ಸಿಗ್ನಲ್: ಭೂತ-ವರ್ತಮಾನಕ್ಕೆ ಸೇತುವೆಯಾಗುವ ವಾಕಿಟಾಕಿ

Update: 2023-03-05 05:37 GMT

ಕತೆಗಳನ್ನು ಹೇಳಲು ಬಳಸಿಕೊಳ್ಳುವ ತಂತ್ರಗಳು ಕೊರಿಯನ್ ಸಿರೀಸ್‌ಗಳ ಹೆಗ್ಗಳಿಕೆಗಳಾಗಿವೆ. ಒಂದು ಮಾಮೂಲಿ ಕ್ರೈಂ ಥ್ರಿಲ್ಲರ್ ಆಗಿ ಬಿಡಬಹುದಾಗಿದ್ದ 'ಸಿಗ್ನಲ್' ಸರಣಿ, ಕತೆಯನ್ನು ಭಿನ್ನವಾಗಿ ಹೇಳುವ ತಂತ್ರದ ಕಾರಣದಿಂದಲೇ ಕಾಲದ ಜೊತೆಗೆ ನಾವೂ ಹಿಂದೆ ಮುಂದೆ ಚಲಿಸತೊಡಗುತ್ತೇವೆ. ಅಪರಾಧಿಗಳನ್ನು ಹುಡುಕುವ ಇಬ್ಬರು ಪೊಲೀಸ್ ಅಧಿಕಾರಿಗಳ ಪ್ರಯತ್ನ, ನಿಧಾನಕ್ಕೆ ಅಪರಾಧವನ್ನೇ ಘಟಿಸದಂತೆ ತಡೆಯುವ ಪ್ರಯತ್ನವಾಗಿ ಸಂಚಿಕೆಯಿಂದ ಸಂಚಿಕೆಗೆ ಬೆಳೆಯುತ್ತಾ ಹೋಗುತ್ತದೆ. ಸುಮಾರು 15 ವರ್ಷಗಳ ಹಿಂದಿನ ಅಪಹರಣ ಪ್ರಕರಣವೊಂದನ್ನು ಪಾರ್ಕ್ ಹೇ ಯಂಗ್ ಎನ್ನುವ ಯುವ ತನಿಖಾಧಿಕಾರಿ ಮಹಿಳಾ ಪೊಲೀಸ್ ಅಧಿಕಾರಿ ಚಾ ಸೂ ಹ್ಯೂನ್ ನೇತೃತ್ವದ ತಂಡದಲ್ಲಿ ತನಿಖೆ ಮಾಡುತ್ತಿರುತ್ತಾನೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಅವಧಿ ಮುಗಿದು ಫೈಲಿನೊಳಗೆ ಸೇರಿ ಹೋಗಬೇಕಾಗಿದ್ದ ಆ ಪ್ರಕರಣ ಒಂದು ನಿಗೂಢ ಬೆಳವಣಿಗೆಯಿಂದಾಗಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ವಿಲೇವಾರಿ ಮಾಡಲಾಗಿದ್ದ ತ್ಯಾಜ್ಯ ರಾಶಿಯಲ್ಲಿದ್ದ ಒಂದು ನಿಷ್ಕ್ರಿಯ ವಾಕಿಟಾಕಿ ಪಾರ್ಕ್ ಯಂಗ್‌ಗೆ ಸಿಗುತ್ತದೆ. ಮಾತ್ರವಲ್ಲ, ಅದು 'ಸಿಗ್ನಲ್' ನೀಡತೊಡಗುತ್ತದೆ. ಪಾರ್ಕ್ ಯಂಗ್ ಆ ಕರೆಯನ್ನು ಸ್ವೀಕರಿಸುವುದರೊಂದಿಗೆ 15 ವರ್ಷಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಪೊಲೀಸ್ ಅಧಿಕಾರಿ ಲೀ ಜೆ ಹಾನ್‌ನೊಂದಿಗೆ ಸಂಪರ್ಕ ಏರ್ಪಡುತ್ತದೆ. ಭೂತಕಾಲದಲ್ಲಿ ಲೀ ಜೆ ಹಾನ್ ನಿಂತಿದ್ದರೆ, ವರ್ತಮಾನದಲ್ಲಿ ಪಾರ್ಕ್ ಯಂಗ್ ನಿಂತಿರುತ್ತಾನೆ. ಇಬ್ಬರನ್ನು ಸೇತುವೆಯಂತೆ ವಾಕಿಟಾಕಿ ಬೆಸೆಯುತ್ತದೆ.

ಆ ವಾಕಿಟಾಕಿಯಲ್ಲಿ 1995ರಲ್ಲಿ ತನಿಖಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಲೀ ಜೆ ಹಾನ್ ಆಸ್ಪತ್ರೆಯ ಆವರಣದಲ್ಲಿ ಬಚ್ಚಿಡಲಾಗಿರುವ ಮೃತದೇಹದ ಬಗ್ಗೆ ಮಾಹಿತಿ ನೀಡುತ್ತಾನೆ. ಅದರ ಆಧಾರದಲ್ಲಿ ಪಾರ್ಕ್ ಯಂಗ್ ಆ ಆಸ್ಪತ್ರೆಗೆ ತೆರಳುತ್ತಾನೆ. ಅಲ್ಲಿ ಮಣ್ಣು ಪಾಲಾಗಿರುವ ಅಸ್ಥಿಪಂಜರವೊಂದರ ಅವಶೇಷ ಪತ್ತೆಯಾಗುತ್ತದೆ. ಆ ಮೂಲಕ ಶಾಶ್ವತ ಮುಚ್ಚಿ ಹೋಗಬಹುದಾಗಿದ್ದ ಒಂದು ಕೊಲೆ ಪ್ರಕರಣ ತೆರೆದುಕೊಳ್ಳುತ್ತದೆ ಮಾತ್ರವಲ್ಲ, ಅದರ ಅಪರಾಧಿಯ ಬಂಧನವಾಗುತ್ತದೆ. ಈ ಬಂಧನ, ಈ ಹಿಂದೆ ಅವಧಿ ಮುಗಿದ 'ಕೋಲ್ಡ್ ಕೇಸ್'ಗಳನ್ನು ಮತ್ತೆ ತೆರೆದು ತನಿಖೆ ನಡೆಸಬೇಕು ಎನ್ನುವ ಒತ್ತಾಯಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ತನಿಖೆ ಪೂರ್ತಿಯಾಗದೆ ಅರ್ಧದಲ್ಲೇ ಉಳಿದ ಪ್ರಕರಣಗಳನ್ನು ಮರು ತನಿಖೆ ಮಾಡಲು ಪೊಲೀಸ್ ಇಲಾಖೆ ಒಂದು ತಂಡವನ್ನು ರಚಿಸುತ್ತದೆ. ಚಾ ಸೂ ಹ್ಯೂನ್ ಎನ್ನುವ ಮಹಿಳಾ ಅಧಿಕಾರಿ, ಪಾರ್ಕ್ ಯಂಗ್ ಸಹಿತ ತಂಡವೊಂದು ಹಳೆ ಫೈಲ್‌ಗಳನ್ನು ಕೆದಕಲಾರಂಭಿಸುತ್ತದೆ. ಕಾಕತಾಳೀಯವೆಂಬಂತೆ, 20 ವರ್ಷಗಳ ಹಿಂದೆ ಲೀ ಜೆ ಹಾನ್ ಅಪರಾಧಿಗಳನ್ನು ಪತ್ತೆ ಹಚ್ಚಲಾಗದೆ ಅರ್ಧದಲ್ಲೇ ಉಳಿಸಿದ ಸರಣಿ ಕೊಲೆ ಪ್ರಕರಣ, ಕಳವು ಪ್ರಕರಣಗಳೆಲ್ಲವನ್ನೂ ಇವರು ಕೈಗೆತ್ತಿಕೊಳ್ಳಬೇಕಾಗುತ್ತದೆ. ಕುತೂಹಲಕಾರಿ ಅಂಶವೆಂದರೆ, 90ರ ದಶಕದಲ್ಲಿ ಒಂದೆಡೆ ಲೀ ಜೆ ಹಾನ್ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದರೆ, ಅದೇ ಪ್ರಕರಣವನ್ನು 2012ರಲ್ಲಿ ಚಾ ಸೂ ಯೂನ್ ಮತ್ತು ಪಾರ್ಕ್ ಯಂಗ್ ತನಿಖೆ ನಡೆಸುತ್ತಿರುತ್ತಾರೆ.

