ಸಂಸತ್ ನಿಂದ ರಾಹುಲ್ ಗಾಂಧಿ ವಜಾ: ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡನೆ
ಉಡುಪಿ: ನ್ಯಾಯಾಂಗ ಮತ್ತು ಶಾಸಕಾಂಗದ ನಿಯಮಾಳಿಗೆ ವಿರುದ್ಧವಾಗಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ವಜಾ ಗೊಳಿಸಿರುವ ಬಿಜೆಪಿಯ ಅನೈತಿಕ ಮತ್ತು ದ್ವೇಷ ರಾಜಕಾರಣಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಯಾವುದೇ ವ್ಯಕ್ತಿಯ ವಿರುದ್ದ ನ್ಯಾಯಾಲಯ ತೀರ್ಪು ನೀಡಿದರೆ ಅಥವಾ ಶಿಕ್ಷೆಗೆ ಒಳಪಡಿಸಿದರೆ ಅವರಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಇರುತ್ತದೆ. ರಾಹುಲ್ ಗಾಂಧಿಗೆ ಎರಡು ವರ್ಷಗಳ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವೇ ಆದೇಶ ಪ್ರತಿ ಕೈ ಸೇರಿದ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯವರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶ ನೀಡಿದೆ.
ನ್ಯಾಯಾಲಯದ ಆದೇಶದ ಸರ್ಟಿಫೈಡ್ ಪ್ರತಿ ರಾಹುಲ್ ಗಾಂಧಿಗೇ ಲಭ್ಯವಾಗುವ ಮೊದಲೇ, ಕರ್ನಾಟಕದಲ್ಲಿ ಶೀಘ್ರವೇ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ತುರ್ತಾಗಿ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದಕ್ಕಾಗಿ ಅಡ್ಡದಾರಿ ಹಿಡಿಯ ಲಾಗಿದೆ. ಬಿಜೆಪಿಯ ದ್ವೇಷದ, ಅನೈತಿಕ ರಾಜಕಾರಣದಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಬಿಜೆಪಿಯ ನಡೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಖಂಡಿಸಿದ್ದಾರೆ.