ಮನೋ ಅಹಂಕಾರದ ಮಾನಾಪಮಾನ

ಮನೋ ಚರಿತ್ರ

Update: 2023-06-30 10:50 GMT

ಸನ್ಮಾನ ಮತ್ತು ಅಪಮಾನ; ಈ ಎರಡರ ನಡುವಿನ ತೂಗುಯ್ಯಾಲೆಯಲ್ಲಿ ಸಾಮಾನ್ಯವಾದ ಮನಸ್ಸು ತೊಯ್ದಾಡುತ್ತಿರುತ್ತದೆ. ಮನಸ್ಸಿಗೆ ಬಲ ಎನ್ನುವುದು ಇದೆಯೇ? ಹೌದು ಇದೆ. ಸಹನೆಯೇ ಆ ಬಲವನ್ನು ಅಳೆಯುವ ಮಾಪನ.

ಮಾನ ಎಂದರೆ ನಮ್ಮನ್ನು ನಾವು ಹೀಗೆ ಅಥವಾ ಇಷ್ಟು ಎಂಬ ವ್ಯಕ್ತಿತ್ವದ ಘನತೆಯ ಗುರುತನ್ನು ಹೊಂದಿರುವ ಅಳತೆ. ಸನ್ಮಾನ ಎಂದರೆ ಇತರರು ಒಬ್ಬ ವ್ಯಕ್ತಿಯಲ್ಲಿರುವ ಗುಣಗಳನ್ನು ಗುರುತಿಸಿ, ಅವನ್ನು ಶ್ರೇಷ್ಠವೆಂದು ಕರೆದು, ತಾವು ಅದನ್ನು ಮನ್ನಿಸಿದ್ದೇವೆ, ಅದನ್ನು ಪ್ರಶಂಸಿಸುತ್ತೇವೆ ಎಂದು ಕೆಲವು ಸಂಕೇತಗಳಿಂದ ಬಹಿರಂಗವಾಗಿ ಗೌರವಿಸುವುದು.

ಹಾಗೆಯೇ ಅಪಮಾನ ಎಂದರೆ, ಇತರರು ಒಬ್ಬ ವ್ಯಕ್ತಿಯಲ್ಲಿರುವ ಗುಣಗಳನ್ನು ಗುರುತಿಸಿ, ಅವನ್ನು ಕನಿಷ್ಠವೆಂದು ಕರೆದು, ತಾವು ಅದನ್ನು ಮನ್ನಿಸುವುದಿಲ್ಲ, ತಿರಸ್ಕರಿಸುತ್ತೇವೆ, ನಿರಾಕರಿಸುತ್ತೇವೆ ಎಂದು ಕೆಲವು ಸಂಕೇತಗಳಿಂದ ಬಹಿರಂಗವಾಗಿ ಖಂಡಿಸುವುದು. ಒಬ್ಬ ವ್ಯಕ್ತಿಯ ಮನಸ್ಸಿನ ಬಲ ತಾನು ತನ್ನ ಬಗ್ಗೆ ಹೊಂದಿರುವ ಮಾನದ ಮೇಲೆ ಆಧಾರಿತವಾಗಿರುತ್ತದೆ. ಮಾನ ಎಂದರೆ ತನ್ನ ವ್ಯಕ್ತಿತ್ವದ ಘನತೆಯ ಬಗ್ಗೆ ತಾನು ಅಳೆದು ತೂಗಿರುವಂತಹ ಮೌಲ್ಯ ಎಂದು ಮೊದಲೇ ಹೇಳಲಾಗಿದೆ.

ಈ ವ್ಯಕ್ತಿತ್ವದ ಘನತೆಯು ತನಗಿರುವ ಯಾವುದೋ ಒಂದು ಸಾಮರ್ಥ್ಯವನ್ನು ಆಧರಿಸಿರುತ್ತದೆ. ಅದು ವ್ಯಕ್ತಿಯ ವಿದ್ಯೆ, ಪ್ರತಿಭೆ, ಹಣ, ದೈಹಿಕ ಸದೃಢತೆ ಅಥವಾ ಸಲಿಲತೆ, ಕಲೆ, ಪ್ರಾವೀಣ್ಯತೆ, ಆಲೋಚನೆ, ಸೃಜನಶೀಲತೆ, ಕ್ರಿಯಾಶೀಲತೆ; ಹೀಗೆ ಹಲವಾರು ವಿಷಯಗಳನ್ನು ಅನುಸರಿಸುತ್ತದೆ. ಹೀಗೆ ಯಾವುದೋ ಒಂದರ ಆಧಾರದಲ್ಲೇ ವ್ಯಕ್ತಿ ತನ್ನ ಮಾನವನ್ನು ನಿರ್ಣಯಿಸಿಕೊಂಡಿರುತ್ತಾನೆ. ಸರಿ, ವ್ಯಕ್ತಿಯ ಮಾನವನ್ನು ಮನ್ನಿಸಿದ ಇತರರು ಆತನ ಸಾಮರ್ಥ್ಯವನ್ನು ಪ್ರಶಂಸಿಸಿ ಕೆಲವು ಸಂಕೇತಗಳನ್ನು ತೋರುತ್ತಾರೆ.

