ಕೊರಟಗೆರೆ ವಿಧಾನಸಭಾ ಕ್ಷೇತ್ರ: ಪರಮೇಶ್ವರ್ ಕೈ ಹಿಡಿಯುವುದೇ ಅಭಿವೃದ್ಧಿ ಕೆಲಸ ಮತ್ತು ಜಾತಿ ಪ್ರಾಬಲ್ಯ?
ಮಾಜಿ ಡಿಸಿಎಂ ಸ್ಪರ್ಧಿಸುವ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿಯೊಡ್ಡುವುದೇ ಬಿಜೆಪಿ? | ಪರಮೇಶ್ವರ್ ಕೈ ಹಿಡಿಯುವುದೇ ಅಭಿವೃದ್ಧಿ ಕೆಲಸಗಳು ಮತ್ತು ಜಾತಿ ಪ್ರಾಬಲ್ಯ? | ಸಾಂಪ್ರದಾಯಿಕ ಮತಗಳ ಬಲವಿರುವ ಜೆಡಿಎಸ್ ಲೆಕ್ಕಾಚಾರಗಳು ಏನೇನು? | ಮತಗಳ ಒಗ್ಗೂಡುವಿಕೆ, ಒಡಕಿನ ಪರಿಣಾಮ ಏನಾದೀತು ಕೊರಟಗೆರೆಯಲ್ಲಿ ?
ಡಾ.ಜಿ.ಪರಮೇಶ್ವರ್
ಡಾ.ಜಿ.ಪರಮೇಶ್ವರ್. ಹಿರಿಯ ಕಾಂಗ್ರೆಸ್ ನಾಯಕ. ಮಾಜಿ ಡಿಸಿಎಂ ಹಾಗೂ ಗೃಹಸಚಿವ. ಪ್ರಸ್ತುತ ಕೊರಟ ಗೆರೆ ಕ್ಷೇತ್ರದ ಶಾಸಕ. ಸತತ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಅತಿ ದೀರ್ಘ ಕಾಲ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಸಿಎಂ ಸ್ಥಾನಕ್ಕೇರುವ ಅವಕಾಶ ವನ್ನು ಒಂದು ಹಂತದಲ್ಲಿ ತಪ್ಪಿಸಿಕೊಂಡ ಇವರು, ಈಗಲೂ ಆ ಹುದ್ದೆಯ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರು
ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಮೀಸಲು ಕ್ಷೇತ್ರವಾಯಿತು. ಕೊರಟಗೆರೆ ಕ್ಷೇತ್ರ ಕೊರಟಗೆರೆ ತಾಲೂಕಿನ ಕೋಳಾಲ, ಹೊಳವನಹಳ್ಳಿ, ಚನ್ನರಾಯನದುರ್ಗ, ತೋವಿನಕೆರೆ ಹೋಬಳಿಗಳು, ತುಮಕೂರು ತಾಲೂಕಿನ ಕೋರಾ, ಮಧುಗಿರಿ ತಾಲೂಕಿನ ಪುರವರ ಹೋಬಳಿಗಳನ್ನು ಒಳಗೊಂಡಿದೆ.
ಪರಮೇಶ್ವರ್ ಹುರಿಯಾಳು
ಮಾಜಿ ಡಿಸಿಎಂ ಡಾ.ಜಿ.ಪರಮೆಶ್ವರ್ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳು. ರಾಜ್ಯದ ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿರುವವರು ಪರಮೇಶ್ವರ್. 1989, 1999 ಮತ್ತು 2004ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಪರಮೇಶ್ವರ್, ಕ್ಷೇತ್ರ ಪುನರ್ವಿಂಗಡಣೆಯ ನಂತರ 2008ರಲ್ಲಿ ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದರು. ಅತ್ಯಧಿಕ ಮತಗಳ ಅಂತರದ ಗೆಲುವಿನ ಮೂಲಕ ದಾಖಲೆ ಬರೆದಿದ್ದವರೇ 2013ರಲ್ಲಿ ದಯನೀಯ ಸೋಲು ಕಂಡರು. ಗೆಲುವು ಸಾಧಿಸಿದ್ದಿದ್ದರೆ ಮುಖ್ಯಮಂತ್ರಿ ಹುದ್ದೆ ಕೂಡ ಸಿಗುವ ಸಾಧ್ಯತೆಯಿತ್ತು. ಆದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡೇ ಸೋತದ್ದು ಅವರನ್ನು ಬಹಳ ಹಿಂದಕ್ಕೆ ಸರಿಸಿಬಿಟ್ಟಿತು. ಅದಾದ ನಂತರ 2018ರಲ್ಲಿ ಮತ್ತೆ ಗೆಲುವು ಅವರದಾಯಿತು. ಈಗ ಮತ್ತೊಮ್ಮೆ ಸ್ಪರ್ಧಿಸ ಬಯಸಿದ್ದಾರೆ. ಈ ಮಧ್ಯೆ ನೆಲಮಂಗಲ ಇಲ್ಲವೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಗಳಿದ್ದವು. ಆದರೆ ಅಂತಿಮವಾಗಿ ಇಲ್ಲಿಂದಲೇ ಅವರು ಸ್ಪರ್ಧಿಸುವುದು ಖಚಿತವಾಗಿದೆ.
