ಡಿಸೆಂಬರ್ 2023ರೊಳಗೆ ಅಯೋಧ್ಯೆ ಮಸೀದಿಯ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆ: ಟ್ರಸ್ಟ್

Update: 2022-11-13 14:28 GMT

ಲಕ್ನೋ,ನ.13: ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯವು ಮುಂದಿನ ವರ್ಷದ ಡಿಸೆಂಬರ್ ನೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ನಿರ್ಮಾಣ ಕಾರ್ಯದ ಹೊಣೆಯನ್ನು ಹೊತ್ತುಕೊಂಡಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಟ್ರಸ್ಟ್ ತಿಳಿಸಿದೆ. ‘ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಉದ್ದೇಶಿತ ಮಸೀದಿ, ಆಸ್ಪತ್ರೆ, ಸಮುದಾಯ ಪಾಕಶಾಲೆ,ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರದ ನಕ್ಷೆಗೆ ಈ ತಿಂಗಳಾಂತ್ಯದಲ್ಲಿ ಅನುಮೋದನೆ ದೊರೆಯಲಿದೆ ಎಂದು ನಾವು ಆಶಿಸಿದ್ದೇವೆ. ಅನುಮೋದನೆ ದೊರೆತ ತಕ್ಷಣ ಮಸೀದಿ ನಿರ್ಮಾಣವನ್ನು ಆರಂಭಿಸುತ್ತೇವೆ ’ ಎಂದು ಟ್ರಸ್ಟ್ ಕಾರ್ಯದರ್ಶಿ ಅಥಾರ್ ಹುಸೇನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಧನ್ನಿಪುರ ಅಯೋಧ್ಯೆ ಮಸೀದಿಯ ನಿರ್ಮಾಣ ಕಾರ್ಯ 2023 ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಐದು ಎಕರೆ ವಿಸ್ತೀರ್ಣದ ವೌಲವಿ ಅಹಮದುಲ್ಲಾ ಶಾ ಸಂಕೀರ್ಣದಲ್ಲಿ ಉಳಿದ ಕಟ್ಟಡಗಳು ನಂತರ ತಲೆಯೆತ್ತಲಿವೆ ಎಂದರು.ಎಲ್ಲ ಪ್ರಸ್ತಾವಿತ ಕಟ್ಟಡಗಳ ನಿರ್ಮಾಣ ಕಾರ್ಯಗಳನ್ನು ಟ್ರಸ್ಟ್ ಏಕಕಾಲದಲ್ಲಿ ಆರಂಭಿಸಲಿದೆ ಮತ್ತು ಮಸೀದಿ ಸಣ್ಣ ಗಾತ್ರದ್ದಾಗಿರುವುದರಿಂದ ಅದು ಮೊದಲು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಯಾವದೇ ಗಡುವನ್ನು ನಿಗದಿಗೊಳಿಸಿಲ್ಲವಾದರೂ ಒಂದು ವರ್ಷದೊಳಗೆ ಮಸೀದಿಯು ನಿರ್ಮಾಣಗೊಳ್ಳುವ ಭರವಸೆಯಿದೆ ಎಂದು ಹೇಳಿದ ಹುಸೇನ್,ಮಸೀದಿ ಮತ್ತು ಸಂಕೀರ್ಣದಲ್ಲಿಯ ಇತರ ಕಟ್ಟಡಗಳ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ಆಸ್ಪತ್ರೆಯು ಆರಂಭದಲ್ಲಿ 100 ಹಾಸಿಗೆಗಳನ್ನು ಹೊಂದಿರಲಿದ್ದು,ಬಳಿಕ 200 ಹಾಸಿಗೆಗಳಿಗೆ ಹೆಚ್ಚಿಸಲಾಗುವುದು,ಸಮುದಾಯ ಪಾಕಶಾಲೆಯು ಆರಂಭದಲ್ಲಿ ಪ್ರತಿನಿತ್ಯ 1,000 ಜನರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿರಲಿದ್ದು,ಅದನ್ನು ಬಳಿಕ 2,000 ಜನರಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ ಹುಸೇನ್,ಪ್ರದೇಶದ ಜನರಿಗೆ ಪ್ರಯೋಜನವಾಗುವಂತೆ ಇಂಡೋ-ಇಸ್ಲಾಮಿಕ್ ರೀಸರ್ಚ್ ಸೆಂಟರ್ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದರು.