ಅದು ಹೊಗಳಿಕೆ, ಪ್ರಶಸ್ತಿ, ಮೆಚ್ಚುಗೆಯ ಬರವಣಿಗೆ; ಹೀಗೆ ನಾನಾ ರೀತಿಯಲ್ಲಿ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಇದು ಸನ್ಮಾನ. ಹಾಗಾದಾಗ ವ್ಯಕ್ತಿಯ ಮಾನವು ಹಿಗ್ಗುವುದು. ಆಗ ಅವನು ಮತ್ತಷ್ಟು ಬಲಗೊಳ್ಳುತ್ತಾನೆ. ತನ್ನ ಸಾಮರ್ಥ್ಯ, ಸೃಜನಶೀಲತೆ, ಕ್ರಿಯಾಶೀಲತೆ, ಪ್ರತಿಭೆಯೇ ಮೊದಲಾದ ವಿಶೇಷಣಗಳನ್ನು ಮತ್ತಷ್ಟು ವಿಸ್ತಾರಗೊಳಿಸಿಕೊಳ್ಳಲು ಅವಕಾಶಗಳು ದೊರಕುತ್ತವೆ. ಹಾಗೆಯೇ ವ್ಯಕ್ತಿಯು ತಾನು ಹೊಂದಿರುವ ಮಾನವನ್ನು ಇತರರು ತಮ್ಮ ಮಾನದಂಡಗಳಿಂದ ಅಳೆದು ಅದನ್ನು ಖಂಡಿಸುತ್ತಾರೆ. ಅದನ್ನು ಒಪ್ಪಲಾರದು ಎನ್ನುತ್ತಾರೆ.

ಅವಹೇಳನ, ಗೇಲಿ ಮಾಡುತ್ತಾರೆ. ತಿರಸ್ಕರಿಸುತ್ತಾರೆ. ಇದನ್ನು ಆ ವ್ಯಕ್ತಿಗೆ ಮಾಡುವ ಅಪಮಾನವೆಂದು ತಿಳಿಯೋಣ. ಇದರಿಂದಾಗಿ ತನ್ನ ಮಾನವು ಕುಗ್ಗಿ, ಕಳಾಹೀನವಾಗಿಯೂ, ಬಲಹೀನವಾಗಿಯೂ ತೋರುವಂತೆ ಆ ವ್ಯಕ್ತಿಗೆ ಭಾಸವಾಗುವುದು. ಒಟ್ಟಾರೆ ಒಬ್ಬ ವ್ಯಕ್ತಿಯ ಮಾನವು ಆಗುವ ಸನ್ಮಾನಗಳಿಂದ ಹಿಗ್ಗುವುದೂ, ಪಡುವ ಅಪಮಾನಗಳಿಂದ ಕುಗ್ಗುವುದೂ ಒಂದು ಸಾಮಾನ್ಯ ಮನಸ್ಥಿತಿ. ಇದು ಇಲ್ಲಿಗೇ ನಿಂತಿತೇ? ಇಲ್ಲಿಂದಲೇ ಸಮಸ್ಯೆಗಳು ಪ್ರಾರಂಭವಾಗುವುದು.

