ಮನುಷ್ಯನ ಅಳಿವಿಗೂ ಕಾರಣವಾಗಲಿರುವ ಜೀವವೈವಿಧ್ಯತೆಯ ಅಳಿವು

Update: 2022-10-21 06:02 GMT

‘ವಿಶ್ವ ವನ್ಯಜೀವಿ ನಿಧಿ’ಯ ಹೊಸ ವರದಿಯ ಪ್ರಕಾರ ಮಾನವ ಚಟುವಟಿಕೆಗಳು, ಕಳೆದ ಐವತ್ತು ವರ್ಷಗಳಲ್ಲಿ ವಿಶ್ವದ ವನ್ಯಜೀವಿಗಳ ಮೂರನೇ ಎರಡು ಭಾಗವನ್ನು ಅಳಿಸಿ ಹಾಕಿವೆ. ಈ ಅಳಿವು ಕ್ಷಿಪ್ರ ವೇಗದಲ್ಲಿ ಸಾಗುತ್ತಿದ್ದು ಮಾನವನ ಸಾಮೂಹಿಕ ಅಳಿವಿಗೂ ಕಾರಣವಾಗಲಿದೆ. ಪ್ರಕೃತಿಯೊಂದಿಗಿನ ಮನುಷ್ಯ ಸಂಬಂಧ ಮುರಿದುಬಿದ್ದಿದ್ದು, ಈಗ ಪ್ರಕೃತಿ ಮನುಷ್ಯನ ವಿರುದ್ಧ ತಿರುಗಿಬಿದ್ದಿದೆ. ‘ಲಿವಿಂಗ್ ಪ್ಲಾನೆಟ್’ನ 2020ರ ವರದಿಯ ಪ್ರಕಾರ ವಿಶ್ವದಾದ್ಯಂತ 4,300ಕ್ಕೂ ಹೆಚ್ಚು ವಿಭಿನ್ನ ಕಶೇರುಕ ಪ್ರಭೇದಗಳಾದ ಸಸ್ತನಿ, ಮೀನು, ಪಕ್ಷಿಗಳು ಮತ್ತು ಉಭಯಚರಗಳ ಬಗ್ಗೆ ಮೇಲ್ವಿಚಾರಣೆಯನ್ನು ನಡೆಸಲಾಗಿ, 1970ರಿಂದ 2016ರವರೆಗೆ ಮೇಲ್ವಿಚಾರಣೆ ಮಾಡಿದ ಪ್ರಭೇದಗಳ ಸಂಖ್ಯೆಯ ಗಾತ್ರವು ಸರಾಸರಿ 68 ಪ್ರತಿಶತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕೆರೆಬಿಯನ್ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ ಅಮೆರಿಕದ ಉಷ್ಣವಲಯದಲ್ಲಿ ಪ್ರಾಣಿ ಸಂಖ್ಯೆಯ ಗಾತ್ರವು 94 ಪ್ರತಶತದಷ್ಟು ಕುಸಿದಿದೆ. ಕೃಷಿ ಮತ್ತು ವಸತಿ ಮಾಡಲು ಅರಣ್ಯಗಳನ್ನು ತೆರವುಗೊಳಿಸುವುದು ಅವನತಿಗೆ ಪ್ರಮುಖ ಕಾರಣವಾಗಿದೆ ಎನ್ನುವುದು ದೃಢಪಟ್ಟಿದೆ. ಜಗತ್ತಿನ ಮೂರನೇ ಒಂದು ಭಾಗದಷ್ಟು ಭೂಮಿಯನ್ನು ಪ್ರಸಕ್ತ ಆಹಾರ ಉತ್ಪಾದನೆಗೆ ಬಳಸಲಾಗುತ್ತಿದೆ. ಮಾನವಜನ್ಯ ಚಟುವಟಿಕೆಗಳಿಂದ ತೀವ್ರವಾಗಿ ಬದಲಾಗುತ್ತಿರುವ ಹವಾಮಾನ ವೈಪ್ಯರೀತ್ಯ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.

