ಖರ್ಗೆ ದಾಟಬೇಕಾದ ಅಗ್ನಿದಿವ್ಯ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.ರಾಷ್ಟ್ರಮಟ್ಟದಲ್ಲಿ ಬಸವಳಿದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಹಲವು ಬಾರಿ ಮರು ಜೀವ ನೀಡಿದೆ. ಇಂದಿರಾಗಾಂಧಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿರುವುದು ಕರ್ನಾಟಕದ ಚಿಕ್ಕಮಗಳೂರು. ಇಂದಿರಾ ರಾಜಕೀಯ ಅಜ್ಞಾತವಾಸ ಮುಗಿಸಿ ಮತ್ತೆ ರಾಜಕೀಯವನ್ನು ಪ್ರವೇಶಿಸಿರುವುದು ಚಿಕ್ಕಮಗಳೂರು ಕ್ಷೇತ್ರದ ಮೂಲಕ. ಇದಾದ ಬಳಿಕ ಸೋನಿಯಾಗಾಂಧಿಯವರು ಸುಶ್ಮಾ ಸ್ವರಾಜ್ ವಿರುದ್ಧ ಬಳ್ಳಾರಿಯಲ್ಲಿ ಸ್ಪರ್ಧಿಸಿ ದೊಡ್ಡ ಅಂತರದಲ್ಲಿ ಗೆದ್ದಿದ್ದರು. ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆ ಬೋಳಿಸುತ್ತೇನೆ ಎಂದು ಸುಶ್ಮಾ ಸ್ವರಾಜ್ ಸವಾಲು ಹಾಕಿದ ಸಮಯ ಅದು. ಸುಶ್ಮಾ ಅವರ ವಿರುದ್ಧ ಚುನಾವಣೆಯಲ್ಲಿ ಗೆಲ್ಲುವ ಮೂಲಕ, ಪ್ರಧಾನಿ ಹುದ್ದೆಗೆ ತಾನೂ ಅರ್ಹ ಅಭ್ಯರ್ಥಿ ಎನ್ನುವುದನ್ನು ಅವರು ಸಾಬೀತು ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಸೋನಿಯಾ ಪ್ರಧಾನಿ ಹುದ್ದೆಯನ್ನು ನಿರಾಕರಿಸುವ ಮೂಲಕ ತನ್ನ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದರು.
ಅಮೇಠಿಯಲ್ಲಿ ಸೋತು ಬಲಿ ಚಕ್ರವರ್ತಿ ಆಳಿದ ಕೇರಳ ತಲುಪಿರುವ ರಾಹುಲ್ ಗಾಂಧಿಗೆ ಸದ್ಯಕ್ಕೆ ಆಸರೆಯಾಗಿರುವುದು ಕೇರಳ. ಇದೇ ಸಂದರ್ಭದಲ್ಲಿ ಅವರ ಭಾರತ್ ಜೋಡೊ ಯಾತ್ರೆಗೆ ತೀವ್ರವಾಗಿ ಸ್ಪಂದಿಸುವ ಮೂಲಕ ಮತ್ತೆ ಕಳೆದುಕೊಂಡ ಜನಪ್ರಿಯತೆಯನ್ನು ಅವರಿಗೆ ಒದಗಿಸಿಕೊಡುತ್ತಿರುವುದು ಕರ್ನಾಟಕ. ಇದೇ ಹೊತ್ತಿಗೆ ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಗೌರವಿಸಿ, ಕಾಂಗ್ರೆಸ್ ಕರ್ನಾಟಕದ ತನ್ನ ಋಣ ತೀರಿಸಿಕೊಂಡಿರುವುದು ಕೂಡ ಅರ್ಥಪೂರ್ಣವಾಗಿದೆ. ಎಸ್. ಎಂ. ಕೃಷ್ಣ, ಬಂಗಾರಪ್ಪ, ಜನಾರ್ದನ ಪೂಜಾರಿ, ಧರಂಸಿಂಗ್, ಮಾರ್ಗರೆಟ್ ಆಳ್ವ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಮೊದಲಾದ ಹಲವು ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಬೆಳೆಸಿದೆ. ಇವರಲ್ಲಿ ಶೋಷಿತ ಸಮುದಾಯದಿಂದ ಬಂದ ನಾಯಕರೇ ಅಧಿಕ ಎನ್ನುವುದನ್ನು ಇಲ್ಲಿ ನಾವು ಸ್ಮರಿಸಬೇಕಾಗಿದೆ. ಇದೀಗ ಕರ್ನಾಟಕದ ಹಿರಿಯ ದಲಿತ ಮುಖಂಡರೊಬ್ಬರನ್ನು ಅಧ್ಯಕ್ಷರಾಗಿ ಗೌರವಿಸಿರುವುದು ಕಾಂಗ್ರೆಸ್‌ನ ಮುಂದಿನ ರಾಜಕೀಯ ನಡೆಗೆ ಹೊಸತೊಂದು ತಿರುವನ್ನು ನೀಡಬಹುದೇ ಎನ್ನುವುದನ್ನು ಕಾದು ನೋಡಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಖರ್ಗೆಗಿರುವ ಅತಿ ದೊಡ್ಡ ಅರ್ಹತೆಯೆಂದರೆ, ಈ ದೇಶದ ಜಾತ್ಯತೀತ ತತ್ವದ ಮೇಲೆ ಅವರಿಗಿರುವ ಬಲವಾದ ನಂಬಿಕೆ.
