ಈ ವಾರ

Update: 2023-01-08 09:22 GMT

ದಿಲ್ಲಿ ಯುವತಿಯ ಭಯಾನಕ ಸಾವು

ಈ ವಾರ ಆರಂಭವಾಗಿದ್ದೇ ಹೊಸ ವರ್ಷಾಚರಣೆ ಜೊತೆ. ಹೊಸತನ್ನು ಬರಮಾಡಿಕೊಳ್ಳುವ ವೇಳೆಯಲ್ಲೇ ಭೀಕರ ಅಪರಾಧ ಪ್ರಕರಣವೊಂದಕ್ಕೆ ಸಾಕ್ಷಿಯಾಗಬೇಕಾಯಿತು.

ದೇಶದ ರಾಜಧಾನಿ ದಿಲ್ಲಿಯ ಸುಲ್ತಾನ್‌ಪುರಿ ಬಳಿ ಹೊಸ ವರ್ಷಾಚರಣೆ ಮುಗಿಸಿ ಸ್ಕೂಟಿಯಲ್ಲಿ ವಾಪಸಾಗುತ್ತಿದ್ದ ಯುವತಿಗೆ ಐದು ಮಂದಿಯಿದ್ದ ಕಾರೊಂದು ಡಿಕ್ಕಿ ಹೊಡೆಯಿತು. ಇಷ್ಟೇ ಆಗಿದ್ದರೆ ಬರೀ ಅಪಘಾತ ಆಗುತ್ತಿತ್ತು, ಆದರೆ ಡಿಕ್ಕಿ ಹೊಡೆದ ಕಾರು ಆಕೆಯನ್ನು ಸುಮಾರು 15 ಕಿ.ಮೀ. ಎಳೆದೊಯ್ದಿದೆ. ನಡು ರಸ್ತೆಯಲ್ಲಿ ಬೆತ್ತಲಾದ ಕೈ ಕಾಲು ಮುರಿದ ದೇಹದ ಚರ್ಮ ಸುಲಿದು ಹೋದ ಭಯಾನಕ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ ಆಯ್ತು. ಮೊದಲಿಗೆ ಅತ್ಯಾಚಾರ ಮತ್ತು ಕೊಲೆ ಇರಬಹುದು ಎಂದು ಪ್ರತಿಭಟನೆ ಶುರುವಾಯಿತು. ಆಪ್, ಯುವತಿ ಕುಟುಂಬಸ್ಥರು ಪ್ರತಿಭಟನೆ ಮಾಡಿದರು. ಎಂದಿನಂತೆ ಕಂಬನಿ ಮಿಡಿಯುವುದು, ಸಂತಾಪ ಆಯಿತು. ಆರೋಪಿಗಳ ಬಂಧನ ಆಯಿತು. ಆರೋಪಿಗಳಲ್ಲಿ ಓರ್ವನಾದ ಮನೋಜ್ ಮಿತ್ತಲ್ ಬಿಜೆಪಿ ನಾಯಕ ಎಂದೂ ಆಪ್ ಹೇಳಿತು.

