ಜಲೀಲ್ ಕೊಲೆ ಪ್ರಕರಣದ ಬಗ್ಗೆ ನಳಿನ್‌ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು ಹೀಗೆ...
ಉಡುಪಿ: ಮಂಗಳೂರು ಜಲೀಲ್ ಕೊಲೆ ಪ್ರಕರಣದ ಬಗ್ಗೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಸೂಕ್ತ ಕ್ರಮವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಕಾಂಗ್ರೆಸ್ ಇಂತಹ ಘಟನೆಯಿಂದ ರಾಜಕೀಯ ಲಾಭ ಪಡೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ತಿರುಕನೋರ್ವ ಊರ ಮುಂದೆ ಕನಸು ಕಾಣುತ್ತಿದ್ದನು ಎಂಬ ಪದ್ಯವನ್ನು ನಾವು ಶಾಲೆಗೆ ಹೋಗುವಾಗ ಕೇಳಿದ್ದೇವೆ. ಆ ಹಾಡಿನಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗುತ್ತದೆ. ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ನಾವು ಅವರ ಜೊತೆ ಮಾತುಕತೆ ಮಾಡುತ್ತೇವೆ. ಈಗಾಗಲೇ ಶ್ರೀರಾಮುಲು ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಶ್ರೀರಾಮುಲು, ಜನಾರ್ದನ ರೆಡ್ಡಿ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ ಎಂದರು.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಹಲವಾರು ಯೋಜನೆ, ಯೋಚನೆಗಳಿವೆ. ಹತ್ತಾರು ಪಾರ್ಟಿ ಹಿಂದೆಯೂ ಬಂದಿವೆ, ಮುಂದೆಯೂ ಬರುತ್ತವೆ. ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಬಿಜೆಪಿ ದೇಶದ ನಂಬರ್ ಒನ್ ಪಾರ್ಟಿಯಾಗಿದ್ದು ಬಲಿಷ್ಟವಾದ ಬಿಜೆಪಿ, ಕಾಂಗ್ರೆಸ್‌ನಂತಹ ಪಾರ್ಟಿಯನ್ನೇ ಎದುರಿಸಿ ಬಂದಿದೆ. ವರಿಷ್ಟರು ಹಾಗೂ ಎಲ್ಲಾ ಹಿರಿಯರು ಮಾತುಕತೆ ಮಾಡುತ್ತಾರೆ, ಏನಾಗುತ್ತೋ ನೋಡೋಣ ಎಂದರು.