ಬ್ರಿಟನ್‌ನಿಂದ ಭಾರತ ಕಲಿಯಬೇಕಾದ ಪಾಠ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಕೆಲವು ತಿಂಗಳುಗಳಿಂದ ಬ್ರಿಟನ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಗಳಿಗೆ ಅನಿರೀಕ್ಷಿತ ತಿರುವೊಂದು ಸಿಕ್ಕಿದೆ. ಬ್ರಿಟನ್‌ನ ಪ್ರಧಾನಿಯಾಗಿ ಭಾರತದ ಮೂಲದವರೆಂದು ಕರೆಸಿಕೊಳ್ಳುತ್ತಿರುವ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಈ ವರ್ಷದ ಬ್ರಿಟನ್‌ನ ಮೂರನೆಯ ಪ್ರಧಾನಿಯೆಂದು ಅವರು ಗುರುತಿಸಲ್ಪಟ್ಟಿದ್ದಾರೆ. ಈ ರಾಜಕೀಯ ಬೆಳವಣಿಗೆಗಳಿಗೆ ಜಗತ್ತು ಹುಬ್ಬೇರಿಸಿದೆ. ಹಲವು ದೇಶಗಳು ಬ್ರಿಟನ್‌ನ ರಾಜಕೀಯ ಸ್ಥಿತಿಯ ಕುರಿತಂತೆ ವ್ಯಂಗ್ಯವಾಡಿದ್ದರೆ, ಕೆಲವು ದೇಶಗಳು ಕಳವಳವನ್ನು ವ್ಯಕ್ತಪಡಿಸಿವೆ. ಬ್ರಿಟನ್‌ನ ಬೆಳವಣಿಗೆಗಳಿಗೆ ಭಾರತವೂ ಸ್ಪಂದಿಸುತ್ತಿರುವುದು ವಿಶೇಷವಾಗಿದೆ. ಬ್ರಿಟನ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಭಾರತಕ್ಕೆ ಪೂರಕವಾಗಬಹುದು ಎಂದು ದೊಡ್ಡದೊಂದು ಗುಂಪು ಸಂಭ್ರಮಿಸುತ್ತಿದೆ. ಈ ಸಂಭ್ರಮಕ್ಕೆ ಸುನಕ್ ಭಾರತೀಯ ಮೂಲದವನಾಗಿರುವುದು ಮಾತ್ರ ಕಾರಣವಲ್ಲ, ಈತ ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ-ಸುಧಾಮೂರ್ತಿ ದಂಪತಿಯ ಅಳಿಯ ಎನ್ನುವುದೂ ಸೇರಿಕೊಂಡಿದೆ. ಮೂಲತಃ ಭಾರತದ ನೆಲದೊಂದಿಗೆ ರಿಷಿ ಸುನಕ್ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆತನ ವಂಶಜರು ಭಾರತೀಯರೆನ್ನುವ ಒಂದೇ ಕಾರಣಕ್ಕಾಗಿ ನಮ್ಮ ದೇಶದ ಜನರು ಪುಳಕಿತಗೊಂಡಿದ್ದಾರೆ. ಇದನ್ನು 'ಭಾರತೀಯರ ಸಾಧನೆ'ಯಾಗಿ ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ.
