ಸನ್ನಡತೆಯ ಅರ್ಥ ಬದಲಾಗಿದೆಯೇ?

Update: 2022-10-21 04:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾಮಾನ್ಯವಾಗಿ ಸನ್ನಡತೆ ಎಂದರೆ ಇತರರಿಗೆ ಉಪಕಾರಿಯಾಗಿರುವುದು ಅಥವಾ ಕನಿಷ್ಠ ಅಪಕಾರಿಯಾಗಿ ಬದುಕದಿರುವುದು ಎಂದು ಅರ್ಥ. ಕ್ರೂರವಾದ ಅಪರಾಧಗಳನ್ನು ಮಾಡಿ ಜೈಲು ಶಿಕ್ಷೆ ಅನುಭವಿಸುತ್ತಿರುವವರು ಕೂಡ ಶಿಕ್ಷಾವಧಿಯಲ್ಲಿ ಬದಲಾಗಿ ಜೈಲಿನಲ್ಲಿ ಈ ಬಗೆಯ ಸನ್ನಡತೆಯನ್ನು ತೋರಿದರೆ ಅವರಿಗೆ ಅವಧಿಪೂರ್ವ ಬಿಡುಗಡೆಯನ್ನು ದಯಪಾಲಿಸುವ ರಿವಾಜು ನಮ್ಮ ಕಾನೂನುಗಳಲ್ಲಿವೆ. ಆದರೆ ಅಪಾರ ದ್ವೇಷ ಮತ್ತು ಅಸಾಧಾರಣ ಕ್ರೌರ್ಯವನ್ನು ಯೋಜಿತವಾಗಿ ಎಸಗಿದವರು ‘ಸಜ್ಜನ’ರಾಗಿ ಬದಲಾಗುವುದು ಅಸಾಧ್ಯವಲ್ಲವಾದರೂ ಅಪರೂಪ. ಹೀಗಾಗಿ ಅಂಥವರ ಸನ್ನಡತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಶಿಕ್ಷಾವಧಿಯಲ್ಲೂ ಯಾವುದೇ ಬಗೆಯ ಸುಧಾರಣೆಯನ್ನು ತೋರದಿದ್ದರೆ ಅವಧಿಪೂರ್ವ ಬಿಡುಗಡೆಗೆ ಅರ್ಹರಾಗುವುದೇ ಇಲ್ಲ. ಅದರಲ್ಲೂ ಅತ್ಯಾಚಾರ, ಕೊಲೆ, ದೇಶದ್ರೋಹ ಇತ್ಯಾದಿ ಅಪರಾಧಗಳನ್ನು ಎಸಗಿರುವ ಅಪರಾಧಿಗಳನ್ನು ಸನ್ನಡತೆಯಾಧಾರಿತ ಬಿಡುಗಡೆಗೆ ಪರಿಗಣಿಸಲೇ ಬಾರದೆಂದು ಕೇಂದ್ರ ಸರಕಾರ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ರೂಪಿಸಲಾದ ನಿಯಮಾವಳಿಗಳು ಸ್ಪಷ್ಟಪಡಿಸುತ್ತವೆ.