ವ್ಯಕ್ತಿ ತನಗೆ ಸಿಕ್ಕ ಖ್ಯಾತಿ, ಗೌರವ ಮತ್ತು ಗುರುತು (ರೆಕಗ್ನಿಶನ್) ಇತ್ಯಾದಿಗಳಿಂದ ತನ್ನ ಕನಸನ್ನು, ತನ್ನ ಬಗೆಗಿನ ಚಿತ್ರಣಗಳನ್ನು, ತನ್ನ ಅರ್ಹತೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಾನೆ. ಅವನಲ್ಲಿ ಈಗಾಗಲೇ ಮೊದಲಿನಿಂದಲೂ ಇರುವಂತಹ ಗುರುತಿಸಿ ಗೌರವಿಸಲ್ಪಡುವಂತಹ ಆಸೆ ಮತ್ತು ಕನಸುಗಳು ಹಿಗ್ಗುತ್ತಾ ಹೋಗುತ್ತವೆ. ಇದು ಅವನ ಸಾಮರ್ಥ್ಯವನ್ನು ಬಲಪಡಿಸುವುದಕ್ಕಿಂತ ಅವನ ಅಹಂಕಾರವನ್ನು (ಈಗೋ) ಬಲಪಡಿಸುತ್ತಾ ಹೋಗುತ್ತದೆ. ಹೊಗಳಿಕೆ ಎಂಬುದು ಹೊನ್ನ ಶೂಲವಾಗುವುದು ಇಲ್ಲೇ. ಬಹಳಷ್ಟು ಸಲ ಅವಶ್ಯಕತೆಯನ್ನು ಮೀರಿ ಪ್ರಶಂಸೆಗಳು ಸಲ್ಲುತ್ತವೆ.

ಇದರಿಂದ ವ್ಯಕ್ತಿಯು ತನ್ನ ಮಿತಿಯನ್ನು ಮೀರಿ ತನ್ನ ಚಿತ್ರಣವನ್ನು ಹಿಗ್ಗಿಸಿಕೊಂಡುಬಿಡುತ್ತಾನೆ. ಅದನ್ನು ಸದಾ ಕಾಪಾಡಿಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ಬಂದುಬಿಡುತ್ತದೆ. ಏಕೆಂದರೆ ಅವನ ನಿಜವಾದ ಸಾಮರ್ಥ್ಯಕ್ಕಿಂತ ಮಿಗಿಲಾಗಿ ಅವನು ತನ್ನನ್ನು ತಾನು ತೋರ್ಪಡಿಸಿಕೊಳ್ಳಲು ಹೋದಾಗ ಒಂದೋ ವಿಫಲವಾಗುತ್ತಾನೆ ಅಥವಾ ಅವನ ಪ್ರಕಟನೆ ಅಥವಾ ಪ್ರದರ್ಶನವು ಪೊಳ್ಳಾಗುತ್ತದೆ. ಇದರಿಂದಾಗಿ ಅವನಿಗೇ ಭ್ರಮನಿರಸನವಾಗುವಂತಹ ಪರಿಸ್ಥಿತಿ ಬಂದರೂ ಅದನ್ನು ಒಪ್ಪಿ ಕೊಳ್ಳಲಾಗದಂತಹ ಮನಸ್ಥಿತಿ ಅವನದಾಗಿರುತ್ತದೆ.

ಸಮಾಜದ ಪ್ರತಿಷ್ಠಿತ ಸ್ಥಾನಮಾನ ತನಗಿದೆ ಎಂಬ ಮನಸ್ಥಿತಿಯು ಅದಕ್ಕೆ ತಕ್ಕಂತಹ ಜೀವನಶೈಲಿ, ಉಡುಪು, ವರ್ತನೆಗಳು, ಮಾತುಗಳು, ಇತರ ವ್ಯಕ್ತಿಗಳನ್ನು ನೋಡುವ ಬಗೆ; ಹೀಗೆ ಹಲವು ವಿಚಾರಗಳು ಮಾನಸಿಕವಾಗಿ ನುಸುಳಲಾರಂಭಿಸುತ್ತವೆ. ಮಾನಸಿಕ ಅಹಂಕಾರವು ಇಮೇಜನ್ನು ಕಾಪಾಡಿಕೊಳ್ಳುವ ತಂತ್ರಗಾರಿಕೆಗಳನ್ನು ಹೆಣೆಯಲಾರಂಭಿಸುತ್ತದೆ. ಹಾಗೆಯೇ ಆ ವ್ಯಕ್ತಿ ಯಾವಾಗಲೂ ಏಕಮೇವಾದ್ವಿತೀಯನಾಗಿರಲೇ ಬಯಸುತ್ತಿರುತ್ತಾನೆ. ಅವನಷ್ಟೇ ಸಾಮರ್ಥ್ಯದ ಅಥವಾ ಅವನಿಗಿಂತ ಮಿಗಿಲಾದ ಇನ್ಯಾರಾದರೂ ಅವನದೇ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಲಾರಂಭಿಸಿದರೆ ತಾನು ತಿರಸ್ಕೃತನಾದಂತಹ ಭಾವ ಮೂಡಲಾರಂಭಿಸುತ್ತದೆ. ಅವರನ್ನು ಸ್ಪರ್ಧಿಗಳಂತೆ ಭಾವಿಸತೊಡಗುತ್ತಾನೆ.

