ಫೆ.26ರಿಂದ ಸುಮನಸಾ ಕೊಡವೂರು ‘ರಂಗಹಬ್ಬ-11’

ರವಿವಾರ ‘ಅರಣ್ಯ ಕಾಂಡ’, ಗುರುವಾರ ‘ಶೂದ್ರ ಶಿವ’ ಪ್ರದರ್ಶನ

Update: 2023-02-25 16:48 GMT

ಉಡುಪಿ, ಫೆ.25: ಜಿಲ್ಲೆಯ ಪ್ರಮುಖ ರಂಗತಂಡಗಳಲ್ಲಿ ಒಂದಾಗಿರುವ  ಸುಮನಸಾ ಕೊಡವೂರು ಕಳೆದ ಒಂದು ದಶಕದಿಂದ ಆಚರಿಸಿಕೊಂಡು ಬರುತ್ತಿರುವ ವೈವಿಧ್ಯಮಯ ನಾಟಕೋತ್ಸವ ‘ರಂಗಹಬ್ಬ-11’ ಫೆ.26ರ ರವಿವಾರದಿಂದ ಮಾ.5ರವರೆಗೆ ನಗರದ ಅಜ್ಜರಕಾಡಿನ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ ಹಾಗೂ ಹೊಸದಿಲ್ಲಿಯ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ನಡೆಯುವ ಈ ಬಾರಿಯ ರಂಗ ಹಬ್ಬ ಪ್ರತಿದಿನ ಸಂಜೆ 6:30ಕ್ಕೆ ಪ್ರಾರಂಭಗೊಳ್ಳಲಿದ್ದು, 7:00ರಿಂದ ಪ್ರಮುಖ ತಂಡಗಳಿಂದ ವೈವಿಧ್ಯಮಯ ನಾಟಕಗಳು ಪ್ರಸ್ತುತ ಗೊಳ್ಳಲಿವೆ ಎಂದರು.

ರಂಗ ಹಬ್ಬ-11ನ್ನು ರವಿವಾರ ಸಂಜೆ 6:30ಕ್ಕೆ ಹಿರಿಯ ರಂಗನಿರ್ದೇಶಕ ಹಾಗೂ ಬೆಂಗಳೂರು ಎನ್‌ಎಸ್‌ಡಿ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದಾರೆ. ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಇಲಾಖೆಯ ಸಹಾಯಕ ನಿರ್ದೇಶಕಿ  ಪೂರ್ಣಿಮಾ, ಉದ್ಯಮಿಗಳಾದ ಗೋಪಾಲ ಸಿ.ಬಂಗೇರ, ಆನಂದ ಸುವರ್ಣ, ಹರಿಯಪ್ಪ ಕೋಟ್ಯಾನ್ ಮುಖ್ಯಅತಿಥಿಗಳಾಗಿರುವರು. ರಂಗಕರ್ಮಿ ತೋನ್ಸೆ ವಿಜಯಕುಮಾರ್ ಶೆಟ್ಟಿ ಇವರಿಗೆ ರಂಗಸನ್ಮಾನವಿರುತ್ತದೆ.

ಮೊದಲ ದಿನ ಮೈಸೂರಿನ ನವೋದಯ ತಂಡದಿಂದ ಪ್ರಸನ್ನ ಹೆಗ್ಗೋಡು ಇವರ ‘ಅರಣ್ಯಕಾಂಡ’ ನಾಟಕ ಪ್ರಸ್ತುತಗೊಳ್ಳಲಿದೆ.ಡಾ.ಶ್ರೀಪಾದ್ ಭಟ್  ನಾಟಕದ ನಿರ್ದೇಶಕರಾಗಿರುವರು ಎಂದು ಎಂ.ಎಸ್.ಭಟ್ ತಿಳಿಸಿದರು.
ಫೆ.27ರ ಸೋಮವಾರ ಸುಮನಸಾ ಕೊಡವೂರು ತಂಡದಿಂದ ಎಸ್. ರಾಮನಾಥ ಮೈಸೂರು ರಚನೆಯ ‘ಅರುಂಧತಿ ಆಲಾಪ’ ನಿತೀಶ್ ಬಂಟ್ವಾಲ ನಿರ್ದೇಶನದಲ್ಲಿ, 28ರಂದು ಮಂಗಳೂರು ರಂಗಸಂಗಾತಿಯಿಂದ ಶಶಿರಾಜ್ ಕಾವೂರು ರಚನೆ ಮತ್ತು ನಿರ್ದೇಶನದ ‘ಡಾಟ್ಸ್ ಆಲ್ ಯುವರ್ ಆನರ್’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

ಮಾ.1ರ ಬುಧವಾರ ಸುಮನತಾ ಕೊಡವೂರು ತಂಡ ಹೊಸ್ತೋಟ ಮಂಜುನಾಥ ಭಾಗವತ್ ರಚಿಸಿದ ಕನ್ನಡ ಯಕ್ಷ ನಾಟಕ ‘ಏಕಲವ್ಯ’ವನ್ನು  ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದೆ. ಗುರುವಾರ ಮಾ.2ರಂದು ರುದ್ರ ಥಿಯೇಟರ್ ಮಂಗಳೂರು ಇವರಿಂದ ವಿದ್ದು ಉಚ್ಚಿಲ್ ಪರಿಕಲ್ಪನೆ ಹಾಗೂ ನಿರ್ದೇಶನದ ‘ಶೂದ್ರ ಶಿವ’ ನಾಟಕದ ಪ್ರದರ್ಶನವಿರುತ್ತದೆ.

ಮಾ.3ರಂದು ಸುಮನಸಾ ಕೊಡವೂರು ತಂಡದಿಂದ ಬಾಲಕೃಷ್ಣ ಶಿಬಾರ್ಲ ರಚನೆಯ ತುಳುನಾಟಕ ‘ಕಾಪ’ ದಿವಾಕರ ಕಟೀಲ್ ನಿರ್ದೇಶನದಲ್ಲಿ, ಕೊನೆಯ ದಿನವಾದ ಮಾ.4ರಂದು ಸುರಭಿ ಬೈಂದೂರು ತಂಡದಿಂದ ಗಣೇಶ ಮಂದಾರ್ತಿ ರಂಗರೂಪ ಹಾಗೂ ನಿರ್ದೇಶನದ ‘ಚೋಮನದುಡಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಶನಿವಾರ ಸಂಜೆ 6:30ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು ಯಕ್ಷಗುರು ಯು.ದುಗ್ಗಪ್ಪ ಸ್ಮರಣೆಯಲ್ಲಿ ಪ್ರತಿವರ್ಷ ನೀಡುವ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ರಾಜೀವ ತೋನ್ಸೆ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಮಾ.5ರ ರವಿವಾರ ಸಂಜೆ 5:00ರಿಂದ ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಸಹಯೋಗದಲ್ಲಿ ಜಾನಪದ ಹಬ್ಬ-2023 ಹಾಗೂ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಾನಪದ ಸಂಘಟಕ ಗೋಪಾಲ ಸಿ.ಬಂಗೇರ ಅವರಿಗೆ ಈ ಬಾರಿಯ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಎಂ.ಎಸ್.ಭಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸಂಚಾಲಕ ಭಾಸ್ಕರ ಪಾಲನ್, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು.

Similar News