ಬಿಜೆಪಿ ಪ್ರಬಲ ಪೈಪೋಟಿ?
ಈ ಬಾರಿ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ತಂತ್ರ ಹೆಣೆಯುತ್ತಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ದವರು ಬಿಜೆಪಿ ಪರ ಒಲವುಳ್ಳವರು ಎನ್ನಲಾಗುತ್ತಿದ್ದು, ಅದುಬಿಜೆಪಿಗೆ ನೆರವಾಗುವ ಸಾಧ್ಯತೆ ಇದೆ. ಪರಿಶಿಷ್ಟರಲ್ಲಿ ಎಡಗೈ ಸಮುದಾಯದವರ ಮತಗಳು 40 ಸಾವಿರದಷ್ಟಿವೆ ಎಂಬ ಅಂದಾಜಿಸಿದೆ. ಈ ವರ್ಗದವರಿಗೆ ಟಿಕೆಟ್ ಕೊಟ್ಟರೆ ಆ ಮತಗಳ ಜೊತೆ ಬಿಜೆಪಿಯದ್ದೇ ಮತಗಳಾದ ಲಿಂಗಾಯತ ಮತ್ತಿತರ ಸಮುದಾಯದ ಮತಗಳು ಸೇರಿ ಕ್ಷೇತ್ರವನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಕಮಲ ಪಾಳಯದಲ್ಲಿದೆ.
ಹಾಗೆಯೇ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ವೈದ್ಯ ಡಾ.ಲಕ್ಷ್ಮೇಕಾಂತ್, ಉದ್ಯಮಿ ಮುನಿಯಪ್ಪ ಮೊದಲಾದವರು ಟಿಕೆಟ್‌ಗಾಗಿ ಯತ್ನಿಸುತ್ತಿದ್ದು, ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಮಾಜಿ ಶಾಸಕ ಗಂಗಹನುಮಯ್ಯ, ವೈ.ಎಚ್.ಹುಚ್ಚಯ್ಯ ಕೂಡ ಪ್ರಯತ್ನ ನಡೆಸಿದ್ದಾರೆ. ಮುನಿಯಪ್ಪ ಅವರಂತೂ ಈ ಬಾರಿ ಬಿಜೆಪಿಯೇ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್ ತಂತ್ರ
ಇನ್ನೊಂದೆಡೆ ಜೆಡಿಎಸ್ ಕೂಡ ತನ್ನದೇ ತಂತ್ರ ರೂಪಿಸುತ್ತಿದೆ. ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತಬ್ಯಾಂಕ್ ಹೊಂದಿರುವ ಜೆಡಿಎಸ್, 2013ರಲ್ಲಿ ಪರಮೇಶ್ವರ್ ಅವರ ಸೋಲಿಗೆ ಕಾರಣವಾಗಿತ್ತು. ಜೆಡಿಎಸ್ ಮಾಜಿ ಶಾಸಕ ಪಿ ಸುಧಾಕರ ಲಾಲ್ ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ವಿರೋಧಿ ಮತಗಳನ್ನು ನೆಚ್ಚಿದ್ದಾರೆ. ಯಾದವ, ಕುಂಚಿಟಿಗ ಸಮುದಾಯ ಕೂಡ ಅವರ ಬೆಂಬಲಕ್ಕಿದೆ ಎನ್ನಲಾಗುತ್ತದೆ. ಸದಾ ಕ್ಷೇತ್ರದಲ್ಲಿಯೇ ಇದ್ದು ಜನರಿಗೆ ಯಾವಾಗ ಬೇಕೆಂದರೂ ಸಿಗುವವರೆಂಬ ಮೆಚ್ಚುಗೆಯೂ ಅವರ ಬಗ್ಗೆ ಇದೆ.
ಇನ್ನೂ ಕಾಡುತ್ತಿರುವ ಸೋಲು
ಇದೆಲ್ಲದರ ನಡುವೆಯೂ, ಪರಮೇಶ್ವರ್ ಈ ಬಾರಿ ಗೆಲ್ಲಲೇಬೇಕೆಂಬ ಹಠದಲ್ಲಿದ್ದಾರೆ. 2013ರ ಚುನಾವಣೆ ಯಲ್ಲಿ ಅನುಭವಿಸಿದ ಸೋಲು ಈಗಲೂ ಅವರನ್ನು ಕಾಡುತ್ತಿದೆ. ಕೊರಟಗೆರೆ ಕ್ಷೇತ್ರದ ಜನ ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯ ಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದ ಸಂದರ್ಭದಲ್ಲಿ ಸೋಲಿಸಿಬಿಟ್ಟರು ಎಂಬುದನ್ನು ಇತ್ತೀಚೆಗೆ ಕೂಡ ಅವರು ವಿಷಾದದಿಂದ ನೆನಪು ಮಾಡಿಕೊಂಡಿದ್ದರು.
ಹಾಗಾಗಿಯೊ ಏನೊ, ಕಳೆದ 6 ತಿಂಗಳಿಂದ ಕ್ಷೇತ್ರದಲ್ಲಿ ನಿರಂತರ ಓಡಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೂ ಪರಮೇಶ್ವರ್ ಜನರ ಕೈಗೆ ಸುಲಭವಾಗಿ ಸಿಗುವವರಲ್ಲ ಎಂಬ ಆರೋಪಗಳು ಇದ್ದೇ ಇವೆ.
ಆದರೆ, ಗೃಹಸಚಿವರಾಗಿದ್ದ ವೇಳೆ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿಯಬಹುದು ಎಂಬ ವಿಶ್ವಾಸ ಅವರದು. ಆಗ ಮಾಡಿದ್ದ ಕೊರಟಗೆರೆ ಪೊಲೀಸ್ ತರಬೆತಿ ಕೇಂದ್ರ, ಅಗ್ನಿಶಾಮಕ ಠಾಣೆ, ಸುಸಜ್ಜಿತ ಆಸ್ಪತ್ರೆ, ಶಾಲಾ ಕಟ್ಟಡಗಳು, ಎಲ್ಲ ಗ್ರಾಮಗಳಿಗೆ ಅತ್ಯಾಧುನಿಕ ಪಂಚಾಯತ್ ಕಟ್ಟಡ ಮೊದಲಾದವು ಅವರ ಸಾಧನೆಯನ್ನು ಹೇಳುತ್ತಿವೆ. ಅದಕ್ಕಾಗಿ ಜನಮೆಚ್ಚುಗೆಯೂ ಇದೆ.
ರಾಹುಲ್ ಪಾದಯಾತ್ರೆ, ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂಚರಿಸಿರುವುದು, ಪಕ್ಷ ಸಂಘಟನೆಗೆ ನೀಡಿರುವ ಒತ್ತು ಇವೆಲ್ಲವೂ ಪರಮೇಶ್ವರ್ ಗೆಲುವಿಗೆ ನೆರವಾದಾವು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಕೂಡ ಅವರ ಪಾಲಿಗೆ ಇದ್ದೇ ಇದೆ. ಮತ್ತೊಮ್ಮೆ ದಾಖಲೆ ಅಂತರದ ಗೆಲುವು ಸಾಧಿಸುವ ಹಂಬಲ ಮತ್ತು ಹುಮ್ಮಸ್ಸಿ ನಲ್ಲಿಯೇ ಕ್ಷೇತ್ರದಲ್ಲಿ ಪರಮೇಶ್ವರ್ ತಿರುಗಾಟ ಸಾಗಿದೆ.