ದ್ವಿತೀಯ ಟಿ-ಟ್ವೆಂಟಿ: ನ್ಯೂಝಿಲೆಂಡ್ ವಿರುದ್ಧ ಜಯಗಳಿಸಿದ ಭಾರತ
ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ, ದೀಪಕ್ ಹೂಡಾ ಅದ್ಭುತ ಬೌಲಿಂಗ್
ಬೇ ಓವಲ್: ನ್ಯೂಝಿಲೆಂಡ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟಿ-ಟ್ವೆಂಟಿ ಪಂದ್ಯಾಟದಲ್ಲಿ ಸೂರ್ಯಕುಮಾರ್ ಯಾದವ್ ರ ಅಮೋಘ ಶತಕ ಪ್ರದರ್ಶನದ ನೆರವಿನಿಂದ ಹಾಗೂ ದೀಪಕ್ ಹೂಡಾ ಉತ್ತಮ ಬೌಲಿಂಗ್ ಕಾರಣದಿಂದ ಭಾರತ ತಂಡವು ಜಯಗಳಿಸಿದೆ. ಭಾರತ ತಂಡ ಪೇರಿಸಿದ್ದ ಸವಾಲಿನ ಮೊತ್ತವನ್ನು ದಾಟಲು ನ್ಯೂಝಿಲೆಂಡ್ ತಂಡವು ವಿಫಲಗೊಂಡಿತು.
ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಇಶನ್ ಕಿಶನ್ 36 ರನ್ ಗಳಿಸಿದರೆ ಬಳಿಕ ಆಗಮಿಸಿದ ರಿಷಭ್ ಪಂತ್ ಕೇವಲ ಆರು ರನ್ ಗಳಿಗೆ ವಿಕೆಟ್ ಕಳೆದುಕೊಂಡರು. ಬಳಿಕ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಶತಕ ಗಳಿಸಿದರು. ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯಾ ತಲಾ 13 ರನ್ ಗಳಿಸಿದರು. ದೀಪಕ್ ಹೂಡಾ ಯಾವುದೇ ರನ್ ಗಳಿಸದೇ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ದರು.
ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟಿಮ್ ಸೌತಿ ಮಿಂಚಿದರು. ನ್ಯೂಝಿಲೆಂಡ್ ಪರ ಲೋಕಿ ಫರ್ಗ್ಯುಸನ್ 2 ವಿಕೆಟ್ ಪಡೆದರೆ ಇಶ್ ಸೋಧಿ ಒಂದು ವಿಕೆಟ್ ಗಳಿಸಿದರು. ಬಳಿಕ ಬ್ಯಾಟಿಂಗ್ ಗೆ ಇಳಿದ ನ್ಯೂಝಿಲೆಂಡ್ ಪೈಕಿ ಕೇನ್ ವಿಲಿಯಮ್ಸನ್ 61 ರನ್ ಗಳಿಸಿದರೆ ಉಳಿದ ಯಾವುದೇ ಆಟಗಾರರೂ ಗಮನಾರ್ಹ ಮೊತ್ತ ದಾಖಲಿಸುವಲ್ಲಿ ವಿಫಲರಾದರು. 18.5 ಓವರ್ ಗಳಲ್ಲಿ ಕೇವಲ 126 ರನ್ ಗಳಿಗೆ ನ್ಯೂಜಿಲೆಂಡ್ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಬೌಲಿಂಗ್ ನಲ್ಲಿ ಭಾರತದ ಪರ ದೀಪಕ್ ಹೂಡಾ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಚಾಹಲ್, ಮುಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಅರ್ಶದೀಪ್ ಸಿಂಗ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಗಳಿಸಿದರು.