ಬಡ್ಡಿ ದರವನ್ನು 0.35%ದಷ್ಟು ಹೆಚ್ಚಿಸಿದ ಆರ್‌ಬಿಐ : ಜಿಡಿಪಿ ಬೆಳವಣಿಗೆ 6.8%ಕ್ಕೆ ಇಳಿಕೆ
ಮುಂಬೈ, ಡಿ. 7: ವಾಣಿಜ್ಯ ಬ್ಯಾಂಕ್‌ಗಳಿಗೆ ತಾನು ನೀಡುವ ಸಾಲ (Repo)ದ ಮೇಲಿನ ಬಡ್ಡಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ 35 ಬೇಸಿಸ್ ಪಾಯಿಂಟ್‌ಗಳಷ್ಟು, ಅಂದರೆ 0.35%ದಷ್ಟು ಹೆಚ್ಚಿಸಿದೆ. ನೂತನ ಬಡ್ಡಿದರವು 6.25% ಆಗಿರುತ್ತದೆ.
ಆರ್‌ಬಿಐನ ಎರಡು ತಿಂಗಳಿಗೊಮ್ಮೆ ನಡೆಯುವ ಹಣಕಾಸು ನೀತಿ ಸಭೆಯ ಬಳಿಕ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್(Shaktikanta Das) ಈ ಘೋಷಣೆಯನ್ನು ಮಾಡಿದರು.
ಇದು ಮೇ ತಿಂಗಳ ಬಳಿಕ ರೆಪೊ ದರದಲ್ಲಿ ಮಾಡಲಾಗಿರುವ ಐದನೇ ಏರಿಕೆಯಾಗಿದೆ. ಸೆಪ್ಟಂಬರ್‌ನಲ್ಲಿ, ಆರ್‌ಬಿಐಯು ರೆಪೊ ದರವನ್ನು 0.50% ದಷ್ಟು, ಅಂದರೆ 5.9%ಕ್ಕೆ ಹೆಚ್ಚಿಸಿತ್ತು.
ಆರು ಸದಸ್ಯರ ಹಣಕಾಸು ನೀತಿ ಸಮಿಯು ಬುಧವಾರ ಬಡ್ಡಿ ದರವನ್ನು 5-1ರ ಬಹುಮತದಿಂದ ಹೆಚ್ಚಿಸಿದೆ. ಈ ಸಮಿತಿಯ ಮೂವರು ಸದಸ್ಯರು ಆರ್‌ಬಿಐಯವರಾದರೆ, ಇತರ ಮೂವರು ಹೊರಗಿನವರು.
ಜಿಡಿಪಿ ಮುನ್ನೋಟ 6.8%ಕ್ಕೆ ಇಳಿಕೆ
ಭಾರತೀಯ ರಿಸರ್ವ್ ಬ್ಯಾಂಕ್ ಭಾರತದ ಒಟ್ಟು ದೇಶಿ ಉತ್ಪನ್ನ (GDP)ದ 2022-23ರ ಸಾಲಿನ ಮುನ್ನೋಟವನ್ನೂ 6.8%ಕ್ಕೆ ಇಳಿಸಿದೆ. ಈ ಹಿಂದೆ, ಮುನ್ನೋಟವನ್ನು 7% ಎಂಬುದಾಗಿ ಅಂದಾಜಿಸಲಾಗಿತ್ತು.
‘‘ಈಗಲೂ ಭಾರತವು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ದೇಶಗಳಲ್ಲಿ ಒಂದಾಗಿರುತ್ತದೆ. ಇದನ್ನು ನಾವು ಗಮನದಲ್ಲಿರಿಸಬೇಕೆಂದು ನನಗೆ ಅನಿಸುತ್ತದೆ’’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.
ಆದರೆ, ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು 4.4%ಕ್ಕೆ ಇಳಿಯಬಹುದು ಎಂದು ಅವರು ಭವಿಷ್ಯ ನುಡಿದರು.