ವೃತ್ತಿಯೇ ಯಮಪಾಶವಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅ ಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜೊತೆಯಾಗಿ ವೃತ್ತಿಪರ ರೋಗಗಳಿಂದ ಉಂಟಾಗುವ ಸಾವುಗಳ ಸಂಖ್ಯೆಯನ್ನು 2016ರಲ್ಲಿ ನಡೆಸಿದ ಜಂಟಿ ಸಮೀಕ್ಷೆಯೊಂದರಲ್ಲಿ ಅಂದಾಜಿಸಿವೆ. ಸುಮಾರು 19 ಲಕ್ಷ ಜನರು ಉದ್ಯೋಗಕ್ಕೆ ಸಂಬಂಧಿಸಿದ ರೋಗಗಳಿಂದಾಗಿ ಹಾಗೂ ಗಾಯಗಳಿಂದಾಗಿ ಸಾವನ್ನಪ್ಪಿರುವುದನ್ನು ಈ ಎರಡು ಅಂತರ್‌ರಾಷ್ಟ್ರೀಯ ಏಜೆನ್ಸಿಗಳು ಪತ್ತೆ ಹಚ್ಚಿವೆ. ಈ ಪೈಕಿ 3.50 ಲಕ್ಷ ಸಾವುಗಳು ವೃತ್ತಿ ನಿರ್ವಹಿಸುವ ಸಂದರ್ಭದಲ್ಲಾದ ಗಾಯಗಳಿಂದಾಗಿ ಸಂಭವಿಸಿವೆ. ಉಳಿದ 15.4 ಲಕ್ಷಸಾವುಗಳು ಉದ್ಯೋಗದ ದುಷ್ಪರಿಣಾಮಗಳಿಂದ ಬಂದ ರೋಗಗಳಿಂದ ಸಂಭವಿಸಿವೆಯೆಂದು ಅಂಕಿಅಂಶಗಳು ಬಹಿರಂಗಪಡಿಸಿವೆ.
ವೃತ್ತಿಯ ಸಂದರ್ಭದಲ್ಲಿ ಸಂಭವಿಸುವ ಅವಘಡಗಳು ಸಾಮಾನ್ಯವಾಗಿ ಸುದ್ದಿಗಳಾಗುತ್ತವೆ ಯಾದರೂ, ವೃತ್ತಿಯಿಂದಾಗಿ ಕಾಣಿಸಿಕೊಳ್ಳುವ ದೂರಗಾಮಿ ರೋಗಗಳು ಹೆಚ್ಚಾಗಿ ಸುದ್ದಿಯಾಗುವುದೇ ಇಲ್ಲ. ವಾಸ್ತವಿಕವಾಗಿ ವೃತ್ತಿ ಸಂಬಂಧಿ ರೋಗಗಳು ಹಾಗೂ ಗಾಯಗಳಿಂದ ಸಂಭವಿಸುವ ಸಾವುಗಳ ಪೈಕಿ ವೃತ್ತಿಜನ್ಯ ರೋಗಗಳಿಂದ ಸಂಭವಿಸುವ ಸಾವುಗಳು ಒಟ್ಟು ಸಾವಿನ ಪ್ರಮಾಣದ ಶೇ.82ರಷ್ಟಿದೆ (ಅಂದರೆ 1.90 ಲಕ್ಷ ಸಾವುಗಳ ಪೈಕಿ 15.4 ಲಕ್ಷ ಸಾವುಗಳು). ಇದೇ ವೇಳೆ ವೃತ್ತಿಯನ್ನು ಕೈಗೊಂಡ ಸಂದರ್ಭ ಸಂಭವಿಸುವ ಅವಘಡಗಳಿಂದಾಗಿ ಶೇ.18 ರಷ್ಟು ಸಾವುಗಳು ಸಂಭವಿಸುತ್ತವೆ. ಹೀಗಾಗಿ ವೃತ್ತಿಯ ಕಾರಣದಿಂದಾಗಿ ಸಂಭವಿಸುವ ಸಾವುಗಳನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಬಹುದಾಗಿದೆ. ವೃತ್ತಿಯ ಕಾರಣದಿಂದಾಗಿ ವಿಶ್ವದಾದ್ಯಂತ 7.50 ಲಕ್ಷ ಮಂದಿ ಮೃತಪಟ್ಟಿದ್ದಾರೆಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದ್ದು, ದೀರ್ಘಾವಧಿಯ ದುಡಿಮೆಯೇ ಇದಕ್ಕೆ ಮೂಲ ಕಾರಣವೆಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಕೆಲಸದ ಸ್ಥಳದಲ್ಲಿನ ವಾಯುಮಾಲಿನ್ಯದಿಂದಾಗಿ 2016ರಲ್ಲಿ 4.50 ಲಕ್ಷ ಸಾವುಗಳು ಸಂಭವಿಸಿರುವುದಾಗಿ ಅಧ್ಯಯನ ವರದಿ ತಿಳಿಸಿದೆ. ವೃತ್ತಿಗೆ ಸಂಬಂಧಿಸಿದ ರೋಗಗಳಿಂದಾಗಿ ಲಕ್ಷಾಂತರ ಕಾರ್ಮಿಕರು ಅತ್ಯಂತ ಯಾತನಾಮಯ ಸ್ಥಿತಿಯಲ್ಲಿದ್ದಾರೆ ಹಾಗೂ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಬಡತನ, ಆರ್ಥಿಕ ಒತ್ತಡಗಳು ಹಾಗೂ ಪರಿಹಾರ ದೊರಕದೆ ಇರುವ ಕಾರಣದಿಂದಾಗಿ ಅವರ ಸಂಕಷ್ಟ ಹಾಗೂ ಆರೋಗ್ಯದ ಆಪಾಯಗಳು ಹೆಚ್ಚಾಗಿವೆ. ಅವರಿಗೆ ಕೆಲಸ ಮಾಡಲು ಸಾಧ್ಯವಾಗದೆ ಇದ್ದಾಗ ಅವರಲ್ಲಿ ಹಲವರನ್ನು, ಕಾಳಜಿಯಿಲ್ಲದ ಮಾಲಕರು ವಜಾಗೊಳಿಸುತ್ತಾರೆ. ಇದರಿಂದಾಗಿ ಅವರು ತಮ್ಮ ಜೀವನವನ್ನು ಅತ್ಯಂತ ದುಸ್ತರವಾದ ಪರಿಸ್ಥಿತಿಯಲ್ಲಿ ಕಳೆಯಬೇಕಾಗುತ್ತದೆ. ಭಾರತದಲ್ಲಿ ವೃತ್ತಿಸಂಬಂಧಿ ರೋಗಗಳಿಗೆ ತುತ್ತಾದ ಹಲವು ಸಂತ್ರಸ್ತರ ಪರಿಸ್ಥಿತಿ ಇದೇ ಆಗಿದೆ.
ಅಮೆರಿಕದಂತಹ ದೇಶಗಳೂ ಇದಕ್ಕೆ ಹೊರತಲ್ಲ. ಅಮೆರಿಕದಲ್ಲಿ ಒಂದು ವರ್ಷದಲ್ಲಿ ವೃತ್ತಿ ಸಂಬಂಧಿ ಕಾರಣಗಳಿಂದಾಗಿ ಚರ್ಮರೋಗಗಳು ತಗಲಿದ 66 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ಅದು ಹೇಳಿದೆ.ಅಮೆರಿಕದಲ್ಲಿ 2 ಕೋಟಿಗೂ ಅಧಿಕ ಕಾರ್ಮಿಕರು ಅಸ್ತಮಾ ಹಾಗೂ ದೀರ್ಘಕಾಲದ ಶ್ವಾಸಕೋಶದ ರೋಗಗಳಿಗೆ ತುತ್ತಾಗಿದ್ದಾರೆ. ಶ್ರವಣ ಸಾಮರ್ಥ್ಯದ ನಷ್ಟವು ಅಮೆರಿಕದಲ್ಲಿ ಅತ್ಯಂತ ವ್ಯಾಪಕವಾಗಿರುವ ಉದ್ಯೋಗ ಸಂಬಂಧಿ ಆರೋಗ್ಯ ಸಮಸ್ಯೆಆಗಿದೆ. ಅಮೆರಿಕದಲ್ಲಿ 3 ಕೋಟಿಗೂ ಅಧಿಕ ಮಂದಿ ಉದ್ಯೋಗಿಗಳು ಅಪಾಯಕಾರಿಯಾದ ಶಬ್ದ ಮಾಲಿನ್ಯಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ ಹಾಗೂ ಹೆಚ್ಚುವರಿಯಾಗಿ 90 ಲಕ್ಷ ಮಂದಿ ಉದ್ಯೋಗ ಸಂಬಂಧಿ ಕಾರಣಗಳಿಂದಾಗಿ ಇತರ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ ಶೇ.30ರಷ್ಟು ಅಮೆರಿಕನ್ ಉದ್ಯೋಗಿಗಳು ತಮ್ಮ ಬೆನ್ನ ಕೆಳಭಾಗದ ಅನಾರೋಗ್ಯವನ್ನು ಹೆಚ್ಚಿಸುವಂತಹ ಅಪಾಯವಿರುವ ಉದ್ಯೋಗಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಅಮೆರಿಕದ ಉದ್ಯೋಗ ಸ್ಥಳಗಳಲ್ಲಿ ಒಂದೇ ವರ್ಷದಲ್ಲಿ 3.32 ಲಕ್ಷ ಮಂದಿ ಸ್ನಾಯು ಹಾಗೂ ಮೂಳೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಸಂಬಂಧಿ ರೋಗಗಳಿಂದಾಗಿ ಸರಾಸರಿ ಒಂದು ವರ್ಷದಲ್ಲಿ 1 ಲಕ್ಷ ಮಂದಿ ಸಾವನ್ನಪ್ಪಿದರೆ, 3.90 ಲಕ್ಷ ಮಂದಿ ಹೊಸ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಎರಿಕ್ ಎಕ್‌ಹೋಮ್ ಅವರು ' ದಿ ಪಿಕ್ಚರ್ ಆಫ್ ಹೆಲ್ತ್' ಕೃತಿಯಲ್ಲಿ ಬರೆದಿದ್ದಾರೆ. ಆ ದೇಶದಲ್ಲಿ ಸುಮಾರು 1 ಕೋಟಿ ಕಾರ್ಮಿಕರು ಉದ್ಯೋಗದ ಸಂದರ್ಭದಲ್ಲಿ 11 ವಿಧದ ಅಧಿಕ ಪ್ರಮಾಣದ ಕ್ಯಾನ್ಸರ್‌ಕಾರಕ ಅಂಶಗಳ ಸಂಪರ್ಕಕ್ಕೆ ಬರುತ್ತಾರೆ. ಕೆಲವು ಬಗೆಯ ವೃತ್ತಿಗಳಲ್ಲಿ ತೊಡಗಿಸಿಕೊಂಡವರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿರುವವರ ಪ್ರಮಾಣ ಏರಿಕೆಯಾಗಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆೆ. ಭಾರತದಂತಹ ಬಡ ದೇಶಗಳಲ್ಲಿ ವೃತ್ತಿ ಸಂಬಂಧದ ಕಷ್ಟಗಳು ಬೇರೆಯೇ ಆಯಾಮವನ್ನು ಪಡೆದಿದೆ.
ಇಲ್ಲಿ ಪೌರ ಕಾರ್ಮಿಕರು ಶೋಷಿತರಾಗುತ್ತಿರುವುದು ಕೇವಲ ವೃತ್ತಿಯ ಕಾರಣಕ್ಕಾಗಿ ಮಾತ್ರವಲ್ಲ, ತಮ್ಮ ಜಾತಿಯ ಕಾರಣಕ್ಕಾಗಿಯೂ ಇಲ್ಲಿ ಜನರು ರೋಗ ಪೀಡಿತರಾಗುತ್ತಿದ್ದಾರೆ. ಪೌರಕಾರ್ಮಿಕರು ಅದರಲ್ಲೂ ಮುಖ್ಯವಾಗಿ ಚರಂಡಿ ಶುಚಿಗೊಳಿಸುವಂತಹ ವೃತ್ತಿಗಳಿಗೆ ಭಾರತದಲ್ಲಿ ಒಂದು ಜಾತಿಯನ್ನೇ ನಿಗದಿ ಪಡಿಸಲಾಗಿದೆ. ಒಳಚರಂಡಿಗಳಲ್ಲಿ, ಮಲದಗುಂಡಿಯಲ್ಲಿ ಬಿದ್ದು ಮೃತಪಡುವ ಕಾರ್ಮಿಕರು ಕನಿಷ್ಠ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ. ಆದರೆ ಈ ವೃತ್ತಿಯ ಕಾರಣದಿಂದಾಗಿ 40 ವರ್ಷಗಳ ಒಳಗೆ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುವವರನ್ನು ಇಲ್ಲಿ ಕೇಳುವವರೇ ಇಲ್ಲ. ಹಾಗೆಯೇ ಪಟಾಕಿ, ಸಿಡಿಮದ್ದು ಕಾರ್ಖಾನೆಗಳಲ್ಲಿ ಮಕ್ಕಳು, ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಅವರಿಗೆ ಯಾವುದೇ ಜೀವ ಭದ್ರತೆಗಳನ್ನು ಒದಗಿಸಲಾಗುತ್ತಿಲ್ಲ. ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಕೂಡಾ ತಮ್ಮ ಅತ್ಯಂತ ಅಪಾಯಕಾರಿಯಾದ ಉತ್ಪಾದನಾ ಪ್ರಕ್ರಿಯೆಗಳನ್ನು ಬ್ರೆಝಿಲ್, ಭಾರತ, ಮೆಕ್ಸಿಕೊ, ಇಂಡೋನೇಶ್ಯ, ಚೀನಾ, ನೈಜಿರಿಯದಂತಹ ಜನಸಾಂಧ್ರತೆಯಿರುವ ದೇಶಗಳಲ್ಲಿ ನಡೆಸಲು ಇಚ್ಛಿಸುತ್ತವೆ. ಆ ಮೂಲಕ ವೃತ್ತಿ ಸಂಬಂಧಿ ರೋಗಗಳ ಹೊರೆಯನ್ನು ಬಡ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ವರ್ಗಾಯಿಸಲು ಅದು ಬಯಸುತ್ತಿದೆ. ತಮ್ಮ ತ್ಯಾಜ್ಯಗಳನ್ನು ಎಸೆಯುವುದಕ್ಕೂ ಶ್ರೀಮಂತ ದೇಶಗಳು ಭಾರತದಂತಹ ದೇಶಗಳನ್ನು ಬಳಸಿಕೊಳ್ಳುತ್ತವೆ. ಜೋಪಡಪಟ್ಟಿ ನಿವಾಸಿಗಳು, ದುರ್ಬಲ ವರ್ಗದ ಜನರು ಇದರ ನೇರ ಬಲಿಪಶುಗಳಾಗುತ್ತಾರೆ.
ಅಭಿವೃದ್ಧಿಯ ಬುಡದಲ್ಲಿರುವ ಈ ಕತ್ತಲೆಗೆ ಬೆಳಕು ಚೆಲ್ಲದೇ ಇದ್ದರೆ, ಆ ಅಭಿವೃದ್ಧಿಗೆ ಈ ಜಗತ್ತಿನ ದೊಡ್ಡ ಸಂಖ್ಯೆಯ ಜನರು ತಮ್ಮ ಬದುಕನ್ನು ಒತ್ತೆಯಿಡಬೇಕಾಗುತ್ತದೆ. ಉದ್ಯೋಗ ಬಡತನವನ್ನು ನಿವಾರಿಸುತ್ತದೆ, ಜೀವನ ಮಟ್ಟವನ್ನು ಉತ್ತಮ ಪಡಿಸುತ್ತದೆ ಎಂದು ನಾವು ನಂಬಿದ್ದೇವೆ. ಆದರೆ ಹಿಂದುಳಿದ ರಾಷ್ಟ್ರಗಳಲ್ಲಿ ಉದ್ಯೋಗಗಳಿಗಾಗಿ ಅವರು ತೆರುವ ಬೆಲೆ ಬಹುದೊಡ್ಡದು. ಹಸಿವನ್ನು ನೀಗಿಸುವ ಒಂದೇ ಒಂದು ಉದ್ದೇಶಕ್ಕಾಗಿ ಅವರು ವೃತ್ತಿಯನ್ನು ನಿರ್ವಹಿಸುತ್ತಾರೆ. ಆದರೆ ಆ ವೃತ್ತಿಯ ಕಾರಣದಿಂದಲೇ ತಮ್ಮ ಆರೋಗ್ಯವನ್ನು ಬಲಿಕೊಟ್ಟು ಶಾಶ್ವತ ರೋಗಿಗಳಾಗಿ ಅಸಹಾಯಕರಾಗಿ ಬದುಕಬೇಕಾಗುತ್ತದೆ. ದುಡಿದ ಹಣವೆಲ್ಲ ಈ ಅನಾರೋಗ್ಯಕ್ಕಾಗಿ ವ್ಯಯ ಮಾಡಬೇಕಾಗುತ್ತದೆ. ಈ ಅಭಿವೃದ್ಧಿಯ ಫಲಾನುಭವಿಗಳು ಈ ಕಾರ್ಮಿಕರ ಆರೋಗ್ಯ, ಬದುಕನ್ನು ಮೇಲೆತ್ತುವ ಕಡೆಗೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಅನಾರೋಗ್ಯಕ್ಕೆ ತಳ್ಳುವ ಶ್ರೀಮಂತ ದೇಶಗಳ ಹೊಣೆಗಾರಿಕೆ ಬಹುದೊಡ್ಡದಿದೆ.