ದಲಿತ ಕೇರಿಯ ನೀರಿನ ಟ್ಯಾಂಕಿಗೆ ಮಲ ಸುರಿದ ದುಷ್ಕರ್ಮಿಗಳು: ಹಲವು ಮಕ್ಕಳು ಅಸ್ವಸ್ಥ

Update: 2022-12-28 07:15 GMT

ಚೆನ್ನೈ: ತಮಿಳುನಾಡಿನ ಪುದುಕ್ಕೊಟೈ ಜಿಲ್ಲೆಯ ಅನ್ನವಸಲ್‌ ಬ್ಲಾಕ್‌ನ ವೆಂಗೈವಯಲ್‌ ಗ್ರಾಮದ ಕೆಲ ಮಕ್ಕಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭ ಗ್ರಾಮಸ್ಥರು ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುವ ಸ್ಥಳದಲ್ಲಿರುವ ಓವರ್‌ಹೆಡ್‌ ನೀರಿನ ಟ್ಯಾಂಕ್‌ ಒಂದರಲ್ಲಿ ಮಾನವ ಮಲ ಸುರಿದಿರುವುದನ್ನು ಪತ್ತೆ ಹಚ್ಚಿದ್ದು, ಈ ಸಂಬಂಧ ದೂರು ದಾಖಲಾಗಿದೆ ಎಂದು indianexpress ವರದಿ ಮಾಡಿದೆ.

ಮಕ್ಕಳು ವಾಂತಿ ಬೇಧಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರು ಕುಡಿಯುವ ನೀರು ಕಲುಷಿತಗೊಂಡಿರಬಹುದೇ ಎಂದು ಪರಿಶೀಲಿಸಲು ಗ್ರಾಮಸ್ಥರನ್ನು ಕೇಳಿದ್ದರು. ನೀರು ಕೆಟ್ಟ ವಾಸನೆ ಬರುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಾಗ ಕೆಲವರು ನೀರಿನ ಟ್ಯಾಂಕ್‌ ತೆರೆದು ನೋಡಿದಾಗ ಅದರೊಳಗೆ ಮಲ ಸುರಿದಿರುವುದು ಪತ್ತೆಯಾಗಿತ್ತು.

ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನತೆ ತಲೆದೋರಿತು. ವೆಲ್ಲನೂರು  ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

ಅನಾರೋಗ್ಯಕ್ಕೀಡಾದ ಮಗುವೊಂದರ ಹೆತ್ತವರು ನೀಡಿದ ದೂರಿನಂತೆ ಪೊಲೀಸರು ಸೆಕ್ಷನ್‌ 277, 328 ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಗ್ರಾಮಕ್ಕೆ ಪುದುಕ್ಕೊಟೈ ಕಲೆಕ್ಟರ್‌ ಕವಿತಾ ರಾಮು ಹಾಗೂ ಎಸ್‌ಪಿ ವಂದಿತಾ ಪಾಂಡೆ ಭೇಟಿ ನೀಡಿದಾಗ ಗ್ರಾಮಸ್ಥರು ಗ್ರಾಮದಲ್ಲಿರುವ ಜಾತಿ ತಾರತಮ್ಯದ ಬಗ್ಗೆ, ಗ್ರಾಮದ ಅರುಲ್ಮಿಗು ಅಯ್ಯನರ್‌ ದೇವಸ್ಥಾನಕ್ಕೆ ಪರಿಶಿಷ್ಟರಿಗೆ ಪ್ರವೇಶ ನೀಡದೇ ಇರುವ ಬಗ್ಗೆ ಹಾಗೂ ಚಹಾ ಅಂಗಡಿಗಳಲ್ಲಿ ಎರಡು ಲೋಟ ವ್ಯವಸ್ಥೆ ಇರುವ ಬಗ್ಗೆ ಅವರ ಗಮನ ಸೆಳೆದಿದ್ದಾರೆ.

ಆಗ ಕಲೆಕ್ಟರ್‌ ಮತ್ತು ಎಸ್‌ಪಿ ಗ್ರಾಮಸ್ಥರನ್ನು ತಾವಾಗಿಯೇ ದೇವಸ್ಥಾನದೊಳಗೆ ಕರೆದುಕೊಂಡು ಹೋದರು ಹಾಗೂ ಜಾತಿ ತಾರತಮ್ಯ ನಡೆಸುವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆಂದು ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ.

Similar News