ಆದರೆ ಆಡಲಾಗದು, ಅನುಭವಿಸಲೂ ಆಗದು. ಆ ಇತರ ವ್ಯಕ್ತಿಗಳಲ್ಲಿ ಏನಾದರೂ ಹುಳುಕನ್ನು ಕಾಣುತ್ತಾ ತನ್ನ ಅಸೂಯೆಯ ಶಮನ ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾನೆ. ಇದರಿಂದ ಮಾನಸಿಕ ಆರೋಗ್ಯ ಕ್ಷೀಣಿಸತೊಡಗುತ್ತದೆ. ಮನಸ್ಥಿತಿ ಹದಗೆಡುತ್ತಿದ್ದಂತೆ ಪರಿಸ್ಥಿತಿಯೂ ಹದಗೆಡತೊಡಗುತ್ತದೆ. ಏಕೆಂದರೆ ಒಂದಲ್ಲಾ ಒಂದು ರೀತಿಯಲ್ಲಿ ಅವನ ಅಸಹನೆ ತನ್ನ ಸಂಯಮದ ಕಟ್ಟೆ ಒಡೆದಾಗ ಅದರ ನಕಾರಾತ್ಮಕ ಅನುಭವ ಪಡೆವ ಜನರು ದೂರ ಸರಿಯುತ್ತಾರೆ. ಇದರಿಂದ ಆತ ಇನ್ನಷ್ಟು ಖಿನ್ನತೆಗೆ ಒಳಗಾಗುತ್ತಾನೆ.

ಯಾವಾಗ ಅತಿಯಾದ ಪ್ರಶಂಸೆ ದೊರಕತೊಡಗಿ, ಅದನ್ನು ಸ್ವೀಕರಿಸತೊಡಗುತ್ತಿದ್ದಂತೆ, ತಾನು ಪರಿಪೂರ್ಣನೆಂಬ ಭಾವ ಬಂದೊದಗಿ ಆತ ಖ್ಯಾತಿಯ ಮುಂಚಿನ ಹುಡುಕಾಟ, ಶಿಸ್ತು, ವಿನಯಶೀಲತೆ, ಪ್ರಯೋಗಶೀಲತೆ, ಹಾತೊರೆಯುವಿಕೆ, ಕ್ರಿಯಾಶೀಲತೆ; ಎಲ್ಲವೂ ಒಂದು ಹಂತಕ್ಕೆ ನಿಂತು ಹೋಗಿರುತ್ತದೆ. ಅವನ ವಸ್ತುನಿಷ್ಠತೆಯು ಆತ್ಮನಿಷ್ಠತೆಗೆ ಬದಲಾಗಿರುತ್ತದೆ. ಇದರಲ್ಲಿ ಪ್ರಶಂಸಿಸುವವರ ಪಾಲೂ ದೊಡ್ಡದು. ಗಾಯಕನೊಬ್ಬನ ಜನಪ್ರಿಯ ಹಾಡನ್ನೇ ಪದೇ ಪದೇ ಹಾಡಿಸುತ್ತಾರೆ. ಅವನಿಗೆ ಖ್ಯಾತಿ ತಂದುಕೊಟ್ಟ ಡೈಲಾಗನ್ನೇ, ಅಭಿನಯವನ್ನೇ ವೇದಿಕೆಯ ಮೇಲೆ ಮತ್ತೆ ಮತ್ತೆ ನೋಡಲು ಬಯಸುತ್ತಾರೆ. ಹಾಗೆ ಅವನು ಆ ಚೌಕಟ್ಟಿಗೆ ಬಂಧಿತನಾಗುತ್ತಾನೆ.