ಆದರೂ ಕಳೆದ ಆಗಸ್ಟ್ 15ರಂದು ಗುಜರಾತ್ ಸರಕಾರ 2002ರ ಗುಜರಾತ್ ನರಮೇಧದಲ್ಲಿ ಬಿಲ್ಕಿಸ್ ಬಾನು ಅವರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಆಕೆಯ ಮೂರು ವರ್ಷದ ಮಗುವನ್ನು ಬಂಡೆಗೆ ಬಡಿದು ಕೊಂದು, ಆಕೆಯ ಜೊತೆಗಿದ್ದ ಇನ್ನೂ ಆರು ಜನರನ್ನು ಕೊಂದ ನಂತರ ಸಾಕ್ಷ್ಯವಿಲ್ಲದಂತೆ ಮಾಡಲು ಅವರ ರುಂಡಮುಂಡಗಳನ್ನು ಕೊಚ್ಚಿ ಬೇರ್ಪಡಿಸಿದಂಥ ಬರ್ಬರ, ಅಮಾನವೀಯ ಯೋಜಿತ ಕ್ರೌರ್ಯವನ್ನು ಎಸಗಿದ ಅಪರಾಧವು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಿದೆ. ಸೆರೆಯಿಂದ ಹೊರಗೆ ಬಂದ ತಕ್ಷಣ ಸಂಘಪರಿವಾರದ ಕಾರ್ಯಕರ್ತರು ಅವರನ್ನು ಸನ್ಮಾನಿಸಿ ಸ್ವಾಗತಿಸಿದ್ದಾರೆ ಹಾಗೂ ಆ ಅಪರಾಧಿಗಳು ಯಾವುದೇ ಪಶ್ಚಾತ್ತಾಪವಿಲ್ಲದೆ ಆ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ನಾರಿ ಶಕ್ತಿಯ ಬಗ್ಗೆ ಉದ್ದುದ್ದ ಭಾಷಣ ಮಾಡಿದ ಪ್ರಧಾನಿ ಮೋದಿಯವರ ಸರಕಾರವೇ, ಈ ಪಶ್ಚಾತ್ತಾಪವಿಲ್ಲದ ಅಪರಾಧಿಗಳ ಅವಧಿ ಪೂರ್ವ ಬಿಡುಗಡೆಗೆ ಅನುಮತಿ ನೀಡಿದೆ. ಇದು ಇಡೀ ದೇಶವನ್ನೇ ದಿಗ್ಭ್ರಾಂತಿಗೊಳಿಸಿದೆ. ಈ ಬಿಡುಗಡೆಯಲ್ಲಿ ಸರಕಾರ ಎಲ್ಲಾ ಕಾನೂನನ್ನು ಪಾಲಿಸಿದೆ ಎಂದು ಸಮರ್ಥಿಸಿಕೊಳ್ಳುತ್ತಿರುವ ಮೋದಿ ಸರಕಾರ ಅತ್ಯಂತ ಅಮಾನವೀಯವಾಗಿ ಹಾಗೂ ಕಾನೂನು ಬಾಹಿರವಾಗಿ ವರ್ತಿಸಿರುವುದು ಅವರದೇ ಸರಕಾರ ಮೊನ್ನೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸಾಬೀತಾಗಿದೆ.

ಈ ಅಪರಾಧಿಗಳ ಬಿಡುಗಡೆಯ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿರುವ ಕೇಸಿನಲ್ಲಿ ಕೇಂದ್ರ ಸರಕಾರವೇ ಮಂಡಿಸಿರುವ ಅಫಿಡವಿಟ್‌ನ ಪ್ರಕಾರ ಈ ಎಲ್ಲಾ ಅಪರಾಧಿಗಳು ಕಳೆದ 14 ವರ್ಷಗಳಲ್ಲಿ ಕನಿಷ್ಠ 3-4 ವರ್ಷಗಳ ಪರೋಲ್ ಪಡೆದುಕೊಂಡು ಜೈಲಿನ ಹೊರಗಡೆಯೇ ಜೀವನ ಮಾಡಿದ್ದಾರೆ. ಅವರಲ್ಲಿ ಹಲವರು ಪರೋಲ್ ಅವಧಿ ಮುಗಿದರೂ ಹಲವಾರು ತಿಂಗಳುಗಳ ಕಾಲ ಜೈಲಿಗೇ ಮರಳಿಲ್ಲ. ಇನ್ನಿಬ್ಬರು ಪರೋಲ್ ಅವಧಿಯಲ್ಲಿ ಮತ್ತೆ ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಅದೇ ಅಫಿಡವಿಟ್ ಪ್ರಕಾರ ಅವರಿಗೆ ಶಿಕ್ಷೆಯನ್ನು ವಿಧಿಸಿದ ನ್ಯಾಯಾಲಯವಲ್ಲದೆ ಅವರ ವಾಸಸ್ಥಳದ ಜಿಲ್ಲಾ ಪೊಲಿಸ್ ಅಧಿಕಾರಿ ಕೂಡಾ ಬಿಡುಗಡೆಯನ್ನು ವಿರೋಧಿಸಿದ್ದಾರೆ. ಆದರೂ ಕೇಂದ್ರಸರಕಾರ ಯಾವುದೇ ಸಮರ್ಥನೆ ಹಾಗೂ ಕಾರಣಗಳನ್ನು ಒದಗಿಸದೆ ಈ ಅಪರಾಧಿಗಳ ಬಿಡುಗಡೆಗೆ ಜುಲೈನಲ್ಲೇ ಒಪ್ಪಿಗೆ ಸೂಚಿಸಿದೆ. ಈಗ ಸುಪ್ರಿಂ ಕೋರ್ಟಿನ ಮುಂದಿರುವ ಪ್ರಕರಣದಲ್ಲೂ ಬಿಡುಗಡೆಯನ್ನು ತಾರ್ಕಿಕವಾಗಿ ಸಮರ್ಥಿಸಿಕೊಳ್ಳುವ ಯಾವುದೇ ವಾದವನ್ನು ಮುಂದಿಡದೆ ಕೇವಲ ಇತರ ನ್ಯಾಯಾದೇಶಗಳ ಗಂಟನ್ನು ಮಾತ್ರ ನೀಡಿರುವ ಬಗ್ಗೆ ಸುಪ್ರೀಂ ಕೋರ್ಟ್ ಸಹ ಆಕ್ಷೇಪಣೆ ವ್ಯಕ್ತಪಡಿಸಿದೆ. ಸಾರಾಂಶದಲ್ಲಿ ಈ ಅಪರಾಧಿಗಳು ಬರ್ಬರ ಕೊಲೆ, ಸಾಮೂಹಿಕ ಅತ್ಯಾಚಾರದಂಥ ಗಂಭೀರ ಅಪರಾಧಗಳನ್ನು ಎಸಗಿ ಬಂದರೂ ಸರಕಾರ ಅವರನ್ನು ಸಜ್ಜನರೆಂದು ಪರಿಗಣಿಸಿ ಜೈಲಿನಲ್ಲಿ ರಾಜಮರ್ಯಾದೆ ಹಾಗೂ ಪರೋಲ್‌ನಂಥ ಸಕಲ ಅವಕಾಶಗಳನ್ನು ಕೊಟ್ಟು ಸತ್ಕರಿಸಿದೆ ಹಾಗೂ ಅಂತಿಮವಾಗಿ ಬಿಡುಗಡೆಯನ್ನು ಮಾಡಿದೆ.

ಹಾಗಿದ್ದಲ್ಲಿ ಭಾರತದಲ್ಲಿ ಸನ್ನಡತೆಯ ಅರ್ಥ ಬದಲಾಗಿದೆಯೇ? ಏಕೆಂದರೆ ಬೇಕು ಬೇಕೆಂದಾಗಲೆಲ್ಲಾ ಇಂತಹ ಕೊಲೆ, ಅತ್ಯಾಚಾರದ ಅಪರಾಧಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡುವ ಸರಕಾರ ಮತ್ತದರ ಅಧೀನದಲ್ಲಿರುವ ಎನ್‌ಐಎ ಸಂಸ್ಥೆ, ಹೋರಾಟಗಾರ ಪಾದ್ರಿ ಸ್ಟಾನ್ ಸ್ವಾಮಿಗೆ ನೀರು ಕುಡಿಯಲು ಸ್ಟ್ರಾ ಬಳಸಲೂ ಒಪ್ಪಿಗೆ ನೀಡಿರಲಿಲ್ಲ. ಅಪಾರ ಅನಾರೋಗ್ಯವಿದ್ದರೂ ಸರಿಯಾದ ಔಷಧೋಪಚಾರ ಒದಗಿಸುವುದನ್ನು ದೇಶಭದ್ರತೆಯ ಹೆಸರಿನಲ್ಲಿ ವಿರೋಧಿಸಿತ್ತು. ಪ್ರೊ. ಜಿ.ಎನ್ ಸಾಯಿಬಾಬಾ ಅವರ ತಾಯಿ ನಿಧನರಾದಾಗ ಅವರ ಅಂತಿಮ ದರ್ಶನ ಮಾಡಲು ಕೂಡ ಪರೋಲ್ ನಿರಾಕರಿಸಿತ್ತು. ಅವರ ಜೊತೆ ಜೈಲಿನಲ್ಲಿದ್ದ ಪಾಂಡು ನರೋತೆ ಎಂಬ ಆದಿವಾಸಿ ಹೋರಾಟಗಾರನಿಗೆ ಪರೋಲ್ ಇರಲಿ ಜೈಲಿನಾಚೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವುದು ದೇಶಭದ್ರತೆಗೆ ಅಪಾಯ ಎಂದು ಕಾರಣವೊಡ್ಡಿ ಅವರ ಸಾವಿಗೆ ಕಾರಣವಾಯಿತು. ಖ್ಯಾತ ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖ ಅವರಿಗೆ ಪರೋಲ್ ಕೊಡುವುದಿರಲಿ ಗೃಹಬಂಧನವನ್ನು ನಿರಾಕರಿಸುವುದರ ಜೊತೆಗೆ ಓದಲು ಬೇಕಾದ ಕನ್ನಡಕ ಒದಗಿಸುವುದನ್ನೂ ವಿರೋಧಿಸುತ್ತಾ ಬಂದಿದೆ.