ಭಾರತೀಯ ಮೂಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾದ ಕಾರಣಕ್ಕೆ ಸಂಭ್ರಮಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ಸಂಭ್ರಮದ ಅಲೆಯಲ್ಲಿ, ್ಲ ಬ್ರಿಟನ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಭಾರತೀಯರು ಕಲಿಯಬೇಕಾದ ಪಾಠಗಳು ಕೊಚ್ಚಿ ಹೋಗಬಾರದು. ಬರೇ ಒಂದು ವರ್ಷದಲ್ಲಿ ಬ್ರಿಟನ್ ಯಾಕೆ ಮೂವರು ಪ್ರಧಾನಿಯನ್ನು ನೋಡಬೇಕಾಯಿತು, ಪ್ರಧಾನಿಯಾಗಿ ಆಯ್ಕೆಯಾದ ಬರೇ ಒಂದೂವರೆ ತಿಂಗಳಲ್ಲಿ ಲಿಝ್ ಟ್ರಸ್ ಯಾಕೆ ರಾಜೀನಾಮೆಯನ್ನು ನೀಡಬೇಕಾಯಿತು? ಎನ್ನುವ ಪ್ರಶ್ನೆ ಭಾರತಕ್ಕೆ ಮುಖ್ಯವಾಗಬೇಕಾಗಿದೆ. ಅಲ್ಲಿನ ರಾಜಕೀಯ ನಾಯಕರು ತೆಗೆದುಕೊಂಡ ತಪ್ಪು ಆರ್ಥಿಕ ನೀತಿಗಳು ಆ ದೇಶದ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮಗಳಿಗಾಗಿ ಪ್ರಧಾನಿಗಳು ಸಾಲು ಸಾಲಾಗಿ ರಾಜೀನಾಮೆ ನೀಡಬೇಕಾಯಿತು. ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಆತುರಾತುರವಾಗಿ ಟ್ರಸ್ ತೆಗೆದುಕೊಂಡ ಆರ್ಥಿಕ ನಿರ್ಧಾರಗಳೂ ಬ್ರಿಟನ್‌ನನ್ನು ಅತಂತ್ರ ಸ್ಥಿತಿಗೆ ತಳ್ಳಿತು. ಈ ಬಗ್ಗೆ ದೇಶದ ಜನರ ಆಕ್ರೋಶ ಹೊರ ಬರುತ್ತಿದ್ದಂತೆಯೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಇದೀಗ ಸುನಕ್ ಅವರ ಸ್ಥಾನವನ್ನು ತುಂಬಿದ್ದಾರೆ. ಆದರೆ ಅವರ ಮುಂದಿರುವ ಸವಾಲು ಸಣ್ಣದೇನೂ ಅಲ್ಲ. ಅದನ್ನು ಅವರು ಎಷ್ಟರಮಟ್ಟಿಗೆ ನಿಭಾಯಿಸಬಲ್ಲ ರು ಎನ್ನುವುದನ್ನು ಕಾದು ನೋಡಬೇಕಾಗಿದೆ. ಸುನಕ್ ಬ್ರಿಟನ್‌ನ ಪ್ರಧಾನಿಯಾಗಿರುವುದರಿಂದ ಭಾರತದ ಆರ್ಥಿಕತೆಯ ಮೇಲೆ ಯಾವುದೇ ವಿಶೇಷ ಪರಿಣಾಮಗಳಾಗುವುದಿಲ್ಲ. ಭಾರತಕ್ಕೆ ಲಾಭವಾಗಬೇಕಾದರೆ ಇಲ್ಲಿಯೂ ಅಂತಹದೇ ರಾಜಕೀಯ ಬದಲಾವಣೆಗಳಾಗಬೇಕು. ತಪ್ಪು ಆರ್ಥಿಕ ನೀತಿಗಾಗಿ ಬ್ರಿಟನ್‌ನಲ್ಲಿ ಒಂದೇ ವರ್ಷದಲ್ಲಿ ಆ ದೇಶ ಮೂರು ಪ್ರಧಾನಿಗಳನ್ನು ಎದುರು ನೋಡಬೇಕಾಯಿತು ಎನ್ನುವಾಗ, ಭಾರತದಲ್ಲಿ ಸಂಭವಿಸಿದ ಆರ್ಥಿಕ ಅವಘಡಗಳಿಗಾಗಿ ಯಾರೆಲ್ಲ ರಾಜೀನಾಮೆ ನೀಡಬೇಕಾಗಿತ್ತು? ನಮಗೆ ನಾವೇ ಕೇಳಿಕೊಳ್ಳಬೇಕು. ತಮ್ಮ ದೇಶದ ಆರ್ಥಿಕ ಬಿಕ್ಕಟ್ಟಿನ ಪ್ರಶ್ನೆ ಬಂದಾಗ ಅವರು ತಮ್ಮದೇ ನೆಲದ ಪ್ರಧಾನಿಯನ್ನು ಕೆಳಗಿಳಿಸಿ ಭಾರತೀಯ ಮೂಲದ ವ್ಯಕ್ತಿಯನ್ನು ಆ ಸ್ಥಾನಕ್ಕೆ ತಂದು ಕೂರಿಸಿದ್ದಾರೆ ಎನ್ನುವುದು ಅಲ್ಲಿನ ಜನರಿಗೆ ತಮ್ಮ ದೇಶದ ಕುರಿತಂತೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇದರಲ್ಲ್ಲಿ ಸುನಕ್ ಅವರ ಹೆಚ್ಚುಗಾರಿಕೆಗೆ ಇಲ್ಲ. ಇಂತಹ ಬದಲಾವಣೆಗಳು ಭಾರತದಲ್ಲಿ ಯಾಕೆ ಸಾಧ್ಯವಾಗಲಿಲ್ಲ ಎನ್ನುವುದಷ್ಟೇ ನಮಗೆ ಮುಖ್ಯವಾಗಬೇಕು.
