ಅಪ್ರಾಪ್ತ ವಯಸ್ಕ ಮುಸ್ಲಿಂ ಬಾಲಕಿಯ ವಿವಾಹ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್

Update: 2022-10-31 16:53 GMT

 ಬೆಂಗಳೂರು,ಅ.31: ಗರ್ಭವತಿಯಾಗಿರುವ ಅಪ್ರಾಪ್ತ ವಯಸ್ಕ ಮುಸ್ಲಿಂ ಬಾಲಕಿಯೋರ್ವಳ ವಿವಾಹವನ್ನು ರದ್ದುಗೊಳಿಸಿರುವ ಕರ್ನಾಟಕ ಉಚ್ಚ ನ್ಯಾಯಾಲಯ(Karnataka High Court)ವು,ಧರ್ಮದ ವೈಯಕ್ತಿಕ ಕಾನೂನು ಪೊಕ್ಸೊ ಕಾಯ್ದೆ(The POCSO Act)ಯ ನಿಬಂಧನೆಗಳನ್ನು ಉಲ್ಲಂಘಿಸುವುದರಿಂದ ಅದು ಅಮಾನ್ಯವಾಗಿದೆ ಎಂದು ಹೇಳಿದೆ.

ಮುಸ್ಲಿಂ ಬಾಲಕಿಯನ್ನು ವಿವಾಹವಾಗಿರುವ ವ್ಯಕ್ತಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಉಚ್ಚ ನ್ಯಾಯಾಲಯವು, ಬಾಲಕಿಗೆ 15 ವರ್ಷ ವಯಸ್ಸಾದ ಬಳಿಕ ವೈಯಕ್ತಿಕ ಕಾನೂನಿನಡಿ ಆಕೆಯ ವಿವಾಹವು 2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂಬ ವಾದವನ್ನು ತಿರಸ್ಕರಿಸಿತು.

ಪೊಕ್ಸೊ ಕಾಯ್ದೆಯು ವಿಶೇಷ ಕಾಯ್ದೆಯಾಗಿದ್ದು,ಅದರೆದುರು ವೈಯಕ್ತಿಕ ಕಾನೂನುಗಳು ಗೌಣವಾಗುತ್ತವೆ ಎಂದು ನ್ಯಾ.ರಾಜೇಂದ್ರ(Justice Rajendra) ಬಾದಾಮಿಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪೊಕ್ಸೊ ಕಾಯ್ದೆಯಡಿ ಮಹಿಳೆಯು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಾನೂನುಬದ್ಧ ವಯಸ್ಸು 18 ವರ್ಷವಾಗಿದೆ.ಆದಾಗ್ಯೂ ನ್ಯಾಯಾಲಯವು ವ್ಯಕ್ತಿಗೆ ಜಾಮೀನು ಮಂಜೂರು ಮಾಡಿತು.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ 17ರ ಹರೆಯದ ಬಾಲಕಿಯು ಗರ್ಭವತಿಯಾಗಿದ್ದು ಪತ್ತೆಯಾದ ಬಳಿಕ ಪ್ರಕರಣವು ಬೆಳಕಿಗೆ ಬಂದಿತ್ತು.

ಬಾಲಕಿಯು ಅಪ್ರಾಪ್ತ ವಯಸ್ಕಳಾಗಿದ್ದರಿಂದ ವೈದ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು ಮತ್ತು ಆಕೆಯ ಪತಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನ್ನ ವಿವಾಹಕ್ಕೆ ಬಾಲಕಿಯು ಯಾವುದೇ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸಾಕ್ಷಾಧಾರವಿಲ್ಲ,ಹೀಗಾಗಿ ವಿವಾಹಕ್ಕೆ ಆಕೆಯ ಸಮ್ಮತಿಯಿತ್ತು ಎಂದು ನ್ಯಾಯಾಧೀಶರು ಬೆಟ್ಟು ಮಾಡಿದರು.

ಮುಹಮ್ಮದೀಯ ಕಾನೂನಿನಡಿ ಪ್ರೌಢಾವಸ್ಥೆಯು ವಿವಾಹಯೋಗ್ಯ ಎಂದು ಪರಿಗಣನೆಯಾಗಿದೆ ಮತ್ತು ಸಾಮಾನ್ಯ ಪ್ರೌಢ ವಯಸ್ಸನ್ನು 15 ವರ್ಷ ಎಂದು ಪರಿಗಣಿಸಲಾಗಿದೆ ಎಂದು ವ್ಯಕ್ತಿಯು ತನ್ನ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದ.

ವೈಯಕ್ತಿಕ ಕಾನೂನಿನಡಿ ವಿವಾಹ ಸಂದರ್ಭದಲ್ಲಿ ಬಾಲಕಿಯು ಪ್ರೌಢಾವಸ್ಥೆಯನ್ನು ತಲುಪಿದ್ದಳು,ಹೀಗಾಗಿ ಪೊಕ್ಸೊ ಕಾಯ್ದೆಯಡಿ ಯಾವುದೇ ಅಪರಾಧ ನಡೆದಿಲ್ಲ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.

ಅರ್ಜಿದಾರರು ಸಂತ್ರಸ್ತೆಯ ಪತಿಯಾಗಿದ್ದಾರೆ ಮತ್ತು ಅರ್ಜಿದಾರರು ವಿಚಾರಣೆಗೆ ಮುನ್ನ ನ್ಯಾಯಾಲಯದ ಮುಂದೆ ಸಂಬಂಧಿತ ದಾಖಲೆಗಳನ್ನು ಖುದ್ದಾಗಿ ಸಲ್ಲಿಸಿರುವುದರಿಂದ ಈ ಎಲ್ಲ ಅಂಶಗಳು ಮತ್ತು ಸಂದರ್ಭಗಳನ್ನು ಗಮನಿಸಿದರೆ ವಿವಾಹಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ವಿವಾದವಿಲ್ಲ.

ನ್ಯಾ.ರಾಜೇಂದ್ರ ಬಾದಾಮಿಕರ,  ಹೈಕೋರ್ಟ್ ನ್ಯಾಯಾಧೀಶ

Similar News