ಟ್ವೆಂಟಿ-20 ಕ್ರಿಕೆಟ್ ನಿಂದ ರೋಹಿತ್, ವಿರಾಟ್ ಹೊರಕ್ಕೆ, ಹಾರ್ದಿಕ್ ಪಾಂಡ್ಯ ಪೂರ್ಣಕಾಲಿಕ ನಾಯಕ?
ಹೊಸದಿಲ್ಲಿ: ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂಬರುವ ಟ್ವೆಂಟಿ-20 ಪಂದ್ಯಗಳಿಗೆ ಆಯ್ಕೆಯಾಗುವ ಸಾಧ್ಯತೆಯಿಲ್ಲ ಎಂದು ಮೂಲಗಳು NDTV ಗೆ ತಿಳಿಸಿವೆ.
ಒಂದು ದಶಕಕ್ಕೂ ಹೆಚ್ಚು ಸಮಯದಿಂದ ರೋಹಿತ್ ಹಾಗೂ ವಿರಾಟ್ ಭಾರತೀಯ ಕ್ರಿಕೆಟ್‌ನ ಆಧಾರ ಸ್ತಂಭವಾಗಿದ್ದಾರೆ. ಆದರೆ ದೇಶದ ಕ್ರಿಕೆಟ್ ಆಡಳಿತ ಮಂಡಳಿ ಬಿಸಿಸಿಐ 2024ರಲ್ಲಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಯುವ ಟಿ-20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಟಿ-20 ಮಾದರಿ ಕ್ರಿಕೆಟಿಗೆ ಯುವ ಆಟಗಾರರಿಗೆ ಹೆಚ್ಚು ಆದ್ಯತೆ ನೀಡಲು ಯೋಜಿಸುತ್ತಿದೆ. ಭಾರತದ ಟಿ-20 ಯೋಜನೆಗಳಲ್ಲಿ ಹಾರ್ದಿಕ್ ಪಾಂಡ್ಯ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಹಾಗೂ ಪಾಂಡ್ಯರನ್ನು ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಪೂರ್ಣಾಕಾಲಿಕ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
ಜನವರಿ 7 ರಂದು ನೇಮಕಗೊಂಡ ಚೇತನ್ ಶರ್ಮಾ ನೇತೃತ್ವದ ಹೊಸ ಬಿಸಿಸಿಐ ಆಯ್ಕೆ ಸಮಿತಿಯು ವಿರಾಟ್ ಹಾಗೂ ರೋಹಿತ್ ಅವರ ಟಿ-20 ಭವಿಷ್ಯದ ಬಗ್ಗೆ ಅವರ ಜೊತೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸ್ಟಾರ್ ಜೋಡಿಯು ಟಿ-20 ಗಳಲ್ಲಿಸ್ವತಃ ಆಯ್ಕೆಗೆ ಲಭ್ಯವಿದ್ದಾರೆ. ಆದರೆ "ಬಿಸಿಸಿಐ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟಿ-20ಗೆ ಯುವ ತಂಡವನ್ನು ಬಯಸುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತದ ಟಿ-20 ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದಾಗ ಟಿ-20 ನಾಯಕನಾಗಿ ರೋಹಿತ್ ಮುಂದುವರಿಯುವುದಿಲ್ಲ ಎಂಬ ಕುರಿತು ಸಾಕಷ್ಟು ಊಹಾಪೋಹಗಳು ಇದ್ದವು. ರೋಹಿತ್ ಹಾಗೂ ಭಾರತದ ಮಾಜಿ ನಾಯಕ ವಿರಾಟ್ ಇಬ್ಬರೂ ಶ್ರೀಲಂಕಾ ವಿರುದ್ಧದ ಟಿ-20 ತಂಡದ ಭಾಗವಾಗಿರಲಿಲ್ಲ.
ರೋಹಿತ್ ಜೂನ್ 2007 ರಲ್ಲಿ ಏಕದಿನ ಪಂದ್ಯವನ್ನಾಡುವ ಮೂಲಕ ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಮೊದಲ ಟಿ-20 ಪಂದ್ಯ ಆಡಿದರು. ಮತ್ತೊಂದೆಡೆ, ವಿರಾಟ್, ಆಗಸ್ಟ್, 2008 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ಜೂನ್, 2010 ರಲ್ಲಿ ತಮ್ಮ ಮೊದಲ ಟಿ-20ಯನ್ನು ಆಡಿದ್ದರು. ಇಬ್ಬರೂ ಟಿ-20 ವಿಶ್ವಕಪ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ, ಆದರೆ ನಾಯಕರಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.
ವಿರಾಟ್ 115 ಪಂದ್ಯಗಳಲ್ಲಿ 52.73 ಸರಾಸರಿಯಲ್ಲಿ 4,008 ರನ್ ಗಳಿಸುವ ಮೂಲಕ ಟಿ-20 ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ 148 ಪಂದ್ಯಗಳಲ್ಲಿ 31.32 ಸರಾಸರಿಯಲ್ಲಿ 3,853 ರನ್ ಗಳಿಸಿ ಆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.