ಉಡುಪಿ: ಜ.4ರಿಂದ 8ರವರೆಗೆ ಪಿಪಿಸಿ ಕ್ರೀಡಾಂಗಣದಲ್ಲಿ ಅಖಿಲ ಭಾರತ ಅಂತರ ವಿವಿ ಪುರುಷರ ವಾಲಿಬಾಲ್ ಟೂರ್ನಿ

Update: 2023-01-01 15:31 GMT

ಉಡುಪಿ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ  ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜ.4ರಿಂದ 8ರವರೆಗೆ ನಡೆಯಲಿದೆ. 

ಐದು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಶಿಪ್ ನಲ್ಲಿ  ಐದು ವಲಯಗಳ ಹದಿನಾರು ಚಾಂಪಿಯನ್ ತಂಡಗಳು ಭಾಗವಹಿಸಲಿವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ ಪೂರ್ಣಪ್ರಜ್ಞ ಕಾಲೇಜಿನ ಪ್ರಜ್ಞಾ ಸಭಾಂಗಣದಲ್ಲಿ ಇಂದು ಕರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹದಿನಾರು ತಂಡಗಳಿಂದ ಸುಮಾರು 250ಕ್ಕೂ ಅಧಿಕ ವಾಲಿಬಾಲ್ ಆಟಗಾರರು, 40 ಮಂದಿ ಕ್ರೀಡಾ ತರಬೇತುದಾರರು, ತಂಡಗಳ ಐವತ್ತು ವ್ಯವಸ್ಥಾಪಕರು ಹಾಗೂ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. 

ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿ ಇದಾಗಿದೆ. ಜ.4ರಂದು  ಬೆಳಗ್ಗೆ 7:30ಕ್ಕೆ ಉಡುಪಿ ಅದಮಾರು ಮಠಾಧೀಶರು ಭೂಮಿಪೂಜೆ ನಡೆಸಿ  ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಜ.5ರ ಬೆಳಗ್ಗೆ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಹಾಗೂ ಶ್ರೀ ಈಶಪ್ರಿಯತೀರ್ಥರ ಆಶೀರ್ವಚನದೊಂದಿಗೆ ಉದ್ಘಾಟನಾ ಕಾಠ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. 

ಅಲ್ಲದೇ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾವ್ಯದರ್ಶಿ ಡಾ.ಬಲ್ವಿತ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕರ ಸಹಿತ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಜ.7ರಂದು ಸಂಜೆ 5:30ಕ್ಕೆ ‘ಪ್ರಜ್ಞಾ ಗೌರವ’ ಎನ್ನುವ ವಿಶೇಷ ಕಾರ್ಯಕ್ರಮವಿದ್ದು,  ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರಿಗೆ ಸನ್ಮಾನಿಸಲಾಗುತ್ತದೆ. ಜ.8ರಂದು ಸಂಜೆ 7 ಗಂಟೆಗೆ ಫೈನಲ್ ಪಂದ್ಯ ಮುಕ್ತಾಯಗೊಂಡ ನಂತರ ಸಮಾರೋಪ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ಅದಮಾರು ಶ್ರೀಗಳು, ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ, ರಾಜ್ಯದ ಕ್ರೀಡಾ ಸಚಿವ ನಾರಾಯಣ ಗೌಡ, ಮಾಜಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಬ್ಯಾಂಕಿನ ವ್ವವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ರಾವ್ ಪಾಲ್ಗೊಳ್ಳಲಿದ್ದಾರೆ ಎಂದರು.

ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಪ್ರಾಂಶುಪಾಲ ಡಾ.ರಾಘವೇಂದ್ರ ಎ., ವಾಲಿಬಾಲ್ ಕ್ರೀಡಾಕೂಟದ ಸಂಯೋಜಕರು ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಕುಮಾರ್ ಅವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

ಅ.ಭಾ. ಅಂ.ವಿವಿ ವಾಲಿಬಾಲ್ ವಿಶೇಷತೆ

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಈ ಟೂರ್ನಿಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಒಳಾಂಗಣ ವಾಲಿಬಾಲ್ ಕ್ರೀಡಾಂಗಣ ನಿರ್ಮಾಣ.

ಜನವರಿ 4ರಿಂದ 8ರವರೆಗೆ ಐದು ದಿನಗಳ ಕಾಲ ಹಗಲು-ರಾತ್ರಿ ನಡೆಯಲಿರುವ ಈ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು, ತೀರ್ಪುಗಾರರಿಗೆ ಸುಸಜ್ಜಿತವಾದ ಉಚಿತ ವಾಸ್ತವ್ಯದ ವ್ಯವಸ್ಥೆ ಹಾಗೂ ದಕ್ಷಿಣ, ಉತ್ತರ ಭಾರತ ಶೈಲಿಯ ಊಟೋಪಚಾರದ ವ್ಯವಸ್ಥೆ ಇರಲಿದೆ.

Similar News