ವನ್ಯಜೀವಿ ಪ್ರಭೇದಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಜೊತೆಜೊತೆಗೆ ಪೃಥ್ವಿಯ ಸುದೀರ್ಘವಾದ ನಿಸರ್ಗ ವ್ಯವಸ್ಥೆ ಛಿದ್ರವಾಗುತ್ತಿರುವ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ. ವಿಶ್ವಸಂಸ್ಥೆ ಕಳೆದ ವರ್ಷ ಪ್ರಕಟಿಸಿದ ವರದಿಯಲ್ಲಿ ಭೂಮಿಯ ಮೇಲೆ ಉಳಿದುಕೊಂಡಿರುವ ಸುಮಾರು 8 ದಶಲಕ್ಷ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಲ್ಲಿ ಒಂದು ದಶಲಕ್ಷ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ಎಚ್ಚರಿಸಿದೆ. ‘ಜೀವವೈವಿಧ್ಯವನ್ನು ರಕ್ಷಿಸುವುದು ಎಂದರೆ ಭೂಮಿಯ ಮೇಲೆ ಮಾನವೀಯತೆಯನ್ನು ರಕ್ಷಿಸುವುದು’ ಎಂದು ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ವರದಿಯನ್ನು ಬಿಡುಗಡೆ ಮಾಡುವಾಗ ಹೇಳಿದರು. ಜೀವವೈವಿಧ್ಯತೆಯ ನಷ್ಟ ಕೋವಿಡ್-19ರಂತಹ ರೋಗಗಳು ಕೂಡ ಮನುಷ್ಯ ಮತ್ತು ಪ್ರಾಣಿಸಮೂಹದ ನಾಶಕ್ಕೆ ಕಾರಣವಾಗುತ್ತವೆ ಎಂಬುದಾಗಿ ವಿಶ್ವಸಂಸ್ಥೆ ಕೂಡಾ ವರದಿ ಮಾಡಿದೆ. ಜಗತ್ತಿನ ಕೆಲವು ಭಾಗಗಳಲ್ಲಿ ಅರಣ್ಯ ನಾಶದ ಕಾರಣದಿಂದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿವೆ ಎಂದು ಅದರ ವರದಿ ಹೇಳಿದೆ. ಮನುಷ್ಯನು ಬೇಟೆಯಾಡಿ ಭಕ್ಷಿಸುವ ವನ್ಯಜೀವಿಗಳು, ಅರಣ್ಯ ಬಳಕೆ ಮತ್ತು ಪಳೆಯುಳಿಕೆ ಇಂಧನಗಳ ಸುಡುವಿಕೆಯಿಂದ ಜಗತ್ತು ಆರನೇ ಸಾಮೂಹಿಕ ಅಳಿವಿಗೆ ದೂಡಲಾಗುತ್ತಿದೆ ಎಂದು ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಜಾಗತಿಕ ತಾಪಮಾನದ ಏರಿಕೆ ಪರಿಸರ ವ್ಯವಸ್ಥೆಗಳಲ್ಲಿ ಕೆಲವು ಪ್ರಭೇದಗಳು ಹೊಂದಿಕೊಳ್ಳುವುದಕ್ಕಿಂತ ವೇಗವಾಗಿ ಬದಲಾಗುತ್ತಿದೆ.

ಈಗ ತುರ್ತಾಗಿ ನಾವು ಮಾಡಬೇಕಿರುವೆ ಕೆಲಸವೆಂದರೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತ್ವರಿತವಾಗಿ ಕಡಿತಗೊಳಿಸುವುದು. ಇದರಿಂದ ಕೆಟ್ಟ ಹವಾಮಾನ ಬದಲಾವಣೆಯ ಸನ್ನಿವೇಶಗಳನ್ನು ತಪ್ಪಿಸಬಹುದು. ಮಾಲಿನ್ಯಗೊಂಡಿರುವ ವಿಶಾಲವಾದ ಭೂಮಿ, ಸಮುದ್ರಗಳನ್ನು ಸಂರಕ್ಷಿಸಬಹುದು ಮತ್ತು ಹಾನಿಗೊಳಗಾದ ಪ್ರದೇಶಗಳನ್ನು ಪುನಃಸ್ಥಾಪಿಸಬಹುದು. ಆಹಾರ ಉತ್ಪಾದನಾ ಪದ್ಧತಿಗಳು ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆಗಳ ಮೇಲೆ ಅದರ ಪ್ರಭಾವವನ್ನು ಹಗುರಗೊಳಿಸಬಹುದು. ಕೇವಲ 60 ವರ್ಷಗಳು ಮಾತ್ರ ಬೆಳೆ ಬೆಳೆಯುವ ಮಣ್ಣಿನ ಫಲವತ್ತತೆ ಉಳಿದುಕೊಂಡಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ. ಆದರೆ ಇದರ ಬಗ್ಗೆ ಯಾವುದೇ ಅಂತರ್‌ರಾಷ್ಟ್ರೀಯ ಸಂಸ್ಥೆಯಾಗಲಿ, ಯಾವುದೇ ದೇಶವಾಗಲಿ ಮಣ್ಣನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಬದಲಾಗಿ ಮಣ್ಣನ್ನು ಹೆಚ್ಚು ಮಾಲಿನ್ಯಕ್ಕೆ ಒಳಪಡಿಸಲಾಗುತ್ತಿದೆ. ವಿಶ್ವ ವನ್ಯಜೀವಿ ನಿಧಿಯ ವರದಿಯಲ್ಲಿ ಭೂಮಿಯ ಮೇಲಿನ ಪರಿಸರ ವ್ಯವಸ್ಥೆಗಳು ಪುನರುತ್ಪಾದನೆ ಮಾಡುವ ಸೀಮಿತ ಸಾಮರ್ಥ್ಯವನ್ನು ಮಾತ್ರ ಹೊಂದಿದೆ ಎಂದು ಹೇಳಿದೆ. ಬೆಳೆಯುತ್ತಿರುವ ಅಪಾರ ಮಾನವ ಜನಸಂಖ್ಯೆಯೊಂದಿಗೆ ಪುನರುತ್ಪಾದಿಸುವ ಪರಿಸರ ವ್ಯವಸ್ಥೆಗಳ ಸಾಮರ್ಥ್ಯವನ್ನು ಹೋಲಿಸಿದರೆ ಪರಿಸರದಲ್ಲಿ ಅಸಮತೋಲನೆ ಎದ್ದು ಕಾಣಿಸುತ್ತಿದೆ. ಮಾನವ ಉದ್ಯಮವು ಮಣ್ಣಿನಲ್ಲಿ ಪುನರುತ್ಪಾದಿಸಬಹುದಾದ ಪ್ರಮಾಣಕ್ಕಿಂತ 1.56 ಪಟ್ಟು ಹೆಚ್ಚು ಬೇಡಿಕೆಯನ್ನು ಹೊಂದಿದೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಡಬ್ಲ್ಯೂಡಬ್ಲ್ಯೂಎಫ್‌ನ ಯು.ಕೆ. ಮುಖ್ಯ ಕಾರ್ಯ ನಿರ್ವಾಹಕ ತಾನ್ಯಾ ಸ್ಟೀಲೀ ‘‘ನಾವು ನಮ್ಮ ಗ್ರಹವನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದೇವೆ ಮತ್ತು ಅದರ ಬಗ್ಗೆ ಏನೂ ಬೇಕಾದರೂ ಮಾಡಬಲ್ಲ ಕೊನೆಯ ಪೀಳಿಗೆ ಮತ್ತು ಅದರ ಬಗ್ಗೆ ತಿಳಿದ ಮೊದಲ ಪೀಳಿಗೆಯೂ ನಮ್ಮದೇ ಆಗಿದೆ’’ ಎಂದು ಹೇಳಿದ್ದಾರೆ.

ಅದೇ ವರದಿಯಲ್ಲಿ ನೈಸರ್ಗಿಕ ಜಗತ್ತನ್ನು ಸಂರಕ್ಷಿಸುವ ಪ್ರಸಕ್ತ ಪ್ರಯತ್ನಗಳು ಮಾನವ ನಿರ್ಮಿತ ವಿನಾಶದ ವೇಗಕ್ಕೆ ಅನುಗುಣವಾಗಿಲ್ಲ ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಅಂತರ್‌ರಾಷ್ಟ್ರೀಯ ಒಪ್ಪಂದವನ್ನು ರೂಪಿಸಬೇಕು ಮತ್ತು ಅದನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಎಚ್ಚರಿಸಿದೆ. ವರದಿಯಲ್ಲಿ ನೂರಕ್ಕೆ 90ರಷ್ಟು ಸಮುದ್ರ ಪಕ್ಷಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇರುವುದನ್ನು ಪ್ರಸ್ತಾಪಿಸಲಾಗಿದೆ. 