ಈ ಘಟನೆ ಮನುಷ್ಯನ ಕ್ರೌರ್ಯತೆಯ ಮಟ್ಟ ತೋರಿಸಿತ್ತು. ಕಾರಿನಡಿ ಯುವತಿ ಸಿಕ್ಕಿ ಹಾಕಿಕೊಂಡು, ಕಿರುಚಾಡುತ್ತಾ ಇದ್ದರೂ ಆಕೆಯನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದಿದ್ದಾರೆ ಅಂದರೆ ಅದಿನ್ನೆಂತಹ ಕ್ರೌರ್ಯ, ಅಮಾನವೀಯತೆ ಇರಬಹುದು. ಇಷ್ಟೆಲ್ಲಾ ಆದರೂ ಪ್ರಮುಖ ಮಾಧ್ಯಮಗಳಲ್ಲಿ ಈ ಘಟನೆ ಅಷ್ಟೇನೂ ಸುದ್ದಿಯಾಗದೆ ತೆರೆಮರೆಗೆ ಸರಿಯಿತು. ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತೆ ಮತ್ತೆ ಇಂತಹ ಭೀಕರ ಘಟನೆಗಳಿಗೆ ಸಾಕ್ಷಿ ಆಗುತ್ತಲೇ ಇದೆ. ಇತ್ತೀಚಿನ ಎನ್‌ಸಿಆರ್‌ಬಿ ವರದಿ ಪ್ರಕಾರ ಮಹಿಳೆಯರಿಗೆ ಅತಿ ಅಸುರಕ್ಷಿತ ನಗರ ದಿಲ್ಲಿ. ನಿರ್ಭಯಾರಿಂದ ಹಿಡಿದು ಇತ್ತೀಚಿನ ಆ್ಯಸಿಡ್ ಘಟನೆ ತನಕ ಮಹಿಳೆಯರ ಸುರಕ್ಷತೆಯ ಬಗ್ಗೆ ದಿಲ್ಲಿ ಪೊಲೀಸರು ಹಾಗೂ ಅದನ್ನು ನಿಯಂತ್ರಿಸುವ ಕೇಂದ್ರ ಗೃಹ ಸಚಿವಾಲಯ ಮಾಡಿದ್ದೇನು?

ಅಮುಲ್ ವ್ಯಾಪಾರ

ಈ ವಾರ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ ಅಜೆಂಡಾ ಜೊತೆ ರಾಜ್ಯಕ್ಕೆ ಬಂದ ಅಮಿತ್ ಶಾ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತಾಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದನ್ನು ಶಾ ಸ್ಮರಿಸಿದರು. ಕುಟುಂಬ ರಾಜಕಾರಣ ಮಾಡಿಕೊಂಡು ಬಂದ ಕಾಂಗ್ರೆಸ್, ಜೆಡಿಎಸ್ ಈ ಭಾಗಕ್ಕೆ ಕೊಟ್ಟಿದ್ದೇನು? ಎಂದೂ ಅಮಿತ್ ಶಾ ಕೇಳಿದರು.

ಅಮಿತ್ ಶಾ ಬರೀ ರಾಜಕೀಯ ಮಾತನಾಡಿದ್ದರೆ ಸರಿಯಾಗುತ್ತಿತ್ತು, ಆದರೆ ಅವರು ವ್ಯಾಪಾರವನ್ನೂ ಮಾಡುವುದಕ್ಕೆ ಹೊರಟರು, ಗುಜರಾತ್‌ನ ಅಮುಲ್ ಜೊತೆ ಕರ್ನಾಟಕದ ನಂದಿನಿ ವಿಲೀನದ ಪರೋಕ್ಷ ಪ್ರಸ್ತಾಪ ಮಾಡಿದರು. ಅವರು ದಿಲ್ಲಿಗೆ ವಾಪಸಾಗುತ್ತಿದ್ದಂತೆ ಇಲ್ಲಿ ಆಕ್ರೋಶ ಆರಂಭವಾಯಿತು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕನ್ನಡಿಗರ ಅಸ್ಮಿತೆ ಮೇಲೆ ನಿರಂತರ ದಾಳಿ ಆಗುತ್ತಲೇ ಇದೆ. ಅದು ಕನ್ನಡ ಭಾಷೆ ವಿಚಾರ ಇರಬಹುದು, ಕನ್ನಡಿಗರ ಹೆಮ್ಮೆಯ ಎಸ್‌ಬಿಎಂ, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್‌ಗಳನ್ನು ಉತ್ತರದ ಬ್ಯಾಂಕ್‌ಗಳ ಜೊತೆ ವಿಲೀನ ಮಾಡಿದ್ದು ಸಾಕಾಗಿಲ್ಲ ಎಂದು ಈಗ ಇವರ ಕಣ್ಣು ಬಿದ್ದಿರುವುದು ನಂದಿನಿಯ ಮೇಲೆ. ದಕ್ಷಿಣದ ರಾಜ್ಯಗಳು ಅದರಲ್ಲೂ ಕರ್ನಾಟಕ ಇವರಿಗೆ ಸಂಪನ್ಮೂಲದ ಪ್ರಮುಖ ಭಾಗ. ಎಲ್ಲ ಬಾರಿಯೂ ಕನ್ನಡಿಗರು ಎಲ್ಲವನ್ನು ಸಹಿಸಲ್ಲ, ನಂದಿನಿ ಕನ್ನಡಿಗರ ಹೆಮ್ಮೆ. ಅದರ ಸುದ್ದಿಗೆ ಬಂದರೆ ಬಿಡುವ ಮಾತೇ ಇಲ್ಲ ಎನ್ನುವ ಜನರ ಆಕ್ರೋಶಕ್ಕೆ ಮಣಿದು ಕೊನೆಗೆ ಸಿಎಂ, ಸಂಸದ ಪ್ರಹ್ಲಾದ್ ಜೋಷಿ ವಿಲೀನ ಇಲ್ಲ ಎಂದು ಸ್ಪಷ್ಟಪಡಿಸಿದ ಮೇಲೆ ಕನ್ನಡಿಗರ ಕೋಪ ಕೊಂಚ ತಣ್ಣಗಾಗಿದೆ.

ಸಿದ್ದೇಶ್ವರ ಸ್ವಾಮಿ ನಿಧನ

ಈ ವಾರ ಕರ್ನಾಟಕದ ಜನ ಶೋಕ ಸಾಗರದಲ್ಲಿ ಮುಳುಗಿದರು. ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಇಹಲೋಕ ತ್ಯಜಿಸಿದರು. ಇಡೀ ನಾಡು ಅವರ ಅಗಲಿಕೆಗೆ ಕಂಬನಿ ಮಿಡಿಯಿತು. ಅವರ ಮರಣ ಪತ್ರದ ಅನುಸಾರವೇ ಕೊನೆ ಕಾರ್ಯ ಮಾಡಲಾಯಿತು. ಸರಕಾರಿ ಗೌರವದ ಜೊತೆ ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸರ್ವಧರ್ಮೀಯರು ಅವರಿಗೆ ವಿದಾಯ ಕೋರಿದರು. ಹುಟ್ಟು ಮತ್ತು ಸಾವು ಪ್ರಕೃತಿ ಸಹಜ. ಆದರೂ ಅಪರೂಪಕ್ಕೆ ಒಮ್ಮೆ ಒಂದು ಸಾವಿಗೆ ನಾಡಿಗೆ ನಾಡೇ ಮಿಡಿಯುತ್ತದೆ. ಅಂದರೆ ಅವರು ಎಂತಹ ಅದ್ಭುತ ಬದುಕು ಬದುಕಿರಬೇಕು. ಸಿದ್ದೇಶ್ವರರು ನಿಜಾರ್ಥದಲ್ಲಿ ಸಂತರಾಗಿದ್ದರು. ಪುಟ್ಟರಾಜ ಗವಾಯಿಗಳು, ಶಿವಕುಮಾರ ಸ್ವಾಮೀಜಿ ನಂತರ ಸಿದ್ದೇಶ್ವರ ಸ್ವಾಮಿ. ನಿಜ ಅರ್ಥದಲ್ಲಿ ಸಂತರಾಗಿ ಸಮಾಜಕ್ಕೆ ಜ್ಞಾನದ ಬೆಳಕು ನೀಡುತ್ತಾ ಇದ್ದ ಸಿದ್ದೇಶ್ವರರ ಅಗಲಿಕೆ ಶತಮಾನದ ನಷ್ಟ.

