ಚೆನ್ನೈ: ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡುವ ಅಭ್ಯಾಸದಿಂದ ಬೇಸತ್ತು ಪತ್ನಿಯನ್ನು ಕೊಂದ ಪತಿ !

Update: 2022-11-08 08:19 GMT

ಚೆನ್ನೈ: 38ರ ಹರೆಯದ ವ್ಯಕ್ತಿಯೊಬ್ಬ ರವಿವಾರ ರಾತ್ರಿ ತನ್ನ ಪತ್ನಿಯನ್ನು ಆಕೆಯ ಶಾಲಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಪತ್ನಿಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೆಚ್ಚು ಸಮಯ ಕಳೆಯುವುದರ ಬಗ್ಗೆ ಆತ ಕೋಪಗೊಂಡಿದ್ದ ಎನ್ನಲಾಗಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ದಿಂಡುಗಲ್ ನ 38 ವರ್ಷದ ಅಮೃತಲಿಂಗಂ ಎಂಬಾತ  ಚಿತ್ರಾಳನ್ನು ಮದುವೆಯಾಗಿ ತಿರುಪುರದ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದ. ಆತ ತೆನ್ನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ.

ಅಮೃತಲಿಂಗಂ ಪತ್ನಿ ಚಿತ್ರಾ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಟಿಕ್ ಟಾಕ್ ಹಾಗೂ  ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಗಳನ್ನು ಪೋಸ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದಳು. ರೀಲುಗಳನ್ನು ಪೋಸ್ಟ್ ಮಾಡುವ ಅಭ್ಯಾಸದ ಬಗ್ಗೆ ಅಮೃತಲಿಂಗಂ ಮಡದಿ ಚಿತ್ರಾ ಳೊಂದಿಗೆ ಹಲವಾರು ಬಾರಿ ಜಗಳವಾಡಿದ್ದ ಹಾಗೂ  ಆಕೆ  ಹೆಚ್ಚು ಸಮಯ ಅದರಲ್ಲೇ ಕಳೆಯುತ್ತಿದ್ದಾಳೆ ಎಂದು ದೂರಿದ್ದ.

ಹೆಚ್ಚಿನ ಅನುಯಾಯಿಗಳು ಹಾಗೂ  ಸಂಪರ್ಕಗಳನ್ನು ಪಡೆದ ನಂತರ, ಚಿತ್ರಾ ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದಳು. ಎರಡು ತಿಂಗಳ ಹಿಂದೆ ಚೆನ್ನೈಗೆ ತೆರಳಿದ್ದಳು. ಆಕೆ ತನ್ನ  Instagram ಖಾತೆಯಲ್ಲಿ 33.3 ಸಾವಿರ ಅನುಯಾಯಿಗಳನ್ನು ಹೊಂದಿದ್ದಳು. ಚಿತ್ರಾ ಮತ್ತೆ ಚೆನ್ನೈ ಹೋಗುವ ವಿಚಾರದಲ್ಲಿ ಜಗಳ ಶುರುವಾಗಿತ್ತು.

ಚಿತ್ರಾ ರೀಲ್ ಗಳನ್ನು ಅಪ್ಲೋಡ್ ಮಾಡುವ ಅಭ್ಯಾಸ ಹಾಗೂ ಸಿನಿಮಾಗಳಲ್ಲಿ ನಟಿಸಲು ಬಯಸಿದ್ದಕ್ಕಾಗಿ ರವಿವಾರ ರಾತ್ರಿ ಜಗಳ ನಡೆದಿತ್ತು. ಜಗಳವು  ವಿಕೋಪಕ್ಕೆ ತಿರುಗಿತು ಹಾಗೂ  ಅಮೃತಲಿಂಗಂ, ಪತ್ನಿ  ಚಿತ್ರಾಳನ್ನು ಆಕೆಯ ಶಾಲನ್ನು ಬಳಸಿ ಉಸಿರುಗಟ್ಟಿಸಿದ್ದ. ಚಿತ್ರಾ  ಮೂರ್ಛೆ ಹೋದಾಗ ಅಮೃತಲಿಂಗಂ ಗಾಬರಿಗೊಂಡು ಮನೆಯಿಂದ ಹೊರಟು ಹೋಗಿದ್ದ. ಚಿತ್ರಾಗೆ ಹೊಡೆದಿರುವುದಾಗಿ ತನ್ನ ಮಗಳಿಗೆ ತಿಳಿಸಿದ್ದ ಎಂದು ತಿಳಿದುಬಂದಿದೆ.

ಚಿತ್ರಾಳ ಮಗಳು ಪೊಲೀಸರಿಗೆ ತಾಯಿ ಹತ್ಯೆಯ ಕುರಿತು ಮಾಹಿತಿ ನೀಡಿದ್ದು, ಆರೋಪಿ ಅಮೃತಲಿಂಗಂನನ್ನು ಪೆರುಮಾನಲ್ಲೂರಿನಲ್ಲಿ ಪೊಲೀಸರು ಬಂಧಿಸಿದ್ದರು

Similar News