ಉತ್ತರಪ್ರದೇಶದಲ್ಲಿ ಲೋಕಸಭೆ, ಇತರೆ ಚುನಾವಣೆಗಳಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಮಾಯಾವತಿ

Update: 2023-01-15 09:34 GMT

ಲಕ್ನೋ: ತಮ್ಮ ಪಕ್ಷವು 2024 ರ ಲೋಕಸಭೆ ಹಾಗೂ  ಇತರ ವಿಧಾನಸಭಾ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ Mayawati  ಅವರು ರವಿವಾರ ದೃಢಪಡಿಸಿದ್ದಾರೆ.

ತಮ್ಮ 67ನೇ ಹುಟ್ಟುಹಬ್ಬದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಯಾವತಿ, ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಗಳು ಹಾಗೂ ಇತರ ರಾಜ್ಯಗಳ ಚುನಾವಣೆಗಳ ಪೂರ್ವದಲ್ಲಿ ಬಿಎಸ್‌ಪಿಯೊಂದಿಗೆ "ಸಂಭಾವ್ಯ ಮೈತ್ರಿ" ಕುರಿತು ವದಂತಿಗಳನ್ನು ಹಬ್ಬಿಸುತ್ತಿರುವ ವಿರೋಧ ಪಕ್ಷಗಳನ್ನು, ವಿಶೇಷವಾಗಿ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿದರು. ಇತರ ರಾಜಕೀಯ ಪಕ್ಷಗಳು ತಮ್ಮ ಮತ ಬ್ಯಾಂಕ್ ಅನ್ನು ಬಿಎಸ್‌ಪಿ ಪರವಾಗಿ ವರ್ಗಾಯಿಸಲು ವಿಫಲವಾದ ಕಾರಣ ಮೈತ್ರಿ ಯಿಂದ "ಕಹಿ ಅನುಭವ" ತನಗಾಗಿದೆ ಎಂದು ಮಾಯಾವತಿ ಹೇಳಿದರು.

2019 ರ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಅವರು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರು ಹಾಗೂ  10 ಲೋಕಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದಾಗ್ಯೂ, ಎಸ್ಪಿ ತನ್ನ ಪ್ರಮುಖ ಮತದಾರರನ್ನು ತನ್ನ ಪಕ್ಷದ ಕಡೆಗೆ ವರ್ಗಾಯಿಸಲು "ವಿಫಲವಾಗಿದೆ" ಎಂದು ಆರೋಪಿಸಿ ಅವರು ತಕ್ಷಣವೇ  ಮೈತ್ರಿಯನ್ನು ಮುರಿದಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಕೇವಲ ಐದು ಸ್ಥಾನಗಳನ್ನು ಗಳಿಸಿತ್ತು.

ಮಾಯಾವತಿಯವರ ನಿಲುವು ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಅವರ ಪ್ರಮುಖ ರಾಜಕೀಯ ನಡೆಯನ್ನು ಗುರುತಿಸಿದೆ.

Similar News