ವಿಶ್ವಕಪ್‌ನ ಸಾರ್ವಕಾಲಿಕ ಅಗ್ರ ಗೋಲ್‌ ಸ್ಕೋರರ್, ಫ್ರಾನ್ಸ್‌ ಫುಟ್ಬಾಲ್ ದಿಗ್ಗಜ ಜಸ್ಟ್ ಫಾಂಟೈನ್ ನಿಧನ

Update: 2023-03-01 14:21 GMT

ಪ್ಯಾರಿಸ್, ಮಾ.1: ಫ್ರಾನ್ಸ್‌ನ ಮಾಜಿ ಫುಟ್ಬಾಲ್ ದಿಗ್ಗಜ ಜಸ್ಟ್ ಫಾಂಟೈನ್(89 ವರ್ಷ) ನಿಧನರಾದರು ಎಂದು ಅವರ ಕುಟುಂಬ ಮೂಲಗಳು ಬುಧವಾರ ತಿಳಿಸಿವೆ.

ಫಾಂಟೈನ್ ಒಂದೇ ವಿಶ್ವಕಪ್‌ನಲ್ಲಿ 13 ಗೋಲುಗಳನ್ನು ಗಳಿಸುವ ಮೂಲಕ ಸಾರ್ವಕಾಲಿಕ ಅಗ್ರ ಗೋಲ್‌ ಸ್ಕೋರರ್ ಆಗಿದ್ದಾರೆ. ಈ ಗಮನಾರ್ಹ ದಾಖಲೆಯನ್ನು ಈ ವರೆಗೆ ಯಾರಿಗೂ ಸರಿಗಟ್ಟಲು ಸಾಧ್ಯವಾಗಿಲ್ಲ.

ಕೇವಲ ಮೂವರು ಆಟಗಾರರು ಫಾಂಟೈನ್‌ಗಿಂತ ಹೆಚ್ಚು ವಿಶ್ವಕಪ್ ಗೋಲು ಗಳಿಸಿದ್ದಾರೆ. ಫಾಂಟೈನ್ ಕೇವಲ 1 ವಿಶ್ವಕಪ್‌ನಲ್ಲಿ ಭಾಗವಹಿಸಿ ಕೇವಲ 6 ಪಂದ್ಯಗಳನ್ನಾಡಿದ್ದರು. ಜರ್ಮನಿಯ ಮಿರೊಸ್ಲಾವ್ ಕ್ಲೋಸ್(16), ಬ್ರೆಝಿಲ್‌ನ ರೊನಾಲ್ಡೊ(15) ಹಾಗೂ ಗೆರ್ಡ್ ಮುಲ್ಲರ್(14) ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ಗೋಲು ಗಳಿಸಿದ್ದಾರೆ.

ಫಾಂಟೈನ್ ಹೊರತುಪಡಿಸಿ ಕೇವಲ ಇಬ್ಬರು ಆಟಗಾರರಾದ ಮುಲ್ಲರ್(1970ರಲ್ಲಿ, 10 ಗೋಲು)ಹಾಗೂ ಹಂಗೇರಿಯದ ಸ್ಯಾಂಡರ್ ಕೊಸಿಸ್(1954ರಲ್ಲಿ 11 ಗೋಲು)ಮಾತ್ರ ಒಂದೇ ವಿಶ್ವಕಪ್‌ನಲ್ಲಿ 10 ಹಾಗೂ ಅದಕ್ಕಿಂತ ಹೆಚ್ಚು ಗೋಲು ಗಳಿಸಿದ್ದಾರೆ.

1958ರಲ್ಲಿ ಸ್ವೀಡನ್‌ನಲ್ಲಿ ನಡೆದಿದ್ದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಫಾಂಟೈನ್ 13 ಗೋಲುಗಳನ್ನು ಗಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. ಆಗ ಫ್ರಾನ್ಸ್ ತಂಡ ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿತ್ತು.

1953-1960ರ ಮಧ್ಯೆ 21 ಪಂದ್ಯಗಳಲ್ಲಿ ಆಡಿರುವ ಫಾಂಟೈನ್ ಒಟ್ಟು 30 ಗೋಲುಗಳನ್ನು ಗಳಿಸಿದ್ದರು. 1958ರಲ್ಲಿ ಸ್ವೀಡನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡ ಸೆಮಿ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
 
ಶ್ರೇಷ್ಠ ಸ್ಟ್ರೈಕರ್ ಫಾಂಟೈನ್ ತನ್ನ ಕ್ಲಬ್ ವೃತ್ತಿಜೀವನದಲ್ಲಿ 283 ಪಂದ್ಯಗಳಲ್ಲಿ 259 ಗೋಲು ಗಳಿಸಿದ್ದರು.

Similar News