ನೋಟ್ ಬ್ಯಾನ್ ವಿಚಾರ

ಈ ವಾರ ಸುಪ್ರೀಂ ಕೋರ್ಟ್ ನೋಟ್ ಬ್ಯಾನ್ ಕುರಿತು ಮಹತ್ವದ ತೀರ್ಪು ನೀಡಿತು. 2016ರಲ್ಲಿ ನರೇಂದ್ರ ಮೋದಿ 5,00 ಮತ್ತು 10,00 ರೂ. ಮುಖ ಬೆಲೆಯ ನೋಟ್ ಬ್ಯಾನ್ ಮಾಡಿದ್ದನ್ನು ಪ್ರಶ್ನಿಸಿ ಹಲವರು ಸುಪ್ರೀಂ ಮೆಟ್ಟಿಲೇರಿದ್ದರು. ಐವರು ನ್ಯಾಯಾಧೀಶರ ಪೀಠ 4-1ರ ಬಹುಮತದೊಂದಿಗೆ ಸರಕಾರದ ತೀರ್ಮಾನ ಎತ್ತಿ ಹಿಡಿದಿದೆ. ನ್ಯಾ. ಬಿ.ವಿ. ನಾಗರತ್ನ ಮಾತ್ರ ಕೇಂದ್ರದ ಈ ನಿರ್ಧಾರ ಕಾನೂನು ಬಾಹಿರ ಎಂದಿದ್ದಾರೆ. ರಿಸರ್ವ್ ಬ್ಯಾಂಕ್ ಸಲ್ಲಿಸಿರುವ ದಾಖಲಾತಿಯಲ್ಲಿ ಸರಕಾರದ ನಿರ್ಧಾರದಂತೆ ಎಂದು ಪದೇ ಪದೇ ಪ್ರಸ್ತಾವ ಆಗಿರುವುದನ್ನು ನ್ಯಾ.ನಾಗರತ್ನ ಗುರುತಿಸಿದ್ದಾರೆ.

ಈ ತೀರ್ಮಾನ ಕೇಂದ್ರದ್ದು ಎನ್ನುವ ಕಾರಣಕ್ಕೆ ಅದನ್ನು ಒಪ್ಪಿಕೊಳ್ಳದಿರುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ಸಂದರ್ಭ ಆರ್ಥಿಕ ವಿಚಾರದಲ್ಲಿ ಕೋರ್ಟ್ ನ ಮಧ್ಯ ಪ್ರವೇಶಕ್ಕೆ ಹಾಕಿಕೊಳ್ಳಬೇಕಾದ ರೇಖೆ ಬಗ್ಗೆಯೂ ಪ್ರಸ್ತಾವ ಆಗಿದೆ. ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಕೇಂದ್ರಕ್ಕೆ ಇದ್ದರೂ ಜನರ ಹಿತದೃಷ್ಟಿಯಿಂದ ಸಂಸತ್ತಿನಲ್ಲಿ ಚರ್ಚಿಸಬೇಕಾದ ಅಗತ್ಯದ ಬಗ್ಗೆಯೂ ತಿಳಿಸಿದೆ. ನೋಟ್ ಬ್ಯಾನ್ ಆಗಿ 6 ವರ್ಷದ ನಂತರ ಕೋರ್ಟ್ ತೀರ್ಪು ಬಂದಿದೆ. ಸರಕಾರದ ತೀರ್ಮಾನ ಸರಿ ಎಂದು ಎಲ್ಲೂ ಕೊರ್ಟ್ ಹೇಳಿಲ್ಲ. ಆದರೆ ಸರಕಾರ ಯಾವ ಉದ್ದೇಶಕ್ಕೆ ನೋಟ್ ಬ್ಯಾನ್ ಮಾಡಿತ್ತೋ ಆ ಉದ್ದೇಶ ಈಡೇರಿದೆಯಾ ಎಂದು ನೋಡಿದರೆ, ಫಲಿತಾಂಶ ಶೂನ್ಯ. ಕಪ್ಪುಹಣಕ್ಕೆ ಕಡಿವಾಣ, ಭಯೋತ್ಪಾದನೆ ನಿಗ್ರಹ, ಡಿಜಿಟಲ್ ಎಕಾನಮಿ ಯಾವುದರಲ್ಲೂ ಅಂದುಕೊಂಡ ಸಾಧನೆ ಇಲ್ಲ. ಈ ಮಧ್ಯೆ ಕಾಡುವ ಪ್ರಶ್ನೆ ಸರತಿ ಸಾಲಲ್ಲಿ ನಿಂತು ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಇವರ ಸಾವಿಗೆ ಯಾರು ಹೊಣೆ? ಉತ್ತರಿಸುವವರು ಯಾರು..?

