ಭೋಪಾಲ್ ವಿಷಾನಿಲ ದುರಂತ ಸಂತ್ರಸ್ತೆಯರ ನಿರಶನ ಅಂತ್ಯ: ಹೆಚ್ಚುವರಿ ಪರಿಹಾರದ ಬೇಡಿಕೆಗೆ ಸರಕಾರದ ‘ಸಮ್ಮತಿ’

Update: 2023-01-01 16:48 GMT

ಭೋಪಾಲ್,ಜ.1:  ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸುತ್ತಿರುವ  1984ರ ಭೋಪಾಲ್ ವಿಷಾನಿಲ  ದುರಂತದ 10 ಮಂದಿ ಸಂತ್ರಸ್ತೆಯರು ಮಧ್ಯಪ್ರದೇಶ ಹಾಗೂ ಕೇಂದ್ರ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತ ಬಳಿಕ ತಮ್ಮ ನಿರಶನವನ್ನು ರವಿವಾರ ಕೊನೆಗೊಳಿಸಿದ್ದಾರೆ.

ಭೋಪಾಲ್ ನ ನೀಲಂ ಪಾರ್ಕ್ ನಲ್ಲಿ ಶುಕ್ರವಾರ ಅವರು ಪ್ರತಿಭಟನೆ ಆರಂಭಿಸಿದ್ದರು.

ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ನೀಡಿದ ಹಣ್ಣಿನ ರಸವನ್ನು ಸೇವಿಸಿ ಈ ಹತ್ತು ಮಂದಿ ಮಹಿಳೆಯರು ತಮ್ಮ  29 ತಾಸುಗಳ ನಿರಶನವನ್ನು   ಕೊನೆಗೊಳಿಸಿದರೆಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ಪರಿಹಾರ ನೀಡಿಕೆಗೆ ಸಂಬಂಧಿಸಿ ಜನವರಿ 4ರಂದು  ನಡೆಯಲಿರುವ ಸಭೆಯಲ್ಲಿ ಅಂತಿಮ  ನಿರ್ಧಾರ ಕೈಗೊಳ್ಳುವುದಾಗಿ ಭೋಪಾಲ್ ವಿಷಾನಿಲ ದುರಂತ ಪರಿಹಾರ ಹಾಗೂ ಪುನರ್ವಸತಿ ಖಾತೆಯ ಸಚಿವರು  ಭರವಸೆ ನೀಡಿದ್ದಾರೆಂದು ಭೋಪಾಲ್ ವಿಷಾನಿಲ ದುರಂತ ಸಂತ್ರಸ್ತರ ಪರವಾಗಿ ಹೋರಾಡುತ್ತಿರುವ ಐದು ಸಂಘಟನೆಗಳು  ಶನಿವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿವೆ.

ಇದಕ್ಕೂ ಮುನ್ನ ಕೇಂದ್ರ ಸರಕಾರವು ಹೇಳಿಕೆಯೊಂದನ್ನು ನೀಡಿ,  ವಿಷಾನಿಲ ದುರಂತ ಸಂತ್ರಸ್ತರ ಪರ ಸಂಘಟನೆಗಳು  ತನಗೆ ಹಸ್ತಾಂತರಿಸಿರುವ ಎಲ್ಲಾ ದಾಖಲೆಗಳನ್ನು  ಹೆಚ್ಚುವರಿ ಪರಿಹಾರ ಕೋರಿ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದೆ.

ಕಳೆದ 38 ವರ್ಷಗಳಲ್ಲಿ ಎಲ್ಲಾ ರೀತಿಯ ಅಡೆತಡೆಗಳು  ಹಾಗೂ ಹಲವು ನಿರಾಶೆಗಳ ಹೊರತಾಗಿಯೂ ಜಗತ್ತಿನ ಅತ್ಯಂತ ಘೋರ ಕೈಗಾರಿಕಾ ದುರಂತದ ಸಂತ್ರಸ್ತರಿಗೆ ಹೊಸ ವರ್ಷವು ಆಶಾವಾದದೊಂದಿಗೆ ಆರಂಭಗೊಂಡಿದೆ ಎಂದು ನಾವು ಭಾವಿಸುತ್ತೇವೆ ’’ ಎಂದು ಹೇಳಿಕೆ ತಿಳಿಸಿದೆ.

ನಿರಶನ ನಡೆಸಿದ ಮಹಿಳೆಯರು ಭೋಪಾಲ್ ವಿಷಾನಿಲ  ಪೀಡಿತ ಸ್ಟೇಶನರಿ ಕರ್ಮಚಾರಿ ಸಂಘ, ಭೋಪಾಲ್ ವಿಷಾನಿಲ ಪೀಡಿತ ನಿರಾಶ್ರಿತ  ಪಿಂಚಣಿದಾರರ ಸಂಘರ್ಷ ಮೋರ್ಚಾ, ಭೋಪಾಲ್ ಗ್ರೂಪ್ ಫಾರ್ ಇನ್ಫಾರ್ಮೇಶನ್ ಆ್ಯಂಡ್ ಆ್ಯಕ್ಷನ್, ಭೋಪಾಲ್ ವಿಷಾನಿಲ ಪೀಡಿತ ಮಹಿಳಾ- ಪುರುಷ ಸಂಘರ್ಷ ಮೋರ್ಚಾ ಹಾಗೂ ಚಿಲ್ಡ್ರನ್ ಎಗೆಯಿನ್ಸ್ಟ್ ಡೋವ್ ಕಾರ್ಬೈಡ್ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.

1984ರ ಡಿಸೆಂಬರ್ 2-3ನೇ ತಾರೀಕಿನ ಮಧ್ಯದ ರಾತ್ರಿಯಲ್ಲಿ ಯೂನಿಯನ್ ಕಾರ್ಬೈಡ್ ಕಂಪೆನಿಯ ಕೀಟನಾಶಕ ಕಾರ್ಖಾನೆಯಲ್ಲಿ ವಿಷಕಾರಿ ಮಿಥಿಲ್  ಇಸೊಸಿಯಾನೇಟ್ ಅ ಸೋರಿಕೆಯಾಗಿ, ಸಹಸ್ರಾರು ಮಂದಿ ಸಾವನ್ನಪ್ಪಿದ್ದರು ಹಾಗೂ ಲಕ್ಷಾಂತರ ಮಂದಿ ಅಸ್ವಸ್ಥರಾಗಿದ್ದರು.

Similar News