ವಿಐಪಿ ಹಜ್ ಕೋಟಾ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ
ಶೀಘ್ರದಲ್ಲೇ ಹೊಸ ಹಜ್ ನೀತಿ ಜಾರಿ
ಹೊಸದಿಲ್ಲಿ: ಉನ್ನತ ಸಾಂವಿಧಾನಿಕ ಹುದ್ದೆಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಬಳಿ ಇದ್ದ ವಿಐಪಿ ಹಜ್ ಕೋಟಾ (VIP Haj quota) ಅನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ (Union government) ನಿರ್ಧರಿಸಿದೆ. ಸರ್ಕಾರ ಸದ್ಯದಲ್ಲಿಯೇ ಹೊಸ ಹಜ್ ನೀತಿ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು indiatoday.in ವರದಿ ಮಾಡಿದೆ.
ವಿಐಪಿ ಹಜ್ ಕೋಟಾ ಅಡಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಮತ್ತು ಹಜ್ ಸಮಿತಿ ಬಳಿ ಇದ್ದ ವಿವೇಚನಾ ಕೋಟಾದಡಿ ಸುಮಾರು 500 ಮಂದಿ ಹಜ್ ಯಾತ್ರೆ ಕೈಗೊಳ್ಳಬಹುದಾಗಿತ್ತು. ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ.
ಈಗ ಎಲ್ಲಾ ಹಜ್ ಯಾತ್ರಾರ್ಥಿಗಳು ಹಜ್ ಸಮಿತಿ ಮತ್ತು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕವೇ ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ. ವಿಐಪಿ ಸಂಸ್ಕೃತಿಯನ್ನು ನಿಲ್ಲಿಸುವ ಉದ್ದೇಶ ಈ ಕ್ರಮದ ಹಿಂದೆ ಇದೆ ಎನ್ನಲಾಗಿದೆ.
ರಾಷ್ಟ್ರಪತಿಗಳ ಕೋಟಾದಡಿ 100 ಸೀಟುಗಳಿದ್ದರೆ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಕೋಟಾದಡಿ ತಲಾ 75 ಸೀಟುಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರ ಬಳಿ 50 ಸೀಟುಗಳಿದ್ದವು. ಹಜ್ ಸಮಿತಿ ಬಳಿಯಿದ್ದ 200 ವಿಐಪಿ ಸೀಟುಗಳನ್ನೂ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: EWS ಮೀಸಲಾತಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧ, ರಾಜ್ಯದಲ್ಲಿ ಹಾಲಿ ಮೀಸಲಾತಿ ನೀತಿ ಮುಂದುವರಿಕೆ: ತಮಿಳುನಾಡು ಸರ್ಕಾರ