ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹ-ನಟನ ಬಂಧನ

Update: 2022-12-25 06:25 GMT

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಧಾರಾವಾಹಿಯೊಂದರ ಶೂಟಿಂಗ್  ಸೆಟ್‌ನಲ್ಲಿಯೇ ಶನಿವಾರ ಕಿರುತೆರೆ ನಟಿ  ತುನೀಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ  ಪ್ರಕರಣಕ್ಕೆ ಸಂಬಂಧಿಸಿ ಸಹ-ನಟ ಶಿಝಾನ್ ಮುಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತುನೀಶಾ ಅವರ ತಾಯಿ ದೂರು ನೀಡಿದ್ದರು. ದೂರಿನ ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಝಾನ್ ನನ್ನು ವಶಕ್ಕೆ  ಪಡೆಯಲಾಗಿದೆ ಎಂದು ಎಸಿಪಿ ಚಂದ್ರಕಾಂತ್ ಜಾಧವ್  ಇಂದು ತಿಳಿಸಿದ್ದಾರೆ.

ಖಾನ್ ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.

ನಟಿಯ ಮರಣೋತ್ತರ ಪರೀಕ್ಷೆಯನ್ನು ರವಿವಾರ ಮುಂಜಾನೆ ನೈಗಾಂವ್‌ನ ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಶವಪರೀಕ್ಷೆಯನ್ನು ಮುಂಜಾನೆ 4:30 ರವರೆಗೆ ನಡೆಸಲಾಯಿತು ಮತ್ತು 4-5 ಪೊಲೀಸ್ ಸಿಬ್ಬಂದಿ ಸಹ ಹಾಜರಿದ್ದರು.  ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 ವರ್ಷ ವಯಸ್ಸಿನ ನಟಿ ಶೂಟಿಂಗ್ ನಡೆಯುತ್ತಿರುವಾಗ ಚಹಾ ವಿರಾಮದ ನಂತರ ವಾಶ್‌ರೂಮ್‌ನಲ್ಲಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಎಷ್ಟೋ ಹೊತ್ತಾದರೂ ಆಕೆ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳಹೋಗಬೇಕಾಯಿತು ಎಂದು ವಾಲೀವ್ ಪೊಲೀಸರು ತಿಳಿಸಿದ್ದಾರೆ. ಶೂಟಿಂಗ್ ಸಿಬ್ಬಂದಿ ನಟಿಯನ್ನು ಮಧ್ಯರಾತ್ರಿ 1:30 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು.

Similar News