ವಿಕ್ಷಿಪ್ತ ಅಂಶವೆಂದರೆ, ಈ ಎರಡು ಕಾಲವನ್ನು ಗುಟ್ಟಾಗಿ ಒಂದು ವಾಕಿಟಾಕಿ ಸೇತುವೆಯಂತೆ ಬೆಸೆಯುತ್ತದೆ. 90ರ ದಶಕದಲ್ಲಿ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಲೀ ಜೆ ಹಾನ್, 2012ರಲ್ಲಿ ಅದೇ ಪ್ರಕರಣವನ್ನು ಮರು ತನಿಖೆ ನಡೆಸುತ್ತಿರುವ ಪಾರ್ಕ್ ಯಂಗ್ ಜೊತೆಗೆ ವಾಕಿಟಾಕಿಯ ಮೂಲಕ ಸಂಪರ್ಕ ಸಾಧಿಸುತ್ತಿರುತ್ತಾನೆ. ಇದು ಇವರಿಬ್ಬರಿಗಷ್ಟೇ ಗೊತ್ತಿರುವ ಗುಟ್ಟಿನ ಸಂಗತಿ. ವಿಶೇಷವೆಂದರೆ ಮೊದಲು ಯಾರು ಯಾರನ್ನು ಸಂಪರ್ಕಿಸಿರುವುದು ಎನ್ನುವುದರ ಅರಿವು ಇಬ್ಬರಿಗೂ ಇಲ್ಲ. 90ರ ದಶಕದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳನ್ನು ಲೀ ಜೆ ಹಾನ್ ತನಿಖೆ ನಡೆಸುತ್ತಿರುತ್ತಾನೆ. ಮುಂದಿನ ಬಲಿ ಯಾರು ಎನ್ನುವುದು 2012ರಲ್ಲಿರುವ ಪಾರ್ಕ್ ಯಂಗ್‌ಗೆ ತಿಳಿದಿರುತ್ತದೆ. ಅವನದನ್ನು ಲೀ ಜೆ ಹಾನ್‌ಗೆ ತಿಳಿಸಿ ಕೊಲೆಯನ್ನು ತಡೆಯಲು ಸೂಚಿಸುತ್ತಾನೆ. ಒಂದೆಡೆ ಕೊಲೆಗಾರನನ್ನು ಪತ್ತೆ ಹಚ್ಚುವ ಸಾಹಸ, ಇನ್ನೊಂದೆಡೆ ಕೊಲೆಯೇ ನಡೆಯದಂತೆ ತಡೆಯುವ ಪ್ರಯತ್ನ. ಕಾಲದ ಜೊತೆಗೆ ಕಣ್ಣು ಮುಚ್ಚಾಲೆಯಾಟ. 90ರ ದಶಕದಲ್ಲಿ ಲೀ ಜೆ ಹಾನ್ ಪೂರ್ತಿಗೊಳಿಸದೆ ಬಿಟ್ಟ ತನಿಖೆಯನ್ನು 2012ರಲ್ಲಿ ಮುಂದುವರಿಸುತ್ತಿದ್ದಂತೆಯೇ, ಅತ್ತ ಭೂತಕಾಲದಲ್ಲಿ ಲೀ ಜೆ ನಡೆಸುವ ತನಿಖೆಗೂ ತಿರುವುಗಳು ಸಿಗುತ್ತವೆ.

