ಗುಜರಾತ್‌ನಲ್ಲಿ ಬಿಎಸ್‌ಎಫ್ ಯೋಧನನ್ನು ಥಳಿಸಿ ಕೊಂದ ಪ್ರಕರಣ: 7 ಮಂದಿ ಆರೋಪಿಗಳ ಬಂಧನ
ಅಹಮದಾಬಾದ್: ತನ್ನ ಪುತ್ರಿಯ ಅಶ್ಲೀಲ ವಿಡಿಯೊವನ್ನು ಜಾಲತಾಣದಲ್ಲಿ ಪ್ರಸಾರ ಮಾಡಿದ್ದನ್ನು ಪ್ರತಿಭಟಿಸಿದ BSF ಯೋಧನ ಮೇಲೆ ಗುಜರಾತ್‌ನ ನದಿಯಾಡ್‌ನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಬಿಎಸ್‌ಎಫ್ ಯೋಧ ಮೆಲ್ಜಿಭಾಯಿ ವಘೇಲಾ 15 ವರ್ಷ ವಯಸ್ಸಿನ ಬಾಲಕನ ಮನೆಗೆ ಭೇಟಿ ನೀಡಿ, ತಮ್ಮ ಪುತ್ರಿಯ ಅಶ್ಲೀಲ ವಿಡಿವನ್ನು ಜಾಲತಾಣದಲ್ಲಿ ಹಾಕಿದ್ದನ್ನು ಆಕ್ಷೇಪಿಸಿದ್ದರು. ಆಗ ಮೆಲ್ಜಿಭಾಯಿ ವಘೇಲಾ ಮತ್ತು ಬಾಲಕನ ಕುಟುಂಬದ ಸದಸ್ಯರ ನಡುವಿನ ವಾಗ್ವಾದ ಸ್ಫೋಟಗೊಂಡು, ಬಾಲಕಿಯ ಕುಟುಂಬದ ಸದಸ್ಯರು ವಘೇಲಾ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಎಸ್‌ಎಫ್ ಯೋಧ ಮೆಲ್ಜಿಭಾಯಿ ವಘೇಲಾರ ಪುತ್ರಿ ಹಾಗೂ ಆಕೆಯ ಅಶ್ಲೀಲ ವಿಡಿಯೊವನ್ನು ಜಾಲತಾಣದಲ್ಲಿ ಹಾಕಿದ ಬಾಲಕ ಇಬ್ಬರೂ ಸಹಪಾಠಿಗಳಾಗಿದ್ದು, ಇಬ್ಬರ ನಡುವೆ ಆಪ್ತ ಗೆಳೆತನವಿತ್ತು ಎಂದು ತಿಳಿದು ಬಂದಿದೆ.
ಬಿಎಸ್‌ಎಫ್ ಯೋಧನ ಹತ್ಯೆಯಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿ.ಆರ್. ಬಾಜಪೇಯಿ ದೃಢಪಡಿಸಿದ್ದಾರೆ.
ಈ ಸಂಬಂಧ ಪೊಲೀಸರು ಬಂಧಿತ ಆರೋಪಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದು, ಚಕ್ಲಾಸಿ ಗ್ರಾಮದಲ್ಲಿರುವ ಬಾಲಕನ ಮನೆಗೆ ವಘೇಲಾ, ಆತನ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಸಹೋದರ ಸಂಬಂಧಿ ತೆರಳಿದ್ದರು. ತಮ್ಮ ಪುತ್ರಿಯ ವಿಡಿಯೊ ಕುರಿತು ವಘೇಲಾ ಕುಟುಂಬ ಪ್ರತಿಭಟಿಸಿದಾಗ ಬಾಲಕನ ಸಂಬಂಧಿಕರು ಅವರನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ವಘೇಲಾ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸಿದರು ಎಂದು ಅದರಲ್ಲಿ ನಮೂದಿಸಲಾಗಿದೆ.