1960ರ ದಶಕದಲ್ಲಿ ಕೇವಲ ಶೇ. 5 ಸಮುದ್ರ ಪಕ್ಷಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕಾಣಿಸಿಕೊಂಡಿತ್ತು. ಮನುಷ್ಯನು ಬಳಸುವ ಹೇರಳ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವ ತಿಮಿಂಗಿಲಗಳು ಅಪಾಯದಲ್ಲಿರುವ ಒಂದು ಪ್ರಭೇದವೆಂದು ಹೆಸರಿಸಲಾಗಿದೆ. ಮನುಷ್ಯ ತನ್ನ ಆಹಾರಕ್ಕಾಗಿ ಪ್ರಾಣಿಗಳನ್ನು ಸಾಮೂಹಿಕವಾಗಿ ಬೇಟೆಯಾಡಿ ಕೊಲ್ಲುವುದು ಎರಡನೇ ಅತಿದೊಡ್ಡ ಪ್ರಾಣಿ ಸಮೂಹದ ಅಳಿವಿಗೆ ಕಾರಣವಾಗಿದೆ. ಸುಮಾರು 300 ಸಸ್ತನಿಗಳನ್ನು ಮನುಷ್ಯ ಬೇಟೆಯಾಡಿ ತಿನ್ನುತ್ತಿರುವುದರಿಂದ ಅವು ಅಳಿವಿನ ಅಂಚಿಗೆ ತಲುಪಿವೆ. ಮಾನವ ಚಟುವಟಿಕೆಗಳು ಅಥವಾ ಮನುಷ್ಯನ ಪ್ರಭಾವದಿಂದ ಮುಕ್ತವಾಗಿರುವ ಗ್ರಹದ ಅನುಪಾತವು 2050ರ ವೇಳೆಗೆ ಕಾಲು ಭಾಗದಿಂದ ಹತ್ತನೇ ಒಂದು ಭಾಗಕ್ಕೆ ಇಳಿಯುವ ಸಾಧ್ಯತೆಯಿದೆ. ವನ್ಯಜೀವಿಗಳ ನಷ್ಟಕ್ಕೆ ಇನ್ನೊಂದು ದೊಡ್ಡ ಕಾರಣವೆಂದರೆ ಅವುಗಳ ಆವಾಸಸ್ಥಾನಗಳನ್ನು ನಾಶ ಮಾಡುತ್ತಿರುವುದು. ಮುಖ್ಯವಾಗಿ ಅರಣ್ಯಗಳನ್ನು ನಾಶ ಮಾಡಿ ಫಾರ್ಮ್‌ಲ್ಯಾಂಡ್-ಕೃಷಿಭೂಮಿಯನ್ನು ಅಭಿವೃದ್ಧಿ ಪಡಿಸುತ್ತಿರುವುದು. ಡಬ್ಲ್ಯೂಡಬ್ಲ್ಯೂಎಫ್ ನಿರ್ದೇಶಕ ಮೈಕ್ ಬ್ಯಾರೆಟ್, ಹೀಗೆ ಹೇಳುತ್ತಾರೆ. ‘‘ನಾವು ಬಂಡೆಯ ಅಂಚಿನ ಕೊನೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದೇವೆ. ಅಂದರೆ ನಾವು ಈಗಾಗಲೇ ಭೂಮಿಯನ್ನು ಹಿಂದಿರುಗಲಾರದ ದೂರಕ್ಕೆ ದೂಡಿದ್ದೇವೆ’’ ಎಂಬುದು ಇದರ ಅರ್ಥ. ವಿಶ್ವದ ಉನ್ನತ ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊ. ಬಾಬ್ ವ್ಯಾಟ್ಸನ್ ‘‘ಪ್ರಕೃತಿ ಲಕ್ಷಾಂತರ ವರ್ಷಗಳಲ್ಲಿ ತಾನು ಭೂಮಿಯ ಪರಿಸರವನ್ನು ಸಂರಕ್ಷಿಸಿಕೊಂಡು ಬಂದ ದಾರಿಯಲ್ಲಿ ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ; ಆಹಾರ, ಶುದ್ಧ ನೀರು ಮತ್ತು ಶಕ್ತಿಯ ನಿರ್ಣಾಯಕ ಉತ್ಪಾದನೆಯ ಮೂಲಕ ಹವಾಮಾನ, ಪರಾಗಸ್ಪರ್ಶ ಮತ್ತು ಮಾಲಿನ್ಯ, ಪ್ರವಾಹಗಳನ್ನು ನಿಯಂತ್ರಿಸುವ ಮೂಲಕ ಮಾನವನ ಯೋಗಕ್ಷೇಮವನ್ನು ಕಾಪಾಡಿಕೊಂಡು ಬಂದಿದೆ’’ ಎಂದು ಹೇಳಿದ್ದಾರೆ.

