ರಕ್ತದ ಮಡುವಿನಲ್ಲಿ ಬಿದ್ದಿರುವ ರೋಗಿಯ ಸುತ್ತಲೂ ಓಡಾಡುತ್ತಿರುವ ಬೀದಿ ನಾಯಿ: ಉ.ಪ್ರ. ಆಸ್ಪತ್ರೆಯ ಆಘಾತಕಾರಿ ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್

Update: 2022-11-03 12:12 GMT

ಕುಶಿನಗರ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಕುಶಿನಗರದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ತುರ್ತು ಚಿಕಿತ್ಸಾ ವಿಭಾಗದ ನೆಲದ ಮೇಲೆ ರಕ್ತ ಮಡುವಿನಲ್ಲಿ ಬಿದ್ದುಕೊಂಡಿರುವ, ಬೀದಿ ನಾಯಿಯೊಂದು ರೋಗಿಯ ಸುತ್ತಮುತ್ತ ತಿರುಗಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಪೂರ್ವ ಉತ್ತರ ಪ್ರದೇಶ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸೆರೆಯಾಗಿರುವ ವೀಡಿಯೊದಲ್ಲಿ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯ ಸುತ್ತ ನೆಲದ ಮೇಲೆ ರಕ್ತ ಚೆಲ್ಲಿರುವುದು ಕಂಡುಬಂದಿದೆ.  ವ್ಯಕ್ತಿಯ ಮುಖ ಹಾಗೂ  ತಲೆಯಲ್ಲಿ ರಕ್ತ ಸೋರುತ್ತಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಬಳಿ ಬೀದಿ ನಾಯಿಯೂ ಓಡಾಡುತ್ತಿರುವುದು ಕಂಡುಬಂದಿದೆ. 28 ಸೆಕೆಂಡುಗಳ ವೀಡಿಯೊದಲ್ಲಿ ಖಾಲಿ ಹಾಸಿಗೆಗಳನ್ನು ಹೊಂದಿರುವ ವಾರ್ಡ್ ಹಾಗೂ  ಸುತ್ತಲೂ ವೈದ್ಯರು ಅಥವಾ ನರ್ಸ್ ಇಲ್ಲದಿರುವುದನ್ನು ತೋರಿಸುತ್ತಿದೆ.

ಆಸ್ಪತ್ರೆಯ ಉಸ್ತುವಾರಿ ವೈದ್ಯ ಎಸ್. ಕೆ. ವರ್ಮಾ ಪ್ರಕಾರ, ವ್ಯಕ್ತಿ ಅಪಘಾತಕ್ಕೀಡಾಗಿದ್ದು, ತಲೆ ಹಾಗೂ  ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಮದ್ಯ ಸೇವಿಸಿರುವ ವ್ಯಕ್ತಿ ಚಿಕಿತ್ಸೆ ವೇಳೆ ಹಾಸಿಗೆಯಿಂದ ಹಲವು ಬಾರಿ ಕೆಳಗೆ ಬಿದ್ದಿದ್ದಾನೆ ಎಂದು ಹೇಳಿದ್ದಾರೆ.

ಡ್ಯೂಟಿಯಲ್ಲಿರುವ ವೈದ್ಯರು ಹಾಗೂ  ವಾರ್ಡ್ ಬಾಯ್ ಬೇರೆ ವಾರ್ಡ್‌ನಲ್ಲಿ ತುರ್ತು ಚಿಕಿತ್ಸೆಗೆ ಹೋಗಿದ್ದಾಗ ವೀಡಿಯೊ ಚಿತ್ರೀಕರಣಗೊಂಡಿದೆ. ನಂತರ ಗಂಭೀರ ಗಾಯಗೊಂಡಿರುವ ವ್ಯಕ್ತಿಯನ್ನು ಗೋರಖ್‌ಪುರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಡಾ. ವರ್ಮಾ ತಿಳಿಸಿದ್ದಾರೆ.

Similar News