ಭಾರತ-ಚೀನಾ ಬಿಕ್ಕಟ್ಟು: ITBP ಪಡೆಗೆ 9 ಸಾವಿರ ಸೈನಿಕರನ್ನು ನೇಮಿಸಲು ಸಂಸತ್ತು ಅನುಮತಿ
ಹೊಸದಿಲ್ಲಿ: ಚೀನಾ-ಭಾರತದ ಗಡಿಯಲ್ಲಿ ಏರ್ಪಟ್ಟ ಉದ್ವಿಗ್ನತೆಯ ನಡುವೆಯ, ಭಾರತ ಸರ್ಕಾರವು ಬುಧವಾರ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಗೆ 9,000 ಸಿಬ್ಬಂದಿಯನ್ನು ಸೇರಿಸಲು ಅನುಮತಿ ನೀಡಿದೆ. ಇದರೊಂದಿಗೆ ಭಾರತದ ಚೀನಾ ಗಡಿಯಲ್ಲಿ ಭದ್ರತೆ ಮತ್ತಷ್ಟು ಗಟ್ಟಿಯಾಗಲಿದೆ. ಚೀನಾ ಗಡಿಯಲ್ಲಿ ಭದ್ರತೆಗಾಗಿ ಐಟಿಬಿಪಿ ಸಿಬ್ಬಂದಿಯನ್ನು ಮುಂಚೂಣಿಯಲ್ಲಿ ನಿಯೋಜಿಸಲಾಗಿದೆ. ಇದರೊಂದಿಗೆ ಏಳು ಹೊಸ ಬೆಟಾಲಿಯನ್‌ಗಳು ಮತ್ತು ಹೊಸ ಸೆಕ್ಟರ್ ಪ್ರಧಾನ ಕಚೇರಿಯನ್ನು ಕೂಡಾ ಸ್ಥಾಪಿಸಲಾಗುತ್ತದೆ ಎಂದು ವರದಿಯಾಗಿದೆ.
2013-14ರಿಂದ ಐಟಿಬಿಪಿಯಲ್ಲಿ ಸಿಬ್ಬಂದಿಗಳ ನೇಮಕಾತಿಯ ಪ್ರಸ್ತಾವನೆ ಬಾಕಿ ಇದೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆರಂಭದಲ್ಲಿ ಹೊಸದಾಗಿ 12 ಬೆಟಾಲಿಯನ್ ಗಳನ್ನು ಹುಟ್ಟು ಹಾಕುವ ಮಾತು ಕೇಳಿಬಂದಿದ್ದು, ಈಗ ಅದನ್ನು ಏಳು ಬೆಟಾಲಿಯನ್ ಗಳಿಗೆ ಇಳಿಸಲಾಗಿದೆ. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಗಡಿ ಪೋಸ್ಟ್‌ಗಳು ಮತ್ತು ಸ್ಟೇಜಿಂಗ್ ಕ್ಯಾಂಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಚೀನಾ-ಭಾರತದ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆಗಳು ಆಗಾಗ ವರದಿಯಾಗುತ್ತಲೇ ಇವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವಿನ ಮತ್ತೊಂದು ಸಂಘರ್ಷದ ಬಳಿಕ ಸೈನಿಕರನ್ನು ನೇಮಕ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಯಾಂಗ್ಟ್ಜಿಯಲ್ಲಿ ಘರ್ಷಣೆ ನಡೆದಿತ್ತು. ಇದರಲ್ಲಿ ಹಲವು ಭಾರತೀಯ ಯೋಧರು ಗಾಯಗೊಂಡಿದ್ದರು. ಏಪ್ರಿಲ್ 2020 ರಿಂದ, ಭಾರತ ಮತ್ತು ಚೀನಾ ಸೇನೆಗಳ ನಡುವೆ ಹಲವಾರು ಬಾರಿ ಮುಖಾಮುಖಿ ಸಂಘರ್ಷಗಳಾಗಿದೆ.