಿ ಹಸಿವಿನಿಂದಲೇ ಸಾಯುವವರಿದ್ದಾರೆ. ಹಸಿವು ಎಲ್ಲ ರೋಗಗಳ ತಾಯಿ. ಅಪೌಷ್ಟಿಕತೆ ಕ್ಷಯ ಸೇರಿದಂತೆ ಹಲವು ಮಾರಕಗಳನ್ನು ಹುಟ್ಟು ಭಾರತದಲ್ಲಿ ಹುಟ್ಟಿಸಿ ಹಾಕಿವೆ. ದೇಶ ಕೊರೋನ ಸಂದರ್ಭದಲ್ಲಿ ವಿಶ್ವಕ್ಕೆ ಲಸಿಕೆಗಳನ್ನು ಪೂರೈಸಿ ಸುದ್ದಿ ಮಾಡಿತು. ಆದರೆ ಇಂದು ಭಾರತದಲ್ಲಿ ಕ್ಷಯ, ಎಚ್‌ಐವಿಯಂತಹ ಮಾರಕ ರೋಗಗಳಿಗೆ ಬೇಕಾದ ಔಷಧಗಳನ್ನು ಪೂರೈಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಕ್ಷಯದಂತಹ ರೋಗಗಳ ನಿವಾರಣೆಗೆ ಮೀಸಲಾಗಿಟ್ಟ ಅನುದಾನಗಳನ್ನು ಕೊರೋನ ನಿರ್ವಹಣೆಗೆ ವರ್ಗಾಯಿಸಲಾಗಿದೆ. ಕೊರೋನದಿಂದಾಗಿ ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ಹಲವು ಉದ್ಯಮಗಳು ಮುಚ್ಚಿದವು. ಪರಿಣಾಮವಾಗಿ ನಿರುದ್ಯೋಗ ಹೆಚ್ಚಿತು. ಸಹಜವಾಗಿಯೇ ಇದು ದೇಶದಲ್ಲಿ ಬಡತನವನ್ನೂ ಹೆಚ್ಚಿಸಿದವು. ಬಡತನದಿಂದಾಗಿ ಜನರು ಇನ್ನಷ್ಟು ಅಪೌಷ್ಟಿಕತೆಗೆ ತಳ್ಳಲ್ಪಟ್ಟರು. ಇದು ದೇಶದಲ್ಲಿ ಕ್ಷಯದಂತಹ ರೋಗಗಳನ್ನು ಇನ್ನಷ್ಟು ಹೆಚ್ಚಿಸಿತು. ಒಂದೆಡೆ ರೋಗಳಿಗೆ ಬೇಕಾದ ಔಷಧಗಳನ್ನು ಒದಗಿಸುವಲ್ಲಿ ಸರಕಾರದ ವೈಫಲ್ಯ ಮತ್ತು ಹೆಚ್ಚುತ್ತಿರುವ ಬಡತನ ಭಾರತದ ಭವಿಷ್ಯವನ್ನು ಇನ್ನಷ್ಟು ಕರಾಳವಾಗಿಸಿದೆ. ಇದನ್ನು ಎದುರಿಸಲು ಸರಕಾರ ಈಗಲೇ ಸಿದ್ಧತೆಯನ್ನು ಮಾಡಬೇಕಾಗಿದೆ.

ಆದರೆ ಜಾಗತಿಕ ಹಸಿವು ಸೂಚ್ಯಂಕದ ವರದಿಯನ್ನು ಭಾರತ ಸ್ವೀಕರಿಸಿದ ರೀತಿ ಆಘಾತಕಾರಿಯಾದುದು. ‘‘ತನ್ನ ಜನಸಂಖ್ಯೆಗೆ ಆಹಾರ ಭದ್ರತೆ ಹಾಗೂ ಪೋಷಕಾಂಶದ ಅಗತ್ಯವನ್ನು ಒದಗಿಸಲು ಸಾಧ್ಯವಾಗದ ದೇಶ’’ ಎಂದು ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ನಿರಂತರ ಪ್ರಯತ್ನದ ಭಾಗ ಇದು ಎಂದು ಹೇಳಿ ತನ್ನ ಮುಖ ಉಳಿಸಿಕೊಳ್ಳುವ ಪ್ರಯತ್ನವನ್ನು ಸರಕಾರ ಮಾಡಿದೆ. ಹಸಿವು ಸೂಚ್ಯಂಕಕ್ಕೆ ಬಳಸಿದ ಮಾಪನ ತಪ್ಪು ಎಂದು ಅದು ಹೇಳುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಸಿವು ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ ಎನ್ನುವುದನ್ನು ಮರೆತು, ಅದನ್ನು ಎತ್ತಿ ತೋರಿಸಿದ ವರದಿಯ ಮೇಲೆ ಗೂಬೆ ಕೂರಿಸಲು ಮುಂದಾಗಿದೆ. ಇದರ ಅರ್ಥ, ಭಾರತದಲ್ಲಿ ಹೆಚ್ಚುತ್ತಿರುವ ಹಸಿವು, ಬಡತನ, ನಿರುದ್ಯೋಗ ಇವೆಲ್ಲವೂ ಸರಕಾರದ ಅರಿವಿಗೇ ಬಂದಿಲ್ಲ ಎಂದಲ್ಲವೆ? ಎಲ್ಲಿಯವರೆಗೆ ಸರಕಾರ ಭಾರತದಲ್ಲಿ ಹಸಿವು ಹೆಚ್ಚುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದನ್ನು ನಿವಾರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಸಿವು ಸೂಚ್ಯಂಕದ ಕುರಿತಂತೆ ಆರೆಸ್ಸೆಸ್ ಕೂಡ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಆದರೆ ಇತ್ತೀಚೆಗೆ ಆರೆಸ್ಸೆಸ್‌ನ ಮುಖಂಡರೇ, ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗಗಳ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು. ಒಬ್ಬ ಅದಾನಿ, ಅಂಬಾನಿಯನ್ನು ತೋರಿಸಿ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರತಿಮೆಗಳನ್ನು ನಿರ್ಮಾಣ ಮಾಡಿ, ಕಾರಿಡಾರ್‌ಗಳನ್ನು ನಿರ್ಮಿಸಿ ಭಾರತದ ವರ್ಚಸ್ಸನ್ನು ಹೆಚ್ಚಿಸಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಇಂದು ಹೆಚ್ಚಿರುವ ಬಡತನಕ್ಕಾಗಿ ಸರಕಾರ ಕೊರೋನವನ್ನು ದೂಷಿಸುತ್ತಿದೆ. ನೋಟು ನಿಷೇಧದ ಬಳಿಕ ದೇಶದ ಆರ್ಥಿಕತೆ ನಿಧಾನಕ್ಕೆ ನೆಲಕಚ್ಚತೊಡಗಿತು ಎನ್ನುವ ವಾಸ್ತವವನ್ನು ಮುಚ್ಚಿಡುತ್ತಿದೆ. ನೋಟು ನಿಷೇಧದಿಂದ ಅತ್ತ ಕಪ್ಪು ಹಣವನ್ನು ಹೊರ ತರಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಕೋಟ್ಯಂತರ ಕಪ್ಪು ಹಣ ಬಿಳಿಯಾಯಿತು. ನೂರಾರು ಉದ್ದಿಮೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡವು. ನಗರ ಕಾರ್ಮಿಕರನ್ನು ಇನ್ನಷ್ಟು ಸಂಕಟಗಳಿಗೆ ತಳ್ಳಿತು. ದೇಶದಲ್ಲಿ ನೋಟು ನಿಷೇಧವೆನ್ನುವ ಬೃಹತ್ ಹಗರಣ ನಡೆಯದೇ ಇದ್ದಿದ್ದರೆ, ಕೊರೋನದಿಂದ ದೇಶ ಇಷ್ಟೊಂದು ಹಾನಿಯನ್ನು ಅನುಭವಿಸುತ್ತಿರಲಿಲ್ಲ. ಕೊರೋನದ ನಾಶ, ನಷ್ಟವನ್ನು ತಾಳಿಕೊಳ್ಳುವ ಶಕ್ತಿ ಭಾರತದ ಆರ್ಥಿಕತೆಗಿತ್ತು. ನೋಟು ನಿಷೇಧದಿಂದ ಆರ್ಥಿಕತೆಗೆ ಆದ ಹಾನಿ, ಕೊರೋನ, ಲಾಕ್‌ಡೌನ್‌ಗಳನ್ನು ಇನ್ನಷ್ಟು ಭೀಕರವಾಗಿಸಿತು. ಇದೇ ಸಂದರ್ಭದಲ್ಲಿ ಜನರ ಮೂಲಭೂತ ಸೌಲಭ್ಯಗಳಿಗಾಗಿ, ಅವಶ್ಯಕತೆಗಳಿಗಾಗಿ ಬಳಸಬೇಕಾದ ಹಣವನ್ನು ಮಂದಿರ ನಿರ್ಮಾಣ, ಪ್ರತಿಮೆಗಳ ನಿರ್ಮಾಣ, ಶಿವಾಜಿಪಾರ್ಕ್ ನಂತಹ ‘ರಾಜಕೀಯ’ಗಳಿಗೆ ಸುರಿದು ದೇಶದ ಜನರನ್ನು ಇನ್ನಷ್ಟು ಬಡವರನ್ನಾಗಿಸಿತು. ಇವೆಲ್ಲದರ ಜೊತೆಗೆ ಸರಕಾರದ ನೇತೃತ್ವದಲ್ಲ್ಲೇ ಪೌಷ್ಟಿಕ ಆಹಾರಗಳನ್ನು ಜನರಿಗೆ ದೊರಕದಂತೆ ಮಾಡಲಾಗುತ್ತಿದೆ.

