ಪ್ರೀತಿ ಹಂಚುವ ಹಬ್ಬ ಕ್ರಿಸ್ಮಸ್

Update: 2022-12-25 06:51 GMT

ಮನುಕುಲದ ಪಾಪ ವಿಮೋಚನೆಗೆ ತನ್ನನ್ನೇ ತಾನು ಅರ್ಪಿಸಿಕೊಂಡ ಏಸು ಆರಿಸಿಕೊಂಡಿದ್ದು ಸತ್ಯ ಮಾರ್ಗ, ಕ್ಷಮೆಯ ದಾರಿ, ಪ್ರೀತಿಯೆಂಬ ಅರವಟ್ಟಿಗೆ.

ಹಬ್ಬಗಳು ನಮ್ಮ ಬದುಕನ್ನು ಸಂತಸಮಯವಾಗಿಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಬದುಕಿನ ಏಕತಾನತೆಯಲ್ಲಿ ಸೊಗಸು ತುಂಬುವ, ಬಂಧು ಬಾಂಧವರ, ಸ್ನೇಹಿತರ, ಜೊತೆ ಬೆರೆತು ಸಂಬಂಧಗಳನ್ನು ನೆನಪಿಸಿಕೊಂಡು ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಪ್ರೀತಿ ಹೊಸೆಯುವ ಕ್ರಮ. ಅವು ನಮ್ಮ ಸಂಸ್ಕೃತಿಯ ಭಾಗವೂ ಹೌದು. ದೀಪಾವಳಿ, ಗಣೇಶ ಚತುರ್ಥಿ, ರಮಝಾನ್, ಕ್ರಿಸ್ಮಸ್ ಈ ಎಲ್ಲ ಹಬ್ಬಗಳು ಜನರನ್ನು ಬೆಸೆಯುತ್ತವೆ.

ಪ್ರೀತಿ ವಿಶ್ವಾಸಗಳನ್ನು ಕುದುರಿಸುತ್ತವೆ. ಧರ್ಮ ಜಾತಿಗಳ ಹಂಗಿಲ್ಲದೆ ಎಲ್ಲ ಹಬ್ಬಗಳನ್ನು ನಮ್ಮದೆಂಬಂತೆ ಆಚರಿಸಿಕೊಂಡು ಬಂದಿರುವ ದೊಡ್ಡ ಬಳಗ ನಾವು. ವಿವಿಧತೆಯಲ್ಲಿ ಏಕತೆ ಸಾರುವ ಭಾರತದಲ್ಲಿ ಹಬ್ಬಗಳು ಕೂಡ ಏಕತೆಯನ್ನು ಹೊಸೆಯುವ ದೊಡ್ಡ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತವೆ.

ಕ್ರಿಸ್ಮಸ್ ಬಂದಿದೆ. ಜಗತ್ತಿಗೆ ಪ್ರೀತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನದ ಆಚರಣೆ. ಕ್ರೈಸ್ತ ಬಾಂಧವರ ಬಹುದೊಡ್ಡ ಹಬ್ಬ. ಆದರೆ ಇಂದು ಈ ಹಬ್ಬ ಕೇವಲ ಕ್ರೈಸ್ತರ ಹಬ್ಬವಾಗಿ ಮಾತ್ರ ಆಚರಿಸಲ್ಪಡುತ್ತಿಲ್ಲ. ಧರ್ಮದ ಎಲ್ಲೆಯನ್ನು ಮೀರಿ ಒಂದು ಪವಿತ್ರ ಆಚರಣೆಯಾಗಿ ಕಂಡುಬರುತ್ತಿದೆ.

ರಂಗುರಂಗಿನ ಅಲಂಕಾರಗಳು, ಸ್ವಾದಿಷ್ಟಮಯವಾದ ಕೇಕುಗಳು, ತಿಂಡಿ ತಿನಿಸುಗಳು, ಭರ್ಜರಿ ಊಟ, ಕ್ಯಾರೆಲ್ಸ್ ಇವೆಲ್ಲವೂ ಈ ಹಬ್ಬದ ಅಗತ್ಯ ಸಂಗತಿಗಳು. ನಕ್ಷತ್ರ, ಕ್ರಿಸ್ಮಸ್ ಗಿಡ, ಸಾಂತಾಕ್ಲಾಸ್ ಪ್ರಮುಖ ಆಕರ್ಷಣೆಗಳು. ಆದರೆ ಕ್ರಿಸ್ಮಸ್ ಇದಿಷ್ಟೇ ಅಂದುಕೊಂಡರೆ ಅದು ತಪ್ಪಾಗುತ್ತದೆ.