ಬೇರೆ ಬೇರೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿರುವ ಸಂದರ್ಭದಲ್ಲೇ, 90ರ ದಶಕದಲ್ಲಿ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಲಿ ಜೆ ಹಾನ್‌ನ ಅಸ್ಥಿಪಂಜರ 2012ರಲ್ಲಿ ತನಿಖೆ ನಡೆಸುತ್ತಿರುವ ಪಾರ್ಕ್ ಯಂಗ್ ತಂಡಕ್ಕೆ ಸಿಗುತ್ತದೆ. ಆ ಪೊಲೀಸ್ ಅಧಿಕಾರಿಯ ಕೊಲೆಗೆ ಕಾರಣಗಳೇನು, ಅದರ ಹಿಂದಿರುವವರು ಯಾರು ಯಾರು? ಅವರು ಈಗ ಏನು ಮಾಡುತ್ತಿದ್ದಾರೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಹೊಣೆಗಾರಿಕೆ ಪಾರ್ಕ್ ಯಂಗ್‌ಗೆ ಎದುರಾಗುತ್ತದೆ. ಇದೇ ಸಂದರ್ಭದಲ್ಲಿ, ಲೀ ಜೆ ಹಾನ್‌ನ ಕೊಲೆ ನಡೆಯದಂತೆ ತಡೆಯುವ ಪ್ರಯತ್ನವಾಗಿ ಭೂತ ಕಾಲವನ್ನು ಬದಲಿಸುವ ಪ್ರಯತ್ನ ಪಾರ್ಕ್ ಯಂಗ್ ತಂಡದಿಂದ ನಡೆಯುತ್ತದೆ. ಅದರಲ್ಲಿ ಅವರು ಯಶಸ್ವಿಯಾಗುತ್ತಾರೆಯೇ ಎನ್ನುವುದು ಸರಣಿಯ ಕ್ಲೈಮಾಕ್ಸ್. ಲೀ ಜೆ ಹಾನ್‌ನ ಅಸ್ಥಿ ಪಂಜರದ ಜೊತೆ ಜೊತೆಗೇ 'ವಾಕಿ ಟಾಕಿ'ಯ ಹಿಂದಿರುವ ರಹಸ್ಯಗಳೂ ಬಿಚ್ಚಿಕೊಳ್ಳುತ್ತವೆ. 90ರ ದಶಕದ ಕಾಲಘಟ್ಟವನ್ನು ಪೊಲೀಸ್ ಅಧಿಕಾರಿ ಲಿ ಜೆ ಹಾನ್ ಪ್ರತಿನಿಧಿಸುತ್ತಿರುವ ಸಂದರ್ಭದಲ್ಲಿ ಆತನಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದ ಚಾ ಸೂ ಹ್ಯೂನ್ ಇದೀಗ 2012ರ ತನಿಖಾ ತಂಡದ ನೇತೃತ್ವವನ್ನು ವಹಿಸಿಕೊಂಡಿರುತ್ತಾಳೆ. ತನ್ನ ಸಹೋದ್ಯೋಗಿ ಪಾರ್ಕ್ ಯಂಗ್ ಭೂತಕಾಲದ ಲೀ ಜೆ ಹಾನ್ ಜೊತೆಗೆ ವಾಕಿಟಾಕಿಯಲ್ಲಿ ಸಂವಹನ ನಡೆಸುತ್ತಿರುವುದು ಆಕೆಯ ಅರಿವಿಗೆ ಬಂದಿರುವುದಿಲ್ಲ.

ಲೀ ಜೆ ಹಾನ್ ಜೊತೆಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆತನ ಕರ್ತವ್ಯ ಪರತೆಗೆ ಈಕೆ ಸಂಪೂರ್ಣ ಮಾರು ಹೋಗಿರುತ್ತಾಳೆ. ಲೀ ಜೆ ಈಕೆಯ ಜೊತೆಗೆ ಮೇಲ್ನೋಟಕ್ಕೆ ಒರಟನಂತೆ ವರ್ತಿಸಿದ್ದರೂ ಆಳದಲ್ಲಿ ಪ್ರೀತಿಸುತ್ತಿರುತ್ತಾನೆ. ಬೇರೆ ಬೇರೆ ತನಿಖಾ ಕಾರ್ಯಾಚರಣೆಯ ಸಂದರ್ಭದಲ್ಲಿ ಇವರಿಬ್ಬರ ನಡುವಿನ ಸಂಬಂಧಗಳನ್ನು ಅತ್ಯಂತ ಆರ್ದ್ರವಾಗಿ ಸರಣಿಯಲ್ಲಿ ತೋರಿಸಲಾಗಿದೆ. 1995ರಲ್ಲಿ ತಾನು ಪ್ರೀತಿಸುತ್ತಿದ್ದ ಲೀ ಜೆ ಹಾನ್ ನಾಪತ್ತೆಯಾಗಿರುವುದಷ್ಟೇ ಈಕೆಗೆ ಗೊತ್ತು. ಆತನಿಗಾಗಿ ಈ ವರ್ತಮಾನ ಕಾಲದಲ್ಲೂ ಜಾಲಾಡುತ್ತಿರುತ್ತಾಳೆ. ಆತನ ಅಸ್ಥಿಪಂಜರವಾದರೂ ಸಿಗುವುದೇ ಎಂದು ಹುಡುಕುತ್ತಿರುತ್ತಾಳೆ. ಆದರೆ ಆತ ನಿಗೂಢವಾಗಿ ಕೊಲೆಯಾಗಿರುವುದು ಆಕೆಯ ಅರಿವಿಗೆ ಬಂದಿರುವುದಿಲ್ಲ.

