ಚಲನಚಿತ್ರಗಳ ವಿರುದ್ಧ ಅನಗತ್ಯ ಹೇಳಿಕೆ ನೀಡುವುದರಿಂದ ದೂರ ಉಳಿಯಿರಿ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ

Update: 2023-01-18 07:59 GMT

ಹೊಸದಿಲ್ಲಿ: ಚಲನಚಿತ್ರಗಳಂಥ ಅಪ್ರಸ್ತುತ ವಿಚಾರಗಳ ಕುರಿತು ಹೇಳಿಕೆ ನೀಡುವುದರಿಂದ ದೂರ ಉಳಿದು, ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಬೇಕು ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಿಜೆಪಿ (BJP) ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಬೊಹ್ರಾ, ಪಸ್ಮಂದ ಮತ್ತು ಸಿಖ್ ಥರದ ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡಂತೆ ಸಮಾಜದ ಎಲ್ಲ ವರ್ಗದ ಜನರನ್ನು ತಲುಪಿ, ಯಾವುದೇ ರಾಜಕೀಯ ಲಾಭದ ಅಪೇಕ್ಷೆ ಇಲ್ಲದೆ ಅವರಿಗಾಗಿ ದುಡಿಯಬೇಕು ಎಂದು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದ ಅವರು, 2024ರ ಲೋಕಸಭಾ ಚುನಾವಣೆಗೆ ಸುಮಾರು 400 ದಿನ ಮಾತ್ರ ಬಾಕಿ ಉಳಿದಿದ್ದು, ಪಕ್ಷದ ಕಾರ್ಯಕರ್ತರು ಸಮಾಜದ ಎಲ್ಲ ವರ್ಗಗಳಿಗಾಗಿ ಪೂರ್ಣ ನಿಷ್ಠೆಯಿಂದ ದುಡಿಯಬೇಕು ಎಂದು ಸೂಚಿಸಿದ್ದಾರೆ. ಈ ಭಾಷಣದ ಕುರಿತು ಪ್ರತಿಕ್ರಿಯಿಸಿರುವ ಹಲವಾರು ಸಭಿಕರು, ಅವರ ಭಾಷಣವು ಕೇಸರಿ ಸಂಘಟನೆಯನ್ನು  ವಿಸ್ತರಿಸುವ ಮತ್ತು ದೇಶವನ್ನು ಎಲ್ಲ ವಿಧದಲ್ಲೂ ಮುನ್ನಡೆಸುವ ಬಹು ದೊಡ್ಡ ದೂರದೃಷ್ಟಿ ಹೊಂದಿತ್ತು ಎಂದು ಶ್ಲಾಘಿಸಿದ್ದಾರೆ.

ಸಭೆಯಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ವಿವಿಧ ಪಕ್ಷಗಳ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ತುಷ್ಟೀಕರಣದ ಬಗ್ಗೆ ಮಾತನಾಡಿದರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಭೇಟಿ ಮಾಡಿ, ಅವರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ನಿಯಮಿತವಾಗಿ ವಿಶ್ವವಿದ್ಯಾಲಯಗಳು ಹಾಗೂ ಚರ್ಚ್‌ಗಳಿಗೆ ತೆರಳಬೇಕು ಎಂದು ಸೂಚಿಸಿದರು ಎಂದು ಹೇಳಿದ್ದಾರೆ.

ಭಾರತದ ಅತ್ಯುತ್ತಮ ಯುಗ ಬರುತ್ತಲಿದ್ದು, ಪಕ್ಷವು ದೇಶದ ಅಭಿವೃದ್ಧಿಗಾಗಿ ಅರ್ಪಿಸಿಕೊಳ್ಳಬೇಕು ಮತ್ತು 2047ರವರೆಗಿನ 25 ವರ್ಷದ ಅವಧಿಯ "ಅಮೃತ ಕಾಲ" ಯೋಜನೆಯನ್ನು "ಕರ್ತವ್ಯ ಕಾಲ" ಯೋಜನೆಯಾಗಿ ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಯಾವುದೇ ಬಗೆಯ ಅತಿಯಾದ ಆತ್ಮವಿಶ್ವಾಸದ ಕುರಿತು ಪಕ್ಷಕ್ಕೆ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 1998ರ ಚುನಾವಣೆಯ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪ್ರಿಯತೆಯನ್ನು ಕಳೆದುಕೊಂಡಿದ್ದರೂ ಮರಳಿ ಅಧಿಕಾರಕ್ಕೆ ಬಂದಿದ್ದ ನಿದರ್ಶನವನ್ನು ನೀಡಿದರು. ಆ ಸಂದರ್ಭದಲ್ಲಿ ಅವರು ಮಧ್ಯಪ್ರದೇಶ ರಾಜ್ಯದ ಬಿಜೆಪಿ ಸಂಘಟನಾ ವ್ಯವಹಾರಗಳ ಸೂತ್ರದಾರರಾಗಿದ್ದರು ಎಂದು ಮೂಲಗಳು ತಿಳಿಸಿವೆ.

"ಯಾರು ಪಣ ತೊಡುತ್ತಾರೊ, ಅವರು ಇತಿಹಾಸ ನಿರ್ಮಿಸುತ್ತಾರೆ. ಬಿಜೆಪಿ ಕೂಡಾ ಪಣ ತೊಟ್ಟು, ಇತಿಹಾಸ ಸೃಷ್ಟಿಸಬೇಕು" ಎಂದೂ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಪ್ರತಿ ನಿತ್ಯ ಒಂದು ಕೋಟಿ ಮೊಟ್ಟೆ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ

Similar News