‘ದಿ ಲಿವಿಂಗ್ ಪ್ಲಾನೆಟ್’ ವರದಿಯೊಂದರಲ್ಲಿ ಮಾನವ ಚಟುವಟಿಕೆಗಳು ಸ್ವೀಕಾರಾರ್ಹವಲ್ಲದ ದರದಲ್ಲಿ ಪ್ರಕೃತಿಯನ್ನು ನಾಶ ಪಡಿಸುತ್ತಿದೆ ಮತ್ತು ಪ್ರಸಕ್ತ ಹಾಗೂ ಭವಿಷ್ಯದ ಪೀಳಿಗೆಗಳ ಯೋಗಕ್ಷೇಮಕ್ಕೆ ಬೆದರಿಕೆ ಒಡ್ಡಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಜಗತ್ತಿನಲ್ಲಿ ಅಭಿವೃದ್ಧಿ ದೇಶಗಳ ಮುಂದಿನ ಸಾಲಿನಲ್ಲಿರುವ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕೂಡ ಒಟ್ಟಾಗಿ ಅರಣ್ಯಗಳನ್ನು ನಾಶ ಮಾಡುವುದರಲ್ಲಿ, ಇಂಧನ ಉರಿಸಿ ಶಾಖವರ್ಧಕ ಅನಿಲಗಳನ್ನು ಬಿಡುಗಡೆ ಮಾಡುವುದರಲ್ಲಿ ಮತ್ತು ಜೀವಸಂಕುಲವನ್ನು ನಾಶ ಮಾಡುವುದರಲ್ಲಿ ಎಷ್ಟೇ ಗೋಷ್ಠಿ, ಸಭೆಗಳನ್ನು ನಡೆಸಿದರೂ ತಮ್ಮ ನಿಲುವುಗಳನ್ನು ಬದಲಿಸಿಕೊಂಡಿಲ್ಲ. ಇನ್ನು ಮುಂದೆಯೂ ಅದು ಸಾಧ್ಯವಾಗುವುದಿಲ್ಲ. ಉಕ್ರೇನ್-ರಶ್ಯ ಯುದ್ಧ ಶುರುವಾಗಿ ಏಳು ತಿಂಗಳು ಕಳೆದರೂ ನಿಲ್ಲುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ. ಬದಲಿಗೆ ಅದು ಮೂರನೇ ಜಾಗತಿಕ ಯುದ್ಧವಾಗುವ ಎಲ್ಲಾ ಸಾಧ್ಯತೆಗಳನ್ನು ತೋರುತ್ತಿದೆ. ಜಗತ್ತಿನಾದ್ಯಂತ ಹೊತ್ತಿ ಉರಿಯುತ್ತಿರುವ ಕೋಮು ಗಲಭೆಗಳು, ಯುದ್ಧಗಳ ಜೊತೆಗೆ ಜೀವಜಗತ್ತು ಮತ್ತು ಮನುಷ್ಯ ಜಗತ್ತು ಕತ್ತಲದಾರಿಯಲ್ಲಿ ಸಾಗುತ್ತಿದೆ.

ಈ ನಡುವೆ ನಮಗಿರುವ ಒಂದೇ ನೀಲಿ ಭೂಗ್ರಹವನ್ನು ಅದರ ಮೇಲಿರುವ ಅಪಾರವಾದ ಜೀವಜಗತ್ತನ್ನು ಮತ್ತು ಮನುಷ್ಯತ್ವವನ್ನು ಪ್ರೀತಿಸುವ ಜನರು ಹೇಗಾದರೂ ಮಾಡಿ ಈ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಅಲ್ಪಸಂಖ್ಯಾತ ಜನರ ಮಾತುಗಳನ್ನು ಯಾರೂ ಕೇಳುತ್ತಿಲ್ಲ. ಪ್ರಸಕ್ತ ಎಲ್ಲಾ ದೊಡ್ಡದೊಡ್ಡ ದೇಶಗಳ ನಾಯಕರು ಜಗತ್ತಿನ ಸರ್ವಾಧಿಕಾರಿಗಳಾಗಿ ಮೆರೆಯುತ್ತ ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಷ್ಟು ಜನರನ್ನಾದರೂ ಆಹುತಿ ಕೊಡಲು ಸಿದ್ಧರಾಗಿ ನಿಂತುಬಿಟ್ಟಿದ್ದಾರೆ. ಒಟ್ಟಿನಲ್ಲಿ ‘ವಿಧಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎನ್ನುವ ಮಾತು ಸರಿಯಾಗಿಯೇ ಇದೆ ಎನಿಸುತ್ತದೆ!

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News