ಸ್ಟ್ಯಾನ್ ಸ್ವಾಮಿಯ ಕಂಪ್ಯೂಟರ್‌ನಲ್ಲಿ ಹ್ಯಾಕರ್‌ಗಳಿಂದ ಫೈಲ್ ಗಳ ಅಳವಡಿಕೆ: ಅಮೆರಿಕ ವಿಧಿ ವಿಜ್ಞಾನ ಸಂಸ್ಥೆ ವರದಿ

ಭೀಮಾ ಕೋರೆಗಾಂವ್ ಪ್ರಕರಣ

Update: 2022-12-13 17:53 GMT

ಹೊಸದಿಲ್ಲಿ, ಡಿ. 13: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿಯ ಕಂಪ್ಯೂಟರ್‌ನಲ್ಲಿ ಅವರ ಅರಿವಿಗೆ ಬಾರದಂತೆ ದೋಷಾರೋಪಣೆಗೆ ಗುರಿಪಡಿಸುವಂತಹ ಫೈಲ್‌ಗಳನ್ನು ಹ್ಯಾಕರ್‌ಗಳು ಅಳವಡಿಸಿದ್ದರು ಎಂದು ಅಮೆರಿಕ ಮೂಲದ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆಯ ವರದಿ ಹೇಳಿದೆ ಎಂದು ‘ದಿ ವಾಶಿಂಗ್ಟನ್ ಪೋಸ್ಟ್’ ಮಂಗಳವಾರ ವರದಿ ಮಾಡಿದೆ.

ಮೆಸ್ಸಾಚುಸೆಟ್ಸ್ ಮೂಲದ ಡಿಜಿಟಲ್ ವಿಧಿ ವಿಜ್ಞಾನ ಸಂಸ್ಥೆ ‘ಆರ್ಸೆನಲ್ ಕನ್ಸಲ್ಟಿಂಗ್’ ಈ ವರದಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಇದೇ ಸಂಸ್ಥೆ ಇತರ ಆರೋಪಿಗಳಾದ ಸುರೇಂದ್ರ ಗಾಡ್ಲಿಂಗ್ ಹಾಗೂ ರೋನಾ ವಿಲ್ಸನ್ ಕುರಿತು ಕೂಡ ಇದೇ ರೀತಿಯ ಮಾಹಿತಿಯನ್ನು ಬಹಿರಂಗಗೊಳಿಸಿತ್ತು. 

ಪೊಲೀಸರು 2019 ಜೂನ್‌ನಲ್ಲಿ ಕಂಪ್ಯೂಟರ್ ಅನ್ನು ವಶಪಡಿಸಿಕೊಳ್ಳುವವರೆಗೆ ಸುಮಾರು 5 ವರ್ಷಗಳ ಕಾಲ ಸ್ವಾಮಿ ಅವರು ವ್ಯಾಪಕ ಮಾಲ್‌ವೇರ್ ಅಭಿಯಾನಕ್ಕೆ ಗುರಿಯಾಗಿದ್ದರು ಎಂದು ‘ಆರ್ಸೆನಲ್ ಕನ್ಸಲ್ಟಿಂಗ್’ ತಿಳಿಸಿದೆ. ಈ ಅವಧಿಯಲ್ಲಿ ಹ್ಯಾಕರ್‌ಗಳು ಸ್ವಾಮಿ ಅವರ ಕಂಪ್ಯೂಟರ್ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಪಡೆದುಕೊಂಡಿದ್ದರು. ಅವರ ಅರಿವಿಗೆ ಬರದಂತೆ ಮರೆ ಮಾಡಲಾದ ಫೋಲ್ಡರ್‌ಗಳಲ್ಲಿ 12ಕ್ಕೂ ಅಧಿಕ ಫೈಲ್‌ಗಳನ್ನು ಅಳವಡಿಸಿದ್ದರು ಎಂದು ‘ಆರ್ಸೆನಲ್ ಕನ್ಸಲ್ಟಿಂಗ್’ ಹೇಳಿರುವುದಾಗಿ ‘ದಿ ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. 

ಸ್ವಾಮಿ ಅವರ ಕಂಪ್ಯೂಟರ್‌ನಿಂದ ಹ್ಯಾಕರ್‌ಗಳ ಸರ್ವರ್‌ಗೆ 24,000ಕ್ಕೂ ಅಧಿಕ ಫೈಲ್‌ಗಳು ಹಾಗೂ ಫೋಲ್ಡರ್‌ಗಳನ್ನು ಪ್ರತಿ ಮಾಡಲು ವಿಂಡೋಗೆ ಉಚಿತ ಫೈಲ್ ವರ್ಗಾವಣೆ ಟೂಲ್ ವಿನ್‌ಎಸ್‌ಸಿಪಿಯನ್ನು ಹ್ಯಾಕರ್‌ಗಳು ಬಳಸಿದ್ದರು. ಸ್ವಾಮಿ ಅವರ ಕಂಪ್ಯೂಟರ್‌ನಲ್ಲಿ ಹ್ಯಾಕರ್‌ಗಳು ಮೊದಲ ಬಾರಿ 2017 ಜುಲೈಯಲ್ಲಿ ದಾಖಲೆಗಳನ್ನು ಅಳವಡಿಸಿದ್ದರು. ಇದನ್ನು ನಿರಂತರ ಎರಡು ವರ್ಷಗಳ ಕಾಲ ಮಾಡಿದ್ದರು ಎಂದು ‘ಆರ್ಸೆನಲ್ ಕನ್ಸಲ್ಟಿಂಗ್’ ತಿಳಿಸಿದೆ. 

2014 ಅಕ್ಟೋಬರ್‌ನಲ್ಲಿ ಸ್ವಾಮಿ ಅವರ ಕಂಪ್ಯೂಟರ್ ಮಾಲ್‌ವೇರ್ ‘ನೆಟ್‌ವೈರ್’ನ ದಾಳಿಗೆ ಒಳಗಾಗಿತ್ತು. ಈ ನೆಟ್‌ವೈರ್ ಮೂಲಕ ಗುರಿ ಮಾಡಲಾದ ಕಂಪ್ಯೂಟರ್‌ನಿಂದ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಹಾಗೂ ಅಪ್‌ಲೋಡ್ ಮಾಡಲು ಸಾಧ್ಯ. ಅಲ್ಲದೆ, ಈಮೇಲ್ ಹಾಗೂ ಅದರ ಪಾಸ್‌ವರ್ಡ್‌ಗಳನ್ನು ಪಡೆಯಲು ಸಾಧ್ಯ.
ಸ್ಟ್ಯಾನ್ ಸ್ವಾಮಿ ಅವರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿತರಾದ ಸುಮಾರು 9 ತಿಂಗಳ ಬಳಿಕ ಕಳೆದ ವರ್ಷ ಜು.5ರಂದು ಮುಂಬೈ ಆಸ್ಪತ್ರೆಯ ಕಸ್ಟಡಿಯಲ್ಲಿ ಮೃತಪಟ್ಟರು. 84 ವರ್ಷದ ಸ್ಟ್ಯಾನ್ ಸ್ವಾಮಿ ಅವರು ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ನವಿ ಮುಂಬೈಯ ತಲೋಜ ಕಾರಾಗೃಹದಲ್ಲಿ ಇರುವಾಗ ಅವರಿಗೆ ಕೊರೋನ ಸೋಂಕು ಕೂಡ ತಗಲಿತ್ತು.

Similar News