ಉದ್ಯಮಿ ಪ್ರದೀಪ್ ಆತ್ಮಹತ್ಯೆ

ಈ ವಾರ ಬೆಂಗಳೂರಿನ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿ ಪ್ರದೀಪ್ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು. 3 ಡೆತ್ ನೋಟ್ ಸಿಕ್ಕಿದ್ದು ತಮ್ಮ ಸಾವಿಗೆ ಮಹದೇವಪುರ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಸೇರಿ 6 ಮಂದಿ ಕಾರಣ ಎಂದು ಬರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ, ತೀವ್ರ ಒತ್ತಾಯದ ಬಳಿಕ ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಮೃತ ಪ್ರದೀಪ್ ಮನೆಗೆ ಭೇಟಿ ಕೊಟ್ಟರು. ‘ಅರೆಸ್ಟ್ ಲಿಂಬಾವಳಿ’ ಅಭಿಯಾನ ಮಾಡಿದರು, ಬಿಜೆಪಿ ಸರಕಾರದ ಕಮಿಷನ್, ಡೀಲ್‌ಗೆ ಪ್ರದೀಪ್ ಬಲಿಯಾಗಿದ್ದು, ಇದೊಂದು ಕೊಲೆ ಎಂದರು. ಇನ್ನು ಆಮ್ ಆದ್ಮಿ ಪಕ್ಷ ಕೂಡ ಲಿಂಬಾವಳಿ ಬಂಧನಕ್ಕೆ ಆಗ್ರಹಿಸಿದೆ.

ಬಿಜೆಪಿ ಸರಕಾರದ ಮೇಲೆ ಪದೇ ಪದೇ ಕಮಿಷನ್ ಆರೋಪ ಕೇಳಿ ಬರುವುದು ಮಾತ್ರವಲ್ಲ, ಸಾವುಗಳೂ ಆಗುತ್ತಿವೆ. ಮತ್ತೆ ಸಾಯುತ್ತಾ ಇರುವುದು ಕೂಡ ಬಿಜೆಪಿ ಕಾರ್ಯಕರ್ತರೇ. ಗುತ್ತಿಗೆದಾರ ಸಂತೋಷ್ ಪಾಟೀಲ್‌ರಿಂದ ಪ್ರದೀಪ್ ತನಕ. ಉದ್ಯಮಿ ಪ್ರದೀಪ್ ಕೇಸಲ್ಲಿ ಲಿಂಬಾವಳಿ ಮಧ್ಯಸ್ಥಿಕೆ ವಹಿಸಿದರೆಂಬ ಆರೋಪವಿದೆ. ಶಾಸಕರೊಬ್ಬರು ಇಂತಹ ಡೀಲಿಂಗ್‌ನಲ್ಲಿ ಏನು ಮಾಡುತ್ತಾ ಇದ್ದರು? ಈ ರಾಜಕೀಯಕ್ಕೆ ಇನ್ನೆಷ್ಟು ಜನ ಬಲಿ ಆಗ್ಬೇಕೋ..