ಇವರೆಲ್ಲಾ ಜನಪರವಾಗಿ ಹೋರಾಡುತ್ತಾ ಬಂದವರು. ಮೋದಿ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಾ ಜನಮನದ ಧ್ವನಿಯಾದವರು. ಹೀಗಾಗಿ ಇವರೆಲ್ಲಾ ಭಾರತದ ಭದ್ರತೆಗೆ ಕಂಟಕರು. ದೇಶದ್ರೋಹಿಗಳು. ಆದರೆ ಬಿಲ್ಕಿಸ್ ಬಾನುವನ್ನು ಅತ್ಯಾಚಾರ ಮಾಡಿದ ರೇಪಿಸ್ಟುಗಳು, ಕೊಲೆಗಡುಕರು ಸಜ್ಜನರು ಮತ್ತು ಸನ್ನಡತೆಯುಳ್ಳವರು. ಏಕೆಂದರೆ ಅವರು ಸರಕಾರ ಮತ್ತು ಸಂಘಪರಿವಾರದ ಹಿಂದುತ್ವವಾದಿ ಸಿದ್ಧಾಂತದ ಪ್ರತಿಪಾದಕರು. ಹಾಗಿದ್ದಲ್ಲಿ ಭಾರತದಲ್ಲಿ ಕೂಡಾ ನಾಝಿ ಜರ್ಮನಿಯಲ್ಲಿದ್ದಂತೆ ‘ಒಂದೇ ದೇಶ ಎರಡು ಕಾನೂನುಗಳು’ ಜಾರಿಯಾಯಿತೇ? ಇದೇ ಬಗೆಯ ಅನ್ಯಾಯ ನಿರ್ಭಯಾ ಪ್ರಕರಣದಲ್ಲಿ ಸಂಭವಿಸಿದಾಗ ಇಡೀ ದೇಶವೇ ಸಾತ್ವಿಕ ಆಕ್ರೋಶದಲ್ಲಿ ಬೀದಿಗಿಳಿದು ರೇಪಿಸ್ಟ್‌ಗಳಿಗೆ ಮರಣದಂಡನೆ ಜಾರಿಯಾಗುವಂತೆ ನೋಡಿಕೊಂಡಿತ್ತು. ಆದರೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಥವಾ ಹಾಥರಸ್‌ನ ದಲಿತ ಯುವತಿಯ ಪ್ರಕರಣದಲ್ಲಿ ಈ ದೇಶ ಅಷ್ಟೇ ಸಾತ್ವಿಕ ಆಕ್ರೋಶದಲ್ಲಿ ಕುದಿಯುವುದಿಲ್ಲವೇಕೆ? ಈ ದೇಶದ ಸಜ್ಜನ ನಾಗರಿಕರ ಸಾತ್ವಿಕ ಆಕ್ರೋಶಗಳು, ಸನ್ನಡೆತಗಳು ಜಾತಿ-ಧರ್ಮ ಗಳ ಶರತ್ತುಗಳಿಗೊಳಪಟ್ಟಿವೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News