ಜನಗಣತಿ ವರದಿಯಿಂದ ಕೊನೆಗೂ ’ಕಾಲಾಪಾನಿ’ ಕೈಬಿಟ್ಟ ನೇಪಾಳ
ಪಿತ್ತೋರ್‌ಗಢ: ಭಾರತದ ಕಾಲಾಪಾನಿ ಪ್ರದೇಶದ ಕುಟಿ, ಗುಂಜಿ ಮತ್ತು ನಬಿ ಗ್ರಾಮಗಳ ಅಂಕಿ ಅಂಶಗಳನ್ನು ಪ್ರಾಥಮಿಕ ಜನಗಣತಿ ವರದಿಯಲ್ಲಿ ಸೇರಿಸಿದ್ದ ನೇಪಾಳ ಇದೀಗ ಅಂತಿಮ ವರದಿಯಲ್ಲಿ ಈ ಪ್ರದೇಶಗಳ ಮಾಹಿತಿಯನ್ನು ಕೈಬಿಟ್ಟಿದೆ.
2022ರ ಜನವರಿಯಲ್ಲಿ ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯಲ್ಲಿ ಭಾರತಕ್ಕೆ ಸೇರಿದ ಈ ಗ್ರಾಮಗಳ ಮಾಹಿತಿಯನ್ನು ದಾಖಲಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ಗ್ರಾಮಗಳು ತಮ್ಮ ದೇಶಕ್ಕೆ ಸೇರಿದ್ದು ಎಂದು ನೇಪಾಳ ಪ್ರತಿಪಾದಿಸಿತ್ತು. ಶುಕ್ರವಾರ ಬಿಡುಗಡೆಯಾದ ಅಂತಿಮ ವರದಿಯಲ್ಲಿ 3 ಕಾಲಾಪಾನಿ ಗ್ರಾಮಗಳನ್ನು ಕೈಬಿಡಲಾಗಿದೆ.
ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ ಈ ಗ್ರಾಮಗಳ ಅಂಕಿ ಅಂಶಗಳನ್ನು ಭಾರತದ 2011 ಜನಗಣತಿಯಿಂದ ಪಡೆಯಲಾಗಿತ್ತು ಎಂದು ನೇಪಾಳದ ಉನ್ನತ ಮೂಲಗಳು ಹೇಳಿವೆ. ಈ ಗ್ರಾಮಗಳು ಭಾರತದ ವಶದಲ್ಲಿ ಇರುವುದರಿಂದ ಜನಗಣತಿ ಅಧಿಕಾರಿಗಳು ಭೌತಿಕವಾಗಿ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
"ಭಾರತೀಯ ಅಧಿಕಾರಿಗಳ ಅಸಹಕಾರದಿಂದಾಗಿ ನಾವು ಈ ಗ್ರಾಮಗಳನ್ನು ತಲುಪಲು ಸಾಧ್ಯವಾಗಿಲ್ಲ. ಆದರೆ ಈ ಗ್ರಾಮಗಳ ಒಟ್ಟು ಜನಸಂಖ್ಯೆ 500 ಎಂದು ನಾವು ಅಂದಾಜಿಸಿದ್ದೇವೆ. ಆದರೆ ಇದರ ದೃಢೀಕರಣ ಸಾಧ್ಯವಾಗದ ಕಾರಣ ಅಂತಿಮ ವರದಿಯಲ್ಲಿ ಈ ಅಂಕಿ ಅಂಶಗಳನ್ನ ಸೇರಿಸಿಲ್ಲ" ಎಂದು ನೇಪಾಳದ ಉಪ ಮುಖ್ಯ ಸಾಂಖ್ಯಿಕ ಅಧಿಕಾರಿ ನಬಿನ್ ಶ್ರೇಷ್ಠ ಹೇಳಿಕೆಯನ್ನು ಉಲ್ಲೇಖಿಸಿ ನೇಪಾಳ ಮಾಧ್ಯಮಗಳು ವರದಿ ಮಾಡಿವೆ.