ಇಲ್ಲಿ ಹೆಚ್ಚು ಪ್ರಶ್ನಾರ್ಹ ಅನ್ನಿಸುವುದು ಪೊಲೀಸರ ನಡೆ. ಸಾಮಾನ್ಯವಾಗಿ ಆತ್ಮಹತ್ಯೆ ಆಗಿ ಡೆತ್‌ನೋಟ್ ಸಿಕ್ಕರೆ ಅದರಲ್ಲಿ ಹೆಸರು ಪ್ರಸ್ತಾಪ ಆಗಿದ್ದರೆ ಆತ್ಮಹತ್ಯೆಗೆ ಪ್ರಚೋದನೆ ಅಡಿ ಪ್ರಕರಣ ದಾಖಲಿಸಿ ವ್ಯಕ್ತಿಗಳನ್ನು ವಶಕ್ಕೆ ಪಡೆಯಬೇಕು. ಇದು ಕಾನೂನು ಹೇಳುವುದು, ಮತ್ತೆ ಸಾಮಾನ್ಯ ಜನರಿಗೆ ಇದೇ ಅನ್ವಯ ಆಗುತ್ತದೆ. ಆದರೆ ರಾಜಕಾರಣಿಗಳಿಗೆ ನಮ್ಮಲ್ಲಿ ಬೇರೆ ಕಾನೂನೇ ಇದೆ. ಪೊಲೀಸರು ಅರವಿಂದ್ ಲಿಂಬಾವಳಿ ಬಂಧಿಸುವುದು ಬಿಡಿ, ನೋಟಿಸ್ ಕೊಡುವುದಕ್ಕೂ ‘ಅರೆಸ್ಟ್ ಲಿಂಬಾವಳಿ’ ಅಭಿಯಾನ ಬೇಕಾಯಿತು. ಕರ್ನಾಟಕ ಪೊಲೀಸ್ ರಾಜಕೀಯ ನಾಯಕರ ಕಾವಲುಗಾರರಂತೆ ನಡೆದುಕೊಳ್ಳುತ್ತಾ ಇದ್ದಾರೆ ಎನ್ನುವ ಸಂಶಯ ರಾಜ್ಯದ ಜನರ ಆರೋಪ.

ಸಾಹಿತ್ಯ ಸಮ್ಮೇಳನ ಮತ್ತು ಜನಸಾಹಿತ್ಯ ಸಮ್ಮೇಳನ

ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಸಮ್ಮೇಳನದ ಅಧ್ಯಕ್ಷರು ದೊಡ್ಡರಂಗೇಗೌಡರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಡಬಲ್ ಇಂಜಿನ್ ಸರಕಾರವನ್ನು ಟೀಕಿಸಿದ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದರೂ ಕನ್ನಡಕ್ಕೆ ಡಬಲ್ ಇಂಜಿನ್ ಸರಕಾರ ಮಾಡಿದ್ದೇನು? ಎಂದು ಪ್ರಶ್ನಿಸಿದ್ದಾರೆ.

