ಪಾಕ್ ವಿರುದ್ಧ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್: ಭಾವುಕ ಸಂದೇಶ ಹಂಚಿಕೊಂಡ ಅನುಷ್ಕಾ ಶರ್ಮ
ಮೆಲ್ಬರ್ನ್: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಭಾರತ ತಂಡಕ್ಕೆ 4 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಸತತ ಟ್ರಾಲ್‌ಗೆ ಗುರಿಯಾಗುತ್ತಿದ್ದ ಕೊಹ್ಲಿ ಅದಕ್ಕೆಲ್ಲವೂ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ, .
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ರೋಮಾಂಚನಕಾರಿ ಆಟದ ಶೈಲಿಗೆ (ಕೊಹ್ಲಿ) ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾವುಕರಾಗಿ ಸಂತಸ ಹಂಚಿಕೊಂಡಿದ್ದಾರೆ.
ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸುತ್ತಿರುವ ಪೋಟೋಗಳನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ʼ'ನೀನು (ಕೊಹ್ಲಿ) ಈ ರಾತ್ರಿ ಜನರಲ್ಲಿ ಸಾಕಷ್ಟು ಸಂತಸವನ್ನು ತಂದಿರುವೆ. ಅದೂ ದೀಪಾವಳಿ ಮುನ್ನಾದಿನ!'ʼ ಎಂದು ಬರೆದುಕೊಂಡಿದ್ದಾರೆ.
'ನೀನು ಅದ್ಭುತವಾದ ವ್ಯಕ್ತಿ. ನಿನ್ನ ಸ್ಥೈರ್ಯ, ತ್ಯಾಗ ಮತ್ತು ವಿಶ್ವಾಸ ಎಂತಹವರನ್ನೂ ಚಕಿತಗೊಳಿಸುತ್ತದೆ. ಈ ಪಂದ್ಯ ನಾನು ನನ್ನ ಜೀವನದಲ್ಲೇ ನೋಡಿದ ಅತ್ಯುತ್ತಮ ಪಂದ್ಯವೆಂದು ಹೇಳಬಲ್ಲೆ. ತನ್ನ ತಾಯಿ (ನಾನು) ಏಕೆ ರೂಮಿನಲ್ಲಿ ಕುಣಿದು ಸಂಭ್ರಮಿಸುತ್ತಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮಗಳು ಇನ್ನೂ ಸಣ್ಣವಳು. ಆದರೆ, ಮುಂದೊಂದು ದಿನ ಆ ರಾತ್ರಿ ಅವಳ ಅಪ್ಪ ತನ್ನ ಅತ್ಯಂತ ಕಠಿಣ ಸಂದರ್ಭದಲ್ಲಿ, ತನ್ನ ಮೇಲೆ ಅಪಾರ ಒತ್ತಡ ಇದ್ದಾಗಲೂ ಇಂದೆಂದಿಗಿಂತ ಹೆಚ್ಚು ಪ್ರಬಲವಾಗಿ ಮತ್ತು ಪ್ರಬುದ್ಧವಾಗಿ ಸವಾಲನ್ನು ಮೀರಿ ಹೊರ ಬಂದಿದ್ದರು. ತಮ್ಮ ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್ ಆಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಇದಕ್ಕಾಗಿ ತುಂಬಾ ಹೆಮ್ಮೆ ಪಡುತ್ತಿದ್ದೇನೆ!!' ಎಂದು ಬರೆದಿದ್ದಾರೆ.