ಒಂದು ಕಡೆ ಕಡಲು. ಇನ್ನೊಂದು ಕಡೆ ಕಾಡು. ಇವೆಲ್ಲದರ ಜೊತೆಗೆ ಭಾರತ ಕೃಷಿಯನ್ನು ಅವಲಂಬಿಸಿದ ದೇಶ. ಇಷ್ಟಿದ್ದರೂ ಭಾರತ ಅಪೌಷ್ಟಿಕತೆಯನ್ನು ಎದುರಿಸುತ್ತಿದೆ ಎನ್ನುವುದು ನಾಚಿಕೆಗೇಡು. ಜನರು ಪೌಷ್ಟಿಕ ಆಹಾರಕ್ಕಾಗಿ ಒದ್ದಾಡುತ್ತಿರುವ ಹೊತ್ತಿನಲ್ಲೇ, ಗೋಮಾಂಸವನ್ನು ಜನರಿಂದ ದೂರ ಮಾಡುವ ಪ್ರಯತ್ನ ಸರಕಾರದಿಂದಲೇ ನಡೆದಿದೆ. ಒಂದೆಡೆ ವಿದೇಶಗಳಿಗೆ ಗೋಮಾಂಸವನ್ನು ಯಥೇಚ್ಛವಾಗಿ ರಫ್ತು ಮಾಡುತ್ತಾ, ಭಾರತೀಯರು ಮಾತ್ರ ಗೋಮಾಂಸ ಸೇವಿಸದಂತೆ ತಡೆಯಲಾಗುತ್ತಿದೆ. ಇದರಿಂದ ಗೋವುಗಳನ್ನು ಸಾಕುವ ರೈತರೂ ನಷ್ಟಕ್ಕೀಡಾಗಬೇಕಾಯಿತು. ಜನಸಾಮಾನ್ಯರಿಗೆ ಅಗ್ಗದಲ್ಲಿ ದೊರೆಯುತ್ತಿರುವ ಪ್ರೊಟೀನ್ ಯುಕ್ತ ಆಹಾರವೂ ಸಿಗದಂತಾಯಿತು. ಅಷ್ಟೇ ಅಲ್ಲ, ಈ ದೇಶ ಆಹಾರದ ರೂಪದಲ್ಲಿ ಬಳಸಬಹುದಾಗಿದ್ದ ಅನುಪಯುಕ್ತ ಜಾನುವಾರುಗಳನ್ನು ಸಾಕುವ ಹೊರೆಯನ್ನು ಸರಕಾರವೇ ಹೊತ್ತುಕೊಳ್ಳಬೇಕಾಯಿತು. ಇದರ ಪರಿಣಾಮವಾಗಿ, ಜನರಿಗಾಗಿ ಬಳಕೆಯಾಗಬೇಕಾದ ಕೋಟ್ಯಂತರ ಹಣವನ್ನು ಪ್ರತೀ ವರ್ಷ ಗೋಶಾಲೆಗಳಿಗೆ ಸರಕಾರ ಸುರಿಯುತ್ತಿದೆ.

ಸರಕಾರ ನಡೆಸಿದ ಗೋ ರಾಜಕಾರಣದಿಂದಾಗಿ ಇಂದು ದೇಶಾದ್ಯಂತ ಬಿಡಾಡಿ ದನಗಳ ಕಾಟ ಹೆಚ್ಚಿದೆ. ಜೊತೆಗೆ ಸಾಂಕ್ರಾಮಿಕ ರೋಗಗಳಿಂದ ಲಕ್ಷಾಂತರ ಗೋವುಗಳು ಸಾಯುತ್ತಿವೆ. ಅಪೌಷ್ಟಿಕತೆಯನ್ನು ಇಳಿಸುವ ನಿಟ್ಟಿನಲ್ಲಿ ಸರಕಾರ ಸಾಮಾಜಿಕ ವಲಯಗಳಿಗೆ ನೀಡುವ ಅನುದಾನಗಳನ್ನು ಹೆಚ್ಚಿಸಬೇಕು. ಗೋದಾಮಿನಲ್ಲಿ ಕೊಳೆಯುತ್ತಿರುವ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಬಡವರಿಗೆ ನೀಡಲು ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಾನುವಾರು ಹತ್ಯೆ ನಿಷೇಧ ಕಾನೂನನ್ನು ಹಿಂದೆಗೆದು, ರೈತರಿಗೂ, ಮಾಂಸಾಹಾರಿಗಳಿಗೂ ಪ್ರೋತ್ಸಾಹ ನೀಡಬೇಕು. ಗೋಶಾಲೆಗಳಿಗೆ ಸುರಿಯುವ ಹಣವನ್ನು ಬಡವರ ಏಳಿಗೆಗಾಗಿ ಬಳಸಬೇಕು. ಹಾಗೆಯೇ ಪ್ರತಿಮೆಗಳು, ಮಂದಿರಗಳ ರಾಜಕಾರಣಕ್ಕಾಗಿ ಸುರಿಯುವ ಹಣವನ್ನು ಜನೋಪಯೋಗಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕು. ಹಸಿವು ಸೂಚ್ಯಂಕವನ್ನು ತೆಗಳುವುದರಿಂದ, ಭಾರತ ತನ್ನ ವರ್ಚಸ್ಸಿಗೆ ಇನ್ನಷ್ಟು ಧಕ್ಕೆ ಮಾಡಿಕೊಳ್ಳುತ್ತದೆಯೇ ಹೊರತು ಇನ್ನಾವ ಲಾಭವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News