ಈ ಬಾರಿಯ ಸಮ್ಮೇಳನದಲ್ಲಿ ವಿವಿಧತೆ ಇರದೆ, ಮುಸ್ಲಿಮ್ ಸಾಹಿತಿಗಳನ್ನು ಕಡೆಗಣಿಸಿದೆ ಸಾಹಿತ್ಯ ಪರಿಷತ್ ಎಂದು ಪ್ರಗತಿಪರ ಚಿಂತಕರು, ಬರಹಗಾರರು ಹೇಳಿದರು. ಅದು ಅಷ್ಟಕ್ಕೆ ನಿಲ್ಲದೆ ಪ್ರತಿರೋಧ ಸಮ್ಮೇಳನದ ಆಯೋಜನೆಗೂ ಕಾರಣ ಆಯಿತು. ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಈ ಪರ್ಯಾಯ ಸಮ್ಮೇಳನದ ಮುಂಚೂಣಿಯಲ್ಲಿದ್ದಾರೆ. ಸಮಾನ ಮನಸ್ಕರು ಇದಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಇಂದು ಪರ್ಯಾಯ ಜನಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಈ ಬಾರಿಯ ಸಮ್ಮೇಳನ ಸಾಹಿತ್ಯ ಕ್ಷೇತ್ರದ ಎಡ-ಬಲ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಕನ್ನಡದ ಕಂಪು ಪಸರಿಸುವ ಕಡೆ ಎಡ ಬಲದ ವಾಸನೆ ಜೋರಾಗಿಯೇ ಬಡಿದಿದೆ. ಸಾಹಿತ್ಯದಲ್ಲಿ ಇದು ಇದ್ದೇ ಇದೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಜನರ ತೆರಿಗೆ ಹಣದಿಂದ ನಡೆಯುವುದರಿಂದ ಎಲ್ಲರ ಭಾಗೀದಾರಿಕೆ ಮುಖ್ಯ. ಈ ವಿವಾದ ಬಿಳಿಮಲೆ ಮತ್ತು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣ ಆಯಿತು. ಕನ್ನಡದ ಹೆಸರಲ್ಲಿ ಒಂದಾಗಬೇಕಾದ ಮನಸ್ಸುಗಳು ಎಡ-ಬಲದ ನಡುವೆ ಹಂಚಿಹೋಗಿದ್ದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಸೌದಿ ಫುಟ್ಬಾಲ್ ಕ್ಲಬ್‌ಗೆ ರೊನಾಲ್ಡೊ

ಜಗದ್ವಿಖ್ಯಾತ ಫುಟ್ಬಾಲ್ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯದ ಫುಟ್ಬಾಲ್ ಕ್ಲಬ್ ಅಲ್ ನಸ್ರ್ ಸೇರಿದ್ದು ಭಾರೀ ಸುದ್ದಿಯಾಯಿತು. ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ನಂತಹ ಪ್ರತಿಷ್ಠಿತ ಕ್ಲಬ್‌ಗಳಿಗೆ ಆಡಿರುವ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರೆಂದೇ ಖ್ಯಾತರಾದ ರೊನಾಲ್ಡೊ ಈಗ ಅಷ್ಟೇನೂ ಹೆಸರಿಲ್ಲದ ಅರಬ್ ಕ್ಲಬ್ ಒಂದಕ್ಕೆ ಸೇರಿದ್ದು ಬೇರೆ ಬೇರೆ ರೀತಿಯ ಚರ್ಚೆಗೆ ಕಾರಣವಾಯಿತು. ಆದರೆ ಕ್ಲಬ್ ಸೇರ್ಪಡೆಗೆ ರೊನಾಲ್ಡೊ ಪ್ರತೀ ವರ್ಷ ಪಡೆಯುವ ಒಟ್ಟು ಶುಲ್ಕ, ಸಂಭಾವನೆ ಎಲ್ಲ ಸೇರಿದರೆ 200 ಮಿಲಿಯನ್ ಡಾಲರ್‌ವರೆಗೆ ಎಂಬುದು ಮಾತ್ರ ಎಲ್ಲರ ಹುಬ್ಬೇರಿಸಿತು. ಇದು ಫುಟ್ಬಾಲ್‌ನ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆಯಲಿರುವ ಅತಿ ದೊಡ್ಡ ಮೊತ್ತ. 2030ರಲ್ಲಿ ಫುಟ್ಬಾಲ್ ವಿಶ್ವಕಪ್ ಆತಿಥ್ಯ ವಹಿಸಲು ಪ್ರಯತ್ನಿಸುತ್ತಿರುವ ಸೌದಿ ರೊನಾಲ್ಡೊ ಅವರನ್ನು ಕೇವಲ ಆಟಗಾರನಾಗಿ ಮಾತ್ರವಲ್ಲದೆ ಆ ದೇಶದ ಫುಟ್ಬಾಲ್ ರಾಯಭಾರಿಯಾಗಿ ಬಳಸಲಿದೆ.

Similar News