ದೇಶದ ಎಲ್ಲ 46 ಮಾನಸಿಕ ಆರೋಗ್ಯ ಸಂಸ್ಥೆಗಳು ಶೋಚನೀಯ ಸ್ಥಿತಿಯಲ್ಲಿವೆ: NHRC

Update: 2023-01-26 15:50 GMT

ಹೊಸದಿಲ್ಲಿ,ಜ.26: ದೇಶದಲ್ಲಿಯ ಎಲ್ಲ 46 ಮಾನಸಿಕ ಆರೋಗ್ಯ ಸಂಸ್ಥೆಗಳು ‘ಅಮಾನವೀಯ ಮತ್ತು ಶೋಚನೀಯ ’ಸ್ಥಿತಿಯಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC )ವು, ಇದು ಸಂಬಂಧಿಸಿದ ಅಧಿಕಾರಿಗಳ ಕಳಪೆ ನಿರ್ವಹಣೆಯನ್ನು ಸೂಚಿಸುತ್ತಿದೆ ಎಂದು ಬೆಟ್ಟು ಮಾಡಿದೆ.

ತನ್ನ ಅವಲೋಕನಗಳು ಗ್ವಾಲಿಯರ್, ಆಗ್ರಾ ಮತ್ತು ರಾಂಚಿಯಲ್ಲಿನ ನಾಲ್ಕು ಸರಕಾರಿ ಆಸ್ಪತ್ರೆಗಳಿಗೆ ತನ್ನ ಪೂರ್ಣ ಆಯೋಗದ ಭೇಟಿಗಳು ಮತ್ತು ಉಳಿದ 42 ಆಸ್ಪತ್ರೆಗಳಿಗೆ ದೇಶದ ವಿವಿಧ ಭಾಗಗಳಲ್ಲಿಯ ತನ್ನ ವಿಶೇಷ ವರದಿಗಾರರ ಭೇಟಿಗಳನ್ನು ಆಧರಿಸಿದೆ ಎಂದು ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ತಳಮಟ್ಟದಲ್ಲಿಯ ಪರಿಸ್ಥಿತಿ ಮತ್ತು 2017ರ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆಯ ಅನುಷ್ಠಾನದ ಸ್ಥಿತಿಗತಿಯ ಮೌಲ್ಯಮಾಪನಕ್ಕಾಗಿ ಈ ಭೇಟಿಗಳನ್ನು ನೀಡಲಾಗಿತ್ತು ಎಂದು ಅದು ಹೇಳಿದೆ.

ಆಸ್ಪತ್ರೆಗಳು ವೈದ್ಯರು ಮತ್ತು ಸಿಬ್ಬಂದಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ ಹಾಗೂ ಗುಣಮುಖರಾದ ರೋಗಿಗಳನ್ನು ಕಾನೂನುಬಾಹಿರವಾಗಿ ಆಸ್ಪತ್ರೆಗಳಲ್ಲಿ ಇಟ್ಟುಕೊಳ್ಳಲಾಗುತ್ತಿದೆ ಎಂದು ಹೇಳಿರುವ ಆಯೋಗವು, ಚೇತರಿಸಿಕೊಂಡ ರೋಗಿಗಳನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದು ಅಸಾಂವಿಧಾನಿಕವಾಗಿದೆ ಎಂದಿದೆ. ದೇಶಾದ್ಯಂತದ ಮಾನಸಿಕ ಆರೋಗ್ಯ ಕೇಂದ್ರಗಳ ಅಮಾನವೀಯ ಮತ್ತು ಶೋಚನೀಯ ಸ್ಥಿತಿಗಳು ಮತ್ತು ವಿಷಾದನೀಯ ವ್ಯವಹಾರಗಳು ಮಾನಸಿಕ ರೋಗಿಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಅದು ಬೆಟ್ಟು ಮಾಡಿದೆ.

ಆಯೋಗವು ಆರು ವಾರಗಳಲ್ಲಿ ಕ್ರಮಾನುಷ್ಠಾನ ವರದಿಗಳನ್ನು ಸಲ್ಲಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ,ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳು,ಮಹಾನಗರಗಳಲ್ಲಿಯ ಪೊಲೀಸ್ ಆಯುಕ್ತರು ಮತ್ತು 46 ಮಾನಸಿಕ ಆರೋಗ್ಯ ಕೇಂದ್ರಗಳ ನಿರ್ದೇಶಕರಿಗೆ ನೋಟಿಸ್ಗಳನ್ನು ಹೊರಡಿಸಿದೆ.

ಇದನ್ನು ಓದಿ: ಲಕ್ನೋ ಕಟ್ಟಡ ದುರಂತ: ಆರು ವರ್ಷದ ಬಾಲಕನ ಪ್ರಾಣ ಉಳಿಸಲು ನೆರವಾದ ʼಕಾರ್ಟೂನ್‌ ಶೋʼ!

Similar News