ಪ್ರಧಾನಿ ಮೋದಿಯವರು ಅಧಿಕಾರ ಸ್ವೀಕರಿಸಿದ ಬಳಿಕ ಹತ್ತು ಹಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರು. ಆದರೆ ಇದು ಭಾರತದ ಆರ್ಥಿಕತೆಯನ್ನು ಗಟ್ಟಿಗೊಳಿಸುವ ಬದಲು ಇನ್ನಷ್ಟು ದುರ್ಬಲಗೊಳಿಸುತ್ತಾ ಹೋಯಿತು. 'ನೋಟು ನಿಷೇಧ' ಪ್ರಧಾನಿ ಮೋದಿಯವರ ಅತಿ ದೊಡ್ಡ ಪ್ರಮಾದ. 'ಕಪ್ಪು ಹಣ ಬಹಿರಂಗವಾಗುತ್ತದೆ' ಎನ್ನುವ ದೂರದೃಷ್ಟಿಯನ್ನು ಇಟ್ಟುಕೊಂಡು ಪ್ರಧಾನಿ ಮೋದಿಯವರು 'ನೋಟು ನಿಷೇಧ'ವನ್ನು ಏಕಾಏಕಿ ಘೋಷಿಸಿದರು. ಕೋಟ್ಯಂತರ ಜನರು ಈ ಘೋಷಣೆಯಿಂದಾಗಿ ಬೀದಿಗೆ ಬಿದ್ದರು. ಇಡೀ ದೇಶವೇ ಬ್ಯಾಂಕುಗಳ ಮುಂದೆ ಸರದಿಯಲ್ಲಿ ನಿಂತಿತು. ನೋಟು ನಿಷೇಧದಿಂದಾಗಿ ನೂರಾರು ಕಾಮಗಾರಿಗಳು ತಟಸ್ಥವಾದವು. ನಗರಗಳಲ್ಲಿ ಕಾರ್ಮಿಕರು ನಿರುದ್ಯೋಗಿಗಳಾಗಿ ಮರಳಿ ಹಳ್ಳಿಗೆ ತೆರಳಬೇಕಾಯಿತು. ವ್ಯಾಪಾರ, ವಹಿವಾಟುಗಳು ಅಸ್ತವ್ಯಸ್ತವಾಯಿತು. ಅಂತಿಮವಾಗಿ ಪ್ರಧಾನಿಮಂತ್ರಿಯವರೇ ''ನನಗೆ 50 ದಿನ ಅವಕಾಶ ನೀಡಿ. ಆ ಬಳಿಕವೂ ಸರಿಯಾಗದಿದ್ದರೆ ನನ್ನನ್ನು ಕೊಂದು ಬಿಡಿ'' ಎಂಬಂತಹ ಹೇಳಿಕೆಯನ್ನು ನೀಡಿದರು. ಈ ಹೇಳಿಕೆ ನೀಡಿ ಹಲವು ವರ್ಷಗಳು ಉರುಳಿವೆಯಾದರೂ, 'ಎಷ್ಟು ಕಪ್ಪು ಹಣ ಮರಳಿತು' ಎನ್ನುವುದರ ಬಗ್ಗೆ ದೇಶಕ್ಕೆ ಇನ್ನೂ ಮಾಹಿತಿ ದೊರಕಿಲ್ಲ. ನೋಟು ನಿಷೇಧದಿಂದ ಈ ದೇಶಕ್ಕಾದ ಲಾಭವೇನು ಎನ್ನುವುದನ್ನು ಪ್ರಧಾನಿ ಮೋದಿಯವರಿಗೆ ವಿವರಿಸಲಾಗಲಿಲ್ಲ. ಆದರೆ ಅದರಿಂದಾದ ನಷ್ಟಗಳೇನು ಎನ್ನುವುದು ಮಾತ್ರ ಜಗಜ್ಜಾಹೀರಾಗಿದೆ.
