ಚೈನೀಸ್ ಲೋನ್ ಆ್ಯಪ್ ಎಂಬ ಅಂತರ್‌ರಾಷ್ಟ್ರೀಯ ವಂಚನೆಯ ಜಾಲ
ನೀವು ಮೊಬೈಲ್ ಲೋನ್ ಆ್ಯಪ್‌ಗಳಲ್ಲಿ ಸಾಲ ಪಡೆಯುತ್ತಿದ್ದೀರಾ? ಹಾಗಾದರೆ ಹತ್ತು ಬಾರಿ ಯೋಚಿಸಬೇಕು. ನಿಮ್ಮನ್ನು ಬ್ಲಾಕ್‌ಮೇಲ್ ಮಾಡಬಹುದು, ಸಮಾಜದಲ್ಲಿ ನಿಮ್ಮ ಮಾನ ಹರಾಜು ಹಾಕಬಹುದು, ನಿಮ್ಮ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ದಮ್ಕಿ ಹಾಕಬಹುದು. ಇದು ವಿಚಿತ್ರವಾದರೂ, ಇಂದು ಹಲವಾರು ಜನರ ಜೀವನದಲ್ಲಿ ನಡೆಯುತ್ತಿರುವ ಕಹಿ ಸತ್ಯವಾಗಿದೆ.
ಜನರು ಕೋವಿಡ್ - 19 ನಂತರದಲ್ಲಿ ಉದ್ಯೋಗವನ್ನು ಕಳೆದುಕೊಂಡು ಆರ್ಥಿಕವಾಗಿ ಕಂಗೆಟ್ಟಿದ್ದ ಕಾಲ. ಇದರ ಲಾಭ ಪಡೆದು ಮೊಬೈಲ್ ಲೋನ್ ಆ್ಯಪ್‌ಗಳು ನಮ್ಮ ನಡುವೆ ಅದರ ಬೇರುಗಳನ್ನು ಗಟ್ಟಿಗೊಳಿಸಿಕೊಂಡವು. ಹಲವು ಲೋನ್ ಆ್ಯಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಇಲ್ಲಿ ನೀವು ಸಾಲವನ್ನು ತೆಗೆಯುತ್ತೀರಾ, ಸಾಲವನ್ನು ಮರುಪಾವತಿ ಕೂಡ ಮಾಡುತ್ತೀರಾ, ಆದರೆ ಅವರು ನಿಮ್ಮಿಂದ ಹೆಚ್ಚಿನ ಹಣವನ್ನು ಕೇಳಲು ಪ್ರಾರಂಭಿಸುತ್ತಾರೆ. ಕೆಲ ತಿಂಗಳ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ.
ಮೂರು ತಿಂಗಳ ಹಿಂದೆ ದಿಲ್ಲಿ ಪೊಲೀಸರು 500 ಕೋಟಿ ರೂಪಾಯಿಯನ್ನು ಹವಾಲಾದ ಮೂಲಕ ಚೀನಾಗೆ ಕಳುಹಿಸಿದ ಕಾರಣಕ್ಕೆ 22 ಜನರನ್ನು ಬಂಧಿಸಿದ್ದರು. ಈ ಎಲ್ಲಾ ಸ್ಕಾಮ್‌ನ ಮಾಸ್ಟರ್ ಮೈಂಡ್ ಭಾರತೀಯ ಮೂಲದ ಅನಿಲ್ ಕುಮಾರ್ ಎಂಬ ವ್ಯಕ್ತಿಯಾಗಿದ್ದ. ಈತ ದಂಧೆಯನ್ನು ನಡೆಸಲು ತನ್ನ ಕೈಕೆಳಗೆ 150 ಜನರನ್ನು ನೇಮಕ ಮಾಡಿಕೊಂಡಿದ್ದ. ಚೀನಾದಲ್ಲಿ ಇದ್ದುಕೊಂಡೇ ಈ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ.ಇದು ಒಂದು ಘಟನೆ ಮಾತ್ರವಲ್ಲದೆ ಕಳೆದ ಕೆಲವು ತಿಂಗಳುಗಳಿಂದ ಈ.ಡಿ. ಮತ್ತು ಪೊಲೀಸರು ಲೋನ್ ಆ್ಯಪ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಹಲವರನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಅವರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಒಂದು ಸಣ್ಣ ಮಟ್ಟದ ಕಳ್ಳತನದ ಪ್ರಕರಣ ಆಗಿರದೆ, ಅಂತರ್‌ರಾಷ್ಟ್ರೀಯ ಮಟ್ಟದ ವಂಚನೆಯ ಜಾಲ ಎಂದು ಬಹಿರಂಗವಾಗಿದೆ.
