ಬ್ರಿಟನ್: ಬೃಹತ್ ಡೈನೊಸಾರ್ ಹೆಜ್ಜೆ ಗುರುತು ಪತ್ತೆ

Update: 2023-02-17 15:51 GMT

ಲಂಡನ್, ಫೆ.17: ಬ್ರಿಟನ್ ನ ಯಾರ್ಕ್ಶೈರ್ ಕೌಂಟಿಯಲ್ಲಿ ಬೃಹತ್ ಡೈನೊಸಾರ್(Dinosaur) ಹೆಜ್ಜೆಗುರುತು ಪತ್ತೆಯಾಗಿದ್ದು ಸುಮಾರು 3.3 ಅಡಿ ಉದ್ದವಿರುವ ಈ ಹೆಜ್ಜೆಗುರುತನ್ನು ಯಾರ್ಕ್ಶೈರ್ ನ ರೊಟುಂಡಾ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. 

ಯಾರ್ಕ್ಶೈರ್ ನ ಸ್ಕಾರ್ಬರೋ ನಗರದ ಬಳಿಯ ಬರ್ನಿಸ್ಟನ್ ಕೊಲ್ಲಿಯಲ್ಲಿರುವ `ಡೈನೊಸಾರ್ ತೀರ' ಎಂದೇ ಹೆಸರಾಗಿರುವ ಪ್ರದೇಶದಲ್ಲಿ ಕಂಡುಬಂದಿರುವ ಈ ಹೆಜ್ಜೆಗುರುತು ಇದುವರೆಗೆ ಜಗತ್ತಿನಲ್ಲಿ ಪತ್ತೆಯಾಗಿರುವ ಅತೀ ದೊಡ್ಡ ಡೈನೊಸಾರ್ ಹೆಜ್ಜೆಗುರುತು ಎನ್ನಲಾಗಿದ್ದು ವಿಜ್ಞಾನಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. 

ಸ್ಥಳೀಯ ಸಂಶೋಧಕಿ ಮೇರಿ ವುಡ್ಸ್ 2021ರ ಎಪ್ರಿಲ್ ನಲ್ಲಿ ಇದನ್ನು ಮೊದಲು ಪತ್ತೆಹಚ್ಚಿದ್ದರು. ಈ ವಿಷಯವನ್ನು ಸ್ಥಳೀಯ ಪಳೆಯುಳಿಕೆ ತಜ್ಞರಿಗೆ ತಿಳಿಸಿದರೂ ಯಾರಿಗೂ ಈ ಹೆಜ್ಜೆಗುರುತಿನ ಜಾಡನ್ನು ಪತ್ತೆಹಚ್ಚಲಾಗಲಿಲ್ಲ. ಬಳಿಕ ಮ್ಯಾಂಚೆಸ್ಟರ್ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ವಿಜ್ಞಾನಿ ಡಾ. ಡೀನ್ ಲೊಮಾಕ್ಸ್ ರನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ ಅವರು ಈ ಬಗ್ಗೆ ಆಳವಾದ ಅಧ್ಯಯನ ನಡೆಸಿ ಇದು ಪ್ರಪಂಚದಲ್ಲಿ ಇದುವರೆಗೆ ಪತ್ತೆಯಾಗಿರುವ ಬೃಹತ್ ಡೈನೊಸಾರ್ ಹೆಜ್ಜೆಗುರುತು ಎಂದು ದೃಢಪಡಿಸಿದ್ದು ಈ ಕುರಿತ ಅವರ ಲೇಖನ ಯಾರ್ಕ್ಶೈರ್ ಜಿಯಾಲಜಿಕಲ್ ಸೊಸೈಟಿಯ ಪತ್ರಿಕೆಯಲ್ಲಿ ಮಂಗಳವಾರ ಪ್ರಕಟವಾಗಿದೆ. 

ಈ ಹೆಜ್ಜೆಗುರುತು ಮೆಗಲೊಸಾರಸ್ ನಂತಹ ದೈತ್ಯ ಮಾಂಸಾಹಾರಿ ಜೀವಿಯದ್ದಾಗಿರಬಹುದು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Similar News