ಸಂಪ್ರದಾಯಸ್ಥ ಕ್ರೈಸ್ತರು ಡಿಸೆಂಬರ್ 24ರಂದು ಚರ್ಚಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಏಸುವಿನ ಜನ್ಮದಿನದ ಶುಭದ ಸಂಕೇತವಾಗಿ ನಂಬಿಕೆ, ಭರವಸೆ, ಸುಖ, ಮತ್ತು ಶಾಂತಿಯ ದ್ಯೋತಕವಾದ ನಾಲ್ಕು ಮೇಣದ ಬತ್ತಿ ಹಚ್ಚುತ್ತಾರೆ. ಈ ಆಚರಣೆಗಳಲ್ಲಿ ವೈವಿಧ್ಯತೆ ಇದೆ. ಆದರೆ ಕ್ರಿಸ್ಮಸ್‌ನ ಮುಖ್ಯ ಆಶಯ ಸಮೃದ್ಧಿ ಮತ್ತು ಸೌಹಾರ್ದ ಹೊಸೆಯುವುದು, ಪ್ರೀತಿ ಮತ್ತು ಸಹಬಾಳ್ವೆಯನ್ನು ಪ್ರೇರೇಪಿಸುವುದು.

ಕ್ರೈಸ್ತರ ಆಚರಣೆಯ ಅನೇಕ ಸಂಕೇತಗಳು ಕೂಡ ಸಕಾರಾತ್ಮಕ ಜೀವನ ಮೌಲ್ಯಗಳನ್ನು ಬಿಂಬಿಸುತ್ತವೆ. ಕ್ರಿಸ್ಮಸ್ ಟ್ರೀ ಸದಾ ಹಸಿರಾಗಿರುವುದನ್ನು, ನಕ್ಷತ್ರಗಳು ಉಚ್ಚ ಆದರ್ಶಗಳನ್ನು, ಕನಸುಗಳನ್ನು, ಸಾಂತಾಕ್ಲಾಸ್ ಪ್ರೀತಿ ಹಂಚುವುದನ್ನು ಸಂಕೇತಿಸುವುದನ್ನು ಕಾಣಬಹುದು.


ಜಗತ್ತಿಗೆ ಪ್ರೀತಿಯ ಸಂದೇಶ ಸಾರಿದ ಕ್ರಿಸ್ತ ಹುಟ್ಟಿದ್ದು ಎರಡು ಸಾವಿರ ವರ್ಷಗಳಿಗೂ ಹಿಂದೆ. ಶಾಂತಿದೂತ ಎಂದೇ ಕರೆಯಲಾಗುತ್ತಿದ್ದ ಕ್ರಿಸ್ತ ಜಗದ ಉಳಿವಿಗೆ, ಚೆಲುವಿಗೆ, ಉದ್ಧಾರಕ್ಕೆ ಏನೆಲ್ಲ ಮಾಡಿದ. ಒಡೆದ ಸಂಬಂಧಗಳನ್ನು ಒಂದು ಮಾಡಿದ, ಒಡೆದ ಹೃದಯಗಳ ಬೆಸೆದ, ಪ್ರೀತಿ ಎಂಬುದೇ ತಿಳಿಯದ ಜನರಿಗೆ ಪ್ರೀತಿಯ ಒರತೆ ಕಾಣಿಸಿದ. ದ್ವೇಷದ ಜಾಗವನ್ನು ಕ್ಷಮೆಯ ಮೂಲಕ ತುಂಬಿದ. ಅನ್ಯರ ನೋವಿಗೆ ಮುಲಾಮು ಆಗುವುದನ್ನು ಕಲಿಸಿದ. ಮನುಕುಲದ ಪಾಪ ವಿಮೋಚನೆಗೆ ತನ್ನನ್ನೇ ತಾನು ಅರ್ಪಿಸಿಕೊಂಡ. ಇಂತಹ ಏಸು ಆರಿಸಿಕೊಂಡಿದ್ದು ಸತ್ಯ ಮಾರ್ಗ, ಕ್ಷಮೆಯ ದಾರಿ, ಪ್ರೀತಿಯೆಂಬ ಅರವಟ್ಟಿಗೆ.


