ನಿರುದ್ಯೋಗದ ಕಾರಣಕ್ಕೆ ಯುವಕರಿಗೆ ವಧು ದೊರೆಯುತ್ತಿಲ್ಲ: ಶರದ್ ಪವಾರ್
ಪುಣೆ: ನಿರುದ್ಯೋಗ ಸಮಸ್ಯೆ ಕುರಿತು ಕೇಂದ್ರ ಬಿಜೆಪಿ (BJP) ಸರ್ಕಾರದ ವಿರುದ್ಧ ಬುಧವಾರ ಕಿಡಿ ಕಾರಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar), ನಿರುದ್ಯೋಗವು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು, ವಿವಾಹ ಯೋಗ್ಯ ವಯಸ್ಸಿನ ಯುವಕರಿಗೆ ವಧು ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಎನ್‌ಸಿಪಿ ಹಮ್ಮಿಕೊಂಡಿರುವ ಜನ ಜಾಗೃತಿ ಯಾತ್ರೆ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಪವಾರ್, ಜನ ಸಮುದಾಯಗಳ ನಡುವೆ ಸಂಘರ್ಷಗಳನ್ನು ಸೃಷ್ಟಿಸಿ, ನೈಜ ಸಮಸ್ಯೆಗಳಾದ ಹಣದುಬ್ಬರ ಮತ್ತು ನಿರುದ್ಯೋಗದಂಥ ವಿಷಯಗಳಿಂದ ಗಮನವನ್ನು ಬೇರೆಡೆ ತಿರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
"ರೈತರು ಆಹಾರ ಧಾನ್ಯ ಉತ್ಪಾದನೆಯನ್ನು ಹೆಚ್ಚಳ ಮಾಡಿರುವುದರಿಂದ ದೇಶದ ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ. ಆದರೆ, ಅಧಿಕಾರದಲ್ಲಿರುವ ವ್ಯಕ್ತಿಗಳು ರೈತರ ಶ್ರಮಕ್ಕೆ ತಕ್ಕ ಬೆಲೆ ನೀಡಲು ಸಿದ್ಧರಿಲ್ಲ. ಬದಲಿಗೆ, ಮಧ್ಯವರ್ತಿಗಳ ಹಿತಾಸಕ್ತಿಯನ್ನು ರಕ್ಷಿಸುತ್ತಿದ್ದು, ಜನರನ್ನು ಹಣದುಬ್ಬರದ ಪಾತಾಳಕ್ಕೆ ತಳ್ಳುತ್ತಿದ್ದಾರೆ" ಎಂದು ಅವರು ಟೀಕಿಸಿದ್ದಾರೆ.
ಇಂದಿನ ಯುವಕರು ವಿದ್ಯಾವಂತರಾಗಿದ್ದು, ಉದ್ಯೋಗಕ್ಕಾಗಿ ಆಗ್ರಹಿಸುವ ಎಲ್ಲ ಹಕ್ಕು ಅವರಿಗಿದೆ ಎಂದು ಅಭಿಪ್ರಾಯ ಪಟ್ಟಿರುವ ಮಾಜಿ ಕೇಂದ್ರ ಸಚಿವರೂ ಆದ ಶರದ್ ಪವಾರ್, ಮಹಾರಾಷ್ಟ್ರದಿಂದ ಉದ್ಯಮಗಳು ಕಾಲ್ಕೀಳುತ್ತಿವೆ. ಉಳಿದಿರುವ ಉದ್ಯಮಗಳಿಗೆ ಯಾವುದೇ ಬಗೆಯ ಪ್ರೋತ್ಸಾಹ ದೊರೆಯುತ್ತಿಲ್ಲ ಮತ್ತು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶ ನೀಡುತ್ತಿಲ್ಲ. ಇದರಿಂದ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಒಮ್ಮೆ ನಾನು ಪ್ರಯಾಣಿಸುವಾಗ 15-20 ಮಂದಿ ಯುವಕರು ಸಾರ್ವಜನಿಕ ಚೌಕವೊಂದರಲ್ಲಿ ನಿಷ್ಕ್ರಿಯವಾಗಿ ಕುಳಿತಿರುವುದನ್ನು ಕಂಡೆ. ನೀವೇನು ಓದಿದ್ದೀರಿ ಎಂದು ನಾನು ಅವರನ್ನು ಪ್ರಶ್ನಿಸಿದೆ. ಕೆಲವರು ನಾವು ಪದವಿ ಪೂರೈಸಿದ್ದೇವೆ ಎಂದರು. ಮತ್ತೆ ಕೆಲವರು ಸ್ನಾತಕೋತ್ತರ ಪದವಿ ಪೂರೈಸಿದ್ದೇವೆ ಎಂದು ತಿಳಿಸಿದರು. ಅವರನ್ನೆಲ್ಲ ನಿಮಗೆ ವಿವಾಹವಾಗಿದೆಯಾ ಎಂದು ಪ್ರಶ್ನಿಸಿದಾಗ ಅವರು, 'ಇಲ್ಲ' ಎಂದು ಉತ್ತರಿಸಿದರು" ಎಂದು ಎನ್‌ಸಿಪಿ ಮುಖ್ಯಸ್ಥ ಹೇಳಿದ್ದಾರೆ.
ಕಾರಣವೇನೆಂದು ಅವರನ್ನು ಪ್ರಶ್ನಿಸಿದಾಗ, ನಮಗೆ ಉದ್ಯೋಗ ಇಲ್ಲದೆ ಇರುವುದರಿಂದ ನಮಗೆ ಹೆಣ್ಣು ನೀಡಲು ಯಾರೂ ಸಿದ್ಧರಿಲ್ಲ ಎಂದು ಅವರು ತಿಳಿಸಿದರು. ಈ ದೂರುಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಕೇಳಿ ಬರುತ್ತವೆ ಎಂದು ಅವರು ವಿವರಿಸಿದ್ದಾರೆ.
ಉದ್ಯೋಗ ಸೃಷ್ಟಿಸುವ ನೀತಿಗಳಿಗೆ ಉತ್ತೇಜನ ನೀಡುವ ಬದಲು, ಸಮುದಾಯಗಳು ಮತ್ತು ಧರ್ಮಗಳ ನಡುವೆ ವಿಭಜನೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಎರಡು ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಲು ಕೆಲವು ವಿಷಯಗಳನ್ನು ದಿಢೀರ್ ಎಂದು ಸೃಷ್ಟಿಸಲಾಗುತ್ತಿದೆ. ಅದನ್ನು ಅವರೇಕೆ ಮಾಡುತ್ತಿದ್ದಾರೆ? ಯಾಕೆಂದರೆ, ಚುನಾವಣಾ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲದೆ ಇರುವುದರಿಂದ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಏಕೆ ಚಳಿ ಆಗುವುದಿಲ್ಲ ಎಂದು ತಿಳಿಯಲು ತಜ್ಞರನ್ನು ಕೇಳಿದ್ದೇನೆ ಎಂದ ಉ.ಪ್ರ ಉಪಮುಖ್ಯಮಂತ್ರಿ