ಬಿಹಾರ: ಉದ್ಘಾಟನೆಗೆ ಸಿದ್ಧಗೊಂಡಿದ್ದ ಸೇತುವೆ ಕುಸಿತ; ತಪ್ಪಿದ ಭಾರೀ ಅನಾಹುತ

Update: 2022-12-18 15:04 GMT

ಪಾಟ್ನಾ: ಬಿಹಾರದ ಬೇಗುಸರಾಯ್‌ನಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದ್ದ ಸೇತುವೆಯೊಂದು ಮುರಿದು ಬಿದ್ದಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಬಿಹಾರದ (Bihar) ಗಂಡಕ್ ನದಿಗೆ 13 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಕುಸಿದಿದೆ.  

ಮುಖ್ಯಮಂತ್ರಿ ನಬಾರ್ಡ್ ಯೋಜನೆಯಡಿ 206 ಮೀಟರ್ ಉದ್ದ ನಿರ್ಮಿಸಲಾಗಿದ್ದು, ಸಂಪರ್ಕ ರಸ್ತೆ ಇಲ್ಲದ ಕಾರಣ ಸೇತುವೆ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಕೆಲ ದಿನಗಳ ಹಿಂದೆ ಸೇತುವೆಯ ಮುಂಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನಂತರ ಡಿಸೆಂಬರ್ 15ರಂದು ಸೇತುವೆ ಬಿರುಕು ಬಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು, ರವಿವಾರ ಬೆಳಗ್ಗೆ ಸೇತುವೆಯ ಮಧ್ಯಭಾಗ ಕುಸಿದಿದೆ.

ಸೇತುವೆಯ ಪಿಲ್ಲರ್ ಸಂಖ್ಯೆ ಎರಡು ಮತ್ತು ಮೂರರ ನಡುವಿನ ಭಾಗ ಒಡೆದು ಹೋಗಿದೆ ಎಂದು ವರದಿಯಾಗಿದೆ. 

ಮುಖ್ಯಮಂತ್ರಿ ನಬಾರ್ಡ್ ಯೋಜನೆಯಡಿ, ಅಹೋಕ್ ಕೃತಿ ಟೋಲ್ ಪೋಸ್ಟ್ ಮತ್ತು ವಿಷ್ಣುಪುರ ನಡುವಿನ ಈ 'ಹೈ-ಲೆವೆಲ್ ಆರ್‌ಸಿಸಿ ಸೇತುವೆ' ನಿರ್ಮಾಣವು ಫೆಬ್ರವರಿ 2016 ರಲ್ಲಿ ಪ್ರಾರಂಭವಾಗಿದ್ದು, ಆಗಸ್ಟ್ 2017 ರಲ್ಲಿ ಪೂರ್ಣಗೊಳ್ಳಬೇಕಿತ್ತು. 

ಒಂದು ವೇಳೆ ಉದ್ಘಾಟನೆಯ ನಂತರ ಈ ಅವಘಡ ಸಂಭವಿಸಿದ್ದಿದ್ದರೆ ಹಲವಾರು ಜೀವಗಳು ಬಲಿಯಾಗುವ ಸಾಧ್ಯತೆ ಇತ್ತು.  ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರ ಕಂಪೆನಿ ವಿರುದ್ಧ ಆಕ್ರೋಶ ಕೇಳಿಬಂದಿದೆ.

Similar News