ತೆಲಂಗಾಣ: ಉಪಚುನಾವಣೆಗೆ ಮುನ್ನ ತಲೆಯೆತ್ತಿದ ಬಿಜೆಪಿ ಅಧ್ಯಕ್ಷ ನಡ್ಡಾ ಅವರ 'ಸಾಂಕೇತಿಕ ಸಮಾಧಿ'

Update: 2022-10-20 12:00 GMT
Photo credit: Twitter/@ANI

ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯ ಮುನುಗೋಡೆ ಎಂಬಲ್ಲಿ ಕಿಡಿಗೇಡಿಗಳು ಬಿಜೆಪಿ (BJP) ಅಧ್ಯಕ್ಷ ಜೆ ಪಿ ನಡ್ಡಾ (JP Nadda) ಅವರ 'ಸಾಂಕೇತಿಕ ಸಮಾಧಿ' ಸೃಷ್ಟಿಸಿದ ಘಟನೆ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ.

"ಗುಂಡಿ ತೋಡಿ ಅಲ್ಲಿ ಜೆ ಪಿ ನಡ್ಡಾ ಚಿತ್ರ ಇರಿಸಿರುವುದು ಮೂರ್ಖತನ. ಇದನ್ನು ಖಂಡಿಸುತ್ತೇವೆ ಹಾಗೂ ಪೊಲೀಸ್ ದೂರು ದಾಖಲಿಸುತ್ತೆವೆ,'' ಎಂದು ಬಿಜೆಪಿ ನಾಯಕ ಎನ್ ವಿ ಸುಭಾಶ್ ಹೇಳಿದ್ದಾರೆ.

ನಲಗೊಂಡ ಜಿಲ್ಲೆಯ ಮುನುಗೋಡೆಯ ಚೌತುಪ್ಪಲ್ ಪ್ರದೇಶದಲ್ಲಿ ರೀಜನಲ್ ಫ್ಲೋರೈಡ್ ಮಿಟಿಗೇಶನ್ ಎಂಡ್ ರಿಸರ್ಚ್ ಸೆಂಟರ್ ಸ್ಥಾಪನೆಗೆ ಉಂಟಾದ ವಿಳಂಬವನ್ನು ವಿರೋಧಿಸಿ ಹೀಗೆ ಮಾಡಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಮುನುಗೋಡೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದೆ. ಈ ಕ್ಷೇತ್ರವನ್ನು ಗೆಲ್ಲುವುದು ಎಲ್ಲಾ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿ ಬಿಟ್ಟಿದೆ.

ಮುನುಗೋಡೆ ಗ್ರಾಮದ ಚೌತುಪ್ಪಲ್ ಪ್ರದೇಶದಲ್ಲಿ ರೀಜನಲ್ ಫ್ಲೋರೈಡ್ ಮಿಟಿಗೇಶನ್ ಎಂಡ್ ರಿಸರ್ಚ್ ಸೆಂಟರ್ ಸ್ಥಾಪನೆಯ ಪ್ರಸ್ತಾಪ ಬಹಳ ಹಿಂದೆಯೇ ಆಗಿದ್ದರೂ ಕಾಮಗಾರಿ ಆರಂಭಗೊಳ್ಳದೆ ಯೋಜನೆ ನೆನೆಗುದಿಗೆ ಬಿದ್ದಿದೆ.

ಫ್ಲೋರೈಡ್ ಸಂತ್ರಸ್ತರಿಗೆ ಯಾವುದೇ ವೈದ್ಯಕೀಯ ಸವಲತ್ತುಗಳನ್ನು ಒದಗಿಸದೇ ಇರುವ ಕುರಿತಂತೆ ತೆಲಂಗಾಣ ರಾಷ್ಟ್ರ ಸಮಿತಿ ನಾಯಕರು ಬಿಜೆಪಿ ಅಧ್ಯಕ್ಷರನ್ನು ಟೀಕಿಸಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

"ಜೆ ಪಿ ನಡ್ಡಾ ಅವರು 2016ರಲ್ಲಿ ಭರವಸೆ ನೀಡಿದ್ದರು - "ಮರ್ರಿಗುಡ ಎಂಬಲ್ಲಿ 300 ಹಾಸಿಗೆಗಳ ಆಸ್ಪತ್ರೆ, ಚೌತುಪ್ಪಲ್‍ನಲ್ಲಿ ಫ್ಲೋರೈಡ್ ಸಂಶೋಧನಾ ಕೇಂದ್ರ, ಫ್ಲೋರೈಡ್ ಸಂತ್ರಸ್ತರಿಗೆ ಸಹಾಯ. ಎಷ್ಟು ಆಶ್ವಾಸನೆಗಳು ಈಡೇರಿವೆ? ದಯವಿಟ್ಟು ಉತ್ತರಿಸಿ,'' ಎಂದು ಟಿಆರ್ ಎಸ್ ಸಾಮಾಜಿಕ ಜಾಲತಾಣ ಸಂಚಾಲಕ ವೈ ಸತೀಶ್ ರೆಡ್ಡಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಖ್ಯಾತ ಉದ್ಯಮಿ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News