ನಿಮ್ಮ ವೈಯಕ್ತಿಕ ಡಾಟಾಗಳು ಲೀಕ್:
ಈ ಆ್ಯಪ್‌ಗಳನ್ನು ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿ ಲಾಗಿನ್ ಆಗುವ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ. ಮುಂದಕ್ಕೆ ಈ ಆ್ಯಪ್ ನಿಮ್ಮಲ್ಲಿ ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಫೋಟೊ ಗ್ಯಾಲರಿಗಳ ಬಳಕೆಗೆ ಪರ್ಮಿಶನ್ ಕೇಳುತ್ತದೆ. ಲೋನ್ ಪಡೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್‌ಗಳ ಮಾಹಿತಿ ಹಾಕಬೇಕಾಗುತ್ತದೆ.
ನಂತರ ಕಂಪೆನಿ ನಿಮಗೆ ಸುಲಭವಾಗಿ ಲೋನ್ ನೀಡುತ್ತದೆ. ಆದರೆ ಒಂದು ವಾರದ ನಂತರ ನಿಮಗೆ ಕರೆ ಬರಲು ಪ್ರಾರಂಭವಾಗುತ್ತದೆ. ಲೋನ್ ಹಣದೊಂದಿಗೆ ಹೆಚ್ಚಿನ ಹಣವನ್ನು ನೀಡಲು ನಿರಾಕರಿಸಿದಾಗ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಈ ಕೆಲಸಕ್ಕಾಗಿಯೇ ಕಾಲ್ ಸೆಂಟರ್‌ನಲ್ಲಿ ಜನರನ್ನು ಆಯ್ಕೆ ಮಾಡಲಾಗಿರುತ್ತದೆ.
ನಕಲಿ ಲೋನ್ ಆ್ಯಪ್ ಪತ್ತೆ ಹಚ್ಚುವುದು ಹೇಗೆ?
ಜನರನ್ನು ಲೂಟಿ ಮಾಡಲು ಬೇಕಾಗಿಯೇ ಇಲ್ಲಿ ನಕಲಿ ಕಂಪೆನಿಗಳನ್ನು ಪ್ರಾರಂಭಿಸುತ್ತಾರೆ. ಕಂಪೆನಿಯಲ್ಲಿ ಡಮ್ಮಿ ಡೈರೆಕ್ಟರ್‌ಗಳಿರುತ್ತಾರೆ. ಕಂಪೆನಿಯು ಸೀಲ್, ಡಿಜಿಟಲ್ ಸಿಗ್ನೇಚರ್, ಕಾಲ್ ಸೆಂಟರ್‌ಗಳನ್ನು ಹೊಂದಿರುತ್ತದೆ. ಇದರ ನಡುವೆ ನಕಲಿ ಚೈನೀಸ್ ಲೋನ್ ಆ್ಯಪ್‌ಗಳನ್ನು ಪತ್ತೆ ಹಚ್ಚಬೇಕಾಗುತ್ತದೆ. ದೇಶದಲ್ಲಿರುವ ಪ್ರತಿಯೊಂದು ಡಿಜಿಟಲ್ ಲೋನ್ ಆ್ಯಪ್‌ಗಳು ಆರ್‌ಬಿಐಯ ಜೊತೆ ಕಡ್ಡಾಯವಾಗಿ ರಿಜಿಸ್ಟರ್ ಆಗಿರಬೇಕಾಗುತ್ತದೆ.
ನೀವು ಲೋನ್ ತೆಗೆಯ ಬಯಸುವ ಕಂಪೆನಿಯನ್ನು ಆರ್‌ಬಿಐ ವೆಬ್‌ಸೈಟ್‌ಗೆ ಹೋಗಿ ರಿಜಿಸ್ಟರ್ ಆಗಿದೆಯೇ? ಅಥವಾ ಇಲ್ಲವೇ? ಎಂಬುದಾಗಿ ಪರಿಶೀಲಿಸಬೇಕಾಗುತ್ತದೆ. ಇದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ. ಇಂದು ಗೂಗಲ್ ಪ್ಲೇ ಸ್ಟೋರ್ ಗಳಲ್ಲಿ ಇಂತಹ ಹಲವು ಚೈನೀಸ್ ಆ್ಯಪ್‌ಗಳನ್ನು ಕಾಣಬಹುದಾಗಿದೆ. ಇದರ ಮೂಲಕ ಸಾವಿರಾರು ಕೋಟಿ ರೂಪಾಯಿಗಳು ಭಾರತದಿಂದ ಇತರ ದೇಶಗಳಿಗೆ ಹವಾಲಾದ ಮೂಲಕ ಹೋಗುತ್ತಿದೆ. ಇದು ಕೇವಲ ಜನರ ಮೇಲೆ ಮಾತ್ರವಲ್ಲದೆ, ದೇಶದ ಆರ್ಥಿಕತೆಯ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಈ ವಂಚನೆಯು ಸಾವಿರಾರು ಜನರ ಜೀವನವನ್ನು ಛಿದ್ರಗೊಳಿಸುತ್ತಿದ್ದು, ಸರಕಾರ, ಆರ್‌ಬಿಐ ಇಂತಹ ಆ್ಯಪ್‌ಗಳ ಮೇಲೆ ನಿಗಾ ಇಡಬೇಕಿದೆ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ.