ಸಂಸದೀಯ ಸ್ಥಾಯಿ ಸಮಿತಿಗಳಿಗೆ ವೈಯಕ್ತಿಕ ಸಿಬ್ಬಂದಿ ನೇಮಕ ಮಾಡಿದ ಉಪರಾಷ್ಟ್ರಪತಿ: ವ್ಯಾಪಕ ವಿರೋಧ
ಹೊಸದಿಲ್ಲಿ: ಹನ್ನೆರಡು ಸಂಸದೀಯ ಸ್ಥಾಯಿ ಸಮಿತಿಗಳು ಮತ್ತು ಎಂಟು ಇಲಾಖಾ ಸ್ಥಾಯಿ ಸಮಿತಿಗಳಿಗೆ ತಮ್ಮ ಎಂಟು ವೈಯಕ್ತಿಕ ಸಿಬ್ಬಂದಿಯನ್ನು ಸೇರಿಸಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಅವರ ನಿರ್ಧಾರವು ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಉಪರಾಷ್ಟ್ರಪತಿಗಳ ಸಿಬ್ಬಂದಿಗಳ ಪೈಕಿ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ ರಾಜೇಶ್ ಎನ್ ನಾಯ್ಕ್, ಅಭ್ಯುದಯ್ ಸಿಂಗ್ ಶೇಖಾವತ್, ಖಾಸಗಿ ಕಾರ್ಯದರ್ಶಿ ಸುಜೀತ್ ಕುಮಾರ್, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಂಜಯ್ ವರ್ಮ ಅವರನ್ನು ಸೇರಿಸಲಾಗಿದ್ದರೆ, ರಾಜ್ಯಸಭಾ ಸಭಾಪತಿಗಳ ಕಾರ್ಯಾಲಯದ ಆಫೀಸರ್ಸ್ ಆನ್ ಸ್ಪೆಷಲ್ ಡ್ಯೂಟಿ ಅಖಿಲ್ ಚೌಧುರಿ, ದಿನೇಶ್ ಡಿ, ಕೌಸ್ತುಭ್ ಸುಧಾಕರ್ ಭಲೇಕರ್ ಮತ್ತು ಪಿ ಎಸ್ ಅದಿತಿ ಚೌಧುರಿ ಅವರನ್ನು ನೇಮಿಸಲಾಗಿದೆ.
ಈ ಹಿಂದೆ ಧನ್ಕರ್ ಅವರು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ವೇಳೆ ತಮ್ಮ ವಿಸ್ತರಿತ ಕುಟುಂಬದವರನ್ನು ಆಫೀಸರ್ಸ್ ಆನ್ ಸ್ಪೆಷಲ್ ಡ್ಯೂಟಿ ಆಗಿ ನೇಮಿಸಿದ್ದರೆಂದು ತೃಣಮೂಲ ಸಂಸದೆ ಮಹುವಾ ಮೊಯಿತ್ರಾ 2021 ರಲ್ಲಿ ಆರೋಪಿಸಿದ್ದರು. ಅದು ನಿಜವಾಗಿದ್ದರೆ ಈಗ ಸ್ಥಾಯಿ ಸಮಿತಿಗೆ ನೇಮಕಗೊಂಡಿರುವ ಅಭ್ಯುದಯ್ ಸಿಂಗ್ ಶೇಖಾವತ್ ಮತ್ತು ಅಖಿಲ್ ಚೌಧುರಿ ಅವರು ಧಂಕರ್ ಅವರ ಸಂಬಂಧಿಗಳು.
ಈ ರೀತಿಯಾಗಿ ಉಪರಾಷ್ಟ್ರಪತಿಗಳ ಹಾಗೂ ರಾಜ್ಯಸಭಾ ಸಭಾಪತಿಯ ಸಿಬ್ಬಂದಿಯನ್ನು ಸ್ಥಾಯಿ ಸಮಿತಿಗಳಿಗೆ ನೇಮಿಸುವ ಕ್ರಮ ಹಿಂದೆಂದೂ ನಡೆದಿಲ್ಲ ಎಂದು ರಾಜ್ಯಸಭಾ ಸಂಸದರೊಬ್ಬರ ಸಹಿತ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಇದು ಅಕ್ರಮ ಹಾಗೂ ಉಪರಾಷ್ಟ್ರಪತಿಗಳು ಅಧಿಕಾರದ ದುರುಪಯೋಗ ಮಾಡಿದ್ದಾರೆಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಹಾಗೂ ಸಂಸದ ಮನೀಶ್ ತಿವಾರಿ ಪ್ರತಿಕ್ರಿಯಿಸಿ, ರಾಜ್ಯಸಭಾ ಸಭಾಪತಿ ಸದನದ ಸದಸ್ಯರಲ್ಲದೇ ಇರುವಾಗ ಈ ರೀತಿಯ ನೇಮಕಾತಿ ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಮುಖ್ಯ ವಿಪ್ ಜೈರಾಂ ರಮೇಶ್ ಮಾತನಾಡಿ ರಾಜ್ಯಸಭೆಯ ಎಲ್ಲಾ ಸಮಿತಿಗಳಿಗೆ ಈಗಾಗಲೇ ಸೆಕ್ರಟೇರಿಯಟ್‌ನಿಂದ ಉತ್ತಮ ಸಿಬ್ಬಂದಿ ಇರುವುದರಿಂದ ಈಗ ಮಾಡಿರುವ ನೇಮಕಾತಿ ವಿಚಾರವನ್ನು ಧನ್ಕರ್ ಜೊತೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.