ಸುಮಾರು ಒಂದು ತಿಂಗಳ ಹಿಂದೆ ಮಸೀದಿ ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕಾಗಿ ನಿರಾಕ್ಷೇಪಣಾ ಪ್ರಮಾಣಪತ್ರ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಪರಿಶೀಲನೆ ವೇಳೆ ಅಗ್ನಿಶಾಮಕ ಇಲಾಖೆಯು ಇಕ್ಕಟ್ಟಾದ ರಸ್ತೆಯ ಬಗ್ಗೆ ಆಕ್ಷೇಪವೆತ್ತಿತ್ತು ಮತ್ತು ಇದನ್ನು ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ತಕ್ಷಣ ಸ್ಪಂದಿಸಿದ ಅದು ರಸ್ತೆಯ ಅಗಲೀಕರಣಕ್ಕಾಗಿ ಹೆಚ್ಚುವರಿ ಭೂಮಿಯನ್ನು ಒದಗಿಸಲು ಕ್ರಮವನ್ನು ಕೈಗೊಂಡಿದೆ ಎಂದು ಹುಸೇನ್ ತಿಳಿಸಿದರು.

ಸರಕಾರವು ವಕ್ಫ್ ಮಂಡಳಿಗೆ ಹಸ್ತಾಂತರಿಸಿರುವ ಜಮೀನು ಕಂದಾಯ ದಾಖಲೆಗಳಲ್ಲಿ ಕೃಷಿ ಭೂಮಿಯೆಂದು ದಾಖಲಾಗಿದೆ. ಹೀಗಾಗಿ ಭೂ ಪರಿವರ್ತನೆಯಾಗದೆ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ. ಭೂ ಪರಿವರ್ತನೆಗಾಗಿ ಟ್ರಸ್ಟ್ ಈಗಾಗಲೇ ಅರ್ಜಿಯನ್ನು ಸಲ್ಲಿಸಿದೆ. 15 ದಿನಗಳಲ್ಲಿ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಹಾಗೂ ನಕ್ಷೆಯನ್ನು ಅನುಮೋದಿಸುವ ಭರವಸೆಯನ್ನು ಆಡಳಿತವು ನೀಡಿದೆ ಎಂದರು.

ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯಿಂದ ರಚಿಸಲ್ಪಟ್ಟಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಟ್ರಸ್ಟ್ ಆಸ್ಪತ್ರೆ,ಸಮುದಾಯ ಪಾಕಶಾಲೆ,ಗ್ರಂಥಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನೂ ನಿರ್ಮಿಸಲು ನಿರ್ಧರಿಸಿದೆ.ಅಯೋಧ್ಯೆ ವಿವಾದದಲ್ಲಿಯ ತನ್ನ ತೀರ್ಪಿನಲ್ಲಿ ಬಾಬ್ರಿ ಮಸೀದಿ ಇದ್ದ 2.77 ಎಕರೆ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ನಿರ್ದೇಶ ನೀಡಿತ್ತು.

ಪ್ರಧಾನಿ ನರೇಂದ್ರ ಮೋದಿಯವರು 2020 ಆಗಸ್ಟ್ ನಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ‘ಭೂಮಿ ಪೂಜೆ’ಯನ್ನು ನೆರವೇರಿಸಿದ್ದರು. ಮಂದಿರ ಟ್ರಸ್ಟ್ ಹೇಳಿರುವ ಪ್ರಕಾರ,2024 ಜನವರಿ ವೇಳೆಗೆ ಮಂದಿರವನ್ನು ಭಕ್ತರಿಗಾಗಿ ತೆರೆಯುವ ಸಾಧ್ಯತೆಯಿದೆ. ಮುಂದಿನ ಲೋಕಸಭಾ ಚುನಾವಣೆಯು 2024ರ ಪೂರ್ವಾರ್ಧದಲ್ಲಿ ನಡೆಯಲಿರುವುದರಿಂದ ಮಂದಿರ ಮತ್ತು ಮಸೀದಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಮಯ ಮಹತ್ವ ಪಡೆದುಕೊಂಡಿದೆ.

Similar News