ಖ್ಯಾತಿ ಎನ್ನುವುದು ನಿಜಕ್ಕೂ ವ್ಯಕ್ತಿಗತವಾಗಿ ಹೊನ್ನಿನ ಶೂಲವೇ. ಅದನ್ನು ಜಾಣ್ಮೆಯಿಂದ, ಸಮಚಿತ್ತದಿಂದ ಎಷ್ಟು ಬೇಕೋ ಅಷ್ಟು ಸ್ವೀಕರಿಸಬೇಕು. ಊಟದಂತೆ; ನಮ್ಮ ಮೇಲಿನ ಪ್ರೀತಿ, ಅಭಿಮಾನದಿಂದ ಅವರ್ಯಾರೋ ಖಂಡುಗ ಬಡಿಸಿದರು ಅಂತ ಅಷ್ಟನ್ನೂ ಉಣ್ಣಲು ಹೋಗಬಾರದು. ನನ್ನ ಉಣ್ಣುವಿಕೆಯ, ಜೀರ್ಣಿಸಿಕೊಳ್ಳುವಿಕೆಯ ಸಾಮರ್ಥ್ಯದ ಅರಿವು ನನಗಿರಬೇಕು. ಖ್ಯಾತಿವೆತ್ತರ ಸಮಸ್ಯೆಗಳು ಒಂದೆರಡಲ್ಲ. ಒಮ್ಮೆ ಪ್ರಖ್ಯಾತರಾದ ಮೇಲೆ ತಮ್ಮ ಖ್ಯಾತಿಯು ಇಳಿಮುಖವಾಗದಂತೆ ನೋಡಿಕೊಳ್ಳಬೇಕೆಂಬ ನಿಯಮವನ್ನು ಅವರೇ ವಿಧಿಸಿಕೊಂಡಿರುತ್ತಾರೆ.

ಆದರೆ, ಕಾಲ, ಪೀಳಿಗೆಗಳು, ತಂತ್ರಜ್ಞಾನ, ಕಲಿಕೆಗೆ ವಿಸ್ತಾರಗೊಳ್ಳುತ್ತಿರುವ ವಿಪುಲ ಅವಕಾಶಗಳು ಹೊಸ ಹೊಸ ಪ್ರತಿಭೆಗಳನ್ನು ಹುಟ್ಟುಹಾಕುತ್ತಿರುತ್ತದೆ. ಇವರಿಗೆ ತಮ್ಮ ಹಿನ್ನಡೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ತಮ್ಮ ಕಾಲಘಟ್ಟದಲ್ಲಿ ತಾವು ಮಾಡಿದ್ದ, ಪ್ರದರ್ಶಿಸಿದ್ದ ವಿಷಯಗಳನ್ನೆಲ್ಲಾ ಅಧಿಕೃತವೂ ಮತ್ತು ಸರಿಯಾಗಿರುವುದೂ ಆಗಿದ್ದು, ಅದರಂತೆ ಇವರು ಮಾಡುತ್ತಿಲ್ಲ ಎಂದು ಸಂಪ್ರದಾಯವಾದಿಗಳಂತೆ ಉರಿದುಬೀಳುತ್ತಿರುತ್ತಾರೆ. ‘‘ಹಾಗೇನ್ರೀ ಹಾಡೋದು? ಸಾಹಿತ್ಯ, ಸಂಗೀತ ಎಂದರೆ ಹೇಗಿರಬೇಕು? ನಾಟಕ ಎಂದರೆ ಹೀಗೆಯೇ ಇರಬೇಕಲ್ಲಾ?’’ ಹೀಗೆ ಅವರ ಆಕ್ಷೇಪಣೆಗಳು.

ಇದಕ್ಕೆಲ್ಲಾ ಕಾರಣ ಅವರು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗಳ ವಿಸ್ತರಣೆಗೆ ಅಗತ್ಯವಿದ್ದ ಹುಡುಕಾಟ, ಪ್ರಯೋಗಶೀಲತೆ, ಶಿಸ್ತು, ವಸ್ತುನಿಷ್ಠತೆ; ಇವುಗಳನ್ನೆಲ್ಲಾ ಕಳೆದುಕೊಳ್ಳುವುದು. ತಮ್ಮ ವೈಫಲ್ಯವನ್ನು ಮರೆಮಾಚಲು ಆರೋಪ, ಆಕ್ಷೇಪಣೆಗಳನ್ನು ಮಾಡುವಂತೆ, ಮರೆಯಲು ಕುಡಿತ, ಮಾದಕವಸ್ತುಗಳ ವ್ಯಸನಗಳಿಗೂ ಬಲಿಯಾಗಬಹುದು. ಇದು ಹಲವಾರು ಕ್ಷೇತ್ರಗಳಲ್ಲಿ ಉದಾಹರಣೆಗಳಾಗಿ ಸಿಗುವವು.

Similar News