ನೋಟು ನಿಷೇಧವನ್ನು 'ಬಹುದೊಡ್ಡ ಪ್ರಮಾದ' ಎಂದು ಹಲವು ಅಂತರ್‌ರಾಷ್ಟ್ರೀಯ ಆರ್ಥಿಕ ತಜ್ಞರು ಬಣ್ಣಿಸಿದ್ದಾರೆ. ನೋಟು ನಿಷೇಧದಿಂದ ಭಾರತ ಆರ್ಥಿಕವಾಗಿ ಹಲವು ವರ್ಷ ಹಿಂದೆ ಚಲಿಸಿತು. ಇದರ ನೈತಿಕ ಹೊಣೆ ಹೊತ್ತು ಒಬ್ಬನೇ ಒಬ್ಬ ಕೇಂದ್ರ ಸರಕಾರದ ಸಚಿವ ರಾಜೀನಾಮೆ ನೀಡಲಿಲ್ಲ. ಈ ದೇಶದ ಭವಿಷ್ಯದ ಮೇಲೆ ಕಾಳಜಿಯಿರುವ ಜನರು ಒಂದಾಗಿ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಬೇಕಾಗಿತ್ತು. ಆದರೆ ಹಿಂದುತ್ವ, ಕೋಮುದ್ವೇಷದ ಮರೆಯಲ್ಲಿ ಪ್ರಧಾನಿಯ ವೈಫಲ್ಯ ಮುಚ್ಚಿ ಹೋಯಿತು. ದೇಶದ ಹಿತಾಸಕ್ತಿಯ ಮುಂದೆ ಉಳಿದೆಲ್ಲವುಗಳನ್ನು ಬದಿಗಿಟ್ಟ ಬ್ರಿಟನ್ ಜನರೆಲ್ಲಿ? ದ್ವೇಷ, ಧರ್ಮಕಾರಣಕ್ಕಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ರಾಜಕಾರಣಿಗಳನ್ನು ಸಹಿಸುತ್ತಾ ಕೂತಿರುವ ಭಾರತವೆಲ್ಲಿ? ಬ್ರಿಟನ್‌ನ ಬೆಳವಣಿಗೆಗಳನ್ನು ಭಾರತ ಯಾವ ನೈತಿಕ ಆಧಾರದಲ್ಲಿ ಸಂಭ್ರಮಿಸಬೇಕು?.