ಕೊರಿಯನ್ ಭ್ರಷ್ಟ ಪೊಲೀಸ್ ವ್ಯವಸ್ಥೆಯ ನಡುವೆ ಪ್ರಾಮಾಣಿಕ ಅಧಿಕಾರಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ಹೆಣಗಾಡುವ ಲೀ ಜೆ ಹಾನ್ ಪಾತ್ರವನ್ನು ಹೃದಯ ಸ್ಪರ್ಶಿಯಾಗಿ ನಿರೂಪಿಸಲಾಗಿದೆ. ಕೊನೆಯ ಉಸಿರಿರುವವರೆಗೂ ತನ್ನ ಕರ್ತವ್ಯಕ್ಕೆ ಬದ್ಧನಾಗುವ, ವ್ಯವಸ್ಥೆಗೆ ಸೆಡ್ಡು ಹೊಡೆಯುವ ಆತನ ನಿಷ್ಠುರತೆ, ಎದೆಗಾರಿಕೆ, ಆತನ ಪ್ರಯತ್ನಗಳಿಗೆ ಜೊತೆ ನೀಡುವ ಕಿರಿಯ ಮಹಿಳಾ ಸಿಬ್ಬಂದಿ ಚಾ ಸೂ ಹ್ಯೂನ್ ಜೋಡಿ ಸರಣಿಯಿಂದ ಸರಣಿಗೆ ನಮ್ಮೆಳಗೆ ಆಳವಾಗಿ ಇಳಿಯತೊಡಗುತ್ತಾರೆ. ಲೀ ಜೆ ಹಾನ್‌ನ ಕೊಲೆಯ ಹಿನ್ನೆಲೆಯನ್ನು ಬಯಲು ಮಾಡಿ, ಆ ಕೊಲೆಯೇ ನಡೆಯದಂತೆ ಭೂತಕಾಲವನ್ನು ಬದಲಿಸಲು ಹೊರಡುವ ಚಾ ಸೂ ಹ್ಯೂನ್ ಮತ್ತು ಪಾರ್ಕ್ ಯಂಗ್ ನಡೆಸುವ ಪ್ರಯತ್ನ ಸರಣಿಯ ಕ್ಲೈಮಾಕ್ಸ್‌ಗೆ ಬೇರೆಯೇ ತಿರುವುಗಳನ್ನು ನೀಡುತ್ತವೆ. ಅದರ ಮೂಲಕ ವರ್ತಮಾನದಲ್ಲಿರುವ ಹಲವರ ಬದುಕು ಬದಲಾಗಿ ಬಿಡುತ್ತದೆ. ಪಾರ್ಕ್ ಯಂಗ್‌ನ ಬಾಲ್ಯ ಮತ್ತು ಇಂದಿನ ಸ್ಥಿತಿಯೂ ಕೂಡ. 'ಸಿಗ್ನಲ್' ನೋಡುವ, ಕಾಡುವ ಕೊರಿಯನ್ ಕ್ರೈಮ್ ಥ್ರಿಲ್ಲರ್‌ಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. 

Writer - -ಮುಸಾಫಿರ್

contributor

Editor - -ಮುಸಾಫಿರ್

contributor

Similar News