ಆದಿತ್ಯನಾಥ್ ವಿರುದ್ಧ ದ್ವೇಷಭಾಷಣ: ಎಸ್ಪಿ ಶಾಸಕ ಆಝಂ ಖಾನ್ ಗೆ 3 ವರ್ಷ ಜೈಲು, ದಂಡ ವಿಧಿಸಿದ ನ್ಯಾಯಾಲಯ
ಲಕ್ನೋ: ದ್ವೇಷ ಭಾಷಣದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ (Samajwadi Party) ಶಾಸಕ ಆಝಂ ಖಾನ್ ಗೆ (Azam Khan) ಉತ್ತರ ಪ್ರದೇಶದ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 2,000 ರೂಪಾಯಿ ದಂಡ ವಿಧಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಪ್ರಕರಣವು 2019 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ (Uttar Pradesh CM Adityanath) ವಿರುದ್ಧ ಖಾನ್ ಮಾಡಿದ ಹೇಳಿಕೆಗಳಿಗೆ ಸಂಬಂಧಿಸಿದೆ. ಅಝಂ ಖಾನ್, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಆಕಾಶ್ ಸಕ್ಸೇನಾ ಎಂಬ ವಕೀಲ ದೂರು ದಾಖಲಿಸಿದ್ದರು.
"ನನ್ನ ದೂರಿನ ಮೇರೆಗೆ, ಚುನಾವಣಾಧಿಕಾರಿಯು ಭಾಷಣದ ವೀಡಿಯೊ ತುಣುಕನ್ನು ಪರಿಶೀಲಿಸಿದರು, ಅವರು ಖಾನ್ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಿದರು" ಎಂದು ಸಕ್ಸೇನಾ ಹೇಳಿದ್ದಾರೆ.
ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505(1) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ), 1951 ರ ಜನರ ಪ್ರತಿನಿಧಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರತ್ಯೇಕ ಪ್ರಕರಣದಲ್ಲಿ, ಖಾನ್ ಅವರು ಮಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ 13.84 ಹೆಕ್ಟೇರ್ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಂಪುರ ಶಾಸಕರಾಗಿರುವ ಖಾನ್ ಅವರು ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಅವರು ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದರು.
ಇದನ್ನೂ ಓದಿ: ಕರೆನ್ಸಿ ನೋಟಿನಲ್ಲಿ ಶಿವಾಜಿ ಫೋಟೊ ಎಡಿಟ್ ಮಾಡಿ, ʼಯೇ ಪರ್ಫೆಕ್ಟ್ ಹೈʼ ಎಂದು ಹೇಳಿದ ಬಿಜೆಪಿ ಶಾಸಕ