ಯಾವ ರೀತಿಯಲ್ಲೂ ಭಾರತದೊಂದಿಗೆ ಸಂಬಂಧವಿರದ, 1930ರಲ್ಲಿ ಭಾರತವನ್ನು ತೊರೆದು ವಿದೇಶದಲ್ಲಿ ವಾಸ ಹೂಡಿದ ಕುಟುಂಬವೊಂದರಿಂದ ಬಂದ ಸುನಕ್‌ರನ್ನು 'ಭಾರತೀಯ ಸಂಜಾತ' ಎಂದು ಸಂಭ್ರಮಿಸುವ ಜನರು ತಮ್ಮ ಸಂಭ್ರಮವನ್ನು ಉಜ್ಜಿ ನೋಡಿಕೊಳ್ಳಬೇಕಾಗಿದೆ. ರಾಜೀವ್‌ಗಾಂಧಿಯವರನ್ನು ವರಿಸಿ, ಇಟಲಿಯಿಂದ ಭಾರತಕ್ಕೆ ಕಾಲಿಟ್ಟು ಈ ನೆಲದ ಸೊಸೆಯಾಗಿ, ಬಳಿಕ ಮಗಳಾಗಿ ಬಾಳಿ ಬದುಕಿಕೊಂಡು ಬಂದ ಸೋನಿಯಾಗಾಂಧಿ ಪ್ರಧಾನಿಯಾಗುವುದರ ಬಗ್ಗೆ ಇವರ ನಿಲುವೇನು ? ಎಂದು ಪ್ರಶ್ನಿಸಿದಾಗ ಈ ಸಂಭ್ರಮದ ಬಣ್ಣ ಕರಗತೊಡಗುತ್ತದೆ. ದೇಶಕ್ಕಾಗಿ ತನ್ನ ಪತಿಯನ್ನು ಬಲಿಕೊಟ್ಟ ಬಳಿಕವೂ ದೇಶದ ಹಿತಾಸಕ್ತಿಗೆ ಬದ್ಧರಾಗಿ, ಯುಪಿಎ ಅಧಿಕಾರದಲ್ಲಿರುವಾಗ ಈ ದೇಶದ ಬಡವರ್ಗದ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಕಾರಣರಾಗಿರುವ ಸೋನಿಯಾ ಗಾಂಧಿಯ ಬಗ್ಗೆ ಯಾಕೆ ಇವರ ಮನಸ್ಸು ಮಿಡಿಯುವುದಿಲ್ಲ? ಸೋನಿಯಾಗಾಂಧಿಯ ಕುರಿತಂತೆ ಒಂದು ಗುಂಪು ಭಾರತದಲ್ಲಿ ವರ್ತಿಸಿದಂತೆಯೇ, ಸುನಕ್ ಕುರಿತಂತೆ ಬ್ರಿಟನ್‌ನ ಜನರು ವರ್ತಿಸಿದ್ದರೆ ಅವರು ಪ್ರಧಾನಿಯಾಗುವುದು ಬಿಡಿ, ಅಲ್ಲಿನ ಸಚಿವರಾಗುವುದಕ್ಕಾದರೂ ಸಾಧ್ಯವಿತ್ತೇ? ಧರ್ಮಾಂಧತೆ, ಜನಾಂಗೀಯ ದ್ವೇಷಗಳನ್ನು ಮೀರಿ ತಮ್ಮ ದೇಶದ ಬಗ್ಗೆ ಹೊಂದಿರುವ ಅವರ ಕಾಳಜಿಯೇ ಆ ದೇಶ ಹಲವು ಬಿಕ್ಕಟ್ಟುಗಳ ನಡುವೆಯೇ ಒಂದಿಷ್ಟು ಆಶಾವಾದಗಳನ್ನು ಉಳಿಸಿಕೊಂಡಿದೆ. ಧರ್ಮ, ಜಾತಿ, ಕೋಮು ದ್ವೇಷಗಳನ್ನು ಬಿತ್ತಿ ಬೆಳೆದು, ಈ ದೇಶದ ಹಸಿವಿನ ಸೂಚ್ಯಂಕವನ್ನು ನೇಪಾಳ, ಪಾಕಿಸ್ತಾನಕ್ಕಿಂತಲೂ ಕೆಳಗೆ ತಳ್ಳಿದ ರಾಜಕಾರಣಿಗಳನ್ನು ಸಹಿಸುತ್ತಿರುವ ಭಾರತಕ್ಕೆ ಬ್ರಿಟನ್‌ನ ಬೆಳವಣಿಗೆಗಳಿಂದ ಕಲಿಯುವುದು ಬಹಳಷ್ಟಿದೆ.