ಕಾಂಗ್ರೆಸ್‌ನ ಹಿರಿಯ ನಾಯಕರೆನಿಸಿಕೊಂಡವರೇ ಅಧಿಕಾರದಾಸೆಗಾಗಿ ಸಾಮೂಹಿಕವಾಗಿ ಬಿಜೆಪಿಗೆ ವಲಸೆ ಹೋಗುತ್ತಿರುವ ಈ ದಿನಗಳಲ್ಲಿ, ಜಾತ್ಯತೀತ ವೌಲ್ಯಗಳಿಗೆ ಕೊನೆಯವರೆಗೂ ಬದ್ಧರಾಗಿ ಉಳಿಯಬಲ್ಲರು ಎಂಬ ನಂಬಿಕೆಗೆ ಅರ್ಹರಾಗಿರುವ ನಾಯಕರನ್ನು ಕಾಂಗ್ರೆಸ್ ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಅತ್ಯಗತ್ಯವಾಗಿತ್ತು. ಇಲ್ಲವಾದರೆ ಮುಂದೊಂದು ದಿನ ಪಕ್ಷಾಧ್ಯಕ್ಷರ ನೇತೃತ್ವದಲ್ಲೇ ಕಾಂಗ್ರೆಸ್ ಬಿಜೆಪಿಯೊಂದಿಗೆ ವಿಲೀನವಾಗಬಹುದಾದ ಅಪಾಯಗಳಿದ್ದವು. ಬಿಜೆಪಿಯೊಂದಿಗೆ ಒಳಗೊಳಗೆ ಕೈ ಜೋಡಿಸುವ ಹಿರಿಯರ ಸಂಖ್ಯೆ ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿವೆ. ತನ್ನವರಾರು, ಶತ್ರುಗಳಾರು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸುವುದು ಗಾಂಧಿ ಕುಟುಂಬಕ್ಕೂ ಕಷ್ಟವೆನಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ, ಕಾಂಗ್ರೆಸ್‌ನ ಚುಕ್ಕಾಣಿಯನ್ನು ಶೋಷಿತ ಸಮುದಾಯದಿಂದ ಬಂದ ಖರ್ಗೆ ಕೈಗೆ ಒಪ್ಪಿಸಿರುವುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರ ಮುತ್ಸದ್ದಿತನದ ನಿರ್ಧಾರವಾಗಿದೆ. ಎಲ್ಲಿಯವರೆಗೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಈ ದೇಶದ ಪ್ರಜಾಸತ್ತೆಗೆ, ಜಾತ್ಯತೀತ ತತ್ವಕ್ಕೆ ಬದ್ಧರಾಗಿ, ಜನಸಾಮಾನ್ಯರ ಧ್ವನಿಯಾಗಿ ಮುಂದುವರಿಯುತ್ತಾರೆಯೋ ಅಲ್ಲಿಯವರೆಗೆ ಖರ್ಗೆ ಅವರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೂ ಅದರಿಂದ ದೇಶಕ್ಕೆ ಯಾವ ಅಪಾಯವೂ ಇಲ್ಲ. ಪಕ್ಷಾಧ್ಯಕ್ಷರಾಗಿರುವ ಖರ್ಗೆ ಮುಂದಿರುವ ದೊಡ್ಡ ಸವಾಲು ಶೀಘ್ರದಲ್ಲೇ ಎದುರಾಗಲಿರುವ ತ್ರಿವಳಿ ರಾಜ್ಯಗಳ ವಿಧಾನಸಭಾ ಚುನಾವಣೆಗಳು. ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳು ಖರ್ಗೆಯ ಪಾಲಿಗೆ ಲೋಕಸಭಾ ಚುನಾವಣೆಯ ತಾಲೀಮಾಗಿದೆ. ಈ ತಾಲೀಮಿನಲ್ಲಿ ಖರ್ಗೆ ಅವರು ತಮ್ಮ ಮೈಕೈ ಗಾಯಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಗೆಲ್ಲಿಸುವಲ್ಲಿ ಅವರು ಸಮರ್ಥರಾಗದೇ ಇದ್ದರೆ, ಆ ವೈಫಲ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೇತಾಳನಂತೆ ಹೆಗಲೇರಿ ಕಾಡಲಿದೆ. ಒಂದು ವೇಳೆ ಕಾಂಗ್ರೆಸ್ ರಾಜ್ಯದಲ್ಲಿ ಅಲ್ಪ ಬಹುಮತ ಪಡೆಯಿತು ಎಂದುಕೊಳ್ಳೋಣ. ಆಗಲೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗುಂಪುಗಾರಿಕೆಯಿಂದ ಒಡೆದು ಹೋಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಖರ್ಗೆ ಅವರ ಮೇಲಿದೆ. ಸಿದ್ದರಾಮಯ್ಯ-ಡಿಕೆಶಿ ನಡುವಿನ ಭಿನ್ನಮತ ಅಂತಿಮವಾಗಿ ಕಾಂಗ್ರೆಸ್‌ಗೆ ಕುತ್ತಾಗುವ ಸಾಧ್ಯತೆಗಳಿವೆ. ಇವೆಲ್ಲವನ್ನು ಖರ್ಗೆ ಹೇಗೆ ಸಂಬಾಳಿಸಲಿದ್ದಾರೆ ಎನ್ನುವುದನ್ನು ಆಧರಿಸಿ ಅವರ ರಾಷ್ಟ್ರ ನಾಯಕತ್ವ ಬಲ ಪಡೆದುಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿದ್ದೇ ಬಿಜೆಪಿಯ ಜೊತೆಗೆ ಒಳಗೊಳಗೆ ಕೈ ಜೋಡಿಸಿರುವ ಹಿರಿಯರನ್ನು ನಿಭಾಯಿಸುವ ಹೊಣೆಗಾರಿಕೆಯೂ ಖರ್ಗೆಯ ಮುಂದಿದೆ. ಈಗಾಗಲೇ ಗುಲಾಂ ನಬಿ ಆಝಾದ್ ತನ್ನ ಗುಂಪಿನ ಜೊತೆಗೆ ಕಾಂಗ್ರೆಸ್‌ನಿಂದ ಸಿಡಿದು ಹೊಸ ಪಕ್ಷವನ್ನು ಕಟ್ಟಿಕೊಂಡಿದ್ದಾರೆ. ಜೊತೆಗೆ ಹಲವು ಹಿರಿಯರು ಕಾಂಗ್ರೆಸ್‌ನೊಳಗಿದ್ದುಕೊಂಡೇ ಕಾಂಗ್ರೆಸ್‌ಗೆ ತಲೆನೋವಾಗಿದ್ದಾರೆ. ಇವೆಲ್ಲದರ ಜೊತೆಗೆ, ದಕ್ಷಿಣ ಭಾರತೀಯನೊಬ್ಬನ ನಾಯಕತ್ವವನ್ನು ಉತ್ತರ ಭಾರತದ ಕಾಂಗ್ರೆಸ್ ಹಿರಿ ತಲೆಗಳು ಒಪ್ಪಿಕೊಳ್ಳುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಮುಂದಿನ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿಯ ದ್ವೇಷ ರಾಜಕಾರಣ ಮತ್ತೆ ಮುನ್ನೆಲೆಗೆ ಬರಲಿವೆ. ದ್ವೇಷ ಭಾಷಣಗಳ ಅಬ್ಬರಗಳನ್ನು ಖರ್ಗೆಯ ಜಾತ್ಯತೀತ, ಮಾನವೀಯ ನೆಲೆಗಟ್ಟಿನಿಂದ ಹೊರ ಚಿಮ್ಮಿದ ಮಾತುಗಳು ಹಿಮ್ಮೆಟ್ಟಿಸುವುದು ಸುಲಭವೇನೂ ಅಲ್ಲ. ರಾಹುಲ್ ಗಾಂಧಿಯನ್ನು ಭುಜದ ಮೇಲೆ ಹೊತ್ತು ಖರ್ಗೆ ಈ ಅಗ್ನಿದಿವ್ಯವನ್ನು ಹೇಗೆ ದಾಟಿ ಗುರಿ ತಲುಪಲಿದ್ದಾರೆ ಎನ್ನುವುದನ್ನು ದೇಶ ಕುತೂಹಲದಿಂದ ಗಮನಿಸುತ್ತಿದೆ