ಕ್ರಿಸ್ತ ನೀಡಿದ ಜೀವನ ಸಂದೇಶಗಳು, ಪ್ರೀತಿಯ ಪೂರ್ಣತೆಯ ವ್ಯಾಖ್ಯಾನ, ಸಮರಸದ ಆಖ್ಯಾನಗಳು ಇಂದಿಗೂ ನಮಗೆ ಮರೀಚಿಕೆಯಾಗಿಯೇ ಯಾಕೆ ಉಳಿದಿದೆ? ಈ ಪ್ರಶ್ನೆಗಳಿಗೆ ಉತ್ತರ ಕಾಣುತ್ತಿಲ್ಲ. ಕಾರಣವಿಷ್ಟೇ. ನಾವಿಂದು ಗ್ರಾಹಕ ಕೇಂದ್ರಿತ ಜಗತ್ತಿನಲ್ಲಿದ್ದೇವೆ. ಏಸು ಸಾರಿದ ಮೌಲ್ಯಗಳು ಮತ್ತು ಸಹಬಾಳ್ವೆ, ದೀನರ ಪೊರೆಯುವ ಕಾಳಜಿ ಎಲ್ಲವೂ ಅಯೋಮಯವಾಗಿದೆ.

ಇಂದು ಬಹು ಜನರಲ್ಲಿ ಹಣವಿದೆ. ಪತಿ ಪತ್ನಿ, ಮಕ್ಕಳು, ಸ್ನೇಹಿತರು, ಬಂಧುಬಳಗ ಎಲ್ಲವೂ ಇದೆ. ಆದರೆ ಪ್ರೀತಿಸುವ ಮನಸ್ಸುಗಳಿಲ್ಲ. ಕೃತಕ ಸಂಬಂಧಗಳೇ ಕಾಣುತ್ತಿವೆ. ಎಲ್ಲ ಇದ್ದೂ ಖಾಲಿತನ ಬಾಧಿಸುತ್ತಿದೆ. ಬದುಕಿನ ಸತ್ಯ ಎಂದರೇನು? ಈ ಪ್ರಶ್ನೆಗೆ ಉತ್ತರವಿಲ್ಲ. ದುಡಿಮೆ, ಹಣ, ನಿತ್ಯ ಜಂಜಾಟಗಳು ಇವುಗಳ ಮಧ್ಯೆ ಒಂದೊಂದೇ ದಿನ ಕಳೆದು ಹೋಗುತ್ತಾ ಮುಗಿದುಹೋಗುತ್ತೇವೆ. ಇಷ್ಟು ದೀರ್ಘ ಆಯಸ್ಸನ್ನು ಸುಮ್ಮನೇ ದುಡಿಯುವುದರಲ್ಲೇ ಕಳೆದೆ. ಯಾರಿಗೂ ಉಪಕಾರಿಯಾಗದೆ ಹೋದೆ ಎಂದು ಅಲವತ್ತುಕೊಳ್ಳುತ್ತೇವೆ.

ದ್ವೇಷದಿಂದ ಕುದಿಯುತ್ತೇವೆ. ನಮ್ಮ ಎದುರಾಳಿಯನ್ನು ಮಟ್ಟಸಗೊಳಿಸಲು ಕುತಂತ್ರಗಳ ಹೂಡುತ್ತೇವೆ. ಇನ್ನೊಬ್ಬರ ನೋವಿನಲ್ಲಿ ಅದೆಂತದ್ದೋ ಖುಷಿ ಕಾಣುತ್ತೇವೆ.


ಮಹಾತ್ಮರ ನಿಜ ನುಡಿಗಳು ಪ್ರಾಪಂಚಿಕದಲ್ಲಿ ಮುಳುಗೇಳುವ ನಮಗೆ ಅಪಥ್ಯವೆನಿಸುತ್ತವೆ. ಹಾಗಾಗಿ ಜಗತ್ತು ಏಸುವನ್ನೂ ಬಿಡಲಿಲ್ಲ. ಮಾನವೀಯತೆಯನ್ನೇ ಉಸಿರಾಡಿದ ಮಹಾಪುರುಷ ಏಸುವನ್ನು ಕೊಲ್ಲಲು ಬಂದವರು ಆತನ ಕೈಕಾಲುಗಳಿಗೆ ಮೊಳೆ ಜಡಿಯುತ್ತಾರೆ, ಬೆತ್ತದಿಂದ ಬಾರಿಸುತ್ತಾರೆ, ಮುಳ್ಳಿನ ಕೀರಿಟವಿಟ್ಟು ಅಮಾನವೀಯವಾಗಿ ಹಿಂಸಿಸುತ್ತಾರೆ.

ಆಗ ಏಸು ‘‘ತಂದೆಯೇ, ಇವರನ್ನು ಕ್ಷಮಿಸು, ತಾವೇನು ಮಾಡುತ್ತಿರುವೆವು ಎಂಬುದನ್ನಿವರು ಅರಿಯರು’’ ಎಂದು ಪ್ರಾರ್ಥಿಸುತ್ತಾನೆ. ರಾಷ್ಟ್ರಕವಿ ಗೋವಿಂದ ಪೈಗಳು ತಮ್ಮ ‘ಗೊಲ್ಗೋಥಾ’ ಖಂಡಕಾವ್ಯದಲ್ಲಿ ಏಸುವಿನ ಕೊನೆಯ ದಿನಗಳನ್ನು ಬಹು ಮಾರ್ಮಿಕವಾಗಿ ಹೀಗೆ ವರ್ಣಿಸುತ್ತಾರೆ: ಜೆರುಸಲೇಂನ ಹೊರಭಾಗದ ಗೊಲ್ಗೋಥಾ ಎಂಬ ಬೆಟ್ಟದ ಮೇಲೆ ಏಸುವನ್ನು ಶಿಲುಬೆಗೇರಿಸಲಾಗಿದೆ.

ಶಿಲುಬೆಯಲ್ಲಿ ತೂಗುತ್ತಿದ್ದ ಏಸು ‘‘ಹದ್ದು ಬಿಗಿ ಹಿಡಿದ ಹಕ್ಕಿಯಂತೆ, ಪಡುವಣದಿ ಬಿಳಿಯ ಬಿದಿಗೆಯ ತಿಂಗಳಂತೆ, ಬಿಲ್ಲಿಗೆ ತೊಟ್ಟ ಸರಳಂತೆ, ಮರಣವೃಕ್ಷದಲ್ಲಿನ ಅಮೃತ ಫಲದಂತೆ ಕಾಣುತ್ತಾನೆ.’’ ಎಲ್ಲೆಲ್ಲೂ ದೌರ್ಜನ್ಯಗಳು, ಅನ್ಯಾಯಗಳು, ಧರ್ಮದ ಅಂಧಕಾರಗಳು, ಇಂತಹ ಮರಣ ವೃಕ್ಷಗಳ ನಡುವೆ ಏಸು ಅಮೃತಫಲದಂತೆ ಹೊಳೆಯುತ್ತಾನೆ.


ನಮ್ಮ ತಂದೆ ತಾಯಿ ಮಕ್ಕಳನ್ನು ಪ್ರೀತಿಸುವುದರಲ್ಲಿ ಯಾವ ಹೆಚ್ಚುಗಾರಿಕೆ ಇದೆ ಎನ್ನುತ್ತಾನೆ ಕ್ರಿಸ್ತ. ನಿಮ್ಮ ವೈರಿಗಳನ್ನು ಕ್ಷಮಿಸಿ, ಪ್ರೀತಿಸಿ. ಆಗ ಹುಟ್ಟುವ ಬಂಧವನ್ನು ವಿವರಿಸಲು ಶಬ್ದಗಳು ಮೂಕವಾಗುತ್ತವೆ. ನಿಮಗೆ ಅನ್ಯಾಯ ಮಾಡಿದವರಿಗೆ ಸಹಾಯ ಮಾಡಿ.

ಆಗ ನ್ಯಾಯದ ಹಾದಿಯ ವಿಜಯವನ್ನು ನೋಡಿ. ನಿಮ್ಮ ಒಂದು ಕೆನ್ನೆಗೆ ಯಾರಾದರೂ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ, ಹೊಡೆದವನ ಕೈ ತಾನಾಗಿಯೇ ಕೆಳಗಿಳಿಯುವುದ ಕಾಣಿರಿ. ಇಂತಹ ಉದಾತ್ತತೆಯನ್ನು ಮನುಷ್ಯ ಜಗತ್ತು ಪಾಲಿಸಿದ್ದಲ್ಲಿ ಕ್ರೌರ್ಯಕ್ಕೆ, ದ್ವೇಷಕ್ಕೆ ಸ್ಥಾನವಿಲ್ಲ.

ಕ್ರಿಸ್ಮಸ್ ಹಬ್ಬದ ಮೂಲಕ ಈ ಶಾಂತಿಯ ಮಂತ್ರ ಜಗತ್ತಿಗೆ ನೆನಪಾಗಲಿ, ಕ್ಷಮೆಯ ಮೌಲ್ಯ ತಿಳಿಯಲಿ.

Similar News