ಆಶ್ರಯಧಾಮದಿಂದ 9 ಬಾಲಕಿಯರು ನಾಪತ್ತೆ ಪ್ರಕರಣ: ಕೇರಳ ಸರಕಾರಕ್ಕೆ ಎನ್ಎಚ್ಆರ್ ಸಿ ನೋಟಿಸ್

Update: 2022-11-16 15:42 GMT

ಕೊಟ್ಟಾಯಂ, ನ. 16: ಇಲ್ಲಿಗೆ ಸಮೀಪದ ಮಾಂಗಾನಂನ ಆಶ್ರಯ ಧಾಮದಿಂದ 9 ಬಾಲಕಿಯರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬುಧವಾರ ಕೇರಳ ಸರಕಾರ(Kerala Govt)ಕ್ಕೆ ನೋಟಿಸು ಜಾರಿ ಮಾಡಿದೆ. ನಾಪತ್ತೆಯಾಗಿದ್ದ ಬಾಲಕಿಯರನ್ನು ಕೆಲವು ಗಂಟೆಗಳ ಬಳಿಕ ಅವರ ಸಹವರ್ತಿಯೊಬ್ಬರ ಮನೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ, ಅವರು ಆಶ್ರಯ ಧಾಮಕ್ಕೆ ಹಿಂದಿರುಗಲು ನಿರಾಕರಿಸಿದ್ದರು.

ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಲೈಂಗಿಕ ದೌರ್ಜನ್ಯದ ದೂರುದಾರೆ ಬಾಲಕಿ ಸೇರಿದಂತೆ ನಾಪತ್ತೆಯಾದ 9 ಬಾಲಕಿಯರು ಸರಕಾರೇತರ ಸಂಸ್ಥೆ ಮಹಿಳಾ ಸಮಖ್ಯದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಕೊಟ್ಟಾಯಂನಲ್ಲಿ ಇತ್ತೀಚಿನ ತಿಂಗಳಲ್ಲಿ ವರದಿಯಾಗುತ್ತಿರುವ ಮೂರನೇ ಪ್ರಕರಣ ಇದಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು(National Human Rights)ಗಳ ಆಯೋಗ ತನ್ನ ನೋಟಿಸಿನಲ್ಲಿ ಹೇಳಿದೆ. ‌

‘‘ಸರಕಾರೇತರ ಸಂಸ್ಥೆ ಮಹಿಳಾ ಸಮಖ್ಯ ನಡೆಸುತ್ತಿರುವ ಆಶ್ರಯ ಧಾಮದಲ್ಲಿ ಮೇಲ್ವಿಚಾರಣೆ ಹಾಗೂ ಪರಿಣಾಮಕಾರಿ ನಿಗಾದ ಕೊರತೆ ಇದೆ ಎಂದು ಕಾಣುತ್ತದೆ’’ ಎಂದು ಆಯೋಗ ಹೇಳಿದೆ. ಈ